Randhir Jaiswal: ಆಕ್ರಮಿತ ಭೂಭಾಗ ಬಿಟ್ಟುಕೊಡಿ; ಪಾಕಿಸ್ತಾನಕ್ಕೆ ಭಾರತದ ಖಡಕ್ ಸೂಚನೆ
ಪಾಕಿಸ್ತಾನವು ಆಕ್ರಮಿಸಿಕೊಂಡಿರುವ ಭೂಪ್ರದೇಶವನ್ನು ಖಾಲಿ ಮಾಡುವಂತೆ ಭಾರತ ಖಡಕ್ ಸೂಚನೆ ನೀಡಿದೆ. ಭಾರತವು ವಿದೇಶಿ ಭೂಪ್ರದೇಶಗಳಲ್ಲಿ ವಿಧ್ವಂಸಕತೆ ಮತ್ತು ಭಯೋತ್ಪಾದನೆ ನಡೆಸುತ್ತಿದೆ ಎಂಬ ಪಾಕಿಸ್ತಾನದ ಆರೋಪಕ್ಕೆ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಪ್ರತಿಕ್ರಿಯಿಸಿ ತಿರುಗೇಟು ನೀಡಿದ್ದಾರೆ.

ರಣಧೀರ್ ಜೈಸ್ವಾಲ್.

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರ (Jammu & Kashmir) ವಿಚಾರದಲ್ಲಿ ಭಾರತ ಮತ್ತೊಮ್ಮೆ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದೆ. ಪಾಕಿಸ್ತಾನವು ಆಕ್ರಮಿಸಿಕೊಂಡಿರುವ ಭಾರತೀಯ ಭೂಪ್ರದೇಶವನ್ನು ಖಾಲಿ ಮಾಡುವಂತೆ ಸೂಚನೆ ನೀಡಿದೆ. ಭಾರತವು ವಿದೇಶಿ ಭೂಪ್ರದೇಶಗಳಲ್ಲಿ ವಿಧ್ವಂಸಕತೆ ಮತ್ತು ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿದೆ ಎಂಬ ಪಾಕಿಸ್ತಾನದ ಆರೋಪಕ್ಕೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ (Ministry of External Affairs spokesperson) ರಣಧೀರ್ ಜೈಸ್ವಾಲ್ (Randhir Jaiswal) ತಿರುಗೇಟು ನೀಡಿದ್ದಾರೆ. ʼʼಪಾಕ್ ಗಡಿಯಾಚೆಗಿನ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿರುವುದು ಈ ಪ್ರದೇಶದ ಶಾಂತಿ ಮತ್ತು ಭದ್ರತೆಗೆ ದೊಡ್ಡ ಅಡಚಣೆಯಾಗಿ ಪರಿಣಮಿಸಿದೆʼʼ ಎಂದು ಹೇಳಿದ್ದಾರೆ.
"ಗಡಿಯಾಚೆಗಿನ ಭಯೋತ್ಪಾದನೆಗೆ ಪಾಕಿಸ್ತಾನದ ಸಹಾಯಹಸ್ತ ಮತ್ತು ಪ್ರಾಯೋಜಕತ್ವವೇ ಕಾರಣ ಎನ್ನುವುದು ಇಡೀ ಜಗತ್ತಿಗೆ ತಿಳಿದಿದೆ. ವಾಸ್ತವವಾಗಿ, ಇದು ಈ ಪ್ರದೇಶದ ಶಾಂತಿ ಮತ್ತು ಭದ್ರತೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸುಳ್ಳು ಸುದ್ದಿಗಳನ್ನು ಹರಡುವ ಬದಲು ಪಾಕಿಸ್ತಾನವು ಆಕ್ರಮಿತ ಭಾರತೀಯ ಭೂಪ್ರದೇಶವನ್ನು ಖಾಲಿ ಮಾಡಬೇಕು" ಎಂದು ಅವರು ತಿಳಿಸಿದ್ದಾರೆ.
ರಣಧೀರ್ ಜೈಸ್ವಾಲ್ ಅವರ ಎಕ್ಸ್ ಪೋಸ್ಟ್ ಇಲ್ಲಿದೆ:
Our response to media queries regarding comments made by Pakistan⬇️
— Randhir Jaiswal (@MEAIndia) March 18, 2025
🔗 https://t.co/x7SE096BJD pic.twitter.com/t1fPa7OkKN
ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಪಾಕ್ ಹೇಳಿದ್ದೇನು?
ಇತ್ತೀಚೆಗೆ ಅಮೆರಿಕದ ಪಾಡ್‌ಕ್ಯಾಸ್ಟರ್, ಕಂಪ್ಯೂಟರ್ ವಿಜ್ಞಾನಿ ಲೆಕ್ಸ್ ಫ್ರಿಡ್‌ಮನ್ (Lex Fridman) ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನ ಭಯೋತ್ಪಾದನೆಯನ್ನು ಪ್ರಚೋದಿಸುತ್ತದೆ ಎಂದು ಆರೋಪಿಸಿದ್ದರು. ಭಾರತ ಶಾಂತಿ ಮಾತುಕತೆಗೆ ಮುಂದಾಗಿದ್ದರೂ ಪಾಕ್ ಇದಕ್ಕೆ ಸಹಕರಿಸುತ್ತಿಲ್ಲ ಎಂದಿದ್ದರು. ಮೊದಲ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಈ ಸಮಾರಂಭಕ್ಕೆ ಅಂದಿನ ಪಾಕ್ ಪ್ರಧಾನಿ ನವಾಝ್ ಶರೀಫ್ ಅವರನ್ನು ಆಹ್ವಾನಿಸಿದ್ದಾಗಿಯೂ ತಿಳಿಸಿದ್ದರು.
ಈ ಸುದ್ದಿಯನ್ನೂ ಓದಿ: Narendra Modi: ಭಾರತದ ಶಾಂತಿ ಪ್ರಯತ್ನಗಳಿಗೆ ಪಾಕ್‌ನಿಂದ ಅಡ್ಡಗಾಲು; ಪ್ರಧಾನಿ ಮೋದಿ ವಾಗ್ದಾಳಿ
ಶಾಂತಿಯನ್ನು ಹರಡುವ ನಮ್ಮ ಪ್ರತಿಯೊಂದು ಉದಾತ್ತ ಪ್ರಯತ್ನವನ್ನೂ ಪಾಕ್ ಹಗೆತನ ಮತ್ತು ದ್ರೋಹದಿಂದ ಎದುರಿಸಿದೆ. ಅವರು ಇನ್ನಾದರೂ ಶಾಂತಿಯ ಮಾರ್ಗವನ್ನು ಆರಿಸುತ್ತಾರೆ ಎಂದು ನಾವು ಪ್ರಾಮಾಣಿಕವಾಗಿ ಭಾವಿಸುತ್ತೇವೆ ಎಂದು ಮೋದಿ ಹೇಳಿದ್ದರು.
ಪ್ರಧಾನಿ ಮೋದಿ ಅವರ ಹೇಳಿಕೆಯನ್ನು ಪಾಕಿಸ್ತಾನದ ವಿದೇಶಾಂಗ ಕಚೇರಿ ನಿರಾಕರಿಸಿತ್ತು. ಪಾಕಿಸ್ತಾನದ ನೆಲದಲ್ಲಿ ಅಶಾಂತಿ ಸೃಷ್ಟಿಸುವ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿನ ದಬ್ಬಾಳಿಕೆ ಪರಿಸ್ಥಿತಿಯ ಹಿಂದೆ ಭಾರತದ ಪಾತ್ರವಿದೆ ಎಂದು ಪಾಕಿಸ್ತಾನ ಆರೋಪಿಸಿತ್ತು. ಅಲ್ಲದೆ ಭಾರತವು ವಿದೇಶಿ ಭೂಪ್ರದೇಶಗಳಲ್ಲಿ ಹತ್ಯೆ, ವಿಧ್ವಂಸಕತೆ ಮತ್ತು ಭಯೋತ್ಪಾದನೆಯನ್ನು ಆಯೋಜಿಸುತ್ತಿದೆ ಎಂದು ನಾಲಗೆ ಹರಿಬಿಟ್ಟಿತ್ತು.
ಪಾಕಿಸ್ತಾನದಲ್ಲಿ ನಡೆಯುವ ಭಯೋತ್ಪಾದಕ ಚಟುವಟಿಕೆಯಲ್ಲಿ ಭಾರತದ ಕೈವಾಡ ಇರುವ ಶಂಕೆಯನ್ನೂ ಪಾಕ್ ವ್ಯಕ್ತಪಡಿಸಿತ್ತು. ಆದರೆ ಇದನ್ನು ಭಾರತ ಸ್ಪಷ್ಟ ಮಾತುಗಳಲ್ಲಿ ನಿರಾಕರಿಸಿದೆ. ಪಾಕಿಸ್ತಾನದ ಆರೋಪಗಳನ್ನು ಆಧಾರರಹಿತ ಎಂದು ಜೈಸ್ವಾಲ್ ಕರೆದಿದ್ದಾರೆ. "ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದು ಎಲ್ಲಿದೆ ಎಂದು ಇಡೀ ಜಗತ್ತಿಗೆ ತಿಳಿದಿದೆ. ಪಾಕಿಸ್ತಾನವು ತನ್ನ ಆಂತರಿಕ ಸಮಸ್ಯೆಗಳು ಮತ್ತು ವೈಫಲ್ಯಗಳಿಗೆ ಇತರರ ಮೇಲೆ ಬೆರಳು ತೋರಿಸುವ ಬದಲು ಆತ್ಮಾವಲೋಕನ ಮಾಡಿಕೊಳ್ಳಬೇಕು" ಎಂದು ಅವರು ಹೇಳಿದ್ದಾರೆ.