ಭೋಪಾಲ್, ಡಿ. 31: ಮಧ್ಯ ಪ್ರದೇಶದ (Madhya Pradesh) ಇಂದೋರ್ (Indore)ನ ಭಗೀರಥಪುರ (Bhagirathpura) ಪ್ರದೇಶದಲ್ಲಿ ಪುರಸಭೆ ಸರಬರಾಜು ಮಾಡಿದ ಕಲುಷಿತ ನೀರು (Poisoned Water) ಕುಡಿದು ಸಾವನ್ನಪ್ಪಿರುವವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮೋಹನ್ ಯಾದವ್ (Mohan Yadav), “ಇಂದೋರ್‌ನ ಭಗೀರಥಪುರ ಘಟನೆಯು ಅತ್ಯಂತ ಶೋಚನೀಯ. ಈ ಸಂಬಂಧ ಪಾಲಿಕೆಯ ವಲಯಾಧಿಕಾರಿ ಸಲಿಗ್ರಾಮ್ ಸಿಟೋಲೆ (Saligram Sitole) ಮತ್ತು ಸಹಾಯಕ ಎಂಜಿನಿಯರ್ ಯೋಗೇಶ್ ಜೋಷಿ (Yogesh Joshi) ಅವರನ್ನು ಅಮಾನತು ಮಾಡಲಾಗಿದೆ. ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ (PHE) ವಿಭಾಗದ ಅಧೀಕ್ಷಕ ಎಂಜಿನಿಯರ್ ಶುಭಂ ಶ್ರೀವಾಸ್ತವ (Shubham Srivastava) ಅವರನ್ನು ತಕ್ಷಣದಿಂದಲೇ ಸೇವೆಯಿಂದ ವಜಾಮಾಡಲಾಗಿದೆ” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದಕ್ಕೂ ಮೊದಲು, ಸಾಮಾಜಿಕ ಮಾಧ್ಯಮಗಳ ಮೂಲಕ ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ ಮುಖ್ಯಮಂತ್ರಿ ಯಾದವ್, ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಚಿಕಿತ್ಸೆ ಪಡೆಯುತ್ತಿರುವವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು. ಅಲ್ಲದೇ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರುಪಾಯಿ ಪರಿಹಾರ ಘೋಷಿಸಿದ್ದು, ಎಲ್ಲ ರೋಗಿಗಳ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸುವುದಾಗಿ ಭರವಸೆ ನೀಡಿದ್ದಾರೆ.
ಇಂದೋರ್ ಕಲುಷಿತ ನೀರಿನ ಪ್ರಕರಣ:
ಸ್ಥಳೀಯ ಶಾಸಕ ಹಾಗೂ ಸಚಿವ ಕೈಲಾಶ್ ವಿಜಯವರ್ಗೀಯ, ಆಸ್ಪತ್ರೆಗಳಿಗೆ ಭೇಟಿ ನೀಡಿ, ಸಂತ್ರಸ್ತ ಕುಟುಂಬಗಳಿಗೆ ಧೈರ್ಯ ಹೇಳಿ, ಉಚಿತ ಚಿಕಿತ್ಸೆಯ ಭರವಸೆ ನೀಡಿದ್ದಾರೆ. ಡಿಸೆಂಬರ್ 25ರಂದು ನಗರಪಾಲಿಕೆ ಸರಬರಾಜು ಮಾಡಿದ ನೀರು ದುರ್ವಾಸನೆ ಬೀರುತ್ತಿದೆ ಎಂದು ನಿವಾಸಿಗಳು ದೂರು ನೀಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದ್ದು, ನಗರದಲ್ಲಿನ ಕುಡಿಯುವ ನೀರಿನ ಸುರಕ್ಷತೆಯ ಕುರಿತು ಗಂಭೀರ ಚಿಂತನೆಗಳಿಗೆ ಕಾರಣವಾಗಿದೆ. ಮಧ್ಯ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ಮಂಗಳವಾರ (ಡಿಸೆಂಬರ್ 30) ಸಂಜೆ ಕೆಲವು ಆಸ್ಪತ್ರೆಗಳಿಗೆ ಭೇಟಿ ನೀಡಿ, ಈ ದುರ್ಘಟನೆಗೆ ಇಂದೋರ್ ನಗರಪಾಲಿಕೆ ಆಯುಕ್ತರೇ ಹೊಣೆ ಎಂದು ಆರೋಪಿಸಿದ್ದಾರೆ ಮತ್ತು ಹೊಣೆಗಾರರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ನೃತ್ಯಕ್ಕೆಂದು ಕರೆದು ವೇಶ್ಯಾವಾಟಿಕೆಗೆ ಬಳಕೆ; ಹೊಟೆಲ್‌ನಲ್ಲಿ ಬಂಧಿಯಾಗಿದ್ದ 15 ಯುವತಿಯರ ರಕ್ಷಣೆ
“ಇದು ಮಹಾನಗರ ಪಾಲಿಕೆಯ ಸಂಪೂರ್ಣ ವೈಫಲ್ಯ. ಒಳಚರಂಡಿ ನೀರು ಕುಡಿಯುವ ನೀರಿನ ಪೈಪ್‌ಲೈನ್‌ಗೆ ಮಿಶ್ರಣವಾದರೆ ಜನರಿಗೆ ವಾಂತಿ-ಭೇದಿ, ಕಾಮಾಲೆ ಉಂಟಾಗಬಹುದು. ಆದರೆ ಸಾವಾಗುವುದಿಲ್ಲ. ಇಲ್ಲಿ ಯಾವುದೋ ವಿಷಕಾರಿ ಪದಾರ್ಥ ಕುಡಿಯುವ ನೀರಿನ ಪೈಪ್‌ಲೈನ್‌ಗೆ ಸೇರಿರುವಂತೆ ಕಾಣುತ್ತಿದೆ. ಇದರ ಬಗ್ಗೆ ಸಂಪೂರ್ಣ ತನಿಖೆ ನಡೆಯಬೇಕು” ಎಂದು ಪಟ್ವಾರಿ ಆಗ್ರಹಿಸಿದ್ದಾರೆ. ಇನ್ನೂ ಘಟನೆಯ ಸಂಬಂಧ ಇಂದೋರ್ ಮಹಾನಗರ ಪಾಲಿಕೆ (IMC) ಹಾಗೂ ಮೇಯರ್ ಪುಷ್ಯಮಿತ್ರಾ ಭಾರ್ಗವ ಅವರ ವಿರುದ್ಧ ಇಂದೋರ್ ಜಿಲ್ಲಾ ಕಾಂಗ್ರೆಸ್ ಘಟಕವು ಎಫ್‌ಐಆರ್ ದಾಖಲಿಸುವ ಸಾಧ್ಯತೆ ಇದೆ.