ಶ್ರೀನಗರ, ಜು. 18: ಜಮ್ಮು ಮತ್ತು ಕಾಶ್ಮೀರದ (Jammu and Kashmir) ರಾಜೌರಿ ವಲಯದ ನಿಯಂತ್ರಣ ರೇಖೆಯಲ್ಲಿ (LOC) ಶುಕ್ರವಾರ (ಜುಲೈ 17) ರಾತ್ರಿ ಸುಮಾರು ಎರಡು ಗಂಟೆಗಳ ಕಾಲ ಗಡಿಯಾಚೆಯಿಂದ ಭಾರಿ ಗುಂಡಿನ ದಾಳಿ ನಡೆದಿದೆ. ಗಡಿಯಾಚೆಯಿಂದ ಭಯೋತ್ಪಾದಕರು ಒಳನುಸುಳಲು ಯತ್ನಿಸಿದ್ದನ್ನು ಭಾರತೀಯ ಯೋಧರು ತಡೆದರು ಎಂದು ಮೂಲಗಳು ತಿಳಿಸಿವೆ. ಅಧಿಕಾರಿಗಳ ಪ್ರಕಾರ, ಪಾಕಿಸ್ತಾನದ ಕಡೆಯಿಂದ ಬೆಳಗ್ಗೆ 9:50ರ ಸುಮಾರಿಗೆ ಅಪ್ರಚೋದಿತ ಗುಂಡಿನ ದಾಳಿ ಪ್ರಾರಂಭವಾಯಿತು. ಗಡಿಯಲ್ಲಿ ಕಾವಲು ಕಾಯುತ್ತಿದ್ದ ಭಾರತೀಯ ಸೇನಾ ಪಡೆಗಳು ಅನುಮಾನಾಸ್ಪದ ಚಲನವಲನವನ್ನು ಗಮನಿಸಿದಾಗ, ಅವರು ಪ್ರತಿದಾಳಿ ನಡೆಸಿದರು. ಯಾವುದೇ ಸಾವು-ನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.
ಯಾವುದೇ ನುಸುಳುಕೋರರು ಇದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಶೋಧ ಕಾರ್ಯಾಚರಣೆ ಆರಂಭಿಸಲಾಯಿತು. ಇದೇ ವೇಳೆ, ಇಡೀ ಪ್ರದೇಶದಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಿ ಕಟ್ಟೆಚ್ಚರ ವಹಿಸಲಾಗಿದೆ. ಪ್ರಕ್ಷುಬ್ಧತೆ ಹೆಚ್ಚುತ್ತಿರುವುದರಿಂದ ಗಮನ ಬೇರೆಡೆ ಸೆಳೆಯಲು ಪಾಕಿಸ್ತಾನ ಎಲ್‌ಒಸಿ ಉದ್ದಕ್ಕೂ ಗುಂಡಿನ ದಾಳಿ ನಡೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಧಾನಿ ಮೋದಿ ಸರ್ಕಾರದ 12 ವರ್ಷಗಳ ಆಚರಣೆಗೆ ಜಮ್ಮು-ಕಾಶ್ಮೀರ ಗಡಿ ಗ್ರಾಮಸ್ಥರಿಂದ ವಿಶೇಷ ಪ್ರಾರ್ಥನೆ
ಆಪರೇಷನ್ ಸಿಂದೂರ್ ನಂತರ ಎಲ್‌ಒಸಿಯಲ್ಲಿ ನಡೆದ ಮೊದಲ ಪ್ರಮುಖ ಕದನ ವಿರಾಮ ಉಲ್ಲಂಘನೆ ಇದಾಗಿದೆ. ಇದಕ್ಕೂ ಮೊದಲು, ಎಂಟರಿಂದ ಹತ್ತು ಸುತ್ತಿನ ಗುಂಡಿನ ದಾಳಿಯನ್ನು ಒಳಗೊಂಡ ಸಣ್ಣ ಘಟನೆಗಳು ಮಾತ್ರ ವರದಿಯಾಗಿದ್ದವು.
ಜಮ್ಮು ಮತ್ತು ಕಾಶ್ಮೀರದಲ್ಲಿ ಗುಂಡನ ದಾಳಿ:
ಕಳೆದ ವರ್ಷ ಮೇ 7ರಿಂದ 10ರವರೆಗೆ ನಡೆಸಲಾದ ಆಪರೇಷನ್ ಸಿಂದೂರ್ ಕಾರ್ಯಾಚರಣೆ ನಡೆದ ನಂತರ, ಪಾಕಿಸ್ತಾನ ಹೇಡಿಯಂತೆ ದಾಳಿ ನಡೆಸಿದೆ. ಭಾರತೀಯ ಸೇನೆಯ ಗುಂಡಿನ ಬಲವನ್ನು ಎದುರಿಸಲು ಸಾಧ್ಯವಾಗದೆ, ಪಾಕಿಸ್ತಾನಿ ಪಡೆಗಳು ಮೇ ಎರಡನೇ ವಾರದಲ್ಲಿ ಪೂಂಛ್ ಮತ್ತು ರಾಜೌರಿ ವಲಯಗಳಲ್ಲಿನ ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಸುಮಾರು 14 ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದವು.
22 ನಿಮಿಷಗಳ ಆಪರೇಷನ್ ಸಿಂದೂರ್ ಸಮಯದಲ್ಲಿ, ಭಾರತೀಯ ಪಡೆಗಳು ಎಲ್‌ಒಸಿ ದಾಟದೆ ಒಂಬತ್ತು ಭಯೋತ್ಪಾದಕ ಕೇಂದ್ರಗಳ ಮೇಲೆ ದಾಳಿ ಮಾಡಿ, 26 ನಿಖರ ಕ್ಷಿಪಣಿಗಳನ್ನು ಹಾರಿಸಿ ಮುರಿಡ್ಕೆಯಲ್ಲಿರುವ ಲಷ್ಕರ್-ಎ-ತೈಬಾ ಪ್ರಧಾನ ಕಚೇರಿ ಮತ್ತು ಬಹಾವಲ್‌ಪುರದಲ್ಲಿರುವ ಜೈಶ್-ಎ-ಮೊಹಮ್ಮದ್ ಪ್ರಧಾನ ಕಚೇರಿಯನ್ನು ನಾಶಪಡಿಸಿದವು.