ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪಾಕಿಸ್ತಾನದ 8 ಭಯೋತ್ಪಾದಕ ಕ್ಯಾಂಪ್‌ ಈಗಲೂ ಸಕ್ರಿಯ; ಜಮ್ಮು-ಕಾಶ್ಮೀರ ಬಳಿಯಲ್ಲೇ ಇದೆ 2 ಶಿಬಿರ: ಸ್ಫೋಟಕ ಮಾಹಿತಿ ಬಹಿರಂಗ

Indian Army Chief General Upendra Dwivedi: ʼʼ8 ಉಗ್ರರ ಕ್ಯಾಂಪ್‌ಗಳ ಪೈಕಿ 2 ಜಮ್ಮು ಮತ್ತು ಕಾಶ್ಮೀರದ ಸಮೀಪ ಅಂದರೆ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯ ಬಳಿ, ಉಳಿದ 6 ಲೈನ್‌ ಆಫ್‌ ಕಂಟ್ರೋಲ್‌ ಸಮೀಪ ಸಕ್ರಿಯವಾಗಿದೆ. ಭದ್ರತಾ ಪಡೆ ಸೂಕ್ಷ್ಮವಾಗಿ ಇವನ್ನು ಪರಿಶೀಲಿಸುತ್ತಿದೆʼʼ ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಹೇಳಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಮತ್ತೆ ಪಾಕಿಸ್ತಾನದ ಡ್ರೋನ್‌ ಪತ್ತೆ

ಸಾಂದರ್ಭಿಕ ಚಿತ್ರ. -

Ramesh B
Ramesh B Jan 13, 2026 9:25 PM

ದೆಹಲಿ, ಜ. 13: ಭಾರತೀಯ ಸಶಸ್ತ್ರ ಪಡೆ ಕಳೆದ ವರ್ಷ ಮೇಯಲ್ಲಿ ಆಪರೇಷನ್‌ ಸಿಂದೂರ್‌ ಕಾರ್ಯಾಚರಣೆ (Operation Sindoor) ನಡೆಸಿ ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಉಗ್ರರ ತರಬೇತಿ ಶಿಬಿರವನ್ನು ನಾಶಪಡಿಸಿದೆ. ಈ ವೇಳೆ ನೂರಾರು ಭಯೋತ್ಪಾದಕರು ಹತರಾಗಿದ್ದು, ಪಾಕಿಸ್ತಾನ ಪತರುಗುಟ್ಟಿದೆ. ಅಷ್ಟಾಗಿಯೂ ಪಾಕಿಸ್ತಾನ ಇನ್ನೂ ಬುದ್ಧಿ ಕಲಿತಿಲ್ಲ. ಈಗಲೂ ಅಲ್ಲಿನ ಉಗ್ರ ಚಟುವಟಿಕೆ ಅವ್ಯಾಹತವಾಗಿ ಮುಂದುವರಿದಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ (General Upendra Dwivedi) ತಿಳಿಸಿದ್ದಾರೆ. ಈಗ ಉಗ್ರರ 8 ಕ್ಯಾಂಪ್‌ ಸಕ್ರಿಯವಾಗಿದ್ದು, ಈ ಪೈಕಿ 2 ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯ ಸಮೀಪದಲ್ಲಿದೆ ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪೇಂದ್ರ ದ್ವಿವೇದಿ ಹಲವು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ʼʼ8 ಉಗ್ರರ ಕ್ಯಾಂಪ್‌ಗಳ ಪೈಕಿ 2 ಜಮ್ಮು ಮತ್ತು ಕಾಶ್ಮೀರದ ಸಮೀಪ ಅಂದರೆ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯ ಬಳಿ, ಉಳಿದ 6 ಲೈನ್‌ ಆಫ್‌ ಕಂಟ್ರೋಲ್‌ (LoC) ಸಮೀಪ ಸಕ್ರಿಯವಾಗಿದೆ. ಭದ್ರತಾ ಪಡೆ ಸೂಕ್ಷ್ಮವಾಗಿ ಇವನ್ನು ಪರಿಶೀಲಿಸುತ್ತಿದೆʼʼ ಎಂದು ಹೇಳಿದ್ದಾರೆ.

ʼʼಈ ಶಿಬಿರದಲ್ಲಿ ತರಬೇತಿ ನೀಡುವ ಬಗ್ಗೆ ಮಾಹಿತಿ ಲಭಿಸಿದ್ದು, ಇದೇ ಕಾರಣಕ್ಕೆ ನಿಗಾ ಇಟ್ಟಿದ್ದೇವೆ. ಒಂದುವೇಳೆ ಆಪರೇಷನ್‌ ಸಿಂದೂರ್‌ನಂತಹ ಕಾರ್ಯಾಚರಣೆ ಅಗತ್ಯವಿದ್ದರೆ ಅದಕ್ಕೂ ಸಿದ್ಧರಿದ್ದೇವೆʼʼ ಎಂದು ತಿಳಿಸಿದ್ದಾರೆ.

ಉಪೇಂದ್ರ ದ್ವಿವೇದಿ ಅವರ ಮಾತು:



ʼʼಆಪರೇಷನ್‌ ಸಿಂದೂರ್‌ ಕಾರ್ಯಾಚರಣೆ ಈಗಲೂ ಚಾಲ್ತಿಯಲ್ಲಿದೆ. ಯಾವ ರೀತಿಯ ಕ್ರಮ ಕೈಗೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತೇವೆʼʼ ಎಂದು ಸ್ಪಷ್ಟಪಡಿಸಿದ್ದಾರೆ. ಆಪರೇಷನ್ ಸಿಂದೂರ್ ಭಾರತದ ಸನ್ನದ್ಧತೆ, ನಿಖರತೆ ಮತ್ತು ಕಾರ್ಯತಂತ್ರದ ಸ್ಪಷ್ಟತೆಯನ್ನು ಪ್ರದರ್ಶಿಸಿದೆ ಎಂದು ಉಲ್ಲೇಖಿಸಿದ್ದಾರೆ.

1963 ರ ಪಾಕ್‌-ಚೀನಾ ಒಪ್ಪಂದ ಕಾನೂನುಬಾಹಿರ; ಶಕ್ಸ್‌ಗಮ್ ಕಣಿವೆಯ ಮೇಲಿನ ಚೀನಾ ಹಕ್ಕು ತಿರಸ್ಕರಿಸಿದ ಸೇನಾ ಮುಖ್ಯಸ್ಥ

"ಆಪರೇಷನ್ ಸಿಂದೂರ್ ಅನ್ನು ನಿಖರವಾಗಿ ಕಾರ್ಯಗತಗೊಳಿಸಲಾಯಿತು. ಮೇ 10ರವರೆಗೆ 88 ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯು ಭಯೋತ್ಪಾದಕ ಮೂಲ ಸೌಕರ್ಯವನ್ನು ಧ್ವಂಸ ಮಾಡಿತು. ಭಾರತೀಯ ಸೇನೆಯು 9 ಗುರಿಗಳಲ್ಲಿ ಏಳನ್ನು ಯಶಸ್ವಿಯಾಗಿ ನಾಶಪಡಿಸಿತು" ಎಂದು ಅವರು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿ ಸೂಕ್ಷ್ಮವಾಗಿದೆ. ಆದರೆ ನಿಯಂತ್ರಣದಲ್ಲಿದೆ ಎಂದು ಉಪೇಂದ್ರ ದ್ವಿವೇದಿ ಹೇಳಿದ್ದಾರೆ. ʼʼಇತ್ತೀಚೆಗೆ ಭಾರತದೊಳಗೆ ಕಂಡುಬಂದ ಪಾಕಿಸ್ತಾನದ ಡ್ರೋನ್‌ಗಳು ತುಂಬಾ ಚಿಕ್ಕದಾಗಿದ್ದು, ಲೈಟ್​​ಗಳನ್ನು ಆನ್ ಮಾಡಿ ಒಳಗೆ ಬಂದಿದ್ದವು. ಅವು ತೀರಾ ಎತ್ತರದಲ್ಲಿ ಹಾರಿಲ್ಲʼʼ ಎಂದು ಉಪೇಂದ್ರ ದ್ವಿವೇದಿ ಹೇಳಿದ್ದಾರೆ. ಈ ಬಗ್ಗೆ ಪಾಕಿಸ್ತಾನಕ್ಕೆ ಈಗಾಗಲೇ ಎಚ್ಚರಿಕೆ ನೀಡಿದ್ದಾಗಿಯೂ ತಿಳಿಸಿದ್ದಾರೆ. ಜನವರಿ 10ರಂದು ಸುಮಾರು 6 ಡ್ರೋನ್‌, ಜನವರಿ 11 ಮತ್ತು 12ರಂದು 2ರಿಂದ 3 ಡ್ರೋನ್‌ಗಳು ಕಾಣಿಸಿಕೊಂಡಿದ್ದವು.

ಭಾರತದಲ್ಲಿ ಮತ್ತೆ ಪಾಕ್‌ ಡ್ರೋನ್‌ ಪತ್ತೆ

ಈ ಮಧ್ಯೆ ಜನವರಿ 13ರಂದು ಮತ್ತೆ ಭಾರತದಲ್ಲಿ ಡ್ರೋನ್‌ ಪತ್ತೆಯಾಗಿವೆ. ಜಮ್ಮು ಮತ್ತು ಕಾಶ್ಮೀರದ ಕೆರಿ ಸೆಕ್ಟರ್‌ನಲ್ಲಿ ಮತ್ತೆ ಪಾಕಿಸ್ತಾನದ ಡ್ರೋನ್‌ ಕಂಡು ಬಂದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿದೆ. ಕಳೆದ 48 ಗಂಟೆಗಳ ಅವಧಿಯಲ್ಲಿ ಈ ಪ್ರದೇಶದಲ್ಲಿ ಟ್ರೋನ್‌ ಕಾಣಿಸಿಕೊಂಡಿರುವುದು ಇದು 2ನೇ ಬಾರಿ.