ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Delhi bomb Blast: ಕೆಂಪು ಕೋಟೆ ಸ್ಫೋಟಕ್ಕೆ ಸಂಚು ಹೇಗೆ ರೂಪಿಸಲಾಗಿತ್ತು? ವೈಟ್‌ ಕಾಲರ್‌ ಟೆರರಿಸಂ ಜಾಲ ಹೇಗಿದೆ ಗೊತ್ತಾ?

Delhi car bomb explosion: ದೆಹಲಿಯ ಹೃದಯಭಾಗದಲ್ಲಿರುವ ಐತಿಹಾಸಿಕ ಕೆಂಪು ಕೋಟೆ ಸಮೀಪದಲ್ಲಿ ಸೋಮವಾರ ಸಂಜೆ ಸಂಭವಿಸಿದ ಭೀಕರ ಕಾರು ಸ್ಫೋಟ ದೇಶವನ್ನೇ ನಡುಗಿಸಿದೆ. ವೈದ್ಯನೊಬ್ಬ ಈ ಸ್ಫೋಟವನ್ನು ಹೇಗೆ ಕಾರ್ಯಗತಗೊಳಿಸಿದನು. ಪಿತೂರಿಯ ಹಿಂದೆ ಯಾರಿದ್ದಾರೆ ಎಂಬಿತ್ಯಾದಿ ಬಗ್ಗೆ ಇಲ್ಲಿದೆ ಮಾಹಿತಿ.

ವೈಟ್‌ ಕಾಲರ್‌ ಟೆರರಿಸಂ ಜಾಲ ಹೇಗಿದೆ ಗೊತ್ತಾ?

ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಸ್ಫೋಟ, ಸ್ಫೋಟಕಗಳು ವಶ (ಸಂಗ್ರಹ ಚಿತ್ರ) -

Priyanka P
Priyanka P Nov 12, 2025 11:29 AM

ನವದೆಹಲಿ: ಸೋಮವಾರ ಸಂಜೆ ದೆಹಲಿಯ ಕೆಂಪುಕೋಟೆ (Red Fort) ಬಳಿ ಸಂಭವಿಸಿದ ಸ್ಫೋಟದಲ್ಲಿ (Delhi Blast) ಹನ್ನೆರಡು ಮಂದಿ ಸಾವನ್ನಪ್ಪಿದ್ದು, ಇಪ್ಪತ್ತೆಂಟಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ವಿಶೇಷ ವರದಿಯು, ಜಿಹಾದಿ ಸಿದ್ಧಾಂತದಿಂದ ಪ್ರೇರೇಪಿಸಲ್ಪಟ್ಟ ವೈದ್ಯನೊಬ್ಬ ಈ ಸ್ಫೋಟವನ್ನು (Terror attack) ಹೇಗೆ ಕಾರ್ಯಗತಗೊಳಿಸಿದನು. ಪಿತೂರಿಯ ಹಿಂದೆ ಯಾರೆಲ್ಲಾ ಇದ್ದಾರೆ ಇಲ್ಲಿದೆ ಡಿಟೇಲ್ಸ್‌

ಸೋಮವಾರ ಸಂಜೆ ದೆಹಲಿಯಲ್ಲಿ ಸಂಭವಿಸಿದ ಕಾರು ಬಾಂಬ್ ಸ್ಫೋಟವು ಮತ್ತೊಮ್ಮೆ ರಾಷ್ಟ್ರವನ್ನು ಬೆಚ್ಚಿಬೀಳಿಸಿದೆ. ಇದು ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆಯ ನಿರಂತರ ಬೆದರಿಕೆಯನ್ನು ಎತ್ತಿ ತೋರಿಸಿದೆ. ಈ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಹನ್ನೆರಡು ತಲುಪಿದ್ದು, ಗಾಯಗೊಂಡವರ ಸಂಖ್ಯೆ ಇಪ್ಪತ್ತೈದು ಮೀರಿದೆ. ಈ ಆತ್ಮಹತ್ಯಾ ದಾಳಿ ನಡೆಸಿದ ಭಯೋತ್ಪಾದಕನಿಗೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ (ಜೆಇಎಂ) ನೊಂದಿಗೆ ಸಂಪರ್ಕವಿದೆ ಎಂದು ತಿಳಿದುಬಂದಿದೆ.

ಭದ್ರತಾ ಸಂಸ್ಥೆಗಳು ನಡೆಸಿದ ಈವರೆಗಿನ ತನಿಖೆಯಲ್ಲಿ, ದಾಳಿಯನ್ನು ಡಾ. ಉಮರ್ ಮೊಹಮ್ಮದ್ ನಡೆಸಿದ್ದು, ಸ್ಫೋಟದಲ್ಲಿ ಅವನ ದೇಹ ಛಿದ್ರವಾಗಿತ್ತು ಎಂದು ತಿಳಿದುಬಂದಿದೆ. ಸ್ಫೋಟ ನಡೆಸಲು ಬಳಸಿದ ಹುಂಡೈ ಐ 20 ಕಾರನ್ನು ಡಾ. ಉಮರ್ ಚಲಾಯಿಸುತ್ತಿದ್ದ. ಸೋಮವಾರ ಬೆಳಗ್ಗೆ 7 ಗಂಟೆಗೆ ಅವನು ಆ ಕಾರಿನಲ್ಲಿ ಫರಿದಾಬಾದ್‌ನಿಂದ ಹೊರಟಿದ್ದಾನೆ. ಮಾರ್ಗದುದ್ದಕ್ಕೂ ಸಿಸಿಟಿವಿ ಕ್ಯಾಮರಾಗಳು ಈ ಚಲನವಲನವನ್ನು ಸೆರೆಹಿಡಿದಿವೆ.

ಇದನ್ನೂ ಓದಿ: Delhi Blast: ದೆಹಲಿ ಸ್ಫೋಟದ ಇನ್ನೊಬ್ಬ ಆರೋಪಿ ಶಾಹೀನ್‌ ಸಹೋದರ ಸೆರೆ, ಬಂಧಿತರ ಸಂಖ್ಯೆ 4ಕ್ಕೆ

ಡಾ. ಉಮರ್ ಚಲಾಯಿಸುತ್ತಿದ್ದ i20 ಕಾರು ಬೆಳಿಗ್ಗೆ 8:13ಕ್ಕೆ ಬದರ್ಪುರ್ ಟೋಲ್ ಪ್ಲಾಜಾ ಮೂಲಕ ದೆಹಲಿಗೆ ಪ್ರವೇಶಿಸಿದೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಬೆಳಿಗ್ಗೆ 8:20ಕ್ಕೆ, ಓಖ್ಲಾ ಕೈಗಾರಿಕಾ ಪ್ರದೇಶದ ಪೆಟ್ರೋಲ್ ಪಂಪ್‌ನಲ್ಲಿ ಕಾರು ಪತ್ತೆಯಾಗಿದೆ. ನಂತರ, ಮಧ್ಯಾಹ್ನ 3:19ಕ್ಕೆ, ಕಾರು ಕೆಂಪು ಕೋಟೆ ಸಂಕೀರ್ಣದ ಬಳಿಯ ಪಾರ್ಕಿಂಗ್ ಪ್ರದೇಶವನ್ನು ಪ್ರವೇಶಿಸಿದೆ.

ಕೆಂಪು ಕೋಟೆಯ ಬಳಿ ಸಂಜೆ ಸ್ಫೋಟದ ಸಮಯವನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿತ್ತು. ಮೊದಲನೆಯದಾಗಿ, ಕೆಂಪು ಕೋಟೆಯು ಐತಿಹಾಸಿಕ ಮಹತ್ವವನ್ನು ಹೊಂದಿದೆ; ಎರಡನೆಯದಾಗಿ, ಸಂಜೆ ಈ ಪ್ರದೇಶವು ಅತ್ಯಂತ ಜನದಟ್ಟಣೆಯಿಂದ ಕೂಡಿರುತ್ತದೆ. ಆಗಸ್ಟ್ 15 ರಂದು ಪ್ರಧಾನ ಮಂತ್ರಿ ಕೆಂಪು ಕೋಟೆಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದರು. ಇಲ್ಲಿ ಸ್ಫೋಟವನ್ನು ನಡೆಸುವ ಮೂಲಕ, ಭಯೋತ್ಪಾದಕರು ಪ್ರಮುಖ ಮತ್ತು ಅಪಾಯಕಾರಿ ಸಂದೇಶವನ್ನು ಕಳುಹಿಸುವ ಗುರಿಯನ್ನು ಹೊಂದಿದ್ದರು.

ಬ್ಲಾಸ್ಟ್‌ನಲ್ಲಿ ಬಳಸಿದ ಸ್ಫೋಟಕವೆಂದರೆ ಅಮೋನಿಯಂ ನೈಟ್ರೇಟ್ ಇಂಧನ ತೈಲ (ANFO). ಸುಲಭವಾಗಿ ಲಭ್ಯವಿರುವ ಯೂರಿಯಾವನ್ನು ಇಂಧನ ತೈಲದೊಂದಿಗೆ ಬೆರೆಸುವ ಮೂಲಕ ಈ ರೀತಿಯ ಸ್ಫೋಟಕವನ್ನು ತಯಾರಿಸುವುದು ಸುಲಭ. ಇತ್ತೀಚಿನ ದಿನಗಳಲ್ಲಿ ಭಯೋತ್ಪಾದಕರು ಸಾಮಾನ್ಯವಾಗಿ RDX ಬಳಸುವುದನ್ನು ಬಿಟ್ಟಿದ್ದಾರೆ. ಏಕೆಂದರೆ ಅದನ್ನು ಪಡೆಯುವುದು ಕಷ್ಟ ಮತ್ತು ಅದರ ಮೂಲವನ್ನು ಪತ್ತೆಹಚ್ಚುವುದು ಸುಲಭ.

ಇನ್ನು ಭಯೋತ್ಪಾದಕ ಡಾ. ಉಮರ್ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತೊಬ್ಬ ವೈದ್ಯ ಡಾ. ಮುಜಮ್ಮಿಲ್‌ನಿಂದ ಅವನ ಬಗ್ಗೆ ಮಾಹಿತಿಯನ್ನು ಪಡೆದರು. ತೀವ್ರ ವಿಚಾರಣೆಯ ನಂತರ, ತಮ್ಮ ಸಹಚರರೊಂದಿಗೆ ರೂಪಿಸಲಾದ ಭಯೋತ್ಪಾದಕ ಕೃತ್ಯದ ಬಗ್ಗೆ ಆತ ವಿವರಿಸಿದ್ದಾನೆ. ಫೆಬ್ರವರಿ 24, 1989 ರಂದು ಜನಿಸಿದ ಡಾ. ಉಮರ್, ಶ್ರೀನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಅಧ್ಯಯನ ಮಾಡಿದ್ದಾನೆ. ಅಲ್ಲಿ ಮುಜಮ್ಮಿಲ್ ಜೊತೆ ಸ್ನೇಹ ಬೆಳೆಸಿದ್ದಾನೆ. 2017ರಲ್ಲಿ ಎಂಬಿಬಿಎಸ್ ಮುಗಿಸಿದ ನಂತರ, ಇಬ್ಬರೂ ಅಲ್ಲಿ ನಿವಾಸಿ ವೈದ್ಯರಾಗಿ ಕೆಲಸ ಮಾಡಿದರು. ಎರಡು ವರ್ಷಗಳ ಹಿಂದೆ, ಫರಿದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯ ವೈದ್ಯಕೀಯ ಕಾಲೇಜಿಗೆ ತೆರಳಿದ್ದ.

ತನಿಖಾ ವರದಿಗಳ ಪ್ರಕಾರ, ಈ ಜೆಇಎಂ-ಸಂಬಂಧಿತ ಭಯೋತ್ಪಾದಕರು ದೇಶಾದ್ಯಂತ ಬಾಂಬ್ ಸ್ಫೋಟಗಳನ್ನು ನಡೆಸಲು ಉದ್ದೇಶಿಸಿದ್ದರು. ಇದಕ್ಕಾಗಿ ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಆದರೆ, ಡಾ. ಮುಜಮ್ಮಿಲ್ ಸೇರಿದಂತೆ ಅವನ ಹಲವಾರು ಸಹಚರರನ್ನು ಬಂಧಿಸಿದ ನಂತರ, ಡಾ. ಉಮರ್ ಸೋಮವಾರ ಸಂಜೆ ದೆಹಲಿಯ ಕೆಂಪು ಕೋಟೆಯ ಬಳಿ ಆತ್ಮಾಹುತಿ ದಾಳಿ ನಡೆಸಿದ್ದಾನೆ. ಪೊಲೀಸರು ತಲುಪುವ ವೇಳೆಗಾಗಲೇ ಆತ ಸ್ಫೋಟ ಮಾಡಿಯಾಗಿತ್ತು.

ಇದನ್ನೂ ಓದಿ: Delhi blast: ಮಗಳ ಕೃತ್ಯ ನಂಬೋಕಾಗ್ತಿಲ್ಲ: ಉಗ್ರ ಡಾಕ್ಟರ್‌ ಶಾಹೀನ್‌ ತಂದೆ ಪ್ರತಿಕ್ರಿಯೆ

ಪೋಸ್ಟರ್ ಅಭಿಯಾನ

ಈ ವರ್ಷದ ಅಕ್ಟೋಬರ್ 18 ರಂದು ಶ್ರೀನಗರದ ನೌಗಮ್ ಪ್ರದೇಶದಲ್ಲಿ ನಡೆದ ಪೋಸ್ಟರ್ ಅಭಿಯಾನದ ನಂತರ ಈ ಪಿತೂರಿಯ ಕುರಿತ ಮಾಹಿತಿಗಳ ಎಳೆ ಎಳೆಯಾಗಿ ತೆರೆದುಕೊಳ್ಳಲು ಪ್ರಾರಂಭಿಸಿದವು. 18ನೇ ದಿನಾಂಕದಂದು ರಾತ್ರಿ, ನೌಗಮ್‌ನಲ್ಲಿ ಮೂರರಿಂದ ನಾಲ್ಕು ಪೋಸ್ಟರ್‌ಗಳು ಕಾಣಿಸಿಕೊಂಡವು. ಪೋಸ್ಟರ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಭದ್ರತಾ ಪಡೆಗಳನ್ನು ಕೊಲ್ಲುವುದಾಗಿ ಬೆದರಿಕೆ ಮತ್ತು ಪ್ರತಿಜ್ಞೆ ಹಾಕಲಾಗಿತ್ತು. 2019 ರಲ್ಲಿ 370ನೇ ವಿಧಿಯನ್ನು ರದ್ದುಗೊಳಿಸುವ ಮೊದಲು ಇಂತಹ ಪೋಸ್ಟರ್ ಅಭಿಯಾನಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದವು. ಆದರೆ, ನಂತರ ನಿಂತುಹೋಗಿತ್ತು.

ಇಂತಹ ಪೋಸ್ಟರ್‌ಗಳನ್ನು ಕಡೆಗಣಿಸದ ಶ್ರೀನಗರ ಪೊಲೀಸರು ಬಹಳ ಎಚ್ಚರಿಕೆ ವಹಿಸಿದ್ದರು. ಈ ಸಂಬಂಧ ಪೊಲೀಸ್ ಅಧಿಕಾರಿಗಳು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರೊಂದಿಗೆ ಸಮಾಲೋಚಿಸಿದರು. ಸಿನ್ಹಾ ಅವರ ನಿರ್ದೇಶನದ ಮೇರೆಗೆ, ಶ್ರೀನಗರ ಎಸ್‌ಎಸ್‌ಪಿ ಸಂದೀಪ್ ಚಕ್ರವರ್ತಿ ನೇತೃತ್ವದ ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಮ್ಮ ತನಿಖೆಯನ್ನು ತೀವ್ರಗೊಳಿಸಿದರು. ಅಕ್ಟೋಬರ್ 19 ರಂದು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಯಿತು. ನೌಗಮ್ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಪೋಸ್ಟರ್‌ಗಳನ್ನು ಅಂಟಿಸಿರುವ ಮೂವರು ಯುವಕರು ಪತ್ತೆಯಾಗಿದ್ದಾರೆ. ಅವರನ್ನು ಆರಿಫ್ ನಿಸಾರ್ ದಾರ್ ಅಲಿಯಾಸ್ ಸಾಹಿಲ್, ಯಾಸಿರ್-ಉಲ್-ಅಶ್ರಫ್ ಮತ್ತು ಮಕ್ಸೂದ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದ್ದು, ಎಲ್ಲರೂ ನೌಗಮ್ ನಿವಾಸಿಗಳು.

ವಿಚಾರಣೆಯಲ್ಲಿ, ಈ ಯುವಕರು 370ನೇ ವಿಧಿಯನ್ನು ರದ್ದುಗೊಳಿಸುವ ಮೊದಲು ನಿಯಮಿತವಾಗಿ ಕಲ್ಲು ತೂರಾಟ ನಡೆಸುತ್ತಿದ್ದರು. ಕಲ್ಲು ತೂರಾಟ ನಡೆಸುವುದರಿಂದ ದಿನಕ್ಕೆ 500 ರಿಂದ 600 ರೂಪಾಯಿಗಳನ್ನು ಸಂಪಾದಿಸುತ್ತಿದ್ದರು ಎಂದು ತಿಳಿದುಬಂದಿದೆ. ಮೌಲ್ವಿ ತಮಗೆ ಸೂಚನೆ ನೀಡಿದ್ದಾನೆ ಎಂದು ಅವರು ಬಹಿರಂಗಪಡಿಸಿದ್ದರು.

ಶ್ರೀನಗರದ ಹೊರ ಭಾಗವಾದ ಚಾನ್‌ಪುರದಲ್ಲಿ ಮೌಲ್ವಿಯನ್ನು ಪೊಲೀಸರು ಪತ್ತೆಹಚ್ಚಿದರು. ಆತನನ್ನು ಅಲಿ ನಕಿಬಾಗ್ ಮಸೀದಿಯ ಇಮಾಮ್ ಆಗಿದ್ದ ಶೋಪಿಯಾನ್ ಮೂಲದ ಮೌಲ್ವಿ ಇರ್ಫಾನ್ ಅಹ್ಮದ್ ಎಂದು ಗುರುತಿಸಲಾಗಿದೆ. ಇಮಾಮ್, ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ದೀರ್ಘ ಇತಿಹಾಸವನ್ನು ಹೊಂದಿದ್ದಾನೆ. ಅವನು ಭಯೋತ್ಪಾದಕರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದಲ್ಲದೆ, ಕಾಶ್ಮೀರಿ ಯುವಕರನ್ನು ಭಯೋತ್ಪಾದಕ ತರಬೇತಿಗಾಗಿ ಪಾಕಿಸ್ತಾನಕ್ಕೆ ಕಳುಹಿಸಿದ್ದಾನೆ. ಇದೇ ಮೌಲ್ವಿ 2019 ರ ಮೊದಲು ಭದ್ರತಾ ಪಡೆಗಳ ವಿರುದ್ಧ ಕಲ್ಲು ತೂರಾಟ ನಡೆಸಲು ನಿಯಮಿತವಾಗಿ ಪ್ರಚೋದಿಸುತ್ತಿದ್ದ ಎಂದು ತಿಳಿದುಬಂದಿದೆ.

ತೀವ್ರ ವಿಚಾರಣೆಗೆ ಒಳಗಾದ ಮೌಲ್ವಿ ಇರ್ಫಾನ್ ಅಹ್ಮದ್, ಡಾ. ಆದಿಲ್ ಬಗ್ಗೆ ಮಾಹಿತಿ ನೀಡಿದ್ದಾನೆ. ಜಿಹಾದಿ ಮನೋಭಾವದ ಡಾ. ಆದಿಲ್‍ನನ್ನು ಅನಂತ್‌ನಾಗ್‌ನಲ್ಲಿ ಭೇಟಿಯಾಗಿದ್ದಾಗಿ ಮೌಲ್ವಿ ಒಪ್ಪಿಕೊಂಡಿದ್ದಾನೆ. ಡಾ. ಆದಿಲ್ ಬಳಿ ಪಿಸ್ತೂಲ್ ನೋಡಿದ್ದಾಗಿ ಮೌಲ್ವಿ ಒಪ್ಪಿಕೊಂಡಿದ್ದಾನೆ. ಹಾಗೆಯೇ ಜಮೀರ್ ಎಂಬ ಇನ್ನೊಬ್ಬ ಜಿಹಾದಿ ಬಗ್ಗೆಯೂ ಮಾಹಿತಿ ನೀಡಿದ್ದಾನೆ.

ಇದರ ಆಧಾರದ ಮೇಲೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಗಂದೇರ್ಬಾಲ್ ನಿವಾಸಿ ಜಮೀರ್ ಅಹ್ಮದ್ ಅಹಂಗರ್‌ನನ್ನು ಬಂಧಿಸಿ ಡಾ. ಆದಿಲ್‌ನನ್ನು ಹುಡುಕಲು ಪ್ರಾರಂಭಿಸಿದರು. ಕುಲ್ಗಾಮ್ ಜಿಲ್ಲೆಯ ವಾನ್ಪುರದ ಡಾ. ಆದಿಲ್ ಅನಂತನಾಗ್ ತೊರೆದು ಉತ್ತರ ಪ್ರದೇಶದ ಸಹರಾನ್ಪುರದ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಅವರಿಗೆ ತಿಳಿದುಬಂದಿತು. ಯುಪಿ ಎಟಿಎಸ್ ಸಹಾಯದಿಂದ ಅವರು ಡಾ. ಆದಿಲ್‍ನನ್ನು ಬಂಧಿಸಿದರು. ಆದಿಲ್ ವಿಬ್ರೋಶ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಸಹರಾನ್ಪುರದ ಮತ್ತೊಂದು ಪ್ರಸಿದ್ಧ ಆಸ್ಪತ್ರೆಗೆ ಸೇರಿಕೊಂಡಿದ್ದ.

ಸ್ಫೋಟಕಗಳ ಸಂಗ್ರಹ

ಡಾ. ಆದಿಲ್ ವಿಚಾರಣೆಯ ಸಮಯದಲ್ಲಿ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಭಯೋತ್ಪಾದಕ ಪಿತೂರಿಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ಡಾ. ಮುಜಮ್ಮಿಲ್ ಅಹ್ಮದ್ ಗನೈ ಅಲಿಯಾಸ್ ಮುಸೈಬ್ ಬಗ್ಗೆ ತಿಳಿದುಕೊಂಡರು. ಮುಜಮ್ಮಿಲ್ ಶ್ರೀನಗರವನ್ನು ತೊರೆದು ಹರಿಯಾಣದ ಫರಿದಾಬಾದ್‌ನಲ್ಲಿರುವ ಅಲ್-ಫಲಾಹ್ ವಿಶ್ವವಿದ್ಯಾಲಯ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ. ಅನಂತನಾಗ್ ಸರ್ಕಾರಿ ವೈದ್ಯಕೀಯ ಕಾಲೇಜಿನ ಲಾಕರ್‌ನಲ್ಲಿ ಎಕೆ -56 ರೈಫಲ್ ಅನ್ನು ಮರೆಮಾಡಿದ್ದಾಗಿ ಡಾ. ಆದಿಲ್ ಒಪ್ಪಿಕೊಂಡಿದ್ದಾನೆ. ಅದನ್ನು ಪೊಲೀಸರು ನಂತರ ವಶಪಡಿಸಿಕೊಂಡರು.

ನಂತರ ಡಾ. ಮುಜಮ್ಮಿಲ್‍ನನ್ನು ಪೊಲೀಸರು ತೀವ್ರವಾಗಿ ವಿಚಾರಣೆ ನಡೆಸಿದರು. ಅಲ್-ಫಲಾಹ್ ವಿಶ್ವವಿದ್ಯಾಲಯವನ್ನು ತಲುಪಿ ಅವನನ್ನು ತೀವ್ರವಾಗಿ ಪ್ರಶ್ನಿಸಿದಾಗ, ಫರಿದಾಬಾದ್‌ನಲ್ಲಿ ಅಡಗುತಾಣವೊಂದನ್ನು ಬಹಿರಂಗಪಡಿಸಿದ್ದಾನೆ. ಅಲ್ಲಿ ಐಇಡಿಗಳನ್ನು ತಯಾರಿಸಲು ಹೆಚ್ಚಿನ ಪ್ರಮಾಣದ ಸಾಮಗ್ರಿಗಳು ಮತ್ತು ಉಪಕರಣಗಳನ್ನು ಸಂಗ್ರಹಿಸಲಾಗಿತ್ತು. ಈ ಮಾಹಿತಿಯ ಆಧಾರದ ಮೇಲೆ, ಪೊಲೀಸರು ಸ್ಥಳದಿಂದ 358 ಕಿಲೋಗ್ರಾಂಗಳಷ್ಟು ಸ್ಫೋಟಕ ವಸ್ತುಗಳನ್ನು ಮತ್ತು ಡಿಟೋನೇಟರ್‌ಗಳು ಮತ್ತು ಇತರ ಸಾಧನಗಳನ್ನು ವಶಪಡಿಸಿಕೊಂಡರು.

ವಿಚಾರಣೆಯ ಸಮಯದಲ್ಲಿ, ಡಾ. ಮುಜಮ್ಮಿಲ್ ತನ್ನ ಗೆಳತಿ, ಲಕ್ನೋ ಮೂಲದವಳು, ಅದೇ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದ ಡಾ. ಶಾಹೀನ್ ಸಯೀದ್ ಬಗ್ಗೆಯೂ ತಪ್ಪೊಪ್ಪಿಕೊಂಡಿದ್ದಾನೆ. ಮುಜಮ್ಮಿಲ್ ತನ್ನ ಗೆಳತಿಯೊಂದಿಗೆ ಎಕೆ -47 ರೈಫಲ್ ಅನ್ನು ಮರೆಮಾಡಿದ್ದಾಗಿ ಬಹಿರಂಗಪಡಿಸಿದ್ದಾನೆ.

ಸ್ಥಳೀಯ ಪೊಲೀಸರು, ಹರಿಯಾಣ ಪೊಲೀಸರು ಮತ್ತು ಪೊಲೀಸರ ಸಹಾಯದಿಂದ, ಡಾ. ಶಾಹೀನ್ ಸಯೀದ್‌ಗಾಗಿ ಹುಡುಕಾಟ ಆರಂಭಿಸಿದರು. ಆ ವೇಳೆಗೆ, ಮಹಿಳಾ ವೈದ್ಯೆ ತನ್ನ ಗೆಳೆಯನ ಬಂಧನದ ಬಗ್ಗೆ ತಿಳಿದುಕೊಂಡಿದ್ದಳು. ಇದರಿಂದ ಭೀತಿಗೊಂಡ ಆಕೆ, ತನ್ನ ಕಾರಿನಲ್ಲಿ ಅಡಗಿಸಿಟ್ಟಿದ್ದ AK-47 ಅನ್ನು ಅಲ್-ಫಲಾಹ್ ವಿಶ್ವವಿದ್ಯಾಲಯದ ಕಸದ ಡಬ್ಬಿಗೆ ಎಸೆದಿದ್ದಾಳೆ. ಡಾ. ಶಾಹೀನ್‌ಳನ್ನು ಪೊಲೀಸರು ಬಂಧಿಸಿದ್ದು, ಕಸದ ಡಬ್ಬಿಯಿಂದ AK-47 ರೈಫಲ್ ಅನ್ನು ವಶಪಡಿಸಿಕೊಂಡರು.

ಇನ್ನು, ಡಾ. ಮುಜಮ್ಮಿಲ್ ವಿಚಾರಣೆಯಲ್ಲಿ ಮೇವಾತ್‌ನ ಸಿಂಗಾರ್-ಪುನ್ಹಾನಾ ಗ್ರಾಮದ ನಿವಾಸಿ ಹಾಜಿ ಇಶ್ತಿಯಾಕ್ ಎಂಬ ಮತ್ತೊಬ್ಬ ಜಿಹಾದಿ ಸಂಚುಕೋರ ಕೂಡ ಬಹಿರಂಗಗೊಂಡಿದ್ದಾನೆ. ಇಶ್ತಿಯಾಕ್, ಡಾ. ಮುಜಮ್ಮಿಲ್‍ನೊಂದಿಗೆ ನಿಕಟ ಸ್ನೇಹ ಬೆಳೆಸಿಕೊಂಡಿದ್ದನು. ಇಬ್ಬರೂ ನೂರಾರು ಬಾಂಬ್ ದಾಳಿಗಳನ್ನು ನಡೆಸಲು ಸಿದ್ಧತೆ ಮಾಡಿದ್ದರು ಎಂದು ತಿಳಿದು ಬಂದಿದೆ.

ಫರಿದಾಬಾದ್‌ನಲ್ಲಿ ಬಾಡಿಗೆಗೆ ಮನೆ ಪಡೆದಿದ್ದ ಹಾಜಿ ಇಶ್ತಿಯಾಕ್‌ನನ್ನು ಪೊಲೀಸರು ಬಂಧಿಸಿದರು. ಹರಿಯಾಣ ಪೊಲೀಸರ ಸಹಾಯದಿಂದ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಈ ಮನೆಯ ಮೇಲೆ ದಾಳಿ ಮಾಡಿದಾಗ, ಅವರು ದಿಗ್ಭ್ರಮೆಗೊಂಡರು. ಒಟ್ಟು 2563 ಕಿಲೋಗ್ರಾಂಗಳಷ್ಟು ಸ್ಫೋಟಕ ವಸ್ತುಗಳನ್ನು ಹೊಂದಿರುವ 88 ಚೀಲಗಳು ಪತ್ತೆಯಾಗಿವೆ. ಇಶ್ತಿಯಾಕ್‌ನ ಅಡಗುತಾಣವು ಅಲ್-ಫಲಾಹ್ ವಿಶ್ವವಿದ್ಯಾಲಯದ ಹಿಂದೆಯೂ ಇತ್ತು. ಸಂಗ್ರಹದಲ್ಲಿ ಅಮೋನಿಯಂ ನೈಟ್ರೇಟ್, ಪೊಟ್ಯಾಸಿಯಮ್, ಇಂಧನ ತೈಲ, ಡಿಟೋನೇಟರ್‌ಗಳು, ಬ್ಯಾಟರಿಗಳು ಮತ್ತು ಟೈಮರ್‌ಗಳು ಸೇರಿವೆ. ಇವು ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಳ್ಳುವ ಮತ್ತು ನೂರಾರು ಭಯೋತ್ಪಾದಕ ದಾಳಿಗಳನ್ನು ನಡೆಸುವ ಸಾಮರ್ಥ್ಯವಿರುವ ಸ್ಫೋಟಕಗಳಾಗಿವೆ.

ಒಟ್ಟಾರೆಯಾಗಿ, ಎಲ್ಲಾ ಅಡಗುತಾಣಗಳ ಮೇಲೆ ನಡೆದ ದಾಳಿಗಳಲ್ಲಿ ಜಮ್ಮು-ಕಾಶ್ಮೀರ ಪೊಲೀಸರಿಗೆ ಎರಡು ಎಕೆ- ರೈಫಲ್‌ಗಳು, ಒಂದು ಚೈನೀಸ್ ಸ್ಟಾರ್ ಪಿಸ್ತೂಲ್, ಒಂದು ಬೆರೆಟ್ಟಾ ಪಿಸ್ತೂಲ್ ಮತ್ತು ಸುಮಾರು 2900 ಕಿಲೋಗ್ರಾಂಗಳಷ್ಟು ಸ್ಫೋಟಕ ವಸ್ತುಗಳು ಸಿಕ್ಕಿವೆ.

ಇದನ್ನೂ ಓದಿ: Viral Video: ದೆಹಲಿ ಬಾಂಬ್ ಸ್ಫೋಟ ಹೇಗಿತ್ತು ಗೊತ್ತೇ? ಇಲ್ಲಿದೆ ಭಯಾನಕ ವಿಡಿಯೊ..

ಅಂತಿಮ ದಾಳಿ

ಡಾ. ಆದಿಲ್, ಡಾ. ಮುಜಮ್ಮಿಲ್ ಮತ್ತು ಡಾ. ಶಾಹೀನ್ ಸಯೀದ್‍ನನ್ನು ಜಂಟಿಯಾಗಿ ವಿಚಾರಣೆ ನಡೆಸಿದಾಗ, ದೊಡ್ಡ ಪ್ರಮಾಣದ ಭಯೋತ್ಪಾದಕ ಸಂಚಿನ ಬಗ್ಗೆ ಮತ್ತಷ್ಟು ವಿವರಗಳು ಬಹಿರಂಗಗೊಂಡವು. ಇದು ಜೈಷ್‌ಇ-ಮೊಹಮ್ಮದ್‌ನಲ್ಲಿರುವ, ಪಾಕಿಸ್ತಾನಿ ನಿರ್ವಾಹಕರ ಆಜ್ಞೆಯ ಮೇರೆಗೆ ಭಾರತವನ್ನು ಧ್ವಂಸಗೊಳಿಸಲು ಅವರು ತಮ್ಮ ಸಿದ್ಧತೆಗಳನ್ನು ಹೆಚ್ಚಾಗಿ ಪೂರ್ಣಗೊಳಿಸಿದ್ದಾರೆ ಎಂದು ದೃಢಪಡಿಸಿತು.

ಈ ವಿಚಾರಣೆಯ ಮೂಲಕ ಪೊಲೀಸರು ಡಾ. ಉಮರ್ ಬಗ್ಗೆ ತಿಳಿದುಕೊಂಡರು. ಅವನು ಶ್ರೀನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಮುಜಮ್ಮಿಲ್ ಜೊತೆ ಅಧ್ಯಯನ ಮಾಡಿದ್ದ ಮತ್ತು ಭಯೋತ್ಪಾದಕ ಪಿತೂರಿಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ. ಪೊಲೀಸರು ಡಾ. ಉಮರ್‌ನನ್ನು ಬಂಧಿಸಲು ಅಲ್-ಫಲಾಹ್ ವಿಶ್ವವಿದ್ಯಾಲಯಕ್ಕೆ ಹಿಂತಿರುಗಿದರು. ಅಷ್ಟರಲ್ಲಾಗಲೇ ಉಮರ್‌ಗೆ ತನ್ನ ಸಹಚರರ ಬಂಧನದ ಬಗ್ಗೆ ವಿಚಾರ ತಿಳಿಯಿತು. ತನ್ನ ಬಂಧನವೂ ಆಗಲಿದೆ ಎಂದು ಗ್ರಹಿಸಿದ ಈತ ಕೆಂಪು ಕೋಟೆಯ ಬಳಿ ಆತ್ಮಾಹುತಿ ಬಾಂಬ್ ದಾಳಿ ನಡೆಸಲು ನಿರ್ಧರಿಸಿದ.

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಶತ್ರುಗಳನ್ನು ನಿರ್ಮೂಲನೆ ಮಾಡುವ ಬಗ್ಗೆ ಹೆಚ್ಚಾಗಿ ಮಾತನಾಡುವ ಸ್ಥಳ ಇದು. ದಾಳಿಗಾಗಿ, ಅವನು 2014 ರ ಬ್ರಾಂಡ್, ನೋಂದಣಿ ಸಂಖ್ಯೆ HR26CE7674 ಎಂಬ i20 ಕಾರನ್ನು ಬಳಸಿದ್ದಾನೆ. ನಿನ್ನೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕೆಂಪು ಕೋಟೆ ಬಳಿ ಬಂದ ಡಾ. ಉಮರ್ ಮೂರು ಗಂಟೆಗಳ ಕಾಲ ಕಾದಿದ್ದಾನೆ. ಸಂಜೆ ಕೆಂಪು ಕೋಟೆ ಬಳಿ ಸಂಚಾರ ಮತ್ತು ಜನಸಂದಣಿ ಹೆಚ್ಚಾದಾಗ ಸ್ಫೋಟಿಸಿದ್ದಾನೆ. ಇದರಿಂದಾಗಿ ಅಪಾರ ಪ್ರಮಾಣದ ಜೀವ ಮತ್ತು ಆಸ್ತಿ ನಷ್ಟವಾಗಿದೆ.

ಸಾಮಾನ್ಯವಾಗಿ, ಬಡತನ ಮತ್ತು ಶಿಕ್ಷಣದ ಕೊರತೆಯು ಮುಸ್ಲಿಂ ಯುವಕರನ್ನು ಜಿಹಾದ್ ಅಥವಾ ಭಯೋತ್ಪಾದನೆಯತ್ತ ಕೊಂಡೊಯ್ಯುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ. ಈ ಇತ್ತೀಚಿನ ಭಯೋತ್ಪಾದಕ ಪಿತೂರಿಯನ್ನು ನೋಡಿದರೆ, ಇದರಲ್ಲಿ ಭಾಗಿಯಾಗಿರುವವರೆಲ್ಲರೂ ಉನ್ನತ ಶಿಕ್ಷಣ ಪಡೆದವರು ಮತ್ತು ಶ್ರೀಮಂತರು. ಅದರಲ್ಲೂ ಜೀವ ಕಾಪಾಡುವ ವೈದ್ಯ ವೃತ್ತಿಯಲ್ಲಿರುವವರು ಎಂಬುದು ಅಚ್ಚರಿಯ ಸಂಗತಿ.

ಭದ್ರತಾ ಸಂಸ್ಥೆಗಳ ಸವಾಲು ಇನ್ನೂ ಮುಗಿದಿಲ್ಲ. ಏಕೆಂದರೆ ಜಿಹಾದಿ ಮನಸ್ಥಿತಿ ಹೊಂದಿರುವ ಇನ್ನೂ ಎಷ್ಟು ಜನರು ಅಡಗಿದ್ದಾರೆ ಎಂಬುದು ತಿಳಿದಿಲ್ಲ. ಪರಿಣಾಮವಾಗಿ, ಕೇಂದ್ರ ಗೃಹ ಸಚಿವಾಲಯವು ಈ ಪ್ರಕರಣವನ್ನು NIA (ರಾಷ್ಟ್ರೀಯ ತನಿಖಾ ಸಂಸ್ಥೆ) ಗೆ ವರ್ಗಾಯಿಸಿದೆ. ಈ ನಡುವೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತೊಬ್ಬ ವೈದ್ಯ ಸಜಾದ್ ಅಹ್ಮದ್ ಮಲ್ಲಾನನ್ನು ಬಂಧಿಸಿದ್ದಾರೆ.