ಕೋಲ್ಕತ್ತ: ಐ–ಪ್ಯಾಕ್ ಕಲ್ಲಿದ್ದಲು ಹಗರಣ (I-PAC Case) ಪ್ರಕರಣದ ತನಿಖೆಗೆ ಪಶ್ಚಿಮ ಬಂಗಾಳ ಸರ್ಕಾರ(West Bengal Government) ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ( Chief Minister Mamata Banerjee) ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ, ಜಾರಿ ನಿರ್ದೇಶನಾಲಯ (ಇಡಿ)(ED) ಸುಪ್ರೀಂ ಕೋರ್ಟ್‌ನಲ್ಲಿ(Supreme Court) ಅರ್ಜಿ ಸಲ್ಲಿಸಿದೆ.
ಕೇಂದ್ರ ತನಿಖಾ ದಳ (ಸಿಬಿಐ) ಘಟನೆಯ ಕುರಿತು ತನಿಖೆ ನಡೆಸುವಂತೆ ಇಡಿಗೆ ಮನವಿ ಮಾಡಿದ್ದು, “ನ್ಯಾಯಸಮ್ಮತ ಮತ್ತು ಸ್ವತಂತ್ರ ತನಿಖೆ ನಡೆಸುವ ನಮ್ಮ ಹಕ್ಕನ್ನು ರಾಜ್ಯ ಸರ್ಕಾರ ಕಸಿದುಕೊಂಡಿದೆ” ಎಂದು ಇಡಿ ಮನವಿಯಲ್ಲಿ ಹೇಳಿದೆ.
ಐ–ಪ್ಯಾಕ್ ರಾಜಕೀಯ ಸಲಹಾ ಸಂಸ್ಥೆಗೆ ಸಂಬಂಧಿಸಿದ ಸ್ಥಳಗಳಲ್ಲಿ ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಸಂಭವಿಸಿದ ಘಟನೆಗಳ ಬಗ್ಗೆ ಇಡಿ ತನ್ನ ಅರ್ಜಿಯಲ್ಲಿ ವಿವರಿಸಿದೆ. ಅಲ್ಲದೇ ಐ–ಪ್ಯಾಕ್ ಸಂಸ್ಥೆಯು ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಪಕ್ಷದ ಚುನಾವಣಾ ತಂತ್ರ ರೂಪಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದೆ ಎಂದು ಇಡಿ ಹೇಳಿದೆ.
ಹಣಕಾಸು ತನಿಖಾ ಸಂಸ್ಥೆಯ ಪ್ರಕಾರ, ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲು ಮತ್ತು ಕಾನೂನುಬದ್ಧ ತನಿಖೆ ನಡೆಸಲು ಅಧಿಕಾರಿಗಳಿಗೆ ಅಡ್ಡಿಪಡಿಸಲಾಗಿದೆ. ಹಿರಿಯ ರಾಜ್ಯಾಧಿಕಾರಿಗಳ ಸಮ್ಮುಖದಲ್ಲೇ ಭೌತಿಕ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ಬಲವಂತವಾಗಿ ಸ್ಥಳದಿಂದ ತೆಗೆದುಹಾಕಲಾಗಿದೆ ಎಂದು ಇಡಿ ಆರೋಪಿಸಿದೆ.
ಬಂಗಾಳ ಸರ್ಕಾರದಿಂದ ಕೇವಿಯಟ್ ಸಲ್ಲಿಕೆ
ಇಡಿ ಸುಪ್ರೀಂ ಕೋರ್ಟ್‌ಗೆ ತೆರಳುವ ಮುನ್ನವೇ, ಪಶ್ಚಿಮ ಬಂಗಾಳ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದೆ. ಕೇವಿಯಟ್ ಎಂದರೆ, ಸಂಬಂಧಿತ ಪಕ್ಷವನ್ನು ಕೇಳದೆ ಯಾವುದೇ ಆದೇಶ ಹೊರಡಿಸಬಾರದು ಎಂಬ ಅಧಿಕೃತ ಮನವಿ ಮಾಡಿದೆ. ಇಡಿಗೆ ಯಾವುದೇ ಮಧ್ಯಂತರ ಪರಿಹಾರ ನೀಡುವ ಮೊದಲು ರಾಜ್ಯ ಸರ್ಕಾರದ ವಾದವನ್ನೂ ಕೋರ್ಟ್ ಮುಂದೆ ಇಡಬೇಕು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಸುಮಾರು ₹10 ಕೋಟಿ ಮೌಲ್ಯದ ಅಪರಾಧದ ಆದಾಯವನ್ನು ಹವಾಲಾ ಮಾರ್ಗಗಳ ಮೂಲಕ ಐ–ಪ್ಯಾಕ್‌ಗೆ ವರ್ಗಾಯಿಸಲಾಗಿದೆ ಮತ್ತು 2022ರ ಗೋವಾ ವಿಧಾನಸಭಾ ಚುನಾವಣೆ ವೇಳೆ ನೀಡಿದ ಸೇವೆಗಳಿಗಾಗಿ ತೃಣಮೂಲ ಕಾಂಗ್ರೆಸ್ ಐ–ಪ್ಯಾಕ್‌ಗೆ ಪಾವತಿ ಮಾಡಿದೆ ಎಂದು ಇಡಿ ಆರೋಪಿಸಿದೆ.
ಶಿಲ್ಪಾ ಶೆಟ್ಟಿ ದಂಪತಿಗೆ ಮತ್ತೊಂದು ಸಂಕಷ್ಟ; ಬಿಟ್‌ಕಾಯಿನ್ ಹಗರಣದಲ್ಲಿ ಸಮನ್ಸ್ ಜಾರಿ
ವಿಚಾರಣೆ ಮುಂದೂಡಿದ ಕಲ್ಕತ್ತಾ ಹೈಕೋರ್ಟ್
ಶೋಧ ಕಾರ್ಯಾಚರಣೆಗೆ “ಅಡ್ಡಿಪಡಿಸಿದ” ಆರೋಪದ ಬಗ್ಗೆ ಮಮತಾ ಬ್ಯಾನರ್ಜಿ ವಿರುದ್ಧ ಎಫ್‌ಐಆರ್ ದಾಖಲಿಸಲು ಇಡಿ ಶುಕ್ರವಾರ ಕಲ್ಕತ್ತಾ ಹೈಕೋರ್ಟ್ ಮೊರೆ ಹೋಗಿತ್ತು. ಆದರೆ ನ್ಯಾಯಾಲಯವು ಈ ಪ್ರಕರಣದ ವಿಚಾರಣೆಯನ್ನು ಜ.14ಕ್ಕೆ ಮುಂದೂಡಿದೆ. ಇದಕ್ಕೆ ಪ್ರತಿಯಾಗಿ, ತೃಣಮೂಲ ಕಾಂಗ್ರೆಸ್ ಮತ್ತು ಐ–ಪ್ಯಾಕ್ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಪ್ರತಿಯಾಗಿ ಕೇವಿಯಟ್ ಸಲ್ಲಿಸಿ, ಇಡಿಯ ಆರೋಪಗಳನ್ನು ತಳ್ಳಿ ಹಾಕಿವೆ.
ದಾಳಿಗಳ ವೇಳೆ ವಶಪಡಿಸಿಕೊಳ್ಳಲಾದ ದಾಖಲೆಗಳು ಕೇವಲ ಚುನಾವಣಾ ಯೋಜನೆ ಮತ್ತು ಪ್ರಚಾರ ತಂತ್ರಕ್ಕೆ ಸಂಬಂಧಿಸಿದ್ದಾಗಿದ್ದು, ಆ ವಸ್ತು ಹಾಗೂ ಹಣ ಅಕ್ರಮ ವರ್ಗಾವಣೆ ಕಾಯ್ದೆ–2002ರ ವ್ಯಾಪ್ತಿಗೆ ಬರುವುದಿಲ್ಲ ಎಂದು ಪಕ್ಷ ವಾದಿಸಿದೆ. ಅಲ್ಲದೇ ತನಿಖೆಯ ನೆಪದಲ್ಲಿ ರಹಸ್ಯ ರಾಜಕೀಯ ದಾಖಲೆಗಳನ್ನು ಅಕ್ರಮವಾಗಿ ಪಡೆದುಕೊಳ್ಳಲು ಇಡಿ ಯತ್ನಿಸುತ್ತಿದೆ ಎಂದು ಆರೋಪಿಸಿದೆ.
ಐ–ಪ್ಯಾಕ್ ಮುಖ್ಯಸ್ಥ ಪ್ರತಿಕ್ ಜೈನ್ ಅವರ ಕುಟುಂಬವೂ ಶೋಧ ಕಾರ್ಯಾಚರಣೆ ವೇಳೆ ಮಹತ್ವದ ದಾಖಲೆಗಳನ್ನು ಕದ್ದಿದ್ದಾರೆ ಎಂದು ಆರೋಪಿಸಿ ಪ್ರತ್ಯೇಕ ದೂರುಗಳನ್ನು ಸಲ್ಲಿಸಿದೆ. ಆದರೆ ಇಡಿ ಈ ಆರೋಪಗಳನ್ನು ತಳ್ಳಿಹಾಕಿದ್ದು, ಕಾನೂನುಬದ್ಧವಾಗಿಯೇ ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ಪುನರುಚ್ಚರಿಸಿದೆ.
ಇಡಿ ಅಧಿಕಾರಿಗಳ ತನಿಖೆಗೆ ಕೊಲ್ಕತ್ತಾ ಪೊಲೀಸ್ ಕ್ರಮ
ಐ–ಪ್ಯಾಕ್ ಮುಖ್ಯಸ್ಥ ಪ್ರತಿಕ್ ಜೈನ್ ಅವರ ನಿವಾಸ ಮತ್ತು ಕಚೇರಿಯಲ್ಲಿ ನಡೆದ ದಾಳಿಗಳ ವೇಳೆ ದಾಖಲೆ ಕಳವು ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್‌ಐಆರ್‌ಗಳ ನಂತರ, ಕೊಲ್ಕತ್ತಾ ಪೊಲೀಸರು ಆರೋಪಿ ಸ್ಥಾನದಲ್ಲಿರುವ ಇಡಿ ಅಧಿಕಾರಿಗಳ ಗುರುತಿಸುವ ಕಾರ್ಯ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ, ಡಿವಿಆರ್ ದಾಖಲೆಗಳು ಹಾಗೂ ಸಾಕ್ಷಿಗಳ ಹೇಳಿಕೆಗಳನ್ನು ಸಂಗ್ರಹಿಸಲಾಗಿದ್ದು, ಗುರುತು ಪತ್ತೆಯಾದ ನಂತರ ನೋಟಿಸ್ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.