ನವದೆಹಲಿ: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ (Iran-israel war) ಮುಂದುವರಿದಿದೆ. ಯುಎಸ್ ಮತ್ತು ಇಸ್ರೇಲ್ ಸೇನಾ ಪಡೆಗಳು ಇರಾನ್ ಮೇಲಿನ ದಾಳಿಯನ್ನು ನಿರಂತರ ಹೆಚ್ಚಿಸುತ್ತಲೇ ಇದ್ದು, ಇರಾನ್ ಕೂಡ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ. ಇದು ಈಗಾಗಲೇ ತೈಲ ಮಾರುಕಟ್ಟೆಯ (Fuel market) ಮೇಲೆ ಪರಿಣಾಮ ಬೀರಿದೆ. ಇರಾನ್ ಮತ್ತು ಇಸ್ರೇಲ್ ಸಂಘರ್ಷದಲ್ಲಿ ಹಾರ್ಮುಜ್ ಜಲಸಂಧಿಯು (Strait Of Hormuz) ಯುದ್ಧ ವಲಯವಾಗಿ ನಿರ್ಮಾಣವಾಗಿದೆ. ಹೀಗಾಗಿ ಇದರ ಮೂಲಕ ತೈಲ ಸಾಗಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಇದು ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳ ಮೇಲೆ ಪರಿಣಾಮ ಬೀರಲಿದೆ.
ಯುಎಸ್ ಮತ್ತು ಇಸ್ರೇಲ್ ಸೇನಾ ಪಡೆಗಳು ಇರಾನ್ ಮೇಲೆ ನಡೆಸುತ್ತಿರುವ ದಾಳಿಗಳ ಪರಿಣಾಮ ಜಾಗತಿಕ ತೈಲ ಬೆಲೆಗಳು ಏರಿಕೆಯಾಗಿವೆ. ಯುದ್ಧ ಆರಂಭವಾದ ವಾರಾಂತ್ಯದಲ್ಲಿ ಹಾರ್ಮುಜ್ ಜಲಸಂಧಿಯ ಬಳಿ ಕಸುಮಾರು ಮೂರು ಹಡಗುಗಳ ಮೇಲೆ ದಾಳಿ ನಡೆದಿದೆ. ಇದರ ಬಳಿಕ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಸೋಮವಾರ ಶೇ. 10ರಷ್ಟು ಏರಿಕೆಯಾಗಿ ಬ್ಯಾರೆಲ್‌ಗೆ 82 ಡಾಲರ್ ಗಿಂತಲೂ ಹೆಚ್ಚಾಗಿದೆ. ಇದರಿಂದ ನೈಸರ್ಗಿಕ ಅನಿಲ ಬೆಲೆಗಳು ಕೂಡ ಶೇ. 25ರಷ್ಟು ಹೆಚ್ಚಳವಾಗಿದೆ.
ಪಶ್ಚಿಮ ಏಷ್ಯಾ ಉದ್ವಿಗ್ನ: ಕಚ್ಚಾ ತೈಲ ಬೆಲೆ ಏರಿಕೆ; ಭಾರತದ ಮೇಲೇನು ಪರಿಣಾಮ?
ಹಾರ್ಮುಜ್ ಜಲಸಂಧಿಯ ಮೂಲಕ ಜಾಗತಿಕ ಮಾರುಕಟ್ಟೆಗೆ ರವಾನೆಯಾಗುವ ಶೇ. 20ರಷ್ಟು ತೈಲ ಸಾಗಾಟವನ್ನು ಇರಾನ್ ನಿರ್ಬಂಧಿಸಿದೆ. ಈ ಜಲಮಾರ್ಗದ ಮೂಲಕ ಹಡಗುಗಳು ಹಾದುಹೋಗದಂತೆ ಎಚ್ಚರಿಕೆಯನ್ನು ನೀಡಿದೆ. ಜಲಸಂಧಿಯ ಸಮೀಪದಲ್ಲಿ ಇತ್ತೀಚೆಗೆ ನಡೆದ ದಾಳಿಯಲ್ಲಿ ಹಲವು ಹಡಗುಗಳಿಗೆ ಹಾನಿಯಾಗಿದ್ದು, ಹಲವು ಟ್ಯಾಂಕರ್‌ಗಳಿಗೆ ಹಾನಿಯಾಗಿದ್ದು, ಓರ್ವ ಸಿಬ್ಬಂದಿ ಸಾವನ್ನಪ್ಪಿದ್ದಾರೆ.
ಈ ಜಲ ಸಂಧಿಯಲ್ಲಿ ಪ್ರತಿದಿನ ಸುಮಾರು 107 ಸರಕು ಹಡಗುಗಳು ಸಾಗುತ್ತವೆ. ಈಗ ಇಲ್ಲಿ ಕೇವಲ ೧೨ ಹಡಗುಗಳು ಮಾತ್ರ ಹಾದುಹೋಗುತ್ತಿವೆ. ಮಾರ್ಚ್ 1ರಂದು ಇಲ್ಲಿ ಕೇವಲ 19 ಹಡಗು ಸಾಗಿವೆ. ಆದರೆ ಯಾವುದೇ ಕಚ್ಚಾ ತೈಲದ ಹಡಗು ಸಾಗಿಲ್ಲ.
ಇರಾನ್ ದಾಳಿಯ ಬಳಿಕ ಈ ಜಲಸಂಧಿಯ ಮೂಲಕ ಸಾಗುವ ಹಡಗು ಚಲನೆಗಳು ಸರಿಸುಮಾರು ಶೇ. 40 ರಿಂದ ಶೇ. 70 ರಷ್ಟು ಕಡಿಮೆಯಾಗಿದೆ. ಹೆಚ್ಚು ಲೋಡ್ ಮಾಡಿರುವ ಕಚ್ಚಾ ಟ್ಯಾಂಕರ್‌ಗಳ ನಿರ್ವಾಹಕರು ಗಲ್ಫ್ ಅಥವಾ ಜಲಸಂಧಿಯ ಹೊರಗೆ ಸುರಕ್ಷಿತ ಪ್ರದೇಶದಲ್ಲಿ ನಿಲ್ಲಲು ಕಾಯುತ್ತಿದ್ದಾರೆ.
ಬೆಲೆ ಏರಿಕೆ ಆತಂಕ
ಜಲಸಂಧಿಯ ಮೂಲಕ ತೈಲ ಸಾಗಾಟ ಪ್ರಕ್ರಿಯೆಗೆ ಅಡ್ಡಿಯಾಗಿರುವುದರಿಂದ ತೈಲ ಮತ್ತು ಅನಿಲ ಬೆಲೆಗಳು ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ಈ ಜಲಸಂಧಿಯು ಪೂರ್ಣವಾಗಿ ಮುಚ್ಚಿದರೆ ಜಾಗತಿಕ ಇಂಧನ ವ್ಯವಸ್ಥೆಯ ಒಂದು ಹಾದಿ ಸಂಪೂರ್ಣವಾಗಿ ಮುಚ್ಚಿದಂತಾಗುತ್ತದೆ. ಇದರಿಂದ ದೈನಂದಿನ ರಫ್ತಿನ ಒಂದು ಭಾಗ ಕಳೆದುಕೊಂಡಗುತ್ತದೆ. ಇದರಿಂದ ಬೆಲೆಗಳು ಹೆಚ್ಚಾಗುವ ಸಾಧ್ಯತೆ ಇದೆ
ಭಾರತಕ್ಕೂ ಆತಂಕ
ಹಾರ್ಮುಜ್ ಜಲಸಂಧಿ ಮುಚ್ಚಿದರೆ ಹೆಚ್ಚಿನ ಆತಂಕವಾಗುವುದು ಏಷ್ಯಾ ಖಂಡದ ರಾಷ್ಟ್ರಗಳಿಗೆ. ಯಾಕೆಂದರೆ ಭಾರತ ಮತ್ತು ಚೀನಾ ಸೇರಿದಂತೆ ಹೆಚ್ಚಿನ ರಾಷ್ಟ್ರಗಳು ಗಲ್ಫ್ ರಾಷ್ಟ್ರಗಳಿಂದ ಕಚ್ಚಾ ತೈಲವನ್ನು ಹಾರ್ಮುಜ್ ಜಲಸಂಧಿಯ ಮೂಲಕವೇ ತರಿಸಿಕೊಳ್ಳುತ್ತಿದೆ. ಇಲ್ಲಿ ದೀರ್ಘಕಾಲ ಉಂಟಾಗುವ ತಡೆಯಿಂದ ಭಾರತಕ್ಕೆ ತೈಲ ಆಮದು ಖರ್ಚು ಹೆಚ್ಚಾಗಲಿದೆ. ಇದು ರೂಪಾಯಿಯ ಮೇಲೆ ಒತ್ತಡ ಹೇರಿ ಹಣದುಬ್ಬರವನ್ನು ಮತ್ತಷ್ಟು ಹೆಚ್ಚಿಸಲಿದೆ.
ಚೀನಾ ದೊಡ್ಡ ಪ್ರಮಾಣದ ಸಂಗ್ರಹಣಾ ನಿಕ್ಷೇಪಗಳನ್ನು ಹೊಂದಿದ್ದು, ರಷ್ಯಾ ಮತ್ತು ಮಧ್ಯ ಏಷ್ಯಾಕ್ಕೆ ಪೈಪ್‌ಲೈನ್ ಸಂಪರ್ಕಗಳನ್ನು ಹೊಂದಿದೆ. ಆದರೆ ಅದು ಇನ್ನೂ ಗಲ್ಫ್ ಕಚ್ಚಾ ಮತ್ತು ಕತಾರಿ ಎಲ್‌ಎನ್‌ಜಿಯನ್ನು ಹೆಚ್ಚು ಅವಲಂಬಿಸಿದೆ. ಹೀಗಾಗಿ ಇಲ್ಲಿ ಉಂಟಾಗುವ ತಡೆಯು ಅದರ ಕೈಗಾರಿಕಾ ಇಂಧನ ವೆಚ್ಚಗಳನ್ನು ಹೆಚ್ಚಿಸಲಿದೆ ಮತ್ತು ರಫ್ತುನ್ನು ಕಡಿಮೆಗೊಳಿಸಲಿದೆ.
ಒಮಾನ್ ಕರಾವಳಿಯ ತೈಲ ಟ್ಯಾಂಕರ್ ಮೇಲೆ ಇರಾನ್ ಡ್ರೋನ್ ದಾಳಿ; ಭಾರತ ಮೂಲದ ಸಿಬ್ಬಂದಿ ಸಾವು
ಯುಎಸ್ ಮಧ್ಯಪ್ರವೇಶ?
ತೈಲ ಆಮದಿಗಾಗಿ ಈ ದಾರಿಯನ್ನು ಯುಎಸ್ ಅವಲಂಬಿಸಿಲ್ಲ. ಆದರೆ ಜಾಗತಿಕ ಬೆಲೆ ಮತ್ತು ಅದರ ಪಾಲುದಾರರ ಭದ್ರತೆಗೆ ಆತಂಕವಿರುವುದರಿಂದ ಅದು ಮಧ್ಯಪ್ರವೇಶಿಸಲೂ ಬಹುದು. ಇಲ್ಲಿ ಸಾಗುವ ಹಡಗುಗಳಿಗೆ ಅಮೆರಿಕನ್ ನೌಕಾಪಡೆಯು ಬೆಂಗಾವಲನ್ನು ಒದಗಿಸಬಹುದು. ಮೈನ್‌ಸ್ವೀಪರ್‌ಗಳು ಮತ್ತು ವಾಯು ರಕ್ಷಣಾ ಪಡೆಗಳನ್ನು ನಿಯೋಜಿಸಬಹುದು. ಇದು ಸದ್ಯದ ಪರಿಸ್ಥಿತಿಯಲ್ಲಿ ಅಪಾಯವನ್ನು ಕಡಿಮೆ ಮಾಡಿ, ಮುಂದಿನ ದಿನಗಳಲ್ಲಿ ಮತ್ತೆ ಜಲಸಂಧಿ ಪೂರ್ಣಪ್ರಮಾಣದಲ್ಲಿ ತೆರೆಯಲು ಅವಕಾಶ ಮಾಡಿಕೊಡಬಹದು. ಆದರೆ ಈ ಜಲಸಂಧಿಯನ್ನು ವಶಪಡಿಸಿಕೊಳ್ಳುವುದೆಂದರೆ ಕರಾವಳಿ ರಾಜ್ಯ ನಿಯಂತ್ರಣದ ಉಲ್ಲಂಘನೆಯಾಗುವುದು. ಇದರಿಂದ ಪ್ರಾದೇಶಿಕ ಯುದ್ಧ ಉಲ್ಬಣವಾಗುವ ಸಾಧ್ಯತೆ ಇದೆ.