Pune Horror: ಪುಣೆಯಲ್ಲೊಂದು ಹೃದಯ ವಿದ್ರಾವಕ ಘಟನೆ; ಪತ್ನಿಯ ಶೀಲ ಶಂಕಿಸಿ 3 ವರ್ಷದ ಮಗನ ಕತ್ತು ಸೀಳಿ ಕೊಂದ ಟೆಕ್ಕಿ
Pune Shocker: ಐಟಿ ಎಂಜಿನಿಯರ್ ಪತ್ನಿಯ ಶೀಲ ಶಂಕಿಸಿ ತನ್ನ 3 ವರ್ಷದ ಮಗನ ಕತ್ತು ಸೀಳಿ ಕೊಂದು ಮೃತದೇಹವನ್ನು ಕಾಡಿನಲ್ಲಿ ಎಸೆದಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಮೃತನನ್ನು ಹಿಮ್ಮತ್ ಮಾಧವ್ ಟಿಕೆಟಿ ಎಂದು ಗುರುತಿಸಲಾಗಿದೆ. ಕೃತ್ಯ ಎಸಗಿದ ಟೆಕ್ಕಿ ಮಾಧವ್ ಟಿಕೆಟಿಯನ್ನು ಬಂಧಿಸಲಾಗಿದೆ.

ಹಿಮ್ಮತ್ ಮಾಧವ್ ಟಿಕೆಟಿ ಮತ್ತು ಸಾಂದರ್ಭಿಕ ಚಿತ್ರ.

ಮುಂಬೈ: ಮಹಾರಾಷ್ಟ್ರದ ಪುಣೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು (Pune Horror), ಐಟಿ ಎಂಜಿನಿಯರ್ ಪತ್ನಿಯ ಶೀಲ ಶಂಕಿಸಿ ತನ್ನ 3 ವರ್ಷದ ಮಗನ ಕತ್ತು ಸೀಳಿ ಕೊಂದು ಮೃತದೇಹವನ್ನು ಕಾಡಿನಲ್ಲಿ ಎಸೆದಿದ್ದಾನೆ. ಮೃತ ಬಾಲಕನ್ನು ಹಿಮ್ಮತ್ ಮಾಧವ್ ಟಿಕೆಟಿ (Himmat Madhav Tiketi) ಎಂದು ಗುರುತಿಸಲಾಗಿದೆ. ಪುಣೆಯ ಚಂದನ್ ನಗರದ ರತನ್ ಪ್ರೆಸ್ಟೀಜ್ ನಿವಾಸಿ ಮಾಧವ್ ಟಿಕೆಟಿ (Madhav Tiketi) ಕೃತ್ಯ ಎಸಗಿದಾತ. ಕೊಲೆಯಾದ ಹಿಮ್ಮತ್ ಟೆಕ್ಕಿ ಮಾಧವ್ ಮತ್ತು ಸ್ವರೂಪಾ ದಂಪತಿಯ ಏಕಮಾತ್ರ ಪುತ್ರ. ಮೂಲತಃ ಆಂಧ್ರ ಪ್ರದೇಶದ ವಿಶಾಖಪಟ್ಟಣಂನ ಈ ಕುಟುಂಬ ಕೆಲವು ಸಮಯದಿಂದ ಪುಣೆಯಲ್ಲಿ ವಾಸಿಸುತ್ತಿದೆ.
ಸದ್ಯ ಆರೋಪಿ 38 ವರ್ಷದ ಮಾಧವ್‌ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಾಲಕನ ಮೃತದೇಹವನ್ನು ಪೋಸ್ಟ್ ಮಾರ್ಟಂಗಾಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
"Shocking Pune Tragedy: Techie Murders 3.5-Year-Old Son Over Wife’s Character Suspicion | Watch Now
— Aliasgar Mukhtiar (@themukhtiars) March 22, 2025
A 38-year-old IT engineer, Madhav Tiketi, has been arrested . #PuneCrime #ChildMurder #DomesticViolence #JusticeForChild #MentalHealthAwareness #FamilyTragedy #TheMukhtiars pic.twitter.com/w7POkQlMrw
ಕೊಲೆ ಮಾಡಿದ್ದು ಹೇಗೆ?
ಗುರುವಾರ (ಮಾ. 20) ಮಾಧವ ಮತ್ತು ಸ್ವರೂಪಾ ದಂಪತಿಯ ಮಧ್ಯೆ ತೀವ್ರ ವಾಗ್ವಾದ ನಡೆದಿತ್ತು. ಬಳಿಕ ಮಗನನ್ನು ಕರೆದುಕೊಂಡು ಮಾಧವ್ ಮನೆಯಿಂದ ಹೊರ ಹೋಗಿ ಸುಮಾರು ಹೊತ್ತು ಬಾರ್‌ನಲ್ಲಿ ಕುಳಿತಿದ್ದ.
ನಂತರ ಮಾಧವ್ ಅಂಗಡಿಯಿಂದ ಚಾಕು ಮತ್ತು ಬ್ಲೇಡ್ ಖರೀದಿಸಿ, ತನ್ನ ಮಗನನ್ನು ಏಕಾಂತ ಸ್ಥಳಕ್ಕೆ ಕರೆದೊಯ್ದಿದ್ದ. ಅಲ್ಲಿ ಚಾಕುವಿನಿಂದ ಹಿಮ್ಮತ್‌ನ ಕತ್ತು ಸೀಳಿ ನಂತರ ಶವವನ್ನು ಪೊದೆಗಳಲ್ಲಿ ಎಸೆದಿದ್ದಾನೆ ಎಂದು ನ್ಯೂಸ್ 18 ವರದಿ ಮಾಡಿದೆ.
ಈ ಸುದ್ದಿಯನ್ನೂ ಓದಿ: Merchant navy officer murder: ಜೈಲಿನಲ್ಲಿ ಮಾದಕ ದ್ರವ್ಯಕ್ಕೆ ಬೇಡಿಕೆ ಇಟ್ಟ ಆರೋಪಿಗಳು!
ತಪ್ಪೊಪ್ಪಿಕೊಂಡ ಮಾಧವ್
ಮಗನನ್ನು ಕೊಲೆ ಮಾಡಿ ಮಾಧವ್ ತಲೆಮರೆಸಿಕೊಂಡಿದ್ದ. ನಂತರ ಆತನ ಮೊಬೈಲ್ ಲೊಕೇಷನ್ ಟ್ರ್ಯಾಕ್ ಮಾಡುವ ಮೂಲಕ, ಪೊಲೀಸರು ಲಾಡ್ಜ್‌ನಲ್ಲಿ ಬಚ್ಚಿಕೊಂಡಿದ್ದ ಆತನನ್ನು ಪತ್ತೆ ಹಚ್ಚಿದ್ದರು. ಈ ವೇಳೆ ಆತ ಕಂಠಪೂರ್ತಿ ಕುಡಿದಿದ್ದ. ಪೊಲೀಸರು ವಶಕ್ಕೆ ಪಡೆದ ಬಳಿಕ ಆತ ತನ್ನ ಮಗನನ್ನು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ವರದಿ ತಿಳಿಸಿದೆ. ಸ್ಥಳ ಪರಿಶೀಲಿಸಿದ ಪೊಲೀಸರಿಗೆ ಕಾಡಿನಲ್ಲಿ ಮೃತ ಬಾಲಕನ ಮೃತದೇಹ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಈ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿ, "ಗುರುವಾರ ರಾತ್ರಿ ಮಗುವಿನ ತಾಯಿ ಪೊಲೀಸ್ ಠಾಣೆಗೆ ಬಂದು ಮಗ ಕಾಣೆಯಾಗಿದ್ದಾನೆ ಎಂದು ದೂರು ದಾಖಲಿಸಿದ್ದರು. ತನಿಖೆಯ ವೇಳೆ ವಾಗ್ವಾದ ನಡೆದ ಬಳಿಕ ಮಗುವಿನ ತಂದೆ ಆತನನ್ನು ಕರೆದುಕೊಂಡು ಮನೆಯಿಂದ ಹೊರ ಹೋಗಿದ್ದು ತಿಳಿದು ಬಂದಿತ್ತು. ನಾವು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಗನನ್ನು ಕೊಂದಿರುವುದನ್ನು ಒಪ್ಪಿಕೊಂಡಿದ್ದಾನೆ. ಪತ್ನಿ ಪರ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿರುವುದಾಗಿ ಸಂದೇಹ ಮೂಡಿದ ಕಾರಣ ಮಗನ ಕತ್ತು ಸೀಳಿ ಕೊಲೆ ಮಾಡಿದ್ದಾಗಿ ತಿಳಿಸಿದ್ದಾನೆ. ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ" ಎಂದು ತಿಳಿಸಿದ್ದಾರೆ ಎಂಬುದಾಗಿ ಎನ್‌ಡಿಟಿವಿಗೆ ವರದಿ ಮಾಡಿದೆ.