ನವದೆಹಲಿ: ಪ್ರತಿಭಟನೆಗಾಗಿ ದೆಹಲಿಯಲ್ಲಿ (delhi) ಮೂರು ಹೊಸ ಸ್ಥಳಗಳನ್ನು (Protest site) ನಿಗದಿ ಪಡಿಸಲಾಗಿದೆ. ಈ ಮೂಲಕ ಕೇಂದ್ರ ಗೃಹ ಸಚಿವಾಲಯ (Ministry of Home Affairs,) 2022ರ ಏಪ್ರಿಲ್ 28ರ ಮೊದಲು ನೀಡಿದ ಆದೇಶವನ್ನು ಭಾಗಶಃ ಬದಲಾಯಿಸಿದೆ. ಹೊಸ ಆದೇಶದ ಮೂಲಕ ಹೊರಡಿಸಲಾದ ಪರಿಷ್ಕೃತ ಮಾರ್ಗಸೂಚಿಗಳಡಿಯಲ್ಲಿ ಜಂತರ್ ಮಂತರ್ (Jantar Mantar) ಇನ್ನು ಮುಂದೆ ದೆಹಲಿಯಲ್ಲಿ ಪ್ರತಿಭಟನೆಗೆ ನಿಗದಿತ ಸ್ಥಳವಾಗಿರುವುದಿಲ್ಲ. ಹೊಸದಾಗಿ ನಿಗದಿಪಡಿಸಲಾದ ಮೂರು ಸ್ಥಳಗಳಲ್ಲಿ ಪ್ರತಿಭಟನೆಗಳನ್ನು ಆಯೋಜಿಸಲು ವಿವರವಾದ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಹೊರಡಿಸಲಾಗುವುದು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಚುನಾವಣಾ ಅಕ್ರಮ ಮತ್ತು ಎಸ್‌ಐಆರ್ ಪ್ರಕ್ರಿಯೆಯ ವಿರುದ್ಧ ವಿರೋಧ ಪಕ್ಷಗಳು ತಮ್ಮ ಅಭಿಯಾನವನ್ನು ತೀವ್ರಗೊಳಿಸುತ್ತಿರುವ ಮಧ್ಯೆಯೇ ಕೇಂದ್ರ ಸರ್ಕಾರದ ಗೃಹ ಸಚಿವಾಲಯವು ಹೊಸ ಮೂರು ಪ್ರತಿಭಟನಾ ಸ್ಥಳಗಳನ್ನು ನಿಗದಿಪಡಿಸಿದೆ. ದೆಹಲಿ ಪೊಲೀಸ್‌ನ ಸ್ಥಾಯಿ ಆದೇಶ ಸಂಖ್ಯೆ L&O/48/2026 ರ ಅಡಿಯಲ್ಲಿ ಇನ್ನು ಮುಂದೆ ರಾಮ್‌ಲೀಲಾ ಮೈದಾನ, ಬುರಾರಿ ಮೈದಾನ ಮತ್ತು ಪೂರ್ವ ದೆಹಲಿಯ ಸಿಬಿಡಿ ಮೈದಾನವನ್ನು ಪ್ರತಿಭಟನಾ ಸ್ಥಳಗಳಾಗಿ ನಿಗದಿಪಡಿಸಲಾಗಿದೆ. ಇದು ಇನ್ನು ಮುಂದೆ ದೆಹಲಿಯ ಪ್ರತಿಭಟನಾ ವ್ಯವಸ್ಥೆಯಲ್ಲಿನ ಬದಲಾವಣೆಯನ್ನು ಸೂಚಿಸುತ್ತದೆ. ಈ ಪರಿಷ್ಕೃತ ಆದೇಶದ ಅಡಿಯಲ್ಲಿ ಜಂತರ್ ಮಂತರ್ ಅನ್ನು ಇನ್ನು ಮುಂದೆ ಅಧಿಕೃತ ಪ್ರತಿಭಟನಾ ಸ್ಥಳವಾಗಿ ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ.
ದೆಹಲಿಯಲ್ಲಿ ಪ್ರತಿಭಟನೆಗೆ ಮೂರು ಸ್ಥಳ ನಿಗದಿ; ಜಂತರ್ ಮಂತರ್‌ನಲ್ಲಿ ಇಲ್ಲ ಅವಕಾಶ
ಜಂತರ್ ಮಂತರ್ ದೀರ್ಘಕಾಲದಿಂದ ವಿವಿಧ ರಾಜಕೀಯ ಪಕ್ಷಗಳು, ನಾಗರಿಕ ಸಮಾಜದ ಗುಂಪುಗಳು, ಕಾರ್ಯಕರ್ತರು ಮತ್ತು ಇತರ ಸಂಘಟನೆಗಳಿಗೆ ಪ್ರಮುಖ ಪ್ರತಿಭಟನಾ ಸ್ಥಳವಾಗಿ ಗುರುತಿಸಿಕೊಂಡಿತ್ತು. ಹೊಸ ಆದೇಶದ ಪ್ರಕಾರ ಮಾರ್ಗಸೂಚಿಗಳಲ್ಲಿ ಭಾಗಶಃ ಬದಲಾವಣೆ ಮಾಡಲಾಗಿದೆ.
ಪ್ರತಿಭಟನೆಗೆ ಗುರುತಿಸಲಾಗಿರುವ ಮೂರು ಸ್ಥಳಗಳಲ್ಲಿ ರಾಮ್‌ಲೀಲಾ ಮೈದಾನವು ಮಧ್ಯ ದೆಹಲಿಯ ಒಂದು ಪ್ರಮುಖ ಮೈದಾನವಾಗಿದೆ. ಇಲ್ಲಿ ಬೃಹತ್ ರಾಜಕೀಯ ರಾಲಿಗಳು ಮತ್ತು ಸಾರ್ವಜನಿಕ ಪ್ರತಿಭಟನೆಗಳು ನಡೆದಿವೆ.
ಬುರಾರಿ ಮೈದಾನವು ಉತ್ತರ ದೆಹಲಿಯಲ್ಲಿ ನಿಗದಿಪಡಿಸಲಾದ ಒಂದು ಸ್ಥಳವಾಗಿದೆ. ಸಿಬಿಡಿ ಮೈದಾನವು ಪೂರ್ವ ದೆಹಲಿಯಲ್ಲಿ ಪ್ರತಿಭಟನೆಗಾಗಿ ಗುರುತಿಸಲಾದ ಸ್ಥಳವಾಗಿದೆ.
ಚುನಾವಣಾ ಆಯೋಗ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ಸಂಬಂಧಿಸಿ ಕಾಕ್ರೋಚ್ ಜನತಾ ಪಕ್ಷವು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಕಾಕ್ರೋಚ್ ಜನತಾ ಪಾರ್ಟಿ ಅನುಮತಿ ಕೋರಿತ್ತು. ಇದಕ್ಕಾಗಿ ಸೋಮವಾರ ಸಂಸತ್ ಭವನದ ರಸ್ತೆಯಲ್ಲಿರುವ ಪೊಲೀಸ್ ಠಾಣೆಯನ್ನು ಸಂಪರ್ಕಿಸಲಾಯಿತು. ಆದರೆ ನಿಗದಿತ ಸಮಯದೊಳಗೆ ಅರ್ಜಿ ಸಲ್ಲಿಸದಿರುವುದನ್ನು ಕಾರಣವಾಗಿ ನೀಡಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.
ಒಂದು ಕಡೆ ಇಂಡಿಯಾ ಒಕ್ಕೂಟ, ಇನ್ನೊಂದು ಕಡೆ ಸಿಜೆಪಿ ಹೋರಾಟ ನಡೆಯುತ್ತಿರುವುದರಿಂದ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆಗಳು ಮತ್ತು ಸಾರ್ವಜನಿಕ ಸ್ಥಳಗಳ ಬಳಕೆಯ ಕುರಿತಾಗಿ ಹೊಸ ಚರ್ಚೆಗಳು ಪ್ರಾರಂಭವಾಗಿವೆ. ಈಗಾಗಲೇ ಸುಪ್ರೀಂ ಕೋರ್ಟ್ ಪ್ರತಿಭಟನಾಕಾರರಿಗೆ ಉತ್ತಮ ಸೌಲಭ್ಯಗಳಿರುವ ಪರ್ಯಾಯ ಸ್ಥಳವನ್ನು ಗುರುತಿಸುವಂತೆ ಕೇಂದ್ರಕ್ಕೆ ಸೂಚಿಸಿತ್ತು.
ಹುದ್ದೆ ಬಿಡುವವರೆಗೂ ನಿದ್ದೆ ಮಾಡದಂತೆ ಮಾಡುತ್ತೇವೆ: ಜ್ಞಾನೇಶ್ ಕುಮಾರ್‌ಗೆ ರಾಹುಲ್ ಗಾಂಧಿ ಎಚ್ಚರಿಕೆ
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನು ಒಳಗೊಂಡ ಪೀಠವು ಅಕ್ಟೋಬರ್ 9 ರಂದು ನಡೆದ ವಿಚಾರಣೆಯ ಸಂದರ್ಭದಲ್ಲಿ ದಶಕಗಳಿಂದ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗಳನ್ನು ನಡೆಸುವ ವ್ಯವಸ್ಥೆಯ ಬಗ್ಗೆ ಮರುಪರಿಶೀಲನೆ ನಡೆಸುವಂತೆ ಕರೆ ನೀಡಿತ್ತು. ಅಲ್ಲದೇ ಪ್ರತಿಭಟನಾ ಸ್ಥಳದಲ್ಲಿ ಕುಡಿಯುವ ನೀರು, ಶೌಚಾಲಯ, ವೈದ್ಯಕೀಯ ಸೌಲಭ್ಯ ಮತ್ತು ಇತರ ಅಗತ್ಯ ಮೂಲಸೌಕರ್ಯಗಳನ್ನು ಹೊಂದಿರುವ ಸೂಕ್ತ ಪರ್ಯಾಯ ಸ್ಥಳವನ್ನು ಗುರುತಿಸುವಂತೆ ನ್ಯಾಯಾಲಯ ಸೂಚಿಸಿತ್ತು.