ಗಾಂಧಿನಗರ, ಮೇ 30: "ಒಳಗೆ ವಿಷಕಾರಿ ಅನಿಲವಿದೆ. ಯಾರೂ ಒಳ ಬರಬೇಡಿ, ನೀರನ್ನು ಕುಡಿಯಬೇಡಿʼʼ- ಮನೆಯ ಬಾಗಿಲ ಮೇಲಿದ್ದ ಒಂದು ಪತ್ರದ ಒಕ್ಕಣೆ ಆ ಕುಟುಂಬ ಮಾತ್ರವಲ್ಲ ದೇಶವನ್ನೇ ಭಾವುಕವಾಗಿಸಿದೆ. ಉದ್ಯೋಗ ಕಳೆದುಕೊಂಡು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ವ್ಯಕ್ತಿಯೊಬ್ಬರು ಪ್ರಾಣ ಬಿಡುವ ಕೊನೆಯ ಕ್ಷಣದಲ್ಲೂ ಕುಟುಂಬದ ಸುರಕ್ಷತೆಯ ಬಗ್ಗೆ ತೋರಿದ ಕಾಳಜಿಯ ಹೃದಯ ವಿದ್ರಾವಕ ಕಥೆಯಿದು. ಉದ್ಯೋಗ ನಷ್ಟ ಮತ್ತು ಸಾಲದ ಬಾಧೆಯಿಂದಾಗಿ ತೀವ್ರ ಮಾನಸಿಕ ಒತ್ತಡದಲ್ಲಿದ್ದ 42 ವರ್ಷದ ವ್ಯಕ್ತಿಯೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತ್‌ನ ಗಾಂಧಿನಗರದಲ್ಲಿ ನಡೆದಿದೆ. ಈ ವೇಳೆಯೂ ಅವರ ಹೈದರ ತಮ್ಮ ಕುಟುಂಬಕ್ಕಾಗಿ ಮಿಡಿದಿದೆ.
ಮೃತರನ್ನು ಗಾಂಧಿನಗರದ ಕುಡಾಸನ್ ಪ್ರದೇಶದ ಪೂನಂ ರೆಸಿಡೆನ್ಸಿಯ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದ ಪಂಕಜ್ ಭಾನ್ಸಾಲಿ ಎಂದು ಗುರುತಿಸಲಾಗಿದೆ. ಇನ್ಫೋಸಿಟಿಯ ಷೇರು ಮಾರುಕಟ್ಟೆಗೆ ಸಂಬಂಧಿಸಿದ ಸಂಸ್ಥೆಯಲ್ಲಿದ್ದ ಅವರು ತಮ್ಮ ಕೆಲಸವನ್ನು ಸುಮಾರು ಐದು ತಿಂಗಳ ಹಿಂದೆ ಕಳೆದುಕೊಂಡಿದ್ದರು. ಅಂದಿನಿಂದ ಎದುರಾದ ಸಾಲ ಮತ್ತು ನಷ್ಟಗಳಿಂದ ಉಂಟಾದ ತೀವ್ರ ಭಾವುಕ ಹಾಗೂ ಮಾನಸಿಕ ಒತ್ತಡದೊಂದಿಗೆ ಅವರು ಬಳಲುತ್ತಿದ್ದರು.
ಬಾಗಿಲ ಮೇಲಿತ್ತು ಕೊನೆಯ ಪತ್ರ
ಆತ್ಮಹತ್ಯೆಯಂತಹ ತೀವ್ರ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ, ಭಾನ್ಸಾಲಿ ತಮ್ಮ ಫ್ಲಾಟ್‌ನ ಬಾಗಿಲಿನ ಮೇಲೆ ಕೈಬರಹದ ಎಚ್ಚರಿಕೆಯ ಪತ್ರವೊಂದನ್ನು ಅಂಟಿಸಿದ್ದರು. ಇಂಗ್ಲಿಷ್‌ನಲ್ಲಿ ಬರೆಯಲಾಗಿದ್ದ ಆ ಪತ್ರದಲ್ಲಿ, "ಸೆಲ್ಫೋಸ್, ವಿಷಕಾರಿ ಅನಿಲ, ಮಾಸ್ಕ್ ಧರಿಸಿ, ನೀರು ಬಳಸಬೇಡಿ" ಎಂದು ಬರೆಯಲಾಗಿತ್ತು. ತಮ್ಮ ಕುಟುಂಬದವರು, ಅದರಲ್ಲೂ ಮುಖ್ಯವಾಗಿ ತಮ್ಮ ಚಿಕ್ಕ ಮಗಳು 'ಮಾನ್ವಿ' ಹೊರಗಡೆಯೇ ಇರಬೇಕು ಮತ್ತು ಮನೆಯೊಳಗಿನ ತೀವ್ರ ವಿಷಕಾರಿ ಹೊಗೆಯಿಂದ ಸುರಕ್ಷಿತವಾಗಿರಬೇಕು ಎಂಬುದು ಅವರ ಉದ್ದೇಶವಾಗಿತ್ತು.
ಕುಟುಂಬ ಸದಸ್ಯರ ಸಾವಿನಿಂದ ಎದೆ ಬಡಿದುಕೊಂಡು ಗೋಳಾಡಿದ ಮಹಿಳೆ; ಕೊಲೆ ರಹಸ್ಯ ಬಯಲಾಗುತ್ತಿದ್ದಂತೆ ಆಗಿದ್ದೇ ಬೇರೆ!
'ಸೆಲ್ಫೋಸ್' ಎಂಬುದು ಅತ್ಯಂತ ಪ್ರಾಣಾಂತಿಕ ಕ್ರಿಮಿನಾಶಕ. ತನ್ನ ಕೊನೆಯ ಕ್ಷಣದಲ್ಲೂ ಕುಟುಂಬದ ಮೇಲಿದ್ದ ಈ ಪ್ರೀತಿ ಮತ್ತು ಕಾಳಜಿಯು ನೆರೆಹೊರೆಯವರನ್ನು ಹಾಗೂ ಪೊಲೀಸರನ್ನು ದಿಗ್ಭ್ರಮೆಗೊಳಿಸಿದೆ. ಭಾನ್ಸಾಲಿ ಅವರ ಫೋನ್ ಹಲವು ದಿನಗಳಿಂದ ಸ್ವಿಚ್ ಆಫ್ ಆಗಿದ್ದರಿಂದ, ಮೇ 27ರಂದು ಅವರನ್ನು ಹುಡುಕಿಕೊಂಡು ಬಂದ ಸಂಬಂಧಿಕರು ಈ ಪತ್ರ ಮತ್ತು ಅವರ ಮೃತದೇಹ ಪತ್ತೆ ಹಚ್ಚಿದ್ದಾರೆ.
ಹಲವು ದಿನಗಳ ಬಳಿಕ ಪತ್ತೆಯಾದ ಶವ
ಇನ್ಫೋಸಿಟಿ ಪೊಲೀಸರ ಪ್ರಕಾರ, ಭಾನ್ಸಾಲಿ ಅವರ ಪತ್ನಿ ಮತ್ತು ಮಗಳು ಮೇ 13ರಂದು ತವರಿಗೆ ಹೋಗಿದ್ದರು ಮತ್ತು ದಂಪತಿ ಕೊನೆಯದಾಗಿ ಮೇ 22ರಂದು ಫೋನ್‌ನಲ್ಲಿ ಮಾತನಾಡಿದ್ದರು. ಈ ಘಟನೆಯು ಮೇ 22ರ ಸುಮಾರಿಗೆ ಸಂಭವಿಸಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಅಂದರೆ ಸುಮಾರು ಐದು ದಿನಗಳ ಕಾಲ ಶವವು ಬೀಗ ಹಾಕಿದ ಫ್ಲಾಟ್‌ನ ಒಳಗೇ ಇದ್ದಿದ್ದರಿಂದ ಸಂಪೂರ್ಣವಾಗಿ ಕೊಳೆತುಹೋಗಿತ್ತು. ಪೊಲೀಸರು ಸ್ಥಳದಿಂದ ತೀವ್ರ ವಿಷಕಾರಿ ಕ್ರಿಮಿನಾಶಕದ ಪ್ಯಾಕೆಟ್‌ಗಳನ್ನು ವಶಪಡಿಸಿಕೊಂಡಿದ್ದು, ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅವರ ಸಾವಿಗೆ ಕಾರಣವಾದ ಆರ್ಥಿಕ ಒತ್ತಡಗಳ ಬಗ್ಗೆ ವಿವರವಾದ ತನಿಖೆ ನಡೆಯುತ್ತಿದೆ.