ಕುಟುಂಬ ಸದಸ್ಯರ ಸಾವಿನಿಂದ ಎದೆ ಬಡಿದುಕೊಂಡು ಗೋಳಾಡಿದ ಮಹಿಳೆ; ಕೊಲೆ ರಹಸ್ಯ ಬಯಲಾಗುತ್ತಿದ್ದಂತೆ ಆಗಿದ್ದೇ ಬೇರೆ!
Crime News: ಒಂದೇ ಕುಟುಂಬ ನಾಲ್ವರನ್ನು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಮಹಿಳೆಯೊಬ್ಬಳು ಈ ಘಟನೆಯಿಂದ ತುಂಬಾ ದುಃಖಿತಳಾಗಿದ್ದು, ಜೋರಾಗಿ ಎದೆ ಬಡಿದುಕೊಳ್ಳುತ್ತಾ ಬೊಬ್ಬೆ ಹಾಕಿಕೊಂಡು ಅತ್ತಿದ್ದಾಳೆ. ಪ್ರಕರಣದಲ್ಲಿ ಈಕೆಯೇ ಪ್ರಮುಖ ಆರೋಪಿ ಎಂದು ತಿಳಿದುಬಂದಾಗ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಒಂದೇ ಕುಟುಂಬ ನಾಲ್ವರು ಹತ್ಯೆ -
ಜೈಪುರ, ಮೇ 29: ಒಂದೇ ಕುಟುಂಬ ನಾಲ್ವರನ್ನು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ರಾಜಸ್ಥಾನದ (Rajasthan) ಅಜ್ಮೀರ್ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆಯೊಬ್ಬಳು ಈ ಘಟನೆಯಿಂದ ತುಂಬಾ ದುಃಖಿತಳಾದಂತೆ ಕಂಡುಬಂದಿದ್ದು, ಜೋರಾಗಿ ಎದೆ ಬಡಿದುಕೊಳ್ಳುತ್ತಾ ಬೊಬ್ಬೆ ಹಾಕಿಕೊಂಡು ಅತ್ತಿದ್ದಾಳೆ. ಅತ್ತು-ಅತ್ತು ಮೂರ್ಛೆ ಹೋದಂತೆ ಕಂಡುಬಂದಳು. ಆದರೆ, ಪ್ರಕರಣದಲ್ಲಿ ಈಕೆಯೇ ಪ್ರಮುಖ ಆರೋಪಿ ಎಂದು ತಿಳಿದುಬಂದಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ (Crime News).
ಹೌದು, ರಾಜಸ್ಥಾನವನ್ನೇ ಬೆಚ್ಚಿಬೀಳಿಸಿದ ಪ್ರಕರಣವೊಂದರಲ್ಲಿ, ಸುನೀತಾ ಚೌಧರಿ ಎಂಬಾಕೆ ಹತ್ಯೆ ಮಾಡಿದಾಕೆ. ಬಳಿಕ ಏನೂ ಗೊತ್ತೇ ಇಲ್ಲದಂತೆ ಬಾಯಿ ಬಡಿದುಕೊಂಡು ಅತ್ತಿದ್ದಾಳೆ. ಆರೋಪಿ ಸುನೀತಾ ಚೌಧರಿಯು ತನ್ನ ಪತಿ, ಮಾಜಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ರಾಮ್ ಸಿಂಗ್ ಚೌಧರಿ, ಅವರ ತಾಯಿ, ಅವರ ಎರಡನೇ ಪತ್ನಿ ಮತ್ತು ಇನ್ನೊಬ್ಬ ಸಂಬಂಧಿಯನ್ನು ಕೊಲೆ ಮಾಡಿದ್ದಾಳೆ. ನಂತರ ಅವರ ಶವಗಳನ್ನು ಸ್ಕಾರ್ಪಿಯೋ ಎಸ್‌ಯುವಿಯಲ್ಲಿ ತುಂಬಿಸಿ, ಭೀಕರ ಅಪಘಾತದಂತೆ ಬಿಂಬಿಸುವ ಸಲುವಾಗಿ ಬೆಂಕಿ ಹಚ್ಚಲಾಗಿದೆ.
ಅಜ್ಮೀರ್ ಜಿಲ್ಲೆಯ ಶ್ರೀರಾಂಪುರ ಗ್ರಾಮದ ಬಳಿಯ ಹೆದ್ದಾರಿಯಲ್ಲಿ ಸುಟ್ಟು ಕರಕಲಾದ ಸ್ಕಾರ್ಪಿಯೋವನ್ನು ಗ್ರಾಮಸ್ಥರು ನೋಡಿದ ನಂತರ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿವೆ. ವಾಹನದೊಳಗೆ ಮೂರು ಸುಟ್ಟ ಶವಗಳು ಪತ್ತೆಯಾಗಿದ್ದು, ನಾಲ್ಕನೇ ಶವವನ್ನು ಹತ್ತಿರದ ಹೊಲದಿಂದ ವಶಪಡಿಸಿಕೊಳ್ಳಲಾಗಿದೆ. ರಾಮ್ ಸಿಂಗ್ ಚೌಧರಿ, ಅವರ ತಾಯಿ ಪೂಸಿ ದೇವಿ, ಎರಡನೇ ಪತ್ನಿ ಸೂರ್ಯಜ್ಞಾನ ದೇವಿ ಮತ್ತು ಕುಟುಂಬದ ಸಂಬಂಧಿ ಮಹಿಮಾ ಚೌಧರಿ ಮೃತ ದುರ್ದೈವಿಗಳು.
ತ್ವಿಶಾ ಶರ್ಮಾ ಸಾವು ಕೇಸ್; ಸಿಬಿಐನಿಂದ ಅತ್ತೆ ಗಿರಿಬಾಲಾ ಸಿಂಗ್ ಬಂಧನ
ಪೊಲೀಸರು ಆರಂಭದಲ್ಲಿ ಭೀಕರ ಅಪಘಾತವಾಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಆದರೆ ವಿಧಿವಿಜ್ಞಾನ ತಂಡಗಳು ಶೀಘ್ರದಲ್ಲೇ ದೇಹಗಳ ಮೇಲೆ ಗಾಯಗಳ ಗುರುತುಗಳನ್ನು ಗಮನಿಸಿದವು. ಮೃತದೇಹಗಳ ಮೇಲೆ ಕೊಲೆ ನಡೆದಿದೆ ಎಂದು ಗುರುತಿಸಲಾದ ಗಾಯಗಳಿದ್ದವು. ವೈಜ್ಞಾನಿಕ ಸಾಕ್ಷ್ಯಗಳು ಮತ್ತು ಸ್ಥಳೀಯ ಮಾಹಿತಿಗಳ ಮೂಲಕ ಸತ್ಯ ಹೊರಬಂತು ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖಾಧಿಕಾರಿಗಳು ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದ್ದಂತೆ, ಆಪ್ತರೇ ಈ ಕೃತ್ಯ ಮಾಡಿರಬಹುದು ಎಂಬ ಶಂಕೆ ಮೂಡಿಸಿತು. ಮೃತರ ಮನೆಗೆ ಪೊಲೀಸರು ತಲುಪಿದಾಗ, ಸುನೀತಾಳನ್ನು ಹಳ್ಳಿಯ ಮಹಿಳೆಯರು ಸುತ್ತುವರೆದಿದ್ದರು. ಆಕೆ ಜೋರಾಗಿ ಎದೆಬಡಿದುಕೊಳ್ಳುತ್ತಾ ಅಳುತ್ತಿದ್ದಳು. ತನ್ನವರನ್ನು ಕಳೆದುಕೊಂಡ ನೋವಿನಲ್ಲಿರುವಂತೆ ಕಂಡಳು. ಹೀಗಾಗಿ ಆರಂಭದಲ್ಲಿ ಯಾರಿಗೂ ಆಕೆಯ ಮೇಲೆ ಅನುಮಾನ ಬರಲಿಲ್ಲ.
ರಾಮ್ ಸಿಂಗ್ ತನ್ನ ತಾಯಿಗೆ ಎದೆ ನೋವು ಎಂದು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು ಎಂದು ಸುನೀತಾ ಪೊಲೀಸರಿಗೆ ತಿಳಿಸಿದ್ದಾಳೆ. ಈ ನಂತರ ತನಿಖೆಯ ದಿಕ್ಕು ಬದಲಾಗಲು ಪ್ರಾರಂಭಿಸಿತು. ರಾಮ್ ಸಿಂಗ್ ಅವರ ಎರಡನೇ ಮದುವೆಗೆ ಸಂಬಂಧಿಸಿದ ದೀರ್ಘಕಾಲದಿಂದ ಮನೆಯಲ್ಲಿ ಜಗಳವಾಗುತ್ತಿತ್ತು ಎಂದು ತಿಳಿದುಬಂತು. ಇಬ್ಬರೂ ಪತ್ನಿಯರು ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು.
ಬುಧವಾರ (ಮೇ 27) ತಡರಾತ್ರಿ ಮನೆಯೊಳಗೆ ತುಂಬಾ ದೊಡ್ಡ ಜಗಳ ನಡೆದಿದೆ. ಈ ವೇಳೆ ಸುನೀತಾ, ಅವಳ ಮಗಳು ಸರಿತಾ ಮತ್ತು ಅಪ್ರಾಪ್ತ ಮಗ ಸೇರಿ ನಾಲ್ವರ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದ್ದಾರೆ. ನಂತರ ಶವಗಳನ್ನು ರಾಮ್ ಸಿಂಗ್ ಅವರ ಸ್ಕಾರ್ಪಿಯೋದಲ್ಲಿ ಸಾಗಿಸಲಾಯಿತು. ಕೊಲೆಯನ್ನು ಆಕಸ್ಮಿಕವೆಂದು ಬೆಂಬಿಸಲು ಹೆದ್ದಾರಿಯಲ್ಲಿ ಕಾರಿಗೆ ಬೆಂಕಿ ಹಚ್ಚಲಾಯಿತು.
ಗ್ರಾಮಸ್ಥರಿಂದ ಪಡೆದ ಮಾಹಿತಿಗಳು ಮತ್ತು ವೈಜ್ಞಾನಿಕ ಪುರಾವೆಗಳು ಇಡೀ ಪಿತೂರಿಯನ್ನು ಬಹಿರಂಗಪಡಿಸಿದವು. ಈ ಸಂಬಂಧ ಆರೋಪಿಗಳಾದ ಸುನೀತಾ ಮತ್ತು ಆಕೆಯ ಇಬ್ಬರು ಮಕ್ಕಳನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.