Keir Starmer: ಅ. 8-9 ರಂದು ಬ್ರಿಟನ್ ಪ್ರಧಾನಿ ಭಾರತ ಪ್ರವಾಸ; ಕೀರ್ ಸ್ಟಾರ್ಮರ್ ಜೊತೆ ಮೋದಿ ಮಾತುಕತೆ
ಯುಕೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಕೀರ್ ಸ್ಟಾರ್ಮರ್ (British Prime Minister Keir Starmer) ಭಾರತ ಪ್ರವಾಸ ಮಾಡಲಿದ್ದಾರೆ. ಅಕ್ಟೋಬರ್ 8 ರಿಂದ 9ರಂದು ಭಾರತದಲ್ಲಿರುವ ಅವರು ಭಾರತ ಮತ್ತು ಯುಕೆ ನಡುವಿನ ಭವಿಷ್ಯದ ಪಾಲುದಾರಿಕೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮುಂಬೈನಲ್ಲಿ ಮಾತುಕತೆ ನಡೆಸಲಿದ್ದಾರೆ.

-

ನವದೆಹಲಿ: ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ (British Prime Minister Keir Starmer) ಮೊದಲ ಬಾರಿಗೆ ಅಕ್ಟೋಬರ್ 8 ರಿಂದ 9ರಂದು ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಅವರು ಮುಂಬೈನಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರೊಂದಿಗೆ ಭವಿಷ್ಯದಲ್ಲಿ ಭಾರತ ಮತ್ತು ಯುಕೆ ನಡುವಿನ ಪಾಲುದಾರಿಕೆ ಕುರಿತು ಮಾತುಕತೆ ನಡೆಸಲಿದ್ದಾರೆ. ಇದೊಂದು ಮೌಲ್ಯಯುತ ಅವಕಾಶ ಎಂದು ವಿದೇಶಾಂಗ ಸಚಿವಾಲಯ (Ministry of External Affairs) ಶನಿವಾರ ತಿಳಿಸಿದೆ. 2024ರ ಜುಲೈನಲ್ಲಿ ಯುಕೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ಮೊದಲ ಬಾರಿಗೆ ಕೀರ್ ಸ್ಟಾರ್ಮರ್ ಭಾರತಕ್ಕೆ ಎರಡು ದಿನಗಳ ಭೇಟಿ ನೀಡಲಿದ್ದಾರೆ.
ಯುಕೆ ಮತ್ತು ಭಾರತದ ವ್ಯಾಪಾರ ವ್ಯವಹಾರಗಳಿಗೆ ಹೆಚ್ಚಿನ ಉತ್ತೇಜನ ನೀಡಲು ಯೋಜನೆ ಹಾಕುತ್ತಿರುವ ಎರಡು ದೇಶಗಳು 2030ರ ವೇಳೆಗೆ ಮಾರುಕಟ್ಟೆ ಪ್ರವೇಶವನ್ನು ಹೆಚ್ಚಿಸುವ, ಸುಂಕಗಳನ್ನು ಕಡಿತಗೊಳಿಸುವ ಮತ್ತು ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಉದ್ದೇಶವನ್ನು ಹೊಂದಿದೆ. ಹೀಗಾಗಿ ಈಗಾಗಲೇ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಹಾಕಿದ್ದು, ಇದಾದ ಎರಡೂವರೆ ತಿಂಗಳ ಬಳಿಕ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಕಳೆದ ಜುಲೈ ತಿಂಗಳಲ್ಲಿ ಮೋದಿ ಲಂಡನ್ ಗೆ ಭೇಟಿ ನೀಡಿದ್ದರು. ಈ ವೇಳೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಎರಡು ದೇಶಗಳ ಪ್ರಧಾನಿಗಳು 'ವಿಷನ್ 2035'ರ ಕುರಿತು ಮಾತುಕತೆ ನಡೆಸಲಿದ್ದು, ಇದರಲ್ಲಿ ವ್ಯಾಪಾರ ಮತ್ತು ಹೂಡಿಕೆ, ತಂತ್ರಜ್ಞಾನ ಮತ್ತು ನಾವೀನ್ಯತೆ, ರಕ್ಷಣೆ ಮತ್ತು ಭದ್ರತೆ, ಹವಾಮಾನ ಮತ್ತು ಇಂಧನ, ಆರೋಗ್ಯ, ಶಿಕ್ಷಣ ಮತ್ತು ಜನರ ನಡುವಿನ ಸಂಬಂಧಗಳು ಸೇರಿದಂತೆ 10 ವರ್ಷಗಳ ಮಾರ್ಗಸೂಚಿಯ ಕುರಿತು ಪರಿಶೀಲನೆ ನಡೆಸಲಿದ್ದಾರೆ.
ಗ್ಲೋಬಲ್ ಫಿನ್‌ಟೆಕ್ ಫೆಸ್ಟ್‌ನ ಆರನೇ ಆವೃತ್ತಿಯಲ್ಲಿ ಭಾಗವಹಿಸಲಿರುವ ಮೋದಿ ಮತ್ತು ಸ್ಟಾರ್ಮರ್ ಪ್ರಾದೇಶಿಕ ಮತ್ತು ಜಾಗತಿಕ ಪ್ರಾಮುಖ್ಯತೆಯ ವಿಷಯಗಳ ಕುರಿತು ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ.
ಇದನ್ನೂ ಓದಿ: Donald Trump: ಗಾಜಾದಿಂದ ತೆರಳಿ, ವಿನಾಶದಿಂದ ತಪ್ಪಿಸಿಕೊಳ್ಳಿ; ಹಮಾಸ್‌ಗೆ ಮತ್ತೆ ಎಚ್ಚರಿಕೆ ಕೊಟ್ಟ ಟ್ರಂಪ್
ಭಾರತ ಮತ್ತು ಯುಕೆ ನಡುವಿನ ದ್ವಿಪಕ್ಷೀಯ ವ್ಯಾಪಾರವು 2023-24ರಲ್ಲಿ 55 ಬಿಲಿಯನ್ ಡಾಲರ್‌ಗಳನ್ನು ದಾಟಿದೆ. ಯುಕೆ ಭಾರತದಲ್ಲಿ ಆರನೇ ಅತಿದೊಡ್ಡ ಹೂಡಿಕೆದಾರ ರಾಷ್ಟ್ರವಾಗಿದ್ದು, ಇದು ಭಾರತದಲ್ಲಿ ಒಟ್ಟು 36 ಬಿಲಿಯನ್ ಡಾಲರ್ ಹೂಡಿಕೆ ಮಾಡಿದೆ.
ಯುಕೆಯಲ್ಲಿ ಭಾರತದ ಹೂಡಿಕೆಗಳು 20 ಬಿಲಿಯನ್ ಡಾಲರ್ ಆಗಿದ್ದು, ಬ್ರಿಟನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 1,000 ಭಾರತೀಯ ಕಂಪೆನಿಗಳು ಸುಮಾರು 1,00,000 ಜನರಿಗೆ ಉದ್ಯೋಗವನ್ನು ಒದಗಿಸಿವೆ.