ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಹಿಳೆಯರ ಉಚಿತ ಬಸ್ ಪ್ರಯಾಣದ ಬಗ್ಗೆ ಟೀಕಿಸಿದ ಸಾರಿಗೆ ಸಚಿವ; ಭಾರಿ ಆಕ್ರೋಶ

Keralam Transport Minister's Remarks: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಬಗ್ಗೆ ಕೇರಳಂ ಸಾರಿಗೆ ಸಚಿವ ಸಿಪಿ ಜಾನ್ ಹೇಳಿಕೆಗೆ ತೀವ್ರ ಟೀಕೆ ವ್ಯಕ್ತವಾಗಿದೆ. ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾರಿಗೆ ಕ್ಷೇತ್ರಗಳಲ್ಲಿ ಕೇರಳಂನ ಮಹಿಳೆಯರ ಆಯ್ಕೆಗಳ ಬಗ್ಗೆ, ಅವರ ವರ್ತನೆಯಿಂದ ಆಶ್ಚರ್ಯಚಕಿತರಾಗಿದ್ದಾಗಿ ಸಚಿವರು ಹೇಳಿದರು.

ಸಾಂದರ್ಭಿಕ ಚಿತ್ರ

ತಿರುವನಂತಪುರಂ, ಆ.5: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಬಗ್ಗೆ ಕೇರಳಂ (Keralam) ಸಾರಿಗೆ ಸಚಿವ ಸಿಪಿ ಜಾನ್ (CP John) ಹೇಳಿಕೆಗೆ ತೀವ್ರ ಟೀಕೆ ವ್ಯಕ್ತವಾಗಿದೆ. ಯುಡಿಎಫ್ ಸರ್ಕಾರ (UDF government) ಜೂನ್‌ನಲ್ಲಿ ಜಾರಿಗೆ ತಂದ ಪ್ರಿಯದರ್ಶಿನಿ ಯೋಜನೆಯಡಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಪಡೆಯುವ ಮಹಿಳೆಯರ ಬಗ್ಗೆ ಸಚಿವ ಸಿಪಿ ಜಾನ್ ಕೀಳಾಗಿ ಹೇಳಿಕೆ ನೀಡಿದ್ದಾರೆ. ಇದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಸೋಮವಾರ (ಆ.3) ಪಾಲಕ್ಕಾಡ್‌ನಲ್ಲಿ ನಡೆದ ಖಾಸಗಿ ಬಸ್‌ಗಳ ಕಾರ್ಮಿಕ ಸಂಘವಾದ ಕೇರಳಂ ಬಸ್ ಸಾರಿಗೆ ಸಂಘದ ರಾಜ್ಯ ಸಮ್ಮೇಳನದಲ್ಲಿ ಮಾತನಾಡಿದ ಸಚಿವರು, ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾರಿಗೆ ಕ್ಷೇತ್ರಗಳಲ್ಲಿ ಕೇರಳಂನ ಮಹಿಳೆಯರ ಆಯ್ಕೆಗಳ ಬಗ್ಗೆ, ಅವರ ವರ್ತನೆಯಿಂದ ಆಶ್ಚರ್ಯಚಕಿತರಾಗಿದ್ದಾಗಿ ಹೇಳಿದರು.

“ನನಗೆ ಅರ್ಥವಾಗದ ನಡವಳಿಕೆ ಏನೆಂದರೆ, ಬಸ್ ಟಿಕೆಟ್ ಪಡೆಯಲು ಸಾಧ್ಯವಾಗದ ಮತ್ತು ಉಚಿತ ಪ್ರಯಾಣಕ್ಕಾಗಿ ಪ್ರಿಯದರ್ಶಿನಿ ಬಸ್‌ಗಳಲ್ಲಿ ಓಡಾಡುವ ಮಹಿಳೆಯೊಬ್ಬರು ತಮ್ಮ ಮಕ್ಕಳನ್ನು ಹೆಚ್ಚಿನ ಶುಲ್ಕ ವಿಧಿಸುವ ಖಾಸಗಿ ಶಾಲೆಗಳಿಗೆ ಕಳುಹಿಸಲು ಆಯ್ಕೆ ಮಾಡುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ತರಗತಿಗಳಉ ಖಾಲಿಯಿವೆ. ಆದರೆ ಅವರ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸಲಾಗುತ್ತದೆ. ಆದರೆ ಆರೋಗ್ಯ ರಕ್ಷಣೆಯ ವಿಷಯಕ್ಕೆ ಬಂದಾಗ, ಅದೇ ಮಹಿಳೆ ತನ್ನ ತಂದೆ ಅಥವಾ ಗಂಡನನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ವರಾಂಡಾದಲ್ಲಿ ಮಲಗುತ್ತಾರೆ. ಅವರು ಖಾಸಗಿ ಆಸ್ಪತ್ರೆಗಳಿಗೆ ಹೋಗಲು ಬಯಸುವುದಿಲ್ಲ. ಏಕೆಂದರೆ ಅಲ್ಲಿನ ಬಿಲ್‌ಗಳನ್ನು ಭರಿಸಲಾಗುವುದಿಲ್ಲ” ಎಂದು ಸಚಿವರು ಹೇಳಿದರು.

ʼʼಇಂಗ್ಲಿಷ್ ವರ್ಣಮಾಲೆ ಗೊತ್ತೆ?ʼʼ: ಸಾರ್ವಜನಿಕ ವೇದಿಕೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನು ಅವಮಾನಿಸಿದ ಕೇರಳಂ ಮಾಜಿ ಸಚಿವ ಜಲೀಲ್; ಪ್ರಕರಣ ದಾಖಲು

“ರಾಜ್ಯದಲ್ಲಿ ಮಹಿಳೆಯರ ಕೈಯಲ್ಲಿ ಹಣವಿಲ್ಲ ಎಂಬ ವಾಸ್ತವವನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಅದಕ್ಕಾಗಿಯೇ ಅವರು ಕಿಕ್ಕಿರಿದ ಪ್ರಿಯದರ್ಶಿನಿ ಬಸ್‌ಗಳಲ್ಲಿ ಓಡಾಡುತ್ತಿದ್ದಾರೆ” ಎಂದು ಅವರು ಹೇಳಿದರು. ನಿಮ್ಮ ಹೇಳಿಕೆಗಳು ಮಹಿಳೆಯರನ್ನು ಮತ್ತು ಅವರ ಸ್ವಾಭಿಮಾನವನ್ನು ಅವಹೇಳನ ಮಾಡಿದಂತೆಯೇ ಎಂದು ಮಾಧ್ಯಮದವರು ಪ್ರಶ್ನಿಸಿದ್ದಕ್ಕೆ, ಮಹಿಳೆಯರ ಬಡತನದ ಸ್ಥಿತಿಯ ಬಗ್ಗೆ ಮಾತ್ರ ಮಾತನಾಡಿದ್ದೇನೆ ಎಂದು ಹೇಳಿದರು.

ನನ್ನ ಭಾಷಣದ ಮೂಲ ಉದ್ದೇಶವೆಂದರೆ ಸುಮಾರು ಶೇ. 35-40 ರಷ್ಟು ಜನರು ಆರ್ಥಿಕ ಸಂಕಷ್ಟದಿಂದಾಗಿ ಬಡತನವನ್ನು ಅನುಭವಿಸುತ್ತಿದ್ದಾರೆ. ಈ ಸಂಕಷ್ಟವನ್ನು ನಿವಾರಿಸಲು ಅವರು ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ನನ್ನ ಭಾಷಣವು ಪ್ರಿಯದರ್ಶಿನಿ ಯೋಜನೆಯನ್ನು ಪ್ರಚಾರ ಮಾಡುವುದು ಮತ್ತು ಯೋಜನೆಯನ್ನು ಪಡೆಯುವ ಮಹಿಳೆಯರು ಎದುರಿಸುತ್ತಿರುವ ಸಂಕಷ್ಟವನ್ನು ವಿವರಿಸುವುದು ಮಾತ್ರ. ನಾನು ಎಂದಿಗೂ ಮಹಿಳೆಯರನ್ನು ಅವಮಾನಿಸುವುದಿಲ್ಲ ಎಂದು ಅವರು ಹೇಳಿದರು.

ಆದರೆ, ವಿರೋಧ ಪಕ್ಷಗಳ ನಾಯಕರು ಸಚಿವರ ಮನಸ್ಥಿತಿಯನ್ನು ಟೀಕಿಸಿದರು. ಸಚಿವರ ಹೇಳಿಕೆಗಳು ಊಳಿಗಮಾನ್ಯ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ ಎಂದು ಹಿರಿಯ ಸಿಪಿಐ(ಎಂ) ನಾಯಕ ಮತ್ತು ಶಾಸಕ ಕೆ.ಎನ್. ಬಾಲಗೋಪಾಲ್ ಹೇಳಿದ್ದಾರೆ.

ಸಚಿವರು ಸರ್ವಾಧಿಕಾರಿ ಮತ್ತು ಊಳಿಗಮಾನ್ಯ ಮನಸ್ಥಿತಿಯನ್ನು ಪ್ರತಿಬಿಂಬಿಸುವ ಪದಗಳಿಂದ ದೂರವಿರಬೇಕು ಎಂದು ಅವರು ಹೇಳಿದರು. ಸಚಿವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಸಿಪಿಐ ನಾಯಕಿ ಆನಿ ರಾಜಾ ಆಗ್ರಹಿಸಿದರು. “ಮಹಿಳೆಯರನ್ನು ಅವರು ಅವಮಾನಿಸಿದ್ದಾರೆ. ಸರ್ಕಾರವು ತನ್ನ ಯೋಜನೆಗಳನ್ನು ಒಂದು ರೀತಿಯ ಔದಾರ್ಯವೆಂದು ಬಿಂಬಿಸುತ್ತಲೇ ಇದೆ. ಈ ಮಹಿಳೆಯರು ಯುಡಿಎಫ್‌ಗೆ ಮತ ಹಾಕಿರುವುದರಿಂದಲೇ ಅದು ಇಂದು ಅಧಿಕಾರದಲ್ಲಿದೆ. ಮಹಿಳೆಯರು ಅದೇ ಯೋಜನೆಗಳನ್ನು ಪಡೆದಾಗ, ಅವರನ್ನು ಅವಮಾನಿಸಲಾಗುತ್ತದೆ” ಎಂದು ಅವರು ಹೇಳಿದರು.