ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕೇರಳಂನಲ್ಲಿ ದೇಶದ ಕೊನೆಯ ಎಡರಂಗ ಸರ್ಕಾರವೂ ಪತನ? ನಾಳೆ ಹೊರ ಬೀಳಲಿದೆ ಫಲಿತಾಂಶ

Keralam Assembly Elections: ಬಹುನಿರೀಕ್ಷಿತ ಪಂಚ ವಿಧಾನಸಭೆ ಚುನಾವಣೆಗಳಫಲಿತಾಂಶ ಮೇ 4ರಂದು ಘೋಷಭೆಯಾಗಲಿದ್ದು, ಕೇರಳಂನಲ್ಲಿ ಯಾರು ಸರ್ಕಾರ ರಚಿಸಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. 2 ಅವಧಿಯಲ್ಲಿ ಅಧಿಕಾರದಲ್ಲಿರುವ ಎಲ್‌ಡಿಎಫ್‌ ಸೋತು ಯುಡಿಎಫ್‌ ಸರ್ಕಾರ ರಚಿಸಲಿದೆ ಎನುವ ಲೆಕ್ಕಾಚಾರ ನಡೆಯುತ್ತಿದೆ. ಜತೆಗೆ ಬಿಜೆಪಿ 3ನೇ ಶಕ್ತಿಯಾಗಿ ಹೊರಹೊಮ್ಮಲಿದೆ.

ದೇಶದ ಕೊನೆಯ ಎಡರಂಗ ಸರ್ಕಾರ ಕೇರಳಂನಲ್ಲಿ ನಾಳೆ ಪತನವಾಗುತ್ತ?

ಪಿಣರಾಯಿ ವಿಜಯನ್‌, ಬಿ.ಡಿ. ಸತೀಶನ್‌ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole May 3, 2026 8:33 PM

ತಿರುವನಂತಪುರಂ, ಮೇ 3: ಬಹುನಿರೀಕ್ಷಿತ ಪಂಚ ವಿಧಾನಸಭೆ ಮತ್ತು ಕರ್ನಾಟಕದ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣೆಯ ಫಲಿತಾಂಶ ಘೋಷಣೆಗೆ ಕ್ಷಣಗಣನೆ ಆರಂಭವಾಗಿದೆ. ಮೇ 4ರ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದೆ. 4 ರಾಜ್ಯಗಳಾದ ಕೇರಳಂ, ತಮಿಳುನಾಡು, ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ ವಿಧಾನಸಭೆಗೆ ಕಳೆದ ತಿಂಗಳು ಚುನಾವಣೆ ನಡೆಯಿತು. ದೇಶವೇ ಕುತೂಹಲದಿಂದ ಎದುರು ನೋಡುತ್ತಿರುವ ಕೇರಳಂನಲ್ಲಿ (Keralam Assembly Elections) ಈ ಬಾರಿ ಯಾವ ಪಕ್ಷ ಸರ್ಕಾರ ರಚಿಸಲಿದೆ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ.

ಏಪ್ರಿಲ್‌ 29ರಂದು ಪಶ್ಚಿಮ ಬಂಗಾಳದ 2ನೇ ಹಂತದ ಮತದಾನ ಪೂರ್ಣಗೊಳ್ಳುತ್ತಿದ್ದಂತೆ ಎಕ್ಸಿಟ್‌ ಪೋಲ್‌ ರಿಸಲ್ಟ್‌ ಕೂಡ ಹೊರ ಬಿದ್ದಿದ್ದು, ಕೇರಳಂನಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತವಾದಂತಾಗಿದೆ.

ಕೆಂಪು ಕೋಟೆ ಛಿದ್ರ ಛಿದ್ರ?

ಸಾಕ್ಷರತೆ ಹೊಂದಿರುವವರು ಹೆಚ್ಚಿನ ಸಂಖ್ಯೆಯಲ್ಲಿರುವ ಕೇರಳಂ ವಿಶಿಷ್ಟ ರಾಜಕೀಯ ಸ್ವಭಾವಕ್ಕೆ ಹೆಸರುವಾಸಿ. ಹಲವು ದಶಕಗಳಿಂದ ಇಲ್ಲಿ ಎಡಪಕ್ಷಗಳ ನೇತೃತ್ವದ ಎಲ್‌ಡಿಎಫ್‌ ಮತ್ತು ಕಾಂಗ್ರೆಸ್‌ ಮುಂದಾಳತ್ವದ ಯುಡಿಎಫ್‌ ಪರ್ಯಾಯ ಅವಧಿಗೆ ಸರ್ಕಾರ ರಚಿಸುತ್ತಲೇ ಬಂದಿವೆ. ಅಂದರೆ ಒಂದು ಅವಧಿಗೆ ಎಲ್‌ಡಿಎಫ್‌ ಸರ್ಕಾರ ರಚಿಸಿದರೆ ಮತ್ತೊಂದು ಅವಧಿಗೆ ಯುಡಿಎಫ್‌ ಅಧಿಕಾರ ಹಿಡಿಯುತ್ತಿತ್ತು. ಆದರೆ 10 ವರ್ಷಗಳಿಂದ ಎಲ್‌ಡಿಎಫ್‌ ಸರ್ಕಾರ ಅಸ್ತಿತ್ವದಲ್ಲಿದೆ. ಈ ಬಾರಿ ಮತ್ತೆ ಎಲ್‌ಡಿಎಫ್‌ ಅಧಿಕಾರಕ್ಕೇರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. 2 ಅವಧಿಯಲ್ಲಿ ಮುಖ್ಯಮಂತ್ರಿಯಾಗಿರುವ ಪಿಣರಾಯಿ ವಿಜಯನ್‌ ಅವರ ಹ್ಯಾಟ್ರಿಕ್‌ ಕನಸು ಭಗ್ನವಾಗಲಿದೆ ಎಂದು ಎಕ್ಸಿಟ್‌ ಪೋಲ್‌ ವರದಿಗಳು ತಿಳಿಸಿವೆ.

ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶ ನಾಳೆ ಘೋಷಣೆ: ಫಾಲ್ಟಾ ಕ್ಷೇತ್ರಕ್ಕಿಲ್ಲ ನಾಯಕನ ಆಯ್ಕೆ

ಬಹುತೇಕ ಎಲ್ಲ ಎಕ್ಸಿಟ್‌ ಪೋಲ್‌ ವರದಿಗಳು ಯುಡಿಎಫ್‌ ಸರ್ಕಾರ ರಚಿಸಲಿದೆ ಎಂದಿವೆ. 140 ಕ್ಷೇತ್ರಗಳ ಇಲ್ಲಿ ಅಧಿಕಾರಕ್ಕೆ ಬರಲು ಅಗತ್ಯವಾದ ಮ್ಯಾಜಿಕ್‌ ನಂಬರ್‌ 71. ಆಕ್ಸಿಸ್‌ ಮೈ ಇಂಡಿಯಾ ವರದಿಯ ಪ್ರಕಾರ ಯುಡಿಎಫ್‌ 78-90 ಸೀಟ್‌ ಗಳಿಸಲಿದ್ದು, ಎಲ್‌ಡಿಎಫ್‌ಗೆ 49-62 ಸೀಟ್‌ ಸಿಗಲಿದೆ. ಇನ್ನು ಮ್ಯಾಟ್ರಿಜ್‌ ಕೂಡ ಯುಡಿಎಫ್‌ ಆಡಳಿತ ಬಗ್ಗೆ ಬೊಟ್ಟು ಮಾಡಿದ್ದು, 70-75 ಕಡೆಗಳಲ್ಲಿ ಜಯ ದಾಖಲಿಸಲಿದೆ. ಎಲ್‌ಡಿಎಫ್‌ 60-65 ಸೀಟ್‌ಗಳಿಗೆ ಸೀಮಿತವಾಗಲಿದೆ ಎಂದಿದೆ. ಪೀಪಲ್ಸ್‌ ಪಲ್ಸ್‌, ಪಿ-ಮಾರ್ಕ್‌ ಕೂಡ ಯುಡಿಎಫ್‌ ಸರ್ಕಾರ ರಚಿಸುವ ಸಾಧ್ಯತೆ ಬಗ್ಗೆ ಹೇಳಿದೆ.

ಅರಳಲಿದೆ ತಾವರೆ

ವಿಶೇಷ ಎಂದರೆ ಈ ಬಾರಿ ಕೇರಳಂನಲ್ಲಿ ಕಮಲ ಅರಳುವ ಬಗ್ಗೆ ಅನೇಕ ಸಮೀಕ್ಷೆಗಳು ತಿಳಿಸಿವೆ. ದೇಶಾದ್ಯಂತ ಪ್ರಭಾವ ಬೀರಿದರೂ ಬಿಜೆಪಿಗೆ ಕೇರಳಂನಲ್ಲಿ ಹೇಳಿಕೊಳ್ಳುವಂತಹ ಸಾಧನೆ ಮಾಡಲು ಇದುವರೆಗೆ ಸಾಧ್ಯವಾಗಿರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಪರ ವಾತಾವರಣ ನಿಧಾನವಾಗಿ ರೂಪುಗೊಳ್ಳುತ್ತಿರುವ ಸೂಚನೆ ಸಿಕ್ಕಿದೆ. ಅದರ ಸೂಚನೆಯಾಗಿ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 1 ಸೀಟ್‌ ಲಭಿಸಿದ್ದು, ಇದೀಗ ವಿಧಾನಸಭೆಯಲ್ಲಿ 3ರಿಂದ 5 ಕಡೆ ಗೆಲುವು ಗಳಿಸುವ ಸಾಧ್ಯತೆ ಕಂಡು ಬಂದಿದೆ. ಸಮೀಕ್ಷೆಗಳ ಪ್ರಕಾರ ಯುಡಿಎಫ್‌ಗೆ ಶೇಕಡ 44ರಷ್ಟು ವೋಟ್‌ ಸಿಗಲಿದ್ದು, ಯುಡಿಎಫ್‌ಗೆ ಶೇಕಡ 39 ಮತ್ತು ಎನ್‌ಡಿಎಗೆ ಶೇಕಡ 14 ಮತ ಸಿಗಲಿದೆ.

ಪಂಚ ರಾಜ್ಯಗಳ ಆಡಳಿತ ಯಾರ ಕೈಗೆ? ನಾಳೆ ಭವಿಷ್ಯ ನಿರ್ಧಾರ

ಕಳೆದ ಬಾರಿ ಏನಾಗಿತ್ತು?

2021ರ ಚುನಾವಣೆಯಲ್ಲಿ ಎಲ್‌ಡಿಎಫ್‌ 99 ಕಡೆಗಳಲ್ಲಿ ಗೆಲುವಿನ ನಗೆ ಬೀರಿ ಸತತ 2ನೇ ಬಾರಿಗೆ ಅಧಿಕಾರಕ್ಕೆ ಬಂದಿತ್ತು. ಆಗ ಯುಡಿಎಫ್‌ 41 ಸೀಟ್‌ಗಳಿಗೆ ಸೀಮಿತವಾಗಿತ್ತು. ಎನ್‌ಡಿಎಗೆ ಒಂದೂ ಸೀಟ್‌ ದೊರೆತಿರಲಿಲ್ಲ. 1977ರ ಬಳಿಕ ಮೊದಲ ಬಾರಿಗೆ ಮೈತ್ರಿಕೂಟವೊಂದು ಸತತ 2 ಬಾರಿಗೆ ಅಧಿಕಾರಕ್ಕೆ ಬಂದಿತ್ತು.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.