Kiren Rijiju: ಲೋಕಸಭೆಯ ಬಳಿಕ ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡಿಸಿದ ಕೇಂದ್ರ
Waqf Amendment Bill: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಬುಧವಾರ (ಏ. 2) ಮಂಡಿಸಿದ ವಕ್ಫ್ ತಿದ್ದುಪಡಿ ಮಸೂದೆ ಬಹುಮತದೊಂದಿಗೆ ಅಂಗೀಕಾರವಾಗಿದ್ದು, ಗುರುವಾರ (ಏ. 3) ರಾಜ್ಯಸಭೆಯ ಮುಂದಿಟ್ಟಿದೆ. ಮಸೂದೆ ಮೇಲೆ ಸುದೀರ್ಘ ಚರ್ಚೆ ನಡೆದ ಬಳಿಕ ವೋಟಿಂಗ್‌ಗೆ ಹಾಕಲಾಗುತ್ತದೆ.

ಕಿರಣ್ ರಿಜಿಜು.

ಹೊಸದಿಲ್ಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ (BJP led Central Government)ವು ಲೋಕಸಭೆ (Lok Sabha)ಯಲ್ಲಿ ಬುಧವಾರ (ಏ. 2) ಮಂಡಿಸಿದ ವಕ್ಫ್ ತಿದ್ದುಪಡಿ ಮಸೂದೆ (Waqf Amendment Bill) ಬಹುಮತದೊಂದಿಗೆ ಅಂಗೀಕಾರವಾಗಿದ್ದು, ಗುರುವಾರ (ಏ. 3) ರಾಜ್ಯಸಭೆಯ ಮುಂದಿಟ್ಟಿದೆ. ಮಸೂದೆ ಮಂಡಿಸಿದ ಕೇಂದ್ರ ಸಚಿವ ಕಿರಣ್ ರಿಜಿಜು (Kiren Rijiju), ''ವಕ್ಫ್ ಮಂಡಳಿಗಳನ್ನು ಬಲಪಡಿಸುವ ಮತ್ತು ಮಹಿಳೆಯರು, ಮಕ್ಕಳು ಹಾಗೂ ವಂಚಿತ ವರ್ಗಗಳ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ ವಕ್ಫ್ (ತಿದ್ದುಪಡಿ) ಮಸೂದೆಯನ್ನು ರಚಿಸಲಾಗಿದೆʼʼ ಎಂದು ಅವರು ಈ ವೇಳೆ ಹೇಳಿದರು. ಮಸೂದೆ ಮೇಲೆ ಸುದೀರ್ಘ ಚರ್ಚೆ ನಡೆದ ಬಳಿಕ ವೋಟಿಂಗ್‌ಗೆ ಹಾಕಲಾಗುತ್ತದೆ.
ಬಿಜೆಪಿ ನೇತೃತ್ವದ ಎನ್‌ಡಿಎ ರಾಜ್ಯಸಭೆಯಲ್ಲೂ ಹೆಚ್ಚಿನ ಸಂಸದರನ್ನು ಹೊಂದಿದೆ. ಎನ್‌ಡಿಎ ಮೈತ್ರಿಕೂಟದಲ್ಲಿ ಒಟ್ಟು 125 ಸಂಸದರಿದ್ದು, ಪ್ರತಿಪಕ್ಷ ʼಇಂಡಿಯಾʼ ಮೈತ್ರಿಕೂಟ 88 ಸಂಖ್ಯಾಬಲ ಹೊಂದಿದೆ. ಹೀಗಾಗಿ ಇಲ್ಲೂ ಬಹುಮತದೊಂದಿಗೆ ಮಸೂದೆ ಅಂಗೀಕಾರವಾಗಲಿದೆ. ವಿಸ್ತ್ರತ ಚರ್ಚೆಯ ಬಳಿಕ ಲೋಕಸಭೆಯಲ್ಲಿ ಮಸೂದೆ ಪರವಾಗಿ 288 ಮತ ಚಲಾವಣೆಗೊಂಡರೆ, 232 ಮಂದಿ ವಿರೋಧಿಸಿದ್ದರು.
ಈ ಸುದ್ದಿಯನ್ನೂ ಓದಿ: Waqf Bill: ವಕ್ಫ್ ಮಸೂದೆ ತಿದ್ದುಪಡಿ: ಚರ್ಚೆ ವೇಳೆ ಶಾ ಬಾನೋ, ಶಾಯರಾ ಬಾನೋ ಬಗ್ಗೆ ಪ್ರಸ್ತಾಪ ಯಾಕೆ?
"ಪ್ರತಿಪಕ್ಷ ಸದಸ್ಯರು ರಾಜಕೀಯ ಕಾರಣಗಳಿಗಾಗಿ ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸುತ್ತಿದ್ದಾರೆ. ಆದರೆ ಅವರು ಈ ಮಸೂದೆಯನ್ನು ಆಳವಾಗಿ ಅಧ್ಯಯನ ಮಾಡಿದರೆ, ಖಂಡಿತವಾಗಿಯೂ ಇದಕ್ಕೆ ಬೆಂಬಲ ನೀಡುತ್ತಾರೆʼʼ ಎಂದು ಕಿರಣ್ ರಿಜಿಜು ಈ ವೇಳೆ ರಾಜ್ಯಸಭೆಯಲ್ಲಿ ತಿಳಿಸಿದರು. ಜತೆಗೆ ವಕ್ಫ್ ತಿದ್ದುಪಡಿ ಮಸೂದೆ 2025 ಅನ್ನು ಬೆಂಬಲಿಸುವಂತೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳಿಗೆ ಮನವಿ ಮಾಡಿದರು. ʼʼಈ ಮಸೂದೆ ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ಹೊಂದಿಲ್ಲ. ಯಾವ ಧರ್ಮದ ಆಂತರಿಕ ವಿಷಯದಲ್ಲೂ ಈ ಮಸೂದೆ ಹಸ್ತಕ್ಷೇಪ ಮಾಡುವುದಿಲ್ಲ" ಎಂದು ಭರವಸೆ ನೀಡಿದರು.
"ವಕ್ಫ್ ತಿದ್ದುಪಡಿ ಮಸೂದೆಯು ಇಸ್ಲಾಂ ಧರ್ಮದಲ್ಲಿ ಹಸ್ತಕ್ಷೇಪ ಮಾಡುತ್ತದೆ ಎಂಬ ಪ್ರತಿಪಕ್ಷಗಳ ಆರೋಪ ಶುದ್ಧ ಸುಳ್ಳು. ಇದು ಕೇವಲ ವಕ್ಫ್ ಮಂಡಳಿಯ ನಿಯಂತ್ರಣ ಮಾಡುತ್ತದೆಯೇ ಹೊರತು, ಧಾರ್ಮಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲʼʼ ಎಂದು ಒತ್ತಿ ಹೇಳಿದರು. ಭಾರತದಲ್ಲಿ ಮುಸ್ಲಿಮರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಕುರಿತು ಮಾಡಲು ರಚಿಸಿದ ಸಾಚಾರ್ ಸಮಿತಿ ಸೇರಿದಂತೆ ಕನಿಷ್ಠ 3 ಸಮಿತಿಗಳು ನೀಡಿದ ಶಿಫಾರಸುಗಳು ವಕ್ಫ್ ಮಸೂದೆಯಲ್ಲಿದೆ ಎಂದರು. ತಿದ್ದುಪಡಿ ಮಾಡಿದ ಮಸೂದೆಯು ಶಿಯಾ ಮತ್ತು ಬೊಹ್ರಾಗಳಂತಹ ವಿವಿಧ ಪಂಗಡಗಳ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲಿದೆ ಎಂದೂ ತಿಳಿಸಿದರು.
''ವಕ್ಫ್‌ಗೆ ಸೇರಿದ ಆಸ್ತಿಗಳ ಅಭಿವೃದ್ಧಿ ಅಗತ್ಯ. ರಕ್ಷಣಾ ಸಚಿವಾಲಯ ಮತ್ತು ರೈಲ್ವೆಯ ಬಳಿಕ ವಕ್ಫ್ ದೇಶದಲ್ಲಿ ಅತೀ ಹೆಚ್ಚಿನ ಜಾಗಗಳನ್ನು ಹೊಂದಿದೆ ಎಂದು ಕೆಲವರು ಹೇಳುತ್ತಾರೆ. ಆದರೆ ನನ್ನ ಪ್ರಕಾರ ವಕ್ಫ್ ಮೊದಲ ಸ್ಥಾನದಲ್ಲಿದೆ. ಯಾಕೆಂದರೆ ಉಳಿದೆರಡು ಖಾಸಗಿ ಸಂಸ್ಥೆಗಳಲ್ಲʼʼ ಎಂದರು. ಇದೇ ವೇಳೆ ವಕ್ಫ್ ತಿದ್ದುಪಡಿ ಮಸೂದೆ 2025 ಅನ್ನು UMEED (Unified Management Empowerment Efficiency development) ಮಸೂದೆ ಎಂದು ಮರುನಾಮಕರಣ ಮಾಡಲಾಯಿತು.