ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Waqf Bill: ವಕ್ಫ್ ಮಸೂದೆ ತಿದ್ದುಪಡಿ: ಚರ್ಚೆ ವೇಳೆ ಶಾ ಬಾನೋ, ಶಾಯರಾ ಬಾನೋ ಬಗ್ಗೆ ಪ್ರಸ್ತಾಪ ಯಾಕೆ?

ಮುಸ್ಲಿಂ ದತ್ತಿ ಆಸ್ತಿಗಳನ್ನು ನಿಯಂತ್ರಿಸುವ ನಿಯಮಗಳನ್ನು ಬದಲಾಯಿಸುವ ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ವಿರೋಧ ಪಕ್ಷದ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಹಿರಿಯ ನಾಯಕ ರವಿಶಂಕರ್ ಪ್ರಸಾದ್ ಅವರು ಶಾ ಬಾನೋ ತೀರ್ಪನ್ನು ರದ್ದುಗೊಳಿಸುವ ಕಾನೂನನ್ನು ಜಾರಿಗೊಳಿಸಿದ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ಟೀಕಿಸಿದರು. ಅಲ್ಲದೇ ತ್ರಿವಳಿ ತಲಾಖ್ ಪ್ರಕರಣದಲ್ಲಿ ಯುಪಿಎ ಸರ್ಕಾರವು ತನ್ನ ಪ್ರತಿಕ್ರಿಯೆಯನ್ನು ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದರು.

ಐತಿಹಾಸಿಕ ತೀರ್ಪನ್ನು ಉಲ್ಲೇಖಿಸಿ ಕಾಂಗ್ರೆಸ್ ಮೇಲೆ ದಾಳಿ ನಡೆಸಿದ ಬಿಜೆಪಿ

Profile Vidhya Iravathur Apr 3, 2025 8:41 AM

ನವದೆಹಲಿ: ವಕ್ಫ್ ತಿದ್ದುಪಡಿ ಮಸೂದೆ (Waqf bill) ಅಂಗೀಕಾರ ಚರ್ಚೆಯ ವೇಳೆ ಸಂಸತ್ತಿನಲ್ಲಿ (waqf bill in lok sabha) ಬುಧವಾರ ಮುಸ್ಲಿಂ ಮಹಿಳೆಯರ ಹಕ್ಕುಗಳಿಗಾಗಿ ಕಾನೂನು ಹೋರಾಟ ಮಾಡಿದ್ದ ಶಾ ಬಾನೋ ಮತ್ತು ಶಾಯರಾ ಬಾನೋ ಅವರ ಬಗ್ಗೆ ಪ್ರಸ್ತಾಪಿಸಲಾಯಿತು. ಮುಸ್ಲಿಂ ದತ್ತಿ ಆಸ್ತಿಗಳನ್ನು ನಿಯಂತ್ರಿಸುವ ನಿಯಮಗಳನ್ನು ಬದಲಾಯಿಸುವ ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ವಿರೋಧ ಪಕ್ಷದ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಹಿರಿಯ ನಾಯಕ ರವಿಶಂಕರ್ ಪ್ರಸಾದ್ ಅವರು ಶಾ ಬಾನೋ ತೀರ್ಪನ್ನು ರದ್ದುಗೊಳಿಸುವ ಕಾನೂನನ್ನು ತಂದಿದ್ದ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ಟೀಕಿಸಿದರು.

ಅಲ್ಲದೇ ತ್ರಿವಳಿ ತಲಾಖ್ ಪ್ರಕರಣದಲ್ಲಿ ಯುಪಿಎ ಸರ್ಕಾರವು ತನ್ನ ಪ್ರತಿಕ್ರಿಯೆಯನ್ನು ವಿಳಂಬ ಮಾಡುತ್ತಿದೆ. ಶಾ ಬಾನೋ ತೀರ್ಪಿನ ಅನಂತರ ಸಂಪ್ರದಾಯವಾದಿ ವಿಭಾಗಗಳಿಗೆ ಬಾಗಿರುವ ಕಾಂಗ್ರೆಸ್ ಗೆ ಬಳಿಕ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಪ್ರಸಾದ್ ಟೀಕಿಸಿದರು.

sha

ಏನಿದು ಶಾ ಬಾನೋ ತೀರ್ಪು?

1978ರಲ್ಲಿ ಇಂದೋರ್‌ನ ಶಾ ಬಾನೋ ಬೇಗಂ ಅವರಿಗೆ ಪತಿ ಮೊಹಮ್ಮದ್ ಅಹ್ಮದ್ ಖಾನ್ ವಿಚ್ಛೇದನ ನೀಡಿದ್ದರು. ಬಳಿಕ ನ್ಯಾಯಾಲಯದ ಮೆಟ್ಟಿಲು ಹತ್ತಿದ ಶಾ ಬಾನೋ ಅವರನ್ನು ಎದುರಿಸಿದ ಪತಿ ಅಹ್ಮದ್ ಖಾನ್, ಮುಸ್ಲಿಂ ನಿಯಮಗಳ ಪ್ರಕಾರ ವಿಚ್ಛೇದನದ ಬಳಿಕ ಮೂರು ತಿಂಗಳ ಅನಂತರ ಇದ್ದತ್ ಅವಧಿಯಲ್ಲಿ ಮಾತ್ರ ಜೀವನಾಂಶ ಪಾವತಿಸಬಹುದು ಬಳಿಕ ಅಲ್ಲ ಎಂದು ವಾದಿಸಿದರು.

ಅನಂತರ ಮುಸ್ಲಿಂ ಮಹಿಳೆಯಾಗಿ ಶಾ ಬಾನೋ ಅವರು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 125 ರ ಅಡಿಯಲ್ಲಿ ಜೀವನಾಂಶವನ್ನು ಪಡೆಯಬಹುದೇ ಎಂಬುದರ ಕುರಿತು ಚರ್ಚೆ ನಡೆಸಲಾಯಿತು. ಈ ಸಕ್ಷನ್ ಅಡಿಯಲ್ಲಿ ಸಾಕಷ್ಟು ಆದಾಯ ಹೊಂದಿರುವ ಪುರುಷನು ತನ್ನನ್ನು ತಾನು ನಿರ್ವಹಿಸಲು ಸಾಧ್ಯವಾಗದ ಹೆಂಡತಿಗೆ ಜೀವನಾಂಶವನ್ನು ಪಾವತಿಸಬೇಕಾಗುತ್ತದೆ.

1985ರಲ್ಲಿ ಸುಪ್ರೀಂ ಕೋರ್ಟ್ ಶಾ ಬಾನೋ ಪರವಾಗಿ ತೀರ್ಪು ನೀಡಿತು ಮತ್ತು ತನ್ನನ್ನು ತಾನು ನಿರ್ವಹಿಸಲು ಸಾಧ್ಯವಾಗದ ಮಹಿಳೆ ಸಿಆರ್‌ಪಿಸಿಯ ಸೆಕ್ಷನ್ 125 ಅನ್ನು ಆಶ್ರಯಿಸಲು ಅರ್ಹಳು ಎಂದು ಹೇಳಿತು.

ಕೋರ್ಟ್ ತೀರ್ಪು ರದ್ದುಗೊಳಿಸಿದ ರಾಜೀವ್ ಗಾಂಧಿ ಸರ್ಕಾರ

ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯ ಬಳಿಕ ನಡೆದ 1984 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿತು. ಶಾ ಬಾನೋ ತೀರ್ಪು ಹೊರಬಿದ್ದಾಗ ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿ ಒಂದು ವರ್ಷವಾಗಿತ್ತು. ಸುಪ್ರೀಂ ಕೋರ್ಟ್ ತೀರ್ಪು ಕಾಂಗ್ರೆಸ್‌ಗೆ ರಾಜಕೀಯವಾಗಿ ಹಾನಿ ಮಾಡಬಹುದು. ಯಾಕೆಂದರೆ ಇದು ಮುಸ್ಲಿಮರ ವೈಯಕ್ತಿಕ ಕಾನೂನುಗಳ ಮೇಲಿನ ಅತಿಕ್ರಮಣವೆಂದು ಕಾಂಗ್ರೆಸ್‌ನೊಳಗಿನ ಒಂದು ಗುಂಪು ರಾಜೀವ್ ಗಾಂಧಿಯವರನ್ನು ಎಚ್ಚರಿಸಿತ್ತು.

ಬಳಿಕ ಸರ್ಕಾರ ಮುಸ್ಲಿಂ ಮಹಿಳಾ ವಿಚ್ಛೇದನದ ಹಕ್ಕುಗಳ ರಕ್ಷಣೆ ಕಾಯ್ದೆಯನ್ನು ತಂದಿತು. ಇದು ಸುಪ್ರೀಂ ಕೋರ್ಟ್ ತೀರ್ಪನ್ನು ರದ್ದುಗೊಳಿಸಿತು. ಈ ಕಾನೂನಿನ ಅಡಿಯಲ್ಲಿ ವಿಚ್ಛೇದಿತ ಮಹಿಳೆಯ ಕುಟುಂಬಕ್ಕೆ ಜೀವನಾಂಶವನ್ನು ಒದಗಿಸುವ ಹೊರೆಯನ್ನು ತಪ್ಪಿಸಿ ವಿಚ್ಛೇದನದ ಸುಮಾರು ಮೂರು ತಿಂಗಳ ಅನಂತರ ಇದ್ದತ್ ಅವಧಿಯಲ್ಲಿ ಮಾತ್ರ ಪತಿ ಜೀವನಾಂಶ ಪಾವತಿಸಲು ಬಾಧ್ಯನಾಗಿರುತ್ತಾನೆ ಎಂದು ಹೇಳಿತು. ಅನಂತರ ಕಾಂಗ್ರೆಸ್‌ ವಿರೋಧಿ ಪಕ್ಷಗಳು ಈ ಪ್ರಕರಣವನ್ನುಉಲ್ಲೇಖಿಸಿ ಕಾಂಗ್ರೆಸ್ ವೋಟ್‌ ಬ್ಯಾಂಕ್ ರಾಜಕೀಯ ನಡೆಸುತ್ತಿದೆ ಎಂದು ಆರೋಪಿಸಲು ಪ್ರಾರಂಭಿಸಿತ್ತು.

sayira

ಶಾಯರಾ ಬಾನೋ ಪ್ರಕರಣ

ಉತ್ತರಪ್ರದೇಶದಲ್ಲಿ ಶಾಯರಾ ಬಾನೋ ಮತ್ತು ರಿಜ್ವಾನ್ ಅಹ್ಮದ್ 2002ರಲ್ಲಿ ವಿವಾಹವಾದರು. ದಂಪತಿಗೆ ಒಬ್ಬ ಮಗ ಮತ್ತು ಮಗಳು ಇದ್ದರು. 2015ರಲ್ಲಿ ರಿಜ್ವಾನ್ ಅಹ್ಮದ್ ಅವರು ತಲಾಖ್-ಎ-ಬಿದ್ದತ್ ಅಥವಾ ತ್ರಿವಳಿ ತಲಾಖ್ ಮೂಲಕ ಶಾಯರಾ ಬಾನೋ ಅವರಿಂದ ವಿಚ್ಛೇದನ ಪಡೆದರು. ಈ ಪದ್ಧತಿಯಲ್ಲಿ ಪತಿ ತಲಾಖ್ (ವಿಚ್ಛೇದನ) ಎಂಬ ಪದವನ್ನು ಮೂರು ಬಾರಿ ಉಚ್ಚರಿಸುವ ಮೂಲಕ ಹೆಂಡತಿಗೆ ವಿಚ್ಛೇದನ ನೀಡಬಹುದು. ಇದಕ್ಕೆ ಪತ್ನಿಯ ಒಪ್ಪಿಗೆಯು ಅಗತ್ಯವಿಲ್ಲ. ಶಾಯರಾ ಬಾನೋ ತ್ರಿವಳಿ ತಲಾಖ್ ಮಹಿಳೆಯ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿದರು.

2017ರಲ್ಲಿ ಸುಪ್ರೀಂ ಕೋರ್ಟ್‌ನ ಐದು ನ್ಯಾಯಾಧೀಶರ ಪೀಠವು ತ್ರಿವಳಿ ತಲಾಖ್ ಪದ್ಧತಿಯನ್ನು ನಿಷೇಧಿಸಿತು. ಈ ಪದ್ಧತಿಯು ಇಸ್ಲಾಂನ ಅತ್ಯಗತ್ಯ ಅಂಶವಲ್ಲ ಎಂದು ಅಭಿಪ್ರಾಯಪಟ್ಟಿತು. ಇದು ಸಂವಿಧಾನದ 14 ನೇ ವಿಧಿಯ ಅಡಿಯಲ್ಲಿ ಕಾನೂನಿನ ಮುಂದೆ ಸಮಾನತೆಯ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಾಲಯ ತೀರ್ಪು ನೀಡಿತು.

ಮುಸ್ಲಿಮರಲ್ಲಿ ವಿಚ್ಛೇದನವನ್ನು ನಿಯಂತ್ರಿಸಲು ಕಾನೂನನ್ನು ತರುವಂತೆಯೂ ಅದು ಸರ್ಕಾರಕ್ಕೆ ನಿರ್ದೇಶನ ನೀಡಿತು. 2019 ರಲ್ಲಿ ನರೇಂದ್ರ ಮೋದಿ ಸರ್ಕಾರವು ತ್ರಿವಳಿ ತಲಾಖ್ ಅನ್ನು ನಿಷೇಧಿಸಿ ಮುಸ್ಲಿಂ ಮಹಿಳೆಯರ ವಿವಾಹ ಹಕ್ಕುಗಳ ರಕ್ಷಣೆ ಕಾಯ್ದೆ 2019 ಅನ್ನು ಜಾರಿಗೆ ತಂದಿತು.

ಇದನ್ನೂ ಓದಿ: Waqf Bill: ವಕ್ಫ್‌ ವಿಧೇಯಕ: ತಿದ್ದುಪಡಿಗಳೇನು? ಏಕೆ? ಹೇಗೆ?

ರವಿಶಂಕರ್ ಪ್ರಸಾದ್ ಹೇಳಿದ್ದೇನು?

ಸಂಸತ್ತಿನಲ್ಲಿ ಬುಧವಾರ 1985ರ ಶಾ ಬಾನೋ ತೀರ್ಪನ್ನು ಉಲ್ಲೇಖಿಸಿದ ಪ್ರಸಾದ್, ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕೀಯವನ್ನು ನಡೆಸುತ್ತಿದೆ ಎಂದು ಆರೋಪಿಸಿದರು. ತ್ರಿವಳಿ ತಲಾಖ್ ಪ್ರಕರಣದ ಬಗ್ಗೆ ಉಲ್ಲೇಖಿಸಿದ ಅವರು, ಯುಪಿಎ ಸರ್ಕಾರವು ಎರಡು ವರ್ಷಗಳ ಯಾವುದೇ ಪ್ರತಿಕ್ರಿಯೆ ನೀಡದೆ ವಿಷಯವನ್ನು ಕಡೆಗಣಿಸಲು ಪ್ರಯತ್ನಿಸಿತು ಎಂದು ಆರೋಪಿಸಿದರು.

2014ರಲ್ಲಿ ನಮ್ಮ ಸರ್ಕಾರ ಬಂದಾಗ ನಾನು ಕಾನೂನು ಸಚಿವನಾಗಿದ್ದೆ. ಪ್ರಧಾನಿ ನರೇಂದ್ರ ಮೋದಿ ಅವರು ಸರ್ಕಾರ ತ್ರಿವಳಿ ತಲಾಖ್ ಅನ್ನು ವಿರೋಧಿಸುತ್ತದೆ ಎಂದು ನ್ಯಾಯಾಲಯಕ್ಕೆ ತಿಳಿಸಲು ನನಗೆ ಹೇಳಿದರು ಎಂದು ಅವರು ಹೇಳಿದರು.1984ರ ಚುನಾವಣೆಯಲ್ಲಿ ರಾಜೀವ್ ಗಾಂಧಿ 400 ಸ್ಥಾನಗಳನ್ನು ಗೆದ್ದಾಗಿನಿಂದ ಕಾಂಗ್ರೆಸ್ ಎಂದಿಗೂ ಸ್ವಂತವಾಗಿ ಬಹುಮತ ಗಳಿಸಿಲ್ಲ ಎಂದು ಹೇಳಿದ ಪ್ರಸಾದ್, ಶಾ ಬಾನೋ ಪ್ರಕರಣದಲ್ಲಿ ಅವರು ತಲೆ ತಗ್ಗಿಸಿದ್ದರು, ಆ ಬಳಿಕ ಕಾಂಗ್ರೆಸ್ ಗೆ ಬಹುಮತ ಗಳಿಸಲು ಸಾಧ್ಯವಾಗಿಲ್ಲ ಎಂದರು.

ವಿರೋಧ ಪಕ್ಷಗಳ ಆರೋಪವೇನು?

ವಕ್ಫ್ ಆಸ್ತಿಗಳನ್ನು ನಿಯಂತ್ರಿಸುವ 1995ರ ಕಾನೂನನ್ನು ತಿದ್ದುಪಡಿ ಮಾಡಲು ಪ್ರಯತ್ನಿಸುವ ವಕ್ಫ್ ತಿದ್ದುಪಡಿ ಮಸೂದೆಯು ಭಾರತದಲ್ಲಿ ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲಿ ಸುಧಾರಣೆ ತರುವ ಗುರಿಯನ್ನು ಹೊಂದಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಇದನ್ನು ವಿರೋಧಿಸುತ್ತಿವೆ. ಈ ಮಸೂದೆಯನ್ನು ಪರಿಶೀಲಿಸಲು ರಚಿಸಲಾದ ಜಂಟಿ ಸಂಸದೀಯ ಸಮಿತಿಯು ವಿರೋಧ ಪಕ್ಷದ ಸಂಸದರ ಸಲಹೆಗಳನ್ನು ಪರಿಗಣಿಸಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ಸರ್ಕಾರ ಮಸೂದೆಯನ್ನು ಆತುರದಿಂದ ಜಾರಿಗೆ ತರುತ್ತಿದೆ. ಮುಸ್ಲಿಂ ಸಮುದಾಯಾದ ವಿಭಜನೆ ಮಾಡಿ ಚುನಾವಣಾ ಲಾಭ ಪಡೆಯುವ ಪ್ರಯತ್ನ ಇದಾಗಿದೆ ಎಂದು ಅವರು ದೂರಿದ್ದಾರೆ.