ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Kottayam: ಕೊಟ್ಟಾಯಂ: ಕ್ರೈಸ್ತರ ಮತವೇ ನಿರ್ಣಾಯಕ

ಕೊಟ್ಟಾಯಂ ಜಿಲ್ಲೆಯಲ್ಲಿ ಒಂಭತ್ತು ವಿಧಾನಸಭಾ ಕ್ಷೇತ್ರಗಳಿವೆ. ಚೆಂಗನಾಶ್ಶೇರಿ, ಏಟುಮಾನ್ನೂರ್, ಕಡುತುರುತ್ತಿ, ಕಾಂಞಂರಪಳ್ಳಿ, ಕೊಟ್ಟಾಯಂ, ಪಾಲಾ, ಪೂಂಞಂರ್, ಪುತುಪಳ್ಳಿ ಮತ್ತು ವೈಕ್ಯಂ. ಪುತುಪಳ್ಳಿ ವಿಧಾನಸಭಾ ಕ್ಷೇತ್ರವು ಕೇರಳದ ಮಾಜಿ ಮುಖ್ಯ ಮಂತ್ರಿ, ಹಿರಿಯ ಕಾಂಗ್ರೆಸ್ ನಾಯಕರಾಗಿದ್ದ ಉಮ್ಮನ್ ಚಾಂಡಿ ಅವರ ಹುಟ್ಟೂರು.

ನರೇಂದ್ರ ಪಾರೆಕಟ್

ಕೇರಳಂನ ಮಧ್ಯ ತಿರುವಾಂಕೂರು ಪ್ರದೇಶಕ್ಕೆ ಒಳಪಟ್ಟ ಕೊಟ್ಟಾಯಂ ಜಿಲ್ಲೆಯಲ್ಲಿ ಹಿಂದೂ ಮತದಾರರ ಸಂಖ್ಯೆಯಷ್ಟೇ ಕ್ರಿಶ್ಚಿಯನ್ ಮತದಾರರೂ ಇದ್ದಾರೆ. ಹಾಗಾಗಿ ಎನ್‌ಡಿಎ ಒಕ್ಕೂಟದ ಬಿಜೆಪಿ ಸೇರಿದಂತೆ ಇತರ ಎರಡೂ ಒಕ್ಕೂಟಗಳೂ ಕ್ರೈಸ್ತ ಮತ ಬ್ಯಾಂಕ್ ಒಲಿಸಿಕೊಳ್ಳಲು ಆ ಸಮುದಾಯದವರಿಗೂ ತುಸು ಹೆಚ್ಚಿನ ಪ್ರಾಶಸ್ತ್ಯ ನೀಡಿರುವುದು ಜಿಲ್ಲೆಯ ಚುನಾವಣಾ ವೈಶಿಷ್ಟ್ಯಗಳಲ್ಲೊಂದಾಗಿದೆ.

ದೇಶದಲ್ಲೇ ಸಂಪೂರ್ಣ ಸಾಕ್ಷರತೆ ಸಾಧಿಸಿದ ಪ್ರಪ್ರಥಮ ಜಿಲ್ಲೆ ಎಂಬ ಹೆಗ್ಗಳಿಕೆ ಕೇರಳಂನ ಕೊಟ್ಟಾಯಂ ಜಿಲ್ಲೆಗಿದೆ. ಕೇರಳಂನಿಂದ ಪ್ರಕಟವಾಗುವ ಪ್ರಮುಖ ಮಲಯಾಳಂ ದಿನ ಪತ್ರಿಕೆಗಳ ಪ್ರಧಾನ ಕಚೇರಿಗಳೂ ಜಿಲ್ಲಾ ಕೇಂದ್ರದಲ್ಲಿವೆೆ. ಇಲ್ಲಿರುವ ಹೆಚ್ಚಿನವರು ಉನ್ನತ ಶಿಕ್ಷಣ ಪಡೆದವರು. ರಬ್ಬರ್ ಈ ಜಿಲ್ಲೆಯ ಪ್ರಮುಖ ಬೆಳೆ.

ಜಿಲ್ಲೆಯಲ್ಲಿಡೀ ಒಮ್ಮೆ ಸುತ್ತಾಡಿ ಬಂದರೆ ಹಿಂದೂಗಳಿಗಿಂತ ಕ್ರೈಸ್ತ ಮತದಾರರ ಸಂಖ್ಯೆ ಸ್ವಲ್ಪ ಹೆಚ್ಚಿರಬಹುದೇನೋ ಅಂತ ಒಂದೇ ನೋಟಕ್ಕೆ ಅನಿಸಿದರೂ, ಚುನಾವಣಾ ಆಯೋಗದ ಪ್ರಕಾರ ಈ ಎರಡೂ ಧರ್ಮೀಯರು ಇಲ್ಲಿ ಸಮಾನ ಸಂಖ್ಯೆಯಲ್ಲಿದ್ದಾರೆ.

ಕ್ರೈಸ್ತ ಮತದಾರರನ್ನು ಓಲೈಸಲು ಚರ್ಚ್'ಗಳ ನಿಕಟ ಸಂಪರ್ಕಗಳ ಮೂಲಕ ಕೇರಳದ ಮೂರೂ ಒಕ್ಕೂಟಗಳೂ ಹಲವಾರು ತಿಂಗಳುಗಳಿಂದಲೇ ಕಾರ್ಯ ಪ್ರವೃತ್ತವಾಗಿದ್ದವು.

ಇದನ್ನೂ ಓದಿ: BJP Kerala Campaign: ತ್ರಿಶೂರ್, ಪಾಲಕ್ಕಾಡಿನಲ್ಲಿ ಬಿಜೆಪಿಗೆ ಗೆಲುವಿನ ನಿರೀಕ್ಷೆ

ಕೊಟ್ಟಾಯಂ ಜಿಲ್ಲೆಯಲ್ಲಿ ಒಂಭತ್ತು ವಿಧಾನಸಭಾ ಕ್ಷೇತ್ರಗಳಿವೆ. ಚೆಂಗನಾಶ್ಶೇರಿ, ಏಟುಮಾನ್ನೂರ್, ಕಡುತುರುತ್ತಿ, ಕಾಂಞಂರಪಳ್ಳಿ, ಕೊಟ್ಟಾಯಂ, ಪಾಲಾ, ಪೂಂಞಂರ್, ಪುತುಪಳ್ಳಿ ಮತ್ತು ವೈಕ್ಯಂ. ಪುತುಪಳ್ಳಿ ವಿಧಾನಸಭಾ ಕ್ಷೇತ್ರವು ಕೇರಳದ ಮಾಜಿ ಮುಖ್ಯ ಮಂತ್ರಿ, ಹಿರಿಯ ಕಾಂಗ್ರೆಸ್ ನಾಯಕರಾಗಿದ್ದ ಉಮ್ಮನ್ ಚಾಂಡಿ ಅವರ ಹುಟ್ಟೂರು. ಹಾಗಾಗಿ ಅದು ಕಾಂಗ್ರೆಸ್‌ನ ಭದ್ರಕೋಟೆ. ಚೆಂಗನಾಶ್ಶೇರಿಯಲ್ಲಿ ಕಳೆದ ಸಲ ಕಾಂಗ್ರೆಸ್ (ಎಂ) ಪಕ್ಷದ ಅಭ್ಯರ್ಥಿ ವಿಜೇತರಾಗಿದ್ದರು.

ಏಟುಮಾನ್ನೂರಿನಲ್ಲಿ ಎನ್‌ಡಿಎ ಸೇರಿದಂತೆ ಮೂರೂ ಒಕ್ಕೂಟಗಳು ಬಲಿಷ್ಠವಾಗಿದ್ದು, ಕಳೆದ ಬಾರಿ ಎಡರಂಗದ ವಿ.ಎನ್ ವಾಸವನ್ ಅವರು ಅಲ್ಲಿಂದ ಗೆದ್ದು ಎಡರಂಗದ ಸರಕಾರದಲ್ಲಿ ಸಚಿವರೂ ಆಗಿದ್ದರು.

ಕಡುತ್ತುರುತ್ತಿ ಮತ್ತು ವೈಕ್ಯಂ ವಿಧಾನಸಭಾ ಕ್ಷೇತ್ರದಲ್ಲಿ ಎಡರಂಗ-ಐಕ್ಯರಂಗದ ಮಧ್ಯೆಯೇ ಪ್ರಮುಖ ಸ್ಪರ್ಧೆ. ಕ್ರೈಸ್ತರು ಹೆಚ್ಚಿನ ಸಂಖ್ಯೆಯಲ್ಲಿರುವ ಪಾಲಾ ಮತ್ತು ಪೂಂಞಂರ್‌ನಲ್ಲಿ ಈ ಸಲದ ಚುನಾವಣಾ ಚಿತ್ರಣ ಬಹಳ ರೋಚಕವಾಗಿದೆ. ಪೂಂಞಂರ್‌ನಲ್ಲಿ ವಿವಿಧ ಪಕ್ಷಗಳಿಂದ ಮತ್ತು ಸ್ವತಂತ್ರ ಅಭ್ಯರ್ಥಿಯಾಗಿಯೂ ಒಟ್ಟು ಆರು ಸಲ ಎಂಎಲ್‌ಎ ಆಗಿದ್ದ ಪಿ.ಸಿ ಜಾರ್ಜ್ ಅವರು ಬಿಜೆಪಿಯ ಅಭ್ಯರ್ಥಿ. ಅದೇ ಕ್ಷೇತ್ರಕ್ಕೆ ಹೊಂದಿಕೊಂಡಿರುವ ಪಾಲಾ ವಿಧಾನಸಭಾ ಕ್ಷೇತ್ರದಲ್ಲಿ ಅವರ ಮಗ ಶಾನ್ ಜಾರ್ಜ್ ಅವರಿಗೆ ಈ ಸಲ ಬಿಜೆಪಿ ಟಿಕೆಟ್ ನೀಡಿದೆ. ಅವರಿಬ್ಬರೂ ಆ ಎರಡೂ ಕ್ಷೇತ್ರದಲ್ಲಿ ಜನಜನಿತರಾಗಿರುವುದರಿಂದ ಅಲ್ಲಿರುವ ಕ್ರಿಶ್ಚಿಯನ್ ಸಮುದಾಯದ ಬೆಂಬಲ ಪಡೆದು ಕನಿಷ್ಠ ಒಂದು ಕ್ಷೇತ್ರವನ್ನಾದರೂ ಗೆಲ್ಲುತ್ತೇವೆಂಬ ಭರವಸೆ ಬಿಜೆಪಿ ನಾಯಕರಲ್ಲಿದೆ.

Screenshot_4 ok

ಕೊಟ್ಟಾಯಂ ಜಿಲ್ಲೆಯವರು ಮಲಬಾರ್ ಕೇರಳ, ಮಂಗಳೂರು ಮತ್ತು ಬೆಂಗಳೂರಿನಲ್ಲಿ ಧಾರಾಳ ಸಂಖ್ಯೆಯಲ್ಲಿದ್ದಾರೆ. ಅಷ್ಟೇ ಅಲ್ಲದೆ ನರ್ಸಿಂಗ್ ಸೇರಿದಂತೆ ವೈದ್ಯಕೀಯ ರಂಗದಲ್ಲಿರುವವರು ಯುರೋಪಿಯನ್ ದೇಶಗಳಲ್ಲಿ ವಾಸಿಸುತ್ತಿರುವ ಯುವ ಪೀಳಿಗೆಯ ಸಂಖ್ಯೆಯೂ ಕಡಿಮೆಯೇನಲ್ಲ. ಎಲ್ಲೇ ಇದ್ದರೂ ಚುನಾವಣೆ ನಡೆಯುವಾಗ ಹುಟ್ಟೂರಿಗೆ ಬಂದು ತಮ್ಮ ಹಕ್ಕನ್ನು ಚಲಾಯಿಸುವ ಅವರ ಬದ್ಧತೆಯನ್ನು ನಿಜಕ್ಕೂ ಮೆಚ್ಚಲೇ ಬೇಕು.

ಕುಮರಕಂ ಇಲ್ಲಿನ ಪ್ರಮುಖ ಪ್ರವಾಸಿಕೇಂದ್ರವಾಗಿದ್ದು, ದಿನಾಲೂ ದೇಶದ ವಿವಿಧ ಭಾಗಗಳಿಂದ ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಹಾಗಾಗಿ ಜಿಲ್ಲೆ ಯಲ್ಲಿ ನಿರುದ್ಯೋಗ ಸಮಸ್ಯೆ ಇಲ್ಲ. ಕಳೆದ ಸುಮಾರು ಇಪ್ಪತ್ತು ವರ್ಷಗಳಲ್ಲಿ ಕೊಟ್ಟಾಯಂ ಜಿಲ್ಲೆ ಎರಡೂ ರಂಗಗಳ ಆಡಳಿತ ಕಾಲದಲ್ಲಿ ಉತ್ತಮ ಅಭಿವೃದ್ಧಿ ಕಂಡಿದೆ.----------------

ಕುರಿಯನ್ ಕೇಂದ್ರ ಸಚಿವರು: ಬಿಜೆಪಿಯ ಮತ ಗಳಿಕೆಯ ರಣತಂತ್ರ

2024ರಲ್ಲಿ ಕೇಂದ್ರದಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದಾಗ ಕೊಟ್ಟಾಯಂನ ಹಿರಿಯ ಬಿಜೆಪಿ ನಾಯಕ ಜಾರ್ಜ್ ಕುರಿಯನ್ ಅವರನ್ನು ಕೇಂದ್ರ ಸಂಪುಟಕ್ಕೆ ರಾಜ್ಯ ಸಚಿವರನ್ನಾಗಿ ಸೇರಿಸಿಕೊಳ್ಳಲಾಯಿತು. ಅವರನ್ನು ಮಧ್ಯಪ್ರದೇಶದ ಮೂಲಕ ರಾಜ್ಯಸಭೆಗೆ ಕಳುಹಿಸಿ ಕೊಡಲಾಯಿತು. ಆ ಮೂಲಕ ಕ್ರೈಸ್ತ ಧರ್ಮೀಯರನ್ನು ಬಿಜೆಪಿ ಕಡೆಗೆಣಿಸುತ್ತಿಲ್ಲ ಎಂಬ ಸಂದೇಶವನ್ನು ಬಿಜೆಪಿಯು ಜಿಲ್ಲೆಯ ಜನತೆಗೆ ನೀಡಿ, ಯಾವುದೇ ಚುನಾವಣೆ ಎದುರಾದಾ ಗಲೂ ಮತ ಗಳಿಸುವ ಲೆಕ್ಕಾಚ್ಚಾರವನ್ನು ಆಗಲೇ ಹೊಂದಿತ್ತು.