ಚೆನ್ನೈ: ಉತ್ತರ ಭಾರತೀಯರಿಗೆ (North Indians) ಹಿಂದಿ (Hindi) ಮಾತ್ರ ಗೊತ್ತು. ಅವರು ಪಾನಿಪುರಿ ಮಾರಲು ಬರಬಹುದು ಎಂದು ತಮಿಳುನಾಡು ಸಚಿವರೊಬ್ಬರು (Tamil Nadu Minister) ವಿವಾದಾತ್ಮಕ ಹೇಳಿಕೆ ನೀಡಿರುವ ಘಟನೆ ನಡೆದಿದೆ. ದಕ್ಷಿಣ ಭಾರತದ (South india) ರಾಜ್ಯಗಳ ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಹೇರಲು ಪ್ರಯತ್ನಿಸುತ್ತಿರುವ ಕೇಂದ್ರದ ವಿರುದ್ಧ ತಮಿಳುನಾಡಿನ ಕೃಷಿ ಸಚಿವ (Tamil Nadu Agriculture Minister) ಎಂಆರ್‌ಕೆ ಪನ್ನೀರ್‌ಸೆಲ್ವಂ (MRK Panneerselvam) ಅವರು ಬುಧವಾರ ಉತ್ತರ ಭಾರತದ ರಾಜ್ಯಗಳಿಂದ ವಲಸೆ ಬಂದ ಕಾರ್ಮಿಕರ ಬಗ್ಗೆ ಅಸಭ್ಯ ಹೇಳಿಕೆ ನೀಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಉತ್ತರ ಭಾರತದವರು ಹಿಂದಿ ಮಾತ್ರ ಕಲಿತಿದ್ದಾರೆ. ಹೀಗಾಗಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಸೀಮಿತ ಉದ್ಯೋಗಾವಕಾಶಗಳನ್ನು ಹೊಂದಿದ್ದಾರೆ. ಹೀಗಾಗಿ ಸಣ್ಣಪುಟ್ಟ ಕೆಲಸಗಳನ್ನು ಮಾತ್ರ ಮಾಡುತ್ತಾರೆ. ಆದರೆ ತಮಿಳರು ತಮಿಳು ಮತ್ತು ಇಂಗ್ಲಿಷ್ ಅನ್ನು ಕೇಂದ್ರೀಕರಿಸುವ ರಾಜ್ಯದ ದ್ವಿಭಾಷಾ ನೀತಿಯಿಂದ ಪ್ರಯೋಜನ ಪಡೆದಿದ್ದು, ಇದರಿಂದ ಅವರು ಯುಎಸ್ ಅಥವಾ ಲಂಡನ್‌ನಲ್ಲಿ ಉದ್ಯೋಗಗಳನ್ನು ಪಡೆಯುತ್ತಿದ್ದಾರೆ ಎಂದು ಹೇಳಿದರು.
ಫೆಬ್ರವರಿ 7ರಿಂದ ನರೇಂದ್ರ ಮೋದಿ ಮಲೇಷ್ಯಾ ಪ್ರವಾಸ; ಪ್ರಧಾನಿ ಅನ್ವರ್ ಇಬ್ರಾಹಿಂ ಜತೆ ಮಾತುಕತೆ
ಅವರು ತಮ್ಮ ಮಾತನ್ನು ಮುಂದುವರಿಸುತ್ತಾ, ಉತ್ತರ ಭಾರತದಿಂದ ತಮಿಳುನಾಡಿಗೆ ಬಂದವರು ಇಲ್ಲಿನ ಹೊಟೇಲ್ ಗಳಲ್ಲಿ ಮೇಜುಗಳನ್ನು ಸ್ವಚ್ಛಗೊಳಿಸುತ್ತಾರೆ, ನಿರ್ಮಾಣ ಕಾರ್ಮಿಕರಾಗಿ, ಪಾನಿಪುರಿ ಮಾರಾಟಗಾರರಾಗಿ ಕೆಲಸ ಮಾಡುತ್ತಾರೆ. ಆದರೆ ನಮ್ಮ ಮಕ್ಕಳು ವಿದೇಶಕ್ಕೆ ಹೋಗಿ ಕೋಟಿಗಟ್ಟಲೆ ಸಂಪಾದಿಸುವ ಅವಕಾಶಗಳನ್ನು ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂನ ವಕ್ತಾರ ಡಾ. ಸೈಯದ್ ಹಫೀಜುಲ್ಲಾ, ಪ್ರತಿಯೊಂದು ಕಾನೂನು ಕೆಲಸದಲ್ಲೂ ಘನತೆ ಇದೆ. ನಾವು ಅದನ್ನು ವಿರೋಧಿಸುವುದಿಲ್ಲ. ಹಿಂದಿ ಮಾತನಾಡುವವರು ಅಥವಾ ಅವರು ಮಾಡುವ ಕೆಲಸಗಳ ವಿರುದ್ಧ ಏನೂ ಇಲ್ಲ ಎಂದ ಅವರು ಇದು ಕೇಂದ್ರದ ತ್ರಿಭಾಷಾ ನೀತಿಯ ವಿರುದ್ಧ ನೀಡಿರುವ ಟೀಕೆಯಷ್ಟೇ ಎಂದರು.
ತಮಿಳುನಾಡಿನ ದ್ವಿಭಾಷಾ ನೀತಿಯು ಇಲ್ಲಿನ ಜನರಿಗೆ ಸಹಾಯ ಮಾಡಿದೆ. ಇಂಗ್ಲಿಷ್ ಜನರಿಗೆ ಅಭಿವೃದ್ಧಿ ಮತ್ತು ಜಾಗತಿಕ ಅವಕಾಶಗಳನ್ನು ನೀಡಿದೆ. ಇಂಗ್ಲಿಷ್‌ಗೆ ಆದ್ಯತೆ ನೀಡದೆ ಕೇವಲ ಹಿಂದಿ ಮಾತನಾಡುವ ರಾಜ್ಯಗಳ ಜನರು ಶಿಕ್ಷಣದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.
ಡಿಎಂಕೆ ಲೋಕಸಭಾ ಸಂಸದ ಟಿ.ಆರ್. ಬಾಲು ಮಾತನಾಡಿ, ಪನ್ನೀರ್‌ಸೆಲ್ವಂ ಒಬ್ಬ ಜವಾಬ್ದಾರಿಯುತ ಸಚಿವರು. ಅವರ ಬಗ್ಗೆ ತಪ್ಪಾಗಿ ಉಲ್ಲೇಖಿಸಲಾಗಿದೆ. ಅವರು ಉತ್ತರ ಭಾರತೀಯರ ವಿರುದ್ಧ ಏನೂ ಹೇಳಿಲ್ಲ. ಹಿಂದಿ ಹೇರಿಕೆ ಭಾವನೆಗೆ ವಿರೋಧಿಸಿದ್ದಾರೆ ಎಂದರು.
ಭಾರತ- ಅಮೆರಿಕ ವ್ಯಾಪಾರ ಒಪ್ಪಂದ; ಟೀಕೆಗೆ ಗುರಿಯಾದ ಪಾಕಿಸ್ತಾನ ಸರ್ಕಾರ
ವಿಧಾನ ಸಭಾ ಚುನಾವಣೆಗೂ ಮೊದಲೇ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿರುವ ಪನ್ನೀರ್‌ಸೆಲ್ವಂ ಅವರ ಹೇಳಿಕೆಗಳು ಇದೀಗ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಸೀಟು ಹಂಚಿಕೆ ವಿಚಾರದಲ್ಲಿ ಸಂಬಂಧಗಳು ಹದಗೆಟ್ಟಿದ್ದರೂ ಡಿಎಂಕೆ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದೆ. ಭಾರತೀಯ ಜನತಾ ಪಕ್ಷದೊಂದಿಗೆ ಕೈಜೋಡಿಸಿರುವ ಎಐಎಡಿಎಂಕೆ ವಿರುದ್ಧ ಚುನಾವಣೆಯಲ್ಲಿ ಗೆಲುವು ಸಾಧಿಸಲು ಪ್ರಯತ್ನಿಸುತ್ತಿದೆ. ತಮಿಳುನಾಡಿನಲ್ಲಿ ಭಾವನಾತ್ಮಕ ವಿಷಯವಾಗಿರುವ ಭಾಷೆ ವಿವಾದವು ಈ ಬಾರಿ ಚುನಾವಣೆ ಪ್ರಚಾರದ ವಿಷಯವಾಗಲಿದೆ. ಹೀಗಾಗಿ ವಿವಾದಾತ್ಮಕ ರಾಷ್ಟ್ರೀಯ ಶಿಕ್ಷಣ ನೀತಿ ಮತ್ತೊಮ್ಮೆ ಗಮನ ಸೆಳೆಯಲಿದೆ.