ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lex Fridman: ಪ್ರಧಾನಿ ಮೋದಿ ಜತೆಗಿನ ಪಾಡ್‌ಕ್ಯಾಸ್ಟ್‌ಗಾಗಿ 2 ದಿನ ಉಪವಾಸ ಕೈಗೊಂಡಿದ್ದ ಲೆಕ್ಸ್ ಫ್ರಿಡ್‌ಮನ್; ಕಾರಣವೇನು?

Lex Fridman: ಅಮೆರಿಕ ಪಾಡ್‌ಕ್ಯಾಸ್ಟರ್‌, ಕೃತಕ ಬುದ್ಧಿಮತ್ತೆ ವಿಜ್ಞಾನಿ ಲೆಕ್ಸ್ ಫ್ರಿಡ್‌ಮನ್ ಜತೆಗೆ ಪ್ರಧಾನಿ ನರೇಂದ್ರ ಮೋದಿ ಪಾಡ್‌ಕ್ಯಾಸ್ಟ್‌ ನಡೆಸಿದ್ದಾರೆ. 3 ಗಂಟೆ 17 ನಿಮಿಷದ ಈ ವಿಶೇಷ ಸಂದರ್ಶನದಲ್ಲಿ ಮೋದಿ ಹಲವು ವಿಚಾರಗಳನ್ನು ತೆರೆದಿಟ್ಟಿದ್ದಾರೆ. ಈ ವೇಳೆ ಲೆಕ್ಸ್ ಫ್ರಿಡ್‌ಮನ್ ಅವರು ಸಂದರ್ಶನಕ್ಕಾಗಿ 2 ದಿನ ಉಪವಾಸವಿದ್ದ ವಿಚಾರವನ್ನು ಬಹಿರಂಗಪಡಿಸಿದ್ದಾರೆ,

ಮೋದಿ ಜತೆಗಿನ ಪಾಡ್‌ಕ್ಯಾಸ್ಟ್‌ಗಾಗಿ ಉಪವಾಸ ಕೈಗೊಂಡಿದ್ದ ಲೆಕ್ಸ್ ಫ್ರಿಡ್‌ಮನ್

ಲೆಕ್ಸ್ ಫ್ರಿಡ್‌ಮನ್ ಮತ್ತು ನರೇಂದ್ರ ಮೋದಿ.

Profile Ramesh B Mar 16, 2025 10:01 PM

ಹೊಸದಿಲ್ಲಿ: ಅಮೆರಿಕ ಪಾಡ್‌ಕ್ಯಾಸ್ಟರ್‌, ಕೃತಕ ಬುದ್ಧಿಮತ್ತೆ ವಿಜ್ಞಾನಿ ಲೆಕ್ಸ್ ಫ್ರಿಡ್‌ಮನ್ (Lex Fridman) ಜತೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಪಾಡ್‌ಕ್ಯಾಸ್ಟ್‌ ನಡೆಸಿದ್ದು, ಯುಟ್ಯೂಬ್‌ನಲ್ಲಿ ಪ್ರಸಾರವಾಗುತ್ತಿದೆ. 3 ಗಂಟೆ 17 ನಿಮಿಷದ ಈ ವಿಶೇಷ ಸಂದರ್ಶನದಲ್ಲಿ ಮೋದಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಇದು ಮೋದಿ ಅವರ ಮೊದಲ ಅಂತಾರಾಷ್ಟ್ರೀಯ ಪಾಡ್‌ಕ್ಯಾಸ್ಟ್‌ ಕೂಡ ಹೌದು (Lex Fridman Podcast). ಇದೇ ವೇಳೆ ಲೆಕ್ಸ್ ಫ್ರಿಡ್‌ಮನ್ ಅವರು ಈ ಸಂದರ್ಶನಕ್ಕಾಗಿ ತಾವು 45 ಗಂಟೆಗಳ ಕಾಲ ಉಪವಾಸವಿದ್ದುದಾಗಿ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರ ಸಂದರ್ಶನಕ್ಕಾಗಿ ತಯಾರಿ ನಡೆಸುತ್ತಿದ್ದ ತಾವು 2 ದಿನ ಉಪವಾಸ ಕೈಗೊಂಡ ಅಚ್ಚರಿಯ ಸಂಗತಿಯನ್ನು ಲೆಕ್ಸ್ ಫ್ರಿಡ್‌ಮನ್ ತಿಳಿಸಿದ್ದಾರೆ. ಆಹಾರ ಸೇವಿಸದೆ ಕೇವಲ ನೀರು ಕುಡಿದುಕೊಂಡು ಸಿದ್ಧತೆ ನಡೆಸಿದ್ದಾಗಿ ವಿವರಿಸಿದ್ದಾರೆ. ʼʼನಾನು ಉಪವಾಸ ಕೈಗೊಂಡಿದ್ದೇನೆ. 2 ದಿನ ಅಂದರೆ ಸುಮಾರು 45 ಗಂಟೆಗಳ ಕಾಲ ಆಹಾರ ಸೇವಿಸದೆ ಕೇವಲ ನೀರನ್ನಷ್ಟೇ ಕುಡಿದಿದ್ದೇನೆ. ಈ ಸಂಭಾಷಣೆಯ ಗೌರವಾರ್ಥವಾಗಿ, ಮನಸ್ಥಿತಿ ಸರಿಯಾಗಿ ಹೊಂದಾಣಿಕೆಯಾಗಲು ಮತ್ತು ಸರಿಯಾದ ಆಧ್ಯಾತ್ಮಿಕ ಮಟ್ಟಕ್ಕೆ ಹೋಗಲು ಉಪವಾಸ ಮಾಡಿದ್ದೇನೆ" ಎಂದು ಅವರು ತಿಳಿಸಿದ್ದಾರೆ.

ಲೆಕ್ಸ್ ಫ್ರಿಡ್‌ಮನ್ ಅವರ ಪಾಡ್‌ಕ್ಯಾಸ್ಟ್‌ ಇಲ್ಲಿದೆ:



ಇದಕ್ಕೆ ಮೋದಿ, ಕೃತಜ್ಞತೆ ಸಲ್ಲಿಸಿದ್ದಾರೆ. "ನೀವು ಉಪವಾಸ ಮಾಡುತ್ತಿರುವುದು ನನಗೆ ನಿಜವಾಗಿಯೂ ಆಶ್ಚರ್ಯ ತಂದಿದೆ. ಇದು ನನಗೆ ಸಲ್ಲಿಸಿದ ಗೌರವʼʼ ಎಂದು ಮೋದಿ ಹೇಳಿದ್ದಾರೆ. ʼʼನೀವು ಅನೇಕ ದಿನಗಳ ಕಾಲ ಉಪವಾಸ ಮಾಡುತ್ತೀರಿ ಎನ್ನುವ ವಿಚಾರವನ್ನು ನಾನು ಓದಿದ್ದೇನೆ. ಯಾಕಾಗಿ ಉಪವಾಸ ಮಾಡುತ್ತೀರಿ? ಉಪವಾಸ ಮಾಡುವಾಗ ನಿಮ್ಮ ಮನಸ್ಥಿತಿ ಹೇಗಿರುತ್ತದೆ ಎನ್ನುವುದನ್ನು ವಿವರಿಸಬಲ್ಲಿರಾ?ʼʼ ಲೆಕ್ಸ್ ಫ್ರಿಡ್‌ಮನ್ ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Lex Fridman Podcast: ಟೀಕೆ ಪ್ರಜಾಪ್ರಭುತ್ವದ ಆತ್ಮ; ಲೆಕ್ಸ್ ಫ್ರಿಡ್‌ಮನ್ ಪಾಡ್‌ಕ್ಯಾಸ್ಟ್‌ನಲ್ಲಿ ಮೋದಿ ಅಭಿಮತ

ಮೋದಿ ಹೇಳಿದ್ದೇನು?

ಇದಕ್ಕೆ ನಸುನಗುತ್ತಲೇ ಮೋದಿ ಉತ್ತರಿಸಿದ್ದಾರೆ. ಭಾರತದಲ್ಲಿ ಧಾರ್ಮಿಕ ಸಂಪ್ರದಾಯಗಳು ದೈನಂದಿನ ಜೀವನದೊಂದಿಗೆ ಆಳವಾಗಿ ಹೆಣೆದುಕೊಂಡಿವೆ ಎಂದು ಒತ್ತಿ ಹೇಳಿದ ಮೋದಿ, ಹಿಂದೂ ಧರ್ಮವು ಕೇವಲ ಆಚರಣೆಗಳ ಗುಂಪಲ್ಲ, ಅದು ಜೀವನಕ್ಕೆ ಮಾರ್ಗದರ್ಶನ ನೀಡುವ ತತ್ವಶಾಸ್ತ್ರ ಎಂದಿದ್ದಾರೆ. ʼʼದೇಹ, ಮನಸ್ಸು, ಬುದ್ಧಿ, ಆತ್ಮ ಮತ್ತು ಮಾನವೀಯತೆಯನ್ನು ಉನ್ನತೀಕರಿಸಲು ಭಾರತೀಯ ಧರ್ಮಗ್ರಂಥಗಳಲ್ಲಿ ವಿವರಿಸಲಾದ ಅನೇಕ ಮಾರ್ಗಗಳಲ್ಲಿ ಉಪವಾಸವೂ ಒಂದು. ಇದು ತನ್ನೊಳಗೆ ಶಿಸ್ತು ಮತ್ತು ಸಮತೋಲನವನ್ನು ಬೆಳೆಸುತ್ತದೆʼʼ ಎಂದು ವಿವರಿಸಿದ್ದಾರೆ.

ಉಪವಾಸವು ಮಾನಸಿಕ ದೃಢತೆ ಮತ್ತು ಸೃಜನಶೀಲತೆಯ ಮೇಲೆ ಹೇಗೆ ಆಳವಾಗಿ ಪರಿಣಾಮ ಬೀರುತ್ತದೆ ಎಂದು ಮೋದಿ ತಿಳಿಸಿದ್ದಾರೆ. ಉಪವಾಸವು ಇಂದ್ರಿಯಗಳನ್ನು ತೀಕ್ಷ್ಣಗೊಳಿಸುತ್ತದೆ ಮತ್ತು ಆಲೋಚನಾ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಎಂದಿದ್ದಾರೆ. "ನಾನು ಗಮನಿಸಿದ ಮತ್ತೊಂದು ವಿಷಯವೆಂದರೆ ಉಪವಾಸವು ಆಲೋಚನಾ ಪ್ರಕ್ರಿಯೆಯನ್ನು ಹೆಚ್ಚು ವೇಗಗೊಳಿಸುತ್ತದೆ ಮತ್ತು ಹೊಸ ದೃಷ್ಟಿಕೋನವನ್ನು ನೀಡುತ್ತದೆ. ಪ್ರತಿಯೊಬ್ಬರೂ ಇದನ್ನು ಅನುಭವಿಸುತ್ತಾರೆಯೇ ಎಂಬುದು ನನಗೆ ತಿಳಿದಿಲ್ಲ. ಆದರೆ ನನ್ನ ಅನುಭವಕ್ಕಂತೂ ಬಂದಿದೆʼʼ ಎಂದು ಮೋದಿ ತಿಳಿಸಿದ್ದಾರೆ. ಉಪವಾಸವು ತಮ್ಮ ಆಲೋಚನೆಯ ಸ್ಪಷ್ಟತೆಯನ್ನು ಹೆಚ್ಚಿಸಿರುವುದಾಗಿಯೂ ಹೇಳಿದ್ದಾರೆ.

ಮೋದಿ ಹೇಗೆ ಉಪವಾಸ ಕೈಗೊಳ್ಳುತ್ತಾರೆ?

ಉಪವಾಸವನ್ನು ಭಕ್ತಿ ಮತ್ತು ಸ್ವಯಂ ಶಿಸ್ತಿನ ಕ್ರಿಯೆ ಎಂದು ಮೋದಿ ಬಣ್ಣಿಸಿದ್ದಾರೆ. 5 ದಶಕಗಳಿಂದ ಉಪವಾಸ ಮಾಡುತ್ತಿರುವುದಾಗಿಯೂ ಹೇಳಿದ್ದಾರೆ. "ಉಪವಾಸವನ್ನು ಪ್ರಾರಂಭಿಸುವ ಮೊದಲು ನಾನು ಸಾಕಷ್ಟು ನೀರು ಕುಡಿಯುತ್ತೇನೆ. ಇದು ನನ್ನ ದೇಹ ಉತ್ತಮ ರೀತಿಯಲ್ಲಿರಲು ನೆರವಾಗುತ್ತದೆ. ಉಪವಾಸ ನನಗೆ ಅದು ಭಕ್ತಿಯ ಭಾಗ. ಅಲ್ಲದೆ ಸ್ವಯಂ ಶಿಸ್ತಿನ ಮತ್ತೊಂದು ರೂಪʼʼ ಎಂದಿದ್ದಾರೆ.

ʼʼಉಪವಾಸವನ್ನು ಪ್ರಾರಂಭಿಸುವ ಮೊದಲು ಯೋಗದ ಮೂಲಕ ದೇಹವನ್ನು ಸಿದ್ಧಪಡಿಸುತ್ತೇನೆ. ಜತೆಗೆ ಸಂಪೂರ್ಣ ಆಂತರಿಕ ಶುದ್ಧೀಕರಣವನ್ನು ಖಚಿತಪಡಿಸಿಕೊಳ್ಳುತ್ತೇನೆ'' ಎಂದು ವಿವರಿಸಿದ್ದಾರೆ. ನವರಾತ್ರಿಯ ಸಮಯದಲ್ಲಿ 9 ದಿನಗಳವರೆಗೆ ಉಪವಾಸ ವ್ರತ ಕೈಗೊಳ್ಳುವ ಅವರು ಬಿಸಿನೀರನ್ನು ಮಾತ್ರ ಸೇವಿಸುತ್ತಾರೆ. ಈ ವೇಳೆ ತಮ್ಮ ಕಾರ್ಯಗಳಿಗೆ ಯಾವುದೇ ಚ್ಯುತಿ ಬಾರದಂತೆಯೂ ನೋಡಿಕೊಳ್ಳುತ್ತಾರೆ.

ಜನರ ಸೇವೆ ದೇವರ ಸೇವೆಗೆ ಸಮಾನ ಎಂದ ಮೋದಿ

ʼʼಜೀವನದಲ್ಲಿ ನೀವು ಏನೇ ಮಾಡಿದರೂ ಅದನ್ನು ಒಂದು ಉದ್ದೇಶದಿಂದ ಮಾಡಿ. ಜೀವನದಲ್ಲಿ ನಿಜವಾಗಿಯೂ ಉದ್ದೇಶ ಎಂದು ಕರೆಯಬಹುದಾದ ಕಡೆಗೆ ಆರ್‌ಎಸ್‌ಎಸ್‌ ನಿಮ್ಮನ್ನು ಕರೆದೊಯ್ಯುತ್ತದೆ. ರಾಷ್ಟ್ರವೇ ಎಲ್ಲವೂ. ಜನರ ಸೇವೆ ಮಾಡುವುದು ದೇವರ ಸೇವೆಗೆ ಸಮಾನ ಎನ್ನುವುದನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ತಿಳಿಸುತ್ತದೆʼʼ ಎಂದು ಮೋದಿ ಹೇಳಿದ್ದಾರೆ.