ನವದೆಹಲಿ, ಏ. 14: ಕೇಂದ್ರ ಸರ್ಕಾರವು (Central Government) ಲೋಕಸಭೆಯ ಸದಸ್ಯರ ಸಂಖ್ಯೆಯನ್ನು 543ರಿಂದ 850ಕ್ಕೆ ಏರಿಸಲು ಮುಂದಾಗಿದೆ. ಈ ಕ್ರಮವು ದೀರ್ಘಕಾಲದಿಂದ ಬಾಕಿಯಿರುವ ಮಹಿಳಾ ಮೀಸಲು ಕಾಯ್ದೆಯನ್ನು (women’s reservation law) ಜಾರಿಗೆ ತರಲು ಹಾಗೂ ಹೊಸ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ಕೈಗೊಳ್ಳಲು ಕಾರಣವಾಗಲಿದೆ. ಈ ವಿಸ್ತರಣೆಯ ರೂಪರೇಷೆಗಳನ್ನು ಹೊಂದಿರುವ ಕರಡು ಮಸೂದೆಯನ್ನು ಸಂಸದರೊಂದಿಗೆ ಹಂಚಿಕೊಳ್ಳಲಾಗಿದ್ದು, ಮೂರು ದಿನಗಳ ವಿಶೇಷ ಸಂಸತ್ತಿನ ಅಧಿವೇಶನದಲ್ಲಿ ಪ್ರಮುಖ ಸಾಂವಿಧಾನಿಕ ತಿದ್ದುಪಡಿಗಳನ್ನು ಮಂಡಿಸಲು ಸರ್ಕಾರ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡಲು ಸಂಬಂಧಿಸಿದ ನಿಬಂಧನೆಗಳನ್ನು ತಿದ್ದುಪಡಿ ಮಾಡಲು ಮತ್ತು 2011ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರಗಳ ಪುನರ್ವಿಂಗಡಣೆಯನ್ನು ಕೈಗೊಳ್ಳಲು ಈ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ. ಕ್ಷೇತ್ರಗಳನ್ನು ಪುನರ್ವಿಂಗಡಿಸುವ ಮೂಲಕ ಕೋಟಾವನ್ನು ಸುಗಮವಾಗಿ ಜಾರಿಗೆ ತರುವ ಗುರಿಯನ್ನು ಸೀಟುಗಳ ಹೆಚ್ಚಳ ಹೊಂದಿದೆ.
ಮೋದಿ ಸರ್ಕಾರದಿಂದ ನಾರಿಯರಿಗೆ ಬಂಪರ್ ಆಫರ್; ಶೀಘ್ರದಲ್ಲೇ ಮಹಿಳಾ ಮೀಸಲಾತಿ ಕಾಯ್ದೆ ಜಾರಿಗೆ ನಿರ್ಧಾರ
ಈ ಪ್ರಸ್ತಾಪದ ಪ್ರಕಾರ 815 ಸ್ಥಾನಗಳನ್ನು ರಾಜ್ಯಗಳಿಗೆ ಮತ್ತು 35 ಸ್ಥಾನಗಳನ್ನು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗುತ್ತದೆ. ಇದರಿಂದ ಒಟ್ಟು ಸದಸ್ಯರ ಸಂಖ್ಯೆ 850 ಆಗುತ್ತದೆ. ಈ ಬದಲಾವಣೆಗಳು 2029ರ ಲೋಕಸಭೆ ಚುನಾವಣೆಯಿಂದ ಜಾರಿಗೆ ಬರುವ ನಿರೀಕ್ಷೆಯಿದೆ.
ಪ್ರಶ್ನಿಸಲು ಮುಂದಾದ ವಿಪಕ್ಷ
ವಿರೋಧ ಪಕ್ಷಗಳು ಸರ್ಕಾರದ ಕ್ಷೇತ್ರ ಮರುವಿಂಗಡಣೆ ಕ್ರಮವನ್ನು ಪ್ರಶ್ನಿಸಲು ಸಜ್ಜಾಗಿವೆ. ವಿಶೇಷವಾಗಿ 2011ರ ಜನಗಣತಿ ಅಂಕಿಅಂಶಗಳನ್ನು ಬಳಸುವ ವಿಷಯದಲ್ಲಿ ಆಮ್ ಆದ್ಮಿ ಪಕ್ಷ (AAP), ರಾಷ್ಟ್ರೀಯ ಜನತಾ ದಳ (RJD) ಮತ್ತು ದ್ರಾವಿಡ ಮುನ್ನೇತ್ರ ಕಳಘಂ (DMK) ಸೇರಿದಂತೆ ರಾಜಕೀಯ ಪಕ್ಷಗಳು, ಈ ಪ್ರಕ್ರಿಯೆ ನವೀಕೃತ ಜನಗಣತಿ ಅಂಕಿಅಂಶಗಳ ಆಧಾರದ ಮೇಲೆ ನಡೆಯಬೇಕು ಎಂದು ವಾದಿಸುವ ನಿರೀಕ್ಷೆಯಿದೆ.
ಮೂಲಗಳ ಪ್ರಕಾರ, ವಿಪಕ್ಷಗಳ ಇಂಡಿಯಾ ಮೈತ್ರಿಯ (INDIA bloc) ಹಲವು ಪಕ್ಷಗಳು ಹಿಂದುಳಿದ ವರ್ಗಗಳ ಮಹಿಳೆಯರಿಗೆ ಮೀಸಲಾತಿಯೊಳಗಿನ ಮೀಸಲಾತಿ ಕುರಿತು ದೀರ್ಘಕಾಲದ ಬೇಡಿಕೆಗೆ ಸ್ಪಷ್ಟತೆ ಕೇಳುವ ಸಾಧ್ಯತೆಯಿದೆ. ದೆಹಲಿಯಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ವಿರೋಧ ಪಕ್ಷದ ನಾಯಕರು ಮತ್ತು ಮಿತ್ರಪಕ್ಷಗಳ ಕಾರ್ಯತಂತ್ರ ಸಭೆ ನಿಗದಿಯಾಗಿದೆ. ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಚುನಾವಣೆ ನಡೆಯಲಿರುವ ತೃಣಮೂಲ ಕಾಂಗ್ರೆಸ್ ಮತ್ತು ಡಿಎಂಕೆ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ.
ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ'ಬ್ರೇನ್ ಸರ್ಕಾರದ ಉದ್ದೇಶವನ್ನು ಪ್ರಶ್ನಿಸಿದ್ದಾರೆ. ಪ್ರಸ್ತಾವಿತ ತಿದ್ದುಪಡಿಗಳು ಮಹಿಳಾ ಮೀಸಲಾತಿಯನ್ನು ಅನುಷ್ಠಾನಗೊಳಿಸುವುದಕ್ಕಿಂತ ಕ್ಷೇತ್ರ ಪುನರ್ನಿರ್ಮಾಣದ ಮೇಲೆ ಹೆಚ್ಚು ಗಮನಹರಿಸಿವೆ ಎಂದು ವಾದಿಸಿದರು.
ʼʼಸಾಂವಿಧಾನಿಕ ತಿದ್ದುಪಡಿ ಮಸೂದೆಗಳನ್ನು ಏಪ್ರಿಲ್ 16ರಂದು ಕೈಗೆತ್ತಿಕೊಳ್ಳಲಾಗುವುದು. ಮಸೂದೆಯ ಪ್ರತಿ ಎಲ್ಲಿದೆ?ʼʼ ಎಂದು ಅವರು ಪ್ರಶ್ನಿಸಿದರು. ಏಪ್ರಿಲ್ 23 ಮತ್ತು ಏಪ್ರಿಲ್ 29ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಕರೆಯಲಾದ ಅಧಿವೇಶನದ ಸಮಯವನ್ನು ಸಹ ಅವರು ಉಲ್ಲೇಖಿಸಿದರು.