ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹೊರ್ಮುಜ್‌ ಜಲಸಂಧಿ ದಾಟಿ ಗುಜರಾತ್‌ ಕರಾವಳಿ ತಲುಪಿದ ಎಲ್‌ಪಿಜಿ ಹೊತ್ತ ಶಿವಾಲಿಕ್‌ ಹಡಗು; ಅಡುಗೆ ಅನಿಲ ಸಮಸ್ಯೆಗೆ ಇನ್ನಾದರೂ ಬೀಳುತ್ತಾ ಬ್ರೇಕ್‌?

ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಆರಂಭವಾಗುತ್ತಿದ್ದಂತೆ ಇರಾನ್‌ ಹೊರ್ಮುಜ್‌ ಜಲಸಂಧಿಯನ್ನು ಸ್ಥಗಿತಗೊಳಿಸಿದೆ. ಇದರಿಂದ ಭಾರತ ಸೇರಿದಂತೆ ಹಲವು ದೇಶಗಳ ಕಚ್ಚಾ ತೈಲ, ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಅದಾಗ್ಯೂ ಭಾರತದ ಸಂಧಾನದ ಬಳಿಕ ಇತ್ತೀಚೆಗೆ ಯಶಸ್ವಿಯಾಗಿ ದಾಟಿದ್ದ ಎಲ್‌ಪಿಜಿಯನ್ನು ಹೊತ್ತ ಶಿವಾಲಿಕ್‌ ಹಡಗು ಗುಜರಾತ್‌ ಕರಾವಳಿಗೆ ಬಂದು ಮುಟ್ಟಿದೆ.

ಸಾಂದರ್ಭಿಕ ಚಿತ್ರ

ಗಾಂಧಿನಗರ, ಮಾ. 16: ಇರಾನ್‌ನ ಹೊರ್ಮುಜ್‌ ಜಲಸಂಧಿಯನ್ನು (Strait Of Hormuz) ಇತ್ತೀಚೆಗೆ ಯಶಸ್ವಿಯಾಗಿ ದಾಟಿದ್ದ ಎಲ್‌ಪಿಜಿಯನ್ನು ಹೊತ್ತ ಹಡಗು ಗುಜರಾತ್‌ ಕರಾವಳಿಗೆ ಬಂದು ಮುಟ್ಟಿದೆ. ಸುಮಾರು 40,000 ಮೆಟ್ರಿಕ್‌ ಟನ್‌ ಎಲ್‌ಪಿಜಿ ಹೊತ್ತ ಟ್ಯಾಂಕರ್‌ ಶಿವಾಲಿಕ್‌ (LPG Tanker Shivalik) ಗುಜರಾತ್‌ನ ಮುಂದ್ರಾ ಬಂದರಿಗೆ ತಲುಪಿದೆ ಎಂದು ಮೂಲಗಳು ಖಚಿತಪಡಿಸಿವೆ. ಆ ಮೂಲಕ ಭಾರತದಲ್ಲಿ ತಲೆದೋರಿರುವ ಎಲ್‌ಪಿಜಿ ಬಿಕ್ಕಟ್ಟು ಒಂದು ಹಂತದವರೆಗೆ ಕಡಿಮೆಯಾಗುವ ನಿರೀಕ್ಷೆ ಇದೆ. ಇನ್ನೊಂದು ಹಡಗು ನಂದಾದೇವಿ ಶೀಘ್ರದಲ್ಲೇ ಬಂದು ಸೇರಲಿದೆ. ಭಾರತೀಯ ನೌಕಾಪಡೆಗಳು ಈ ಹಡಗುಗಳ ಬೆಂಗಾವಲಿಗೆ ನಿಂತಿವೆ.

ʼʼಭಾರತೀಯ ಶಿಪ್ಪಿಂಗ್ ಕಾರ್ಪೊರೇಷನ್‌ಗೆ ಸೇರಿದ ಭಾರತದ ಧ್ವಜ ಹೊತ್ತ ಎಲ್‌ಪಿಜಿ ಟ್ಯಾಂಕರ್ ಶಿವಾಲಿಕ್ ಹೊರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿದ ನಂತರ ಸೋಮವಾರ (ಮಾರ್ಚ್‌ 16) ಗುಜರಾತ್‌ನ ಮುಂದ್ರಾ ಬಂದರಿನಲ್ಲಿ ಬಂದಿಳಿದಿದೆ. ಎರಡನೇ ಟ್ಯಾಂಕರ್ ನಂದಾದೇವಿ ಕೂಡ ಹೊರ್ಮುಜ್ ದಾಟಿ ಮಂಗಳವಾರ ಮುಂಬೈನಲ್ಲಿ ಬಂದಿಳಿಯುವ ನಿರೀಕ್ಷೆಯಿದೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ತಿಂಗಳು ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ ನಡೆಸಿ ಯುದ್ಧ ಆರಂಭವಾದ ನಂತರ, ಶಿವಾಲಿಕ್ ಮತ್ತು ನಂದಾದೇವಿ ಹೊರ್ಮುಜ್ ಜಲಸಂಧಿ ದಾಟಿ ಭಾರತಕ್ಕೆ ಬಂದ ಎರಡನೇ ಮತ್ತು ಮೂರನೇ ಹಡಗು ಎನಿಸಿಕೊಂಡಿವೆ. ಕಚ್ಚಾ ತೈಲವನ್ನು ಸಾಗಿಸುತ್ತಿದ್ದ ಮೊದಲನೆಯ ಹಡಗು ಇತ್ತೀಚೆಗಷ್ಟೇ ಭಾರತ ತಲುಪಿತ್ತು.

ಭಾರತಕ್ಕೆ ಬಂದು ತಲುಪಿದ ಶಿವಾಲಿಕ್‌ ಹಡಗು:



92,700 ಮೆಟ್ರಿಕ್ ಟನ್ ಎಲ್‌ಪಿಜಿ

ಶಿವಾಲಿಕ್‌ ಮತ್ತು ನಂದಾದೇವಿ ಹಡಗಿನ ಮೂಲಕ ಬರೋಬ್ಬರಿ 92,700 ಮೆಟ್ರಿಕ್ ಟನ್ ಎಲ್‌ಪಿಜಿ ಭಾರತಕ್ಕೆ ಪೂರೈಕೆಯಾಗಲಿದ್ದು, ಇದರಿಂದ ದೇಶದಲ್ಲಿ ತಲೆದೋರಿರುವ ಅಡುಗೆ ಅನಿಲ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ತೀವ್ರ ರಾಜತಾಂತ್ರಿಕ ಪ್ರಯತ್ನಗಳ ನಂತರ ಭಾರತದ ಟ್ಯಾಂಕರ್‌ಗಳ ಸುರಕ್ಷಿತ ಸಾಗಾಟಕ್ಕೆ ಇರಾನ್‌ ಅನುಮತಿ ನೀಡಿದೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಇರಾನಿನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರೊಂದಿಗೆ ನಾಲ್ಕು ಸುತ್ತಿನ ಮಾತುಕತೆ ನಡೆಸಿದ್ದಲ್ಲದೆ ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಇರಾನಿನ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರೊಂದಿಗೆ ಈ ಚರ್ಚೆ ನಡೆಸಿದ್ದರು.

ಯುದ್ಧ ವಲಯದಿಂದ ಸುರಕ್ಷಿತವಾಗಿ ಹೊರಬಂದ 'ಜಗ್ ಲಾಡ್ಕಿ' ಹಡಗು: ಹೊರ್ಮುಜ್‌ನಲ್ಲಿ ಭಾರತಕ್ಕೆ ರಾಜತಾಂತ್ರಿಕ ಗೆಲುವು

ಜಲಸಂಧಿಯ ಎರಡೂ ಬದಿಗಳಲ್ಲಿ ಈಗಲೂ ಸಾಲುಗಟ್ಟಿ ನಿಂತಿರುವ ಭಾರತೀಯ ಧ್ವಜ ಹೊಂದಿರುವ 10ಕ್ಕೂ ಹೆಚ್ಚು ಇತರ ವಾಣಿಜ್ಯ ಹಡಗುಗಳ ಸಾಗಾಟಕ್ಕೆ ಅನುಮತಿ ನೀಡುವಂತೆ ಭಾರತವು ಇರಾನ್‌ನೊಂದಿಗೆ ಮಾತುಕತೆ ಮುಂದುವರಿಸಿದೆ. ಶಿಪ್ಪಿಂಗ್ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿನ್ಹಾ ಮಾತನಾಡಿ, ʼʼಒಮನ್‌ನಿಂದ ಆಫ್ರಿಕಾಕ್ಕೆ ಗ್ಯಾಸೋಲಿನ್ ಸಾಗಿಸುವ ಭಾರತದ ಧ್ವಜ ಹೊಂದಿರುವ 4ನೇ ಟ್ಯಾಂಕರ್ - ಜಗ್ ಪ್ರಕಾಶ್ ಸಹ ಜಲಸಂಧಿಯ ಪೂರ್ವ ಭಾಗದಿಂದ ಪ್ರಯಾಣ ಬೆಳೆಸಿದೆ'' ಎಂದು ಸುದ್ದಿಗಾರರಿಗೆ ತಿಳಿಸಿದರು.

ಕತಾರ್‌ನಲ್ಲಿರುವ ವಿಶ್ವದ ಅತಿದೊಡ್ಡ ಎಲ್‌ಪಿಜಿ ರಫ್ತು ಕೇಂದ್ರಗಳಲ್ಲಿ ಒಂದಾದ ರಾಸ್‌ ಲಫಾನ್‌ನಲ್ಲಿ ಶಿವಾಲಿಕ್‌ ಮತ್ತು ನಂದಾದೇವಿ ಹಡಗಿಗೆ ಅಡುಗೆ ಅನಿಲ ತುಂಬಿಸಲಾಗಿದೆ. ಇದು ಅಂದಾಜು 65 ಲಕ್ಷ ಗೃಹ ಬಳಕೆಯ ಗ್ಯಾಸ್‌ ಸಿಲಿಂಡರ್‌ನಷ್ಟಾಗಲಿದೆ.

ಇಂದು ಅಥವಾ ನಾಳೆ ಭಾರತೀಯ ಬಂದರು ತಲುಪಲಿದೆ ಎಲ್‌ಪಿಜಿ

ಪಶ್ಚಿಮ ಏಷ್ಯಾದಲ್ಲಿ ವಿಶ್ವದ ಅತ್ಯಂತ ನಿರ್ಣಾಯಕ ಇಂಧನ ನೌಕೆಗಳ ಸಂಚಾರ ಮಾರ್ಗಗಳಲಲಿ ಪ್ರಮುಖವಾಗಿರುವ ಹೊರ್ಮುಜ್‌ ಜಲಸಂಧಿಯನ್ನು ಇರಾನ್‌ ಮುಚ್ಚಿದೆ. ಸರಕು ಸಾಗಣೆ ಹಡಗುಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದು, ಸಂಚರಿಸಲು ಯತ್ನಿಸುವ ನೌಕೆಗಳ ಮೇಲೆ ದಾಳಿ ನಡೆಸುತ್ತಿವೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author