ಹೊರ್ಮುಜ್ ಜಲಸಂಧಿ ಬಿಕ್ಕಟ್ಟಿನ ನಡುವೆಯೂ ಭಾರತಕ್ಕೆ ಗುಡ್‌ನ್ಯೂಸ್; ರಷ್ಯಾದಿಂದ ತೈಲ ಖರೀದಿಸಲು ಅಮೆರಿಕ ಒಪ್ಪಿಗೆ
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಸಂಘರ್ಷಮಯ ಪರಿಸ್ಥಿತಿಯಿಂದಾಗಿ ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ತೈಲ ಕೊರತೆಯ ಆತಂಕವನ್ನು ಎದುರಿಸುತ್ತಿವೆ. ಭಾರತದ ಸಮಸ್ಯೆ ಈಗ ತಾತ್ಕಾಲಿಕ ಪರಿಹಾರ ಕಾಣುವ ಭರವಸೆ ಸಿಕ್ಕಿದೆ. ಸಮುದ್ರದಲ್ಲಿ ಸಿಲುಕಿರುವ ರಷ್ಯಾ ತೈಲವನ್ನು ಖರೀದಿಸಲು ಅಮೆರಿಕವು ಭಾರತಕ್ಕೆ 30 ದಿನಗಳ ವಿನಾಯಿತಿ ನೀಡಿದೆ.
ಸಂಗ್ರಹ ಚಿತ್ರ -
ನವದೆಹಲಿ: ಯುಎಸ್ (US), ಇಸ್ರೇಲ್ (Israel) ಮತ್ತು ಇರಾನ್ (Iran) ನಡುವಿನ ಸಂಘರ್ಷದ ಪರಿಣಾಮ ಮಧ್ಯಪ್ರಾಚ್ಯ (Middle Eastern) ರಾಷ್ಟ್ರಗಳಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ವಿಶ್ವದಾದ್ಯಂತ ತೈಲ ಮಾರುಕಟ್ಟೆಗಳ (oil market) ಮೇಲೆ ಒತ್ತಡ ಹೆಚ್ಚಾಗಿದೆ. ಭಾರತದಲ್ಲೂ ತೈಲ ಕೊರತೆಯ ಆತಂಕ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಇದೀಗ ಸಮುದ್ರದಲ್ಲಿ ಸಿಲುಕಿರುವ ರಷ್ಯಾ ತೈಲ (Russian oil) ಖರೀದಿಗೆ ಭಾರತಕ್ಕೆ 30 ದಿನಗಳ ವಿನಾಯಿತಿಯನ್ನು ಅಮೆರಿಕ ನೀಡಿದೆ. ಅಮೆರಿಕದೊಂದಿಗೆ ಭಾರತ ನಡೆಸಿರುವ ವ್ಯಾಪಾರ ಒಪ್ಪಂದದ ಹಿನ್ನೆಲೆಯಲ್ಲಿ ಭಾರತಕ್ಕೆ ರಷ್ಯಾದ ತೈಲ ಖರೀದಿ ಮಾಡಲು ಅಮೆರಿಕ ಅನುಮತಿ ನೀಡಬೇಕಿದೆ. ಭಾರತಕ್ಕೆ ರಷ್ಯಾ ತೈಲ ಖರೀದಿ ಮಾಡಲು ವಿನಾಯಿತಿ ನೀಡಲಾಗಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಗಳು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಇರಾನ್ ಮೇಲೆ ಅಮೆರಿಕ ನಡೆಸಿರುವ ದಾಳಿಯ ಪರಿಣಾಮ ಭೌಗೋಳಿಕ, ರಾಜಕೀಯ ಉದ್ವಿಗ್ನತೆ ಹೆಚ್ಚಾಗಿದ್ದು, ವ್ಯಾಪಾರ ಸರಕುಗಳ ಪೂರೈಕೆಗೆ ಅಡಚಣೆಗಳು ಎದುರಾಗಿವೆ. ಇದರಿಂದ ಮುಖ್ಯವಾಗಿ ಜಾಗತಿಕ ತೈಲ ಮಾರುಕಟ್ಟೆಗಳ ಮೇಲೆ ಉಂಟಾಗಿರುವ ಒತ್ತಡವನ್ನು ಕಡಿಮೆ ಮಾಡಲು ಪ್ರಸ್ತುತ ಸಮುದ್ರದಲ್ಲಿ ಸಿಲುಕಿರುವ ರಷ್ಯಾದ ತೈಲ ಸರಕುಗಳನ್ನು ಭಾರತಕ್ಕೆ ಮಾರಾಟ ಮಾಡಲು ಅಮೆರಿಕ ಗುರುವಾರ ಅನುಮತಿ ನೀಡಿದೆ.
ನಿತೀಶ್ ಕುಮಾರ್ ನಂತರ ಬಿಹಾರದ ಮುಂದಿನ ಮುಖ್ಯಮಂತ್ರಿ ಯಾರು? ರೇಸ್‌ನಲ್ಲಿರುವ ಪ್ರಮುಖ ನಾಯಕರು ಇವರೇ
ಅಮೆರಿಕ ವಿಧಿಸಿದ ನಿರ್ಬಂಧ ಜಾರಿಗೆ ಬರುವ ಮೊದಲೇ ರಷ್ಯಾದ ತೈಲಗಳು ಟ್ಯಾಂಕರ್‌ಗಳಲ್ಲಿ ಲೋಡ್ ಮಾಡಲಾಗಿತ್ತು. ಆದರೆ ಅಮೆರಿಕ ನಿರ್ಬಂಧಗಳನ್ನು ಬಿಗಿಗೊಳಿಸಿದಾಗ ಖರೀದಿದಾರರಿಲ್ಲದೆ ರಷ್ಯಾದ ತೈಲ ಸಮುದ್ರದಲ್ಲಿ ಸಿಲುಕಿಕೊಂಡಿತ್ತು. ಇದೀಗ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಉದ್ವಿಗ್ನತೆಯ ಪರಿಣಾಮ ಭಾರತಕ್ಕೆ ತೈಲ ಪೂರೈಕೆಯಲ್ಲಿ ಅಡ್ಡಿಯಾಗಿದ್ದು, ಈ ಹಿನ್ನೆಲೆಯಲ್ಲಿ ಸೀಮಿತ ಅವಧಿಯೊಳಗೆ ಭಾರತಕ್ಕೆ ರಷ್ಯಾದ ತೈಲ ಖರೀದಿ ಮಾಡಲು ಅನುಮತಿ ನೀಡಲಾಗಿದೆ.
ಇದನ್ನು ದೃಢಪಡಿಸಿರುವ ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್, ಅಮೆರಿಕದ ಪ್ರಮುಖ ಪಾಲುದಾರ ರಾಷ್ಟ್ರವಾಗಿರುವ ಭಾರತದಲ್ಲಿ ಉಂಟಾಗಿರುವ ತೈಲ ಬಿಕ್ಕಟ್ಟನ್ನು ಕಡಿಮೆ ಮಾಡಲು ತಾತ್ಕಾಲಿಕವಾಗಿ ಭಾರತಕ್ಕೆ ರಷ್ಯಾ ತೈಲ ಖರೀದಿ ಮಾಡಲು ಅನುಮತಿ ನೀಡಲಾಗಿದೆ. ಇದರಿಂದ ಜಾಗತಿಕ ಇಂಧನದ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿರುವ ಇರಾನ್ ನ ಯೋಜನೆಯನ್ನು ವಿಫಲಗೊಳಿಸುವ ಉದ್ದೇಶವಿದೆ. ಮುಂದಿನ ದಿನಗಳಲ್ಲಿ ನವದೆಹಲಿಯು ಅಮೆರಿಕದ ತೈಲ ಖರೀದಿಯನ್ನು ಹೆಚ್ಚಿಸಲಿದೆ ಎಂದು ಅಮೆರಿಕ ನಿರೀಕ್ಷಿಸುತ್ತದೆ ಎಂದು ಹೇಳಿದರು.
ಜಾಗತಿಕವಾಗಿ ಮಾರುಕಟ್ಟೆಯಲ್ಲಿ ತೈಲ ಕೊರತೆಯಾಗದಂತೆ ತಡೆಯಲು ಭಾರತೀಯ ಸಂಸ್ಕರಣಾಗಾರರು ರಷ್ಯಾದ ತೈಲವನ್ನು ಖರೀದಿಸಲು ಅಮೆರಿಕ 30 ದಿನಗಳ ವಿನಾಯಿತಿಯನ್ನು ನೀಡುತ್ತಿದೆ. ಇದು ಈಗಾಗಲೇ ಸಮುದ್ರದಲ್ಲಿರುವ ಸರಕುಗಳಿಗೆ ಮಾತ್ರ ಅನ್ವಯಿಸುತ್ತದೆ. ಇದರಿಂದ ಮಾಸ್ಕೋಗೆ ಆರ್ಥಿಕವಾಗಿ ಹೆಚ್ಚಿನ ಪ್ರಯೋಜನವೇನೂ ಆಗುವುದಿಲ್ಲ ಎಂದರು.
ಅಮೆರಿಕ ನೀಡಿರುವ ವಿನಾಯಿತಿಯ ಕಾರಣದಿಂದ ಭಾರತಕ್ಕೆ ತಾತ್ಕಾಲಿಕವಾಗಿ ಇಂಧನ ಸಮಸ್ಯೆ ಬಗೆ ಹರಿದಂತಾಗುತ್ತದೆ. ಭಾರತದಲ್ಲಿ ಸದ್ಯ 25 ದಿನಗಳ ಬೇಡಿಕೆಯನ್ನು ಪೂರೈಸುವಷ್ಟು ಕಚ್ಚಾ ತೈಲ ಸಂಗ್ರಹವಿದೆ. ಭಾರತವು ಸರಿಸುಮಾರು ಶೇ. 40ರಷ್ಟು ತೈಲವನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಅದರಲ್ಲಿ ಹೆಚ್ಚಿನವು ಹೊರ್ಮುಜ್ ಜಲಸಂಧಿಯ ಮೂಲಕವೇ ಹಾದು ಬರುತ್ತದೆ. ಇದೀಗ ಇರಾನ್ ಈ ದಾರಿಯನ್ನು ನಿರ್ಬಂಧಿಸಿರುವ ಪರಿಣಾಮ ಜಾಗತಿಕ ತೈಲ ಸಾಗಾಟದ ಶೇ. 20ರಷ್ಟು ಮೇಲೆ ಪರಿಣಾಮ ಬೀರಿದೆ.
ರಷ್ಯಾವು 2022 ರಲ್ಲಿ ಉಕ್ರೇನ್ ಮೇಲೆ ದಾಳಿ ನಡೆಸಿದ ಬಳಿಕ ವಿಶ್ವದ ಅತಿದೊಡ್ಡ ಕಚ್ಚಾ ತೈಲ ಆಮದುದಾರರಲ್ಲಿ ಒಂದಾದ ಭಾರತವು ರಷ್ಯಾದ ಪ್ರಮುಖ ತೈಲ ಖರೀದಿದಾರನಾಗಿ ಹೊರಹೊಮ್ಮಿತ್ತು. ಆದರೆ ಅಮೆರಿಕ ರಷ್ಯಾದ ಆದಾಯ ಕಡಿಮೆ ಮಾಡಲು ಭಾರತವು ರಷ್ಯಾದಿಂದ ತೈಲ ಖರೀದಿ ಮಾಡದಂತೆ ಒತ್ತಡ ಬೀರುವ ಪ್ರಯತ್ನವನ್ನು ಮಾಡಿದೆ. ಹೀಗಾಗಿ ಭಾರತ ಈ ವರ್ಷದ ಆರಂಭದಿಂದ ರಷ್ಯಾದ ತೈಲ ಖರೀದಿಗಳನ್ನು ಕಡಿತಗೊಳಿಸಲು ಪ್ರಾರಂಭಿಸಿತು.
ಅಸ್ಸಾಂನಲ್ಲಿ ಸುಖೋಯ್ ಎಸ್‌ಯು 30 MKI ಫೈಟರ್ ಜೆಟ್ ನಾಪತ್ತೆ
ಭಾರತೀಯ ರಾಜ್ಯ ಸಂಸ್ಕರಣಾಗಾರಗಳು ಈಗಾಗಲೇ ವ್ಯಾಪಾರಿಗಳಿಂದ ಸುಮಾರು 20 ಮಿಲಿಯನ್ ಬ್ಯಾರೆಲ್ ರಷ್ಯಾದ ತೈಲವನ್ನು ಖರೀದಿಸಿವೆ ಎನ್ನಲಾಗುತ್ತಿದ್ದು, ಇದರಿಂದ ರಷ್ಯಾದ ಪೂರೈಕೆ ಹಿಂದಿನಂತೆ ಮುಂದುವರಿಯುವ ಸಾಧ್ಯತೆ ಇದೆ. ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ಮಂಗಳೂರು ಸಂಸ್ಕರಣಾಗಾರವು ಕಳೆದ ನವೆಂಬರ್‌ನಲ್ಲಿ ಕೊನೆಯದಾಗಿ ರಷ್ಯಾದ ಕಚ್ಚಾ ತೈಲವನ್ನು ಪಡೆದುಕೊಂಡಿತ್ತು. ಇದೀಗ ರಿಲಯನ್ಸ್ ಇಂಡಸ್ಟ್ರೀಸ್ ಸಹ ರಷ್ಯಾದ ಸರಕುಗಳನ್ನು ತ್ವರಿತಗೊಳಿಸಲು ಖರೀದಿ ಮಾಡಲು ವ್ಯಾಪಾರಿಗಳನ್ನು ಸಂಪರ್ಕಿಸಿದೆ ಎನ್ನಲಾಗಿದೆ.