ಇಂದು ಅಥವಾ ನಾಳೆ ಭಾರತೀಯ ಬಂದರು ತಲುಪಲಿದೆ ಎಲ್‌ಪಿಜಿ
ಲೈಬೀರಿಯಾ ಧ್ವಜದೊಂದಿಗೆ ಸೌದಿ ಅರೇಬಿಯಾದಿಂದ ಹೊರಟಿದ್ದ ತೈಲ ಟ್ಯಾಂಕರ್ ಹೊರ್ಮುಜ್ ಜಲಸಂಧಿ ದಾಟಿ ಬಂದಿದ್ದು, ಮುಂಬೈ ತಲುಪಿದೆ. ಹಡಗು ಟ್ರ್ಯಾಕಿಂಗ್ ದತ್ತಾಂಶದ ಪ್ರಕಾರ ತೈಲ ಟ್ಯಾಂಕರ್ ಸ್ಮಿರ್ನಿ 1 ಮಿಲಿಯನ್ ಬ್ಯಾರೆಲ್‌ಗಳಷ್ಟು ಸೌದಿ ಅರೇಬಿಯನ್ ಕಚ್ಚಾ ತೈಲವನ್ನು ಹೊತ್ತುಕೊಂಡು ಭಾರತದ ಬಂದರು ಸಮೀಪ ಬಂದಿದೆ. ಇನ್ನು ಎಲ್‌ಪಿಜಿ ಹೊತ್ತ ಟ್ಯಾಂಕರ್ ಸೋಮವಾರ ಅಥವಾ ಮಂಗಳವಾರ ಭಾರತೀಯ ಬಂದರು ತಲುಪುವ ಸಾಧ್ಯತೆ ಇದೆ.
ಸಂಗ್ರಹ ಚಿತ್ರ -
ನವದೆಹಲಿ: ಹೊರ್ಮುಜ್ ಜಲಸಂಧಿಯನ್ನು (Strait of Hormuz) ದಾಟಿ ಬಂದಿರುವ ಸೌದಿ ಅರೇಬಿಯಾ ತೈಲ ಟ್ಯಾಂಕರ್ (Saudi Arabian crude oil) ಮುಂಬೈ ತಲುಪಿದೆ. ಹಡಗು ಟ್ರ್ಯಾಕಿಂಗ್ ದತ್ತಾಂಶದ ಪ್ರಕಾರ ಲೈಬೀರಿಯಾ ಧ್ವಜ (Liberia flag) ಹೊಂದಿರುವ ತೈಲ ಟ್ಯಾಂಕರ್ ಸ್ಮಿರ್ನಿರಲ್ಲಿ 1 ಮಿಲಿಯನ್ ಬ್ಯಾರೆಲ್‌ಗಳಷ್ಟು ಸೌದಿ ಅರೇಬಿಯನ್ ಕಚ್ಚಾ ತೈಲವನ್ನು ಭಾರತಕ್ಕೆ ತರಲಾಗಿದೆ. ಮುಂಬೈ (Mumbai port) ಸಮೀಪ ಶನಿವಾರ ತಡರಾತ್ರಿ ಇದು ಲಂಗರು ಹಾಕಿದ್ದು, ಎಲ್‌ಪಿಜಿ (LPG) ಹೊತ್ತ ಟ್ಯಾಂಕರ್ ಸೋಮವಾರ ಅಥವಾ ಮಂಗಳವಾರ ಭಾರತೀಯ ಬಂದರು ತಲುಪುವ ನಿರೀಕ್ಷೆ ಇದೆ.
ಯುದ್ಧಪೀಡಿತ ಹೊರ್ಮುಜ್ ಜಲಸಂಧಿ ದಾಟಿ ಬಂದಿರುವ ಲೈಬೀರಿಯಾ ಧ್ವಜ ಹೊತ್ತ ಕಚ್ಚಾ ತೈಲ ಟ್ಯಾಂಕರ್ ಭಾರತೀಯ ಜಲಪ್ರದೇಶದೊಳಗೆ ಬಂದಿದೆ. ಇದರಲ್ಲಿರುವ ತೈಲವನ್ನು ಒಂದೆರಡು ದಿನಗಳಲ್ಲಿ ಮುಂಬೈ ಬಂದರಿನಲ್ಲಿ ಹೊರತೆಗೆಯಲಾಗುವುದು ಎಂದು ಹಡಗು ಮೂಲಗಳು ತಿಳಿಸಿವೆ.
ಇರಾನ್ ಡ್ರೋನ್ ದಾಳಿ: ದುಬೈ ವಿಮಾನ ನಿಲ್ದಾಣದ ಬಳಿ ಭಾರಿ ಬೆಂಕಿ; ವಿಮಾನಗಳ ಹಾರಾಟ ಸ್ಥಗಿತ
ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಪ್ರಾರಂಭವಾದ ಬಳಿಕ ಹೊರ್ಮುಜ್ ಜಲಸಂಧಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಇಲ್ಲಿ ಸರಕುಗಳನ್ನು ಸಾಗಿಸುವುದನ್ನು ತಡೆ ಹಿಡಿಯಲಾಗಿತ್ತು. ಆದರೆ ಇರಾನ್ ನೊಂದಿಗೆ ನಿರಂತರ ಮಾತುಕತೆ ನಡೆಸಿರುವ ಕೇಂದ್ರ ಸರಕಾರದ ಪ್ರಯತ್ನದ ಫಲವಾಗಿ ಈಗ ಹೊರ್ಮುಜ್ ಜಲಸಂಧಿಯನ್ನು ದಾಟಿ ಕಚ್ಚಾ ತೈಲ ಟ್ಯಾಂಕರ್ ಭಾರತದ ಸಮುದ್ರ ತೀರವನ್ನು ತಲುಪಿದೆ.
ಪರ್ಷಿಯನ್ ಕೊಲ್ಲಿಯನ್ನು ಓಮನ್ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದೊಂದಿಗೆ ಸಂಪರ್ಕಿಸುವ ಇರಾನ್ ಮತ್ತು ಓಮನ್ ನಡುವಿನ ಕಿರಿದಾದ ಜಲಮಾರ್ಗವಾದ ಹೊರ್ಮುಜ್ ಜಲಸಂಧಿಯ ಪ್ರಮುಖ ಕಡಲ ಚಾಕ್‌ಪಾಯಿಂಟ್ ಆಗಿದ್ದು, ಇಲ್ಲಿ ಸರಕು ಸಾಗಣೆ ಬಹುತೇಕ ಸ್ಥಗಿತಗೊಂಡಿದೆ. ಕೇವಲ ಬೆರಳೆಣಿಕೆಯಷ್ಟು ವ್ಯಾಪಾರಿ ಹಡಗುಗಳು ಮಾತ್ರ ಇಲ್ಲಿಂದ ಹೊರಬರಲು ಸಾಧ್ಯವಾಗಿದೆ.
ಸ್ಮಿರ್ನಿ ಎಂಬ ತೈಲ ಟ್ಯಾಂಕರ್ 1 ಮಿಲಿಯನ್ ಬ್ಯಾರೆಲ್ ಸೌದಿ ಅರೇಬಿಯನ್ ಕಚ್ಚಾ ತೈಲವನ್ನು ಹೊತ್ತುಕೊಂಡು ಬಂದಿದ್ದು, ಶನಿವಾರ ತಡರಾತ್ರಿ ಮುಂಬೈ ಸಮೀಪದಲ್ಲಿ ಲಂಗರು ಹಾಕಿದ್ದು, ಬಂದರು ಪ್ರವೇಶಕ್ಕೆ ಕಾಯುತ್ತಿದೆ. ಗ್ರೀಸ್ ಮೂಲದ ಹಡಗು ಸಂಸ್ಥೆಯಿಂದ ನಿರ್ವಹಿಸಲ್ಪಡುವ ಈ ಟ್ಯಾಂಕರ್ ಭಾರತೀಯ ಸಾರ್ವಜನಿಕ ವಲಯದ ಸಂಸ್ಕರಣಾಗಾರಗಳಲ್ಲಿ ಒಂದಕ್ಕೆ ಕಚ್ಚಾ ತೈಲ ಪೂರೈಕೆ ಮಾಡಲಿದೆ.
ಹೊರ್ಮುಜ್ ಜಲಸಂಧಿಯ ಮೂಲಕ ಭಾರತದ ಧ್ವಜ ಹೊಂದಿರುವ ಹಡಗುಗಳು ಸುರಕ್ಷಿತವಾಗಿ ಸಾಗಾಟಕ್ಕೆ ಅನುಕೂಲ ಮಾಡಿಕೊಡುವಂತೆ ಭಾರತ ನಿರಂತರವಾಗಿ ಇರಾನ್ ಜೊತೆ ಮಾತುಕತೆ ನಡೆಸುತ್ತಿದೆ. ಭಾರತಕ್ಕೆ ಇಂಧನ ಸರಬರಾಜು ಮಾಡುವ ವಿದೇಶಿ ಧ್ವಜ ಹೊಂದಿರುವ ಹಡಗುಗಳು ಪರ್ಷಿಯನ್ ಕೊಲ್ಲಿಯಿಂದ ಸುರಕ್ಷಿತ ಮಾರ್ಗದ ಮೂಲಕ ಬರಲಿ ಎಂದು ನವದೆಹಲಿಯು ಇರಾನ್ ಜೊತೆ ಸಂವಹನವನ್ನು ನಡೆಸುತ್ತಿದೆ.
ಭಾರತ ಧ್ವಜ ಹೊಂದಿರುವ ಎರಡು ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಟ್ಯಾಂಕರ್‌ಗಳು ಶುಕ್ರವಾರ ರಾತ್ರಿ ಮತ್ತು ಶನಿವಾರ ಬೆಳಗ್ಗಿನ ನಡುವೆ ಹೊರ್ಮುಜ್ ಜಲಸಂಧಿಯನ್ನು ದಾಟಿ ಬಂದಿದ್ದು, ಸೋಮವಾರ ಮತ್ತು ಮಂಗಳವಾರ ಭಾರತೀಯ ಬಂದರುಗಳನ್ನು ತಲುಪುವ ನಿರೀಕ್ಷೆಯಿದೆ.
ಸೌದಿ ಅರೇಬಿಯನ್ ಮತ್ತು ಇರಾಕ್ ಕಚ್ಚಾ ತೈಲದ ಒಟ್ಟು 3 ಮಿಲಿಯನ್ ಬ್ಯಾರೆಲ್‌ಗಳನ್ನು ಹೊತ್ತ ಎರಡು ಕಚ್ಚಾ ತೈಲ ಟ್ಯಾಂಕರ್‌ಗಳು ಹೊರ್ಮುಜ್ ಜಲಸಂಧಿಯನ್ನು ದಾಟಿದ ಮೇಲೆ ಬುಧವಾರ ಭಾರತೀಯ ಜಲಪ್ರದೇಶಕ್ಕೆ ಬಂದಿದ್ದು, ಆ ಟ್ಯಾಂಕರ್‌ಗಳಲ್ಲಿ ಒಂದು ಲೈಬೀರಿಯಾ ಧ್ವಜ ಮತ್ತು ಇನ್ನೊಂದು ಭಾರತ ಧ್ವಜವನ್ನು ಹೊಂದಿದೆ.
ಇಸ್ರೇಲ್, ಯುಎಸ್ ಮತ್ತು ಇರಾನ್ ಸಂಘರ್ಷದ ಪರಿಣಾಮ ಹೊರ್ಮುಜ್ ಜಲಸಂಧಿಯು ಈಗ ಅಪಾಯಕಾರಿ ಆಗಿರುವುದರಿಂದ ಜಾಗತಿಕವಾಗಿ ಪೂರೈಕೆಯಾಗುವ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲದ ಐದನೇ ಒಂದು ಭಾಗ ಮಾತ್ರ ಇಲ್ಲಿ ಸಾಗಿದೆ. ಈ ಪ್ರದೇಶದಲ್ಲಿ ಕೆಲವು ವ್ಯಾಪಾರಿ ಹಡಗುಗಳು ದಾಳಿಗೆ ಒಳಗಾಗಿವೆ. ಯುಎಸ್, ಇಸ್ರೇಲ್ ಮತ್ತು ಅವರ ಮಿತ್ರರಾಷ್ಟ್ರಗಳಿಗೆ ಸಂಬಂಧಿಸಿದ ಹಡಗುಗಳಿಗೆ ಈ ದಾರಿಯನ್ನು ಮುಚ್ಚಲಾಗಿದೆ ಎಂದು ಇರಾನ್ ಹೇಳಿದ್ದರೂ ಕೂಡ ಯುದ್ಧದ ಬಗ್ಗೆ ತಟಸ್ಥವಾಗಿದ್ದ ದೇಶಗಳ ಕೆಲವು ಹಡಗುಗಳು ದಾಳಿಗೆ ಒಳಗಾಗಿವೆ.. ಇದರಿಂದ ಜಾಗತಿಕ ಇಂಧನ ಪೂರೈಕೆಗೆ ಅಡ್ಡಿಯಾಗಿದ್ದು, ಇಂಧನ ಬೆಲೆಗಳು ಗಗನಕ್ಕೇರಿದೆ.
ಹೇಗೆ ದಾಟಿತು ಸ್ಮಿರ್ನಿ?
ಮಾರ್ಚ್ 5ರಂದು ಸೌದಿ ಅರೇಬಿಯಾದ ರಾಸ್ ತನುರಾದಿಂದ ಹೊರಟಿದ್ದ ಸ್ಮಿರ್ನಿ ಹಡಗು ಪರ್ಷಿಯನ್ ಕೊಲ್ಲಿ ತಲುಪಿದ ಮೇಲೆ ಹೊರ್ಮುಜ್ ಜಲಸಂಧಿಯಲ್ಲಿರುವ ಅಪಾಯವನ್ನು ಪರಿಗಣಿಸಿ ಸ್ವಯಂಚಾಲಿತ ಗುರುತಿನ ವ್ಯವಸ್ಥೆ (AIS) ಟ್ರಾನ್ಸ್‌ಪಾಂಡರ್ ಅನ್ನು ಆಫ್ ಮಾಡಿ ಜಲಮಾರ್ಗ ದಾಟಿದ ಮೇಲೆ ಆನ್ ಮಾಡಿತ್ತು.ಇದನ್ನು ಹಡಗು ಭಾಷೆಯಲ್ಲಿ "ಕತ್ತಲೆಯಾಗುವುದು" ಎನ್ನಲಾಗುತ್ತದೆ. ಅಪಾಯಕಾರಿಯಾಗಿ ಪರಿಗಣಿಸಲ್ಪಟ್ಟಿರುವ ಹೊರ್ಮುಜ್ ಜಲಸಂಧಿ ದಾಟಲು ಹೆಚ್ಚಿನ ಹಡಗುಗಳು ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುತ್ತಿವೆ.
ದೇಶದ ಒಟ್ಟು ತೈಲ ಆಮದುಗಳಲ್ಲಿ ಸುಮಾರು 2.5–2.7 ಮಿಲಿಯನ್ ಬಿಪಿಡಿ ಅಂದರೆ ಸುಮಾರು ಅರ್ಧದಷ್ಟು ಹೊರ್ಮುಜ್ ಜಲಸಂಧಿಯನ್ನು ದಾಟಿ ಬಂದಿದೆ. ಸರಿಸುಮಾರು ಶೇ. 40ರಷ್ಟು ತೈಲವು ಇರಾಕ್, ಸೌದಿ ಅರೇಬಿಯಾ, ಯುಎಇ ಮತ್ತು ಕುವೈತ್‌ನಿಂದ ಪೂರೈಕೆಯಾಗಿದೆ. ಟೆಹರಾನ್ ಮೇಲೆ ಅಮೆರಿಕ ನಿರ್ಬಂಧ ವಿಧಿಸಿರುವ ಕಾರಣದಿಂದ ಭಾರತ ಈಗ ಇರಾನಿನ ತೈಲವನ್ನು ಖರೀದಿಸುತ್ತಿಲ್ಲ.
ಬೆಂಜಮಿನ್ ನೆತನ್ಯಾಹು ಬದುಕಿದ್ದಾರೆ; ಇಸ್ರೇಲ್ ಪ್ರಧಾನಿ ಹಂಚಿಕೊಂಡ ವಿಡಿಯೊ ಮೂಲಕ ಸಿಕ್ತು ಪುರಾವೆ
ಭಾರತದ ಎಲ್‌ಎನ್‌ಜಿ ಆಮದುಗಳಲ್ಲಿ ಸರಿಸುಮಾರು ಶೇ. 60ರಷ್ಟು ಮತ್ತು ಎಲ್‌ಪಿಜಿಯ ಶೇ. 90ರಷ್ಟು ಆಮದು ಕೂಡ ಈ ಜಲಮಾರ್ಗದ ಮೂಲಕವೇ ನಡೆಯುತ್ತದೆ. ಯುದ್ಧದ ಅಪಾಯದ ನಡುವೆಯೂ ಇಂಧನ ಸರಬರಾಜು ಮತ್ತು ಇತರ ಪ್ರಮುಖ ಸರಕುಗಳನ್ನು ಸಾಗಿಸುವ ಹೆಚ್ಚಿನ ಹಡಗುಗಳು ಭಾರತಕ್ಕೆ ಬರುವ ಭರವಸೆಯನ್ನು ಇರಾನ್ ನೀಡಿದೆ ಎನ್ನಲಾಗಿದೆ.