ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರವಾಹದ ಹೊಡೆತಕ್ಕೆ ನಲುಗಿದ ಮಧ್ಯ ಪ್ರದೇಶದಲ್ಲಿ ಮತ್ತೆ ನೆರೆ ಹಾವಳಿ; ಏರುತ್ತಿದೆ ನದಿ ನೀರಿನ ಮಟ್ಟ

Flood Threat in Madhya Pradesh: ಮಧ್ಯ ಪ್ರದೇಶದಲ್ಲಿ ನದಿಯ ನೀರಿನ ಮಟ್ಟ ಮತ್ತೆ ಏರಿರುವುದು ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ವಾರಾಂತ್ಯದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದಾಗಿ ಮನೆಗಳು, ಹೋಟೆಲ್‌ಗಳು, ದೇವಾಲಯಗಳು, ಧರ್ಮಶಾಲೆಗಳು ಮತ್ತು ನೂರಾರು ಅಂಗಡಿಗಳು ಜಲಾವೃತಗೊಂಡಿವೆ ಹಾಗೂ ರಸ್ತೆ ಮತ್ತು ಸೇತುವೆಗಳು ಹಾನಿಗೊಳಗಾಗಿವೆ.

ಮಧ್ಯ ಪ್ರದೇಶದಲ್ಲಿ ಕಂಡು ಬಂದ ಪ್ರವಾಹ

ಭೋಪಾಲ್, ಆ.‌ 31: ದಶಕಗಳಲ್ಲೇ ಅತ್ಯಂತ ಭೀಕರವಾದ ಪ್ರವಾಹದಿಂದ (Flood) ಉಂಟಾದ ಹಾನಿಯಿಂದ ಮಧ್ಯ ಪ್ರದೇಶದ (Madhya Pradesh) ಚಿತ್ರಕೂಟವು ಹೊರಬರುತ್ತಿದ್ದಂತೆ, ಸೋಮವಾರ (ಆ. 31) ಮಂದಾಕಿನಿ ನದಿಯ ನೀರಿನ ಮಟ್ಟವು ಮತ್ತೆ ಏರತೊಡಗಿದೆ. ಇದರಿಂದ ರಾಮಘಾಟ್ ಸುತ್ತಮುತ್ತಲಿನ ಅಂಗಡಿಗಳು ಮತ್ತು ತಗ್ಗು ಪ್ರದೇಶಗಳಿಗೆ ನೀರು ಮತ್ತೆ ನುಗ್ಗಿದೆ. ಹೀಗಾಗಿ ಅಧಿಕಾರಿಗಳು ಅಲ್ಲಿನ ನಿವಾಸಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ನದಿಯ ನೀರಿನ ಮಟ್ಟ ಮತ್ತೆ ಏರಿರುವುದು ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಇಲ್ಲಿ ವಾರಾಂತ್ಯದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದಾಗಿ ಮನೆಗಳು, ಹೋಟೆಲ್‌ಗಳು, ದೇವಾಲಯಗಳು, ಧರ್ಮಶಾಲೆಗಳು ಮತ್ತು ನೂರಾರು ಅಂಗಡಿಗಳು ಜಲಾವೃತಗೊಂಡಿದ್ದವು ಹಾಗೂ ರಸ್ತೆ ಮತ್ತು ಸೇತುವೆಗಳು ಹಾನಿಗೊಳಗಾಗಿದ್ದವು. ನದಿಯ ಸಮೀಪ ವಾಸಿಸುವ ಮತ್ತು ಕೆಲಸ ಮಾಡುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ತಿಳಿಸಿದ್ದಾರೆ.

ಮಧ್ಯ ಪ್ರದೇಶದ ಪೂರ್ವ ಭಾಗದ ಜಲಾನಯನ ಪ್ರದೇಶಗಳಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ವಾರಾಂತ್ಯದಲ್ಲಿ ಚಿತ್ರಕೂಟದಲ್ಲಿ ಮಂದಾಕಿನಿ ನದಿ ಉಕ್ಕಿ ಹರಿಯಿತು. 2003ರ ವಿನಾಶಕಾರಿ ಪ್ರವಾಹದ ಸಮಯದಲ್ಲಿ ದಾಖಲಾಗಿದ್ದ ನೀರಿನ ಮಟ್ಟಕ್ಕಿಂತ ಇದು ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಧ್ಯ ಪ್ರದೇಶ-ಉತ್ತರ ಪ್ರದೇಶ ಗಡಿಯ ಎರಡೂ ಬದಿಗಳಲ್ಲಿರುವ ಪಟ್ಟಣದ ದೊಡ್ಡ ಭಾಗಗಳು ಮುಳುಗಿಹೋಗಿವೆ.

ಭೀಕರ ಪ್ರವಾಹಕ್ಕೆ ಸುತ್ತಮುತ್ತಲ ಕಟ್ಟಡಗಳೆಲ್ಲ ಕುಸಿದರೂ ಗಟ್ಟಿಯಾಗಿ ಉಳಿದ ಮನೆ; ಕಾರಣ ವಿವರಿಸಿದ ತಜ್ಞರು

ರಾಮಘಾಟ್ ಸುತ್ತಮುತ್ತ ಪ್ರವಾಹದ ನೀರು ವೇಗವಾಗಿ ಏರುತ್ತಿದ್ದಂತೆ, ಅನೇಕರು ಚಾವಣಿ ಮತ್ತು ಟೆರೇಸ್‌ ಮೇಲೇರಿದ್ದಾರೆ. ಭಾರತೀಯ ವಾಯುಪಡೆಯ ಎರಡು ಹೆಲಿಕಾಪ್ಟರ್‌ಗಳು, ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF) ತಂಡಗಳು ಮತ್ತು ಇತರ ರಕ್ಷಣಾ ಸಿಬ್ಬಂದಿಯನ್ನು ರಕ್ಷಣಾ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ. ಪ್ರಾಣಭಯದಿಂದ ಟೆರೇಸ್ ಮೇಲೆರಿದ್ದ ಜನರನ್ನು ಐಎಎಫ್ ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಯಿತು.

ರಾಮಘಾಟ್-ನಯಾಗಾಂವ್ ವ್ಯಾಪ್ತಿಯನ್ನು ಹನುಮಾನ್ ಧಾರಾ ಭಾಗದೊಂದಿಗೆ ಸಂಪರ್ಕಿಸುವ ಸುಮಾರು 300 ಮೀಟರ್ ಉದ್ದದ ಸೇತುವೆಯ ದೊಡ್ಡ ಭಾಗವೊಂದು ಪ್ರವಾಹಕ್ಕೆ ಕೊಚ್ಚಿಹೋಗಿದೆ. ಇದು ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶದ ಗಡಿ ಭಾಗಗಳ ನಡುವಿನ ಸಂಪರ್ಕವನ್ನು ಸಂಪೂರ್ಣವಾಗಿ ಕಡಿತಗೊಳಿಸಿದೆ.

ಆರಂಭಿಕ ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಮಧ್ಯ ಪ್ರದೇಶದ ಅಧಿಕಾರಿಗಳು ಹೇಳಿದ್ದರೂ, ಪ್ರವಾಹದಲ್ಲಿ ಇಬ್ಬರು ಮೃತಪಟ್ಟಿದ್ದು, ಮತ್ತೊಬ್ಬ ವ್ಯಕ್ತಿ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

ಸತ್ನಾ ಜಿಲ್ಲೆಯ ಚಿತ್ರಕೂಟ, ಕೋಟರ್ ಮತ್ತು ರಾಂಪುರ ಬಘೇಲನ್ ತಾಲೂಕುಗಳ ಹಲವಾರು ಗ್ರಾಮಗಳು ಉಕ್ಕಿ ಹರಿಯುತ್ತಿರುವ ನದಿಗಳು ಮತ್ತು ನಿರಂತರ ಮಳೆಯಿಂದ ನಲುಗಿದೆ. ಮಂದಾಕಿನಿ ಮತ್ತು ಸೆಮ್ರಾವಲ್ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಮನೆಗಳು, ರಸ್ತೆಗಳು ಮತ್ತು ಬೆಳೆಗಳು ಹಾನಿಗೊಳಗಾಗಿವೆ.

ಪೂರ್ವ ಮಧ್ಯ ಪ್ರದೇಶದಾದ್ಯಂತ ಈ ಅಪಾಯ ಮುಂದುವರಿದಿದ್ದು, ರೇವಾ, ಮೌಗಂಜ್, ಮೈಹಾರ್, ಸಿಧಿ, ಉಮಾರಿಯಾ, ಶಹದೋಲ್, ದಿಂಡೋರಿ, ಅನುಪ್ಪುರ್, ಮಾಂಡ್ಲಾ, ಸಿಯೋನಿ ಮತ್ತು ಬಾಲಘಾಟ್ ಸೇರಿ 11 ಜಿಲ್ಲೆಗಳಿಗೆ ಭಾರಿ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಮುಂದಿನ ಮೂರು ದಿನಗಳಲ್ಲಿ ರಾಜ್ಯದ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.