ಪಟನಾ: ಬಿಹಾರ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಎನ್‌ಡಿಗೆ ದ್ವಿಶತಕ ಭಾರಿಸಿ ಭರ್ಜರಿ ಮುನ್ನಡೆಯನ್ನು ಸಾಧಿಸಿದೆ. Maha Ghatbandhan) ಮಹಾಘಟಬಂಧನ್ (Bihar Election Result 2025) ಮೈತ್ರಿಕೂಟಕ್ಕೆ ಭಾರೀ ಹಿನ್ನಡೆಯುಂಟಾಗಿದ್ದು, ಪ್ರಭಾವಿಗಳೂ ಸಹ ಸೋಲನ್ನು ಕಂಡಿದ್ದಾರೆ. ಮತದಾರರನ್ನು ಸೆಳೆಯಲು ಆರ್‌ಜೆಡಿ (RJD) ವಿಫಲವಾಗಿದೆ. ಹಾಗಾದರೆ ಮೈತ್ರಿ ಕೂಟದ ಪ್ರಣಾಳಿಕೆಗಳು ಸಂಪೂರ್ಣವಾಗಿ ವಿಫಲಗೊಂಡಿದ್ದೆಲ್ಲಿ? ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಭರ್ಜರಿ ಗೆಲುವು ತಂದುಕೊಡಲು ಸಹಕರಿಸಿದ ಅಂಶಗಳಾವುದು ಎಂಬುದರ ಸಂಪೂರ್ಣ ವಿವರ ಇಲ್ಲಿದೆ.
ಮಹಾಘಟಬಂಧನ್ 2025 ರ ವಿಧಾನಸಭಾ ಚುನಾವಣೆಗೆ 'ತೇಜಸ್ವಿ ಪ್ರಾಣ್' (ತೇಜಸ್ವಿಯವರ ಪ್ರತಿಜ್ಞೆ) ಎಂಬ ಶೀರ್ಷಿಕೆಯ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು. ಈ ದಾಖಲೆಯು ಪ್ರತಿ ಕುಟುಂಬಕ್ಕೆ ಒಂದು ಸರ್ಕಾರಿ ಉದ್ಯೋಗ, ಮಹಿಳೆಯರಿಗೆ ಮಾಸಿಕ 2,500 ರೂ. ಭತ್ಯೆ ಮತ್ತು ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಸೇರಿದಂತೆ ಹಲವಾರು ಭರವಸೆಗಳನ್ನು ನೀಡಿತ್ತು. ಆದರೆ ಅದ್ಯಾವುದಕ್ಕೂ ಮತದಾರ ಮಣೆಹಾಕಿಲ್ಲ.
ಪ್ರತಿ ಮನೆಗೆ ಸರ್ಕಾರಿ ಉದ್ಯೋಗ
ಮಹಾಘಟಬಂಧನ್ ಪ್ರತಿ ಮನೆಗೆ ಉದ್ಯೋಗ ಭರವಸೆ ಪ್ರಮುಖವಾಗಿತ್ತು. ಸರ್ಕಾರ ರಚಿಸಿದ 20 ದಿನಗಳಲ್ಲಿ ಪ್ರತಿ ಕುಟುಂಬಕ್ಕೆ ಒಂದು ಸರ್ಕಾರಿ ಉದ್ಯೋಗವನ್ನು ನೀಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿತ್ತು. ಅಧಿಕಾರ ವಹಿಸಿಕೊಂಡ 20 ತಿಂಗಳೊಳಗೆ ಉದ್ಯೋಗ ವಿತರಣೆಯ ಪ್ರಕ್ರಿಯೆಯು ಪ್ರಾರಂಭವಾಗಲಿದೆ ಎಂದು ಭರವಸೆ ನೀಡಲಾಗಿತ್ತು. ಎಲ್ಲಾ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರನ್ನು ಖಾಯಂಗೊಳಿಸುವುದಾಗಿ ಮತ್ತು ಎಲ್ಲಾ ಜೀವಿಕಾ (ಸ್ವಸಹಾಯ ಗುಂಪು) ಮಹಿಳೆಯರನ್ನು ಮಾಸಿಕ 30,000 ರೂ. ವೇತನದೊಂದಿಗೆ ಖಾಯಂ ಸರ್ಕಾರಿ ನೌಕರರನ್ನಾಗಿ ಮಾಡುವುದಾಗಿಯೂ ಹೇಳಲಾಗಿತ್ತು.
ಉಚಿತ ವಿದ್ಯುತ್, ಅಗ್ಗದ ಅನಿಲ
ಮೈತ್ರಿಕೂಟವು ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಮತ್ತು ಬಡ ಕುಟುಂಬಗಳಿಗೆ 500 ರೂ.ಗೆ ಗ್ಯಾಸ್ ಸಿಲಿಂಡರ್‌ಗಳನ್ನು ನೀಡುವುದಾಗಿ ಭರವಸೆ ನೀಡಿತ್ತು. ದೋಷಪೂರಿತ ಸ್ಮಾರ್ಟ್ ಮೀಟರ್‌ಗಳಿಂದ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸುತ್ತೇವೆ ಎಂದು ಭರವಸೆ ನೀಡಲಾಗಿತ್ತು.
ಈ ಸುದ್ದಿಯನ್ನೂ ಓದಿ: Bihar Election Result 2025: ಬಿಹಾರದಲ್ಲಿ ಎನ್‌ಡಿಎ ಗೆಲುವು: ಸಿಎಂ ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್ ಏನು?
ಮಹಿಳಾ, ಸಾಮಾಜಿಕ ಕಲ್ಯಾಣ
ಈ ಪ್ರಣಾಳಿಕೆಯಲ್ಲಿ "ಮಾಯಿ-ಬಹಿನ್ ಮಾನ್ ಯೋಜನೆ" ಸೇರಿದ್ದು, ಇದರ ಅಡಿಯಲ್ಲಿ ಡಿಸೆಂಬರ್ 1 ರಿಂದ ಮಹಿಳೆಯರಿಗೆ ತಿಂಗಳಿಗೆ 2,500 ರೂ., ಅಂದರೆ ಐದು ವರ್ಷಗಳವರೆಗೆ ವಾರ್ಷಿಕ 30,000 ರೂ. ನೀಡಲಿದ್ದೇವೆ ಎಂದು ಘೋಷಿಸಲಾಗಿತ್ತು. ಪ್ರತಿ ವ್ಯಕ್ತಿಗೆ 25 ಲಕ್ಷ ರೂ.ಗಳವರೆಗೆ ಉಚಿತ ಆರೋಗ್ಯ ವಿಮೆ, ವಿಧವೆಯರು ಮತ್ತು ಹಿರಿಯ ನಾಗರಿಕರಿಗೆ ಮಾಸಿಕ 1,500 ರೂ. ಪಿಂಚಣಿ (ವಾರ್ಷಿಕ 200 ರೂ. ಹೆಚ್ಚಳದೊಂದಿಗೆ) ಮತ್ತು ಅಂಗವಿಕಲರಿಗೆ 3,000 ರೂ.ಗಳ ಭರವಸೆ ನೀಡಲಾಗಿತ್ತು.
ರೈತರು, ಅಲ್ಪಸಂಖ್ಯಾತರಿಗೆ ಬೆಂಬಲ
ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ಖಾತರಿಪಡಿಸುವುದು, ಸ್ಥಳೀಯ ಮಾರುಕಟ್ಟೆಗಳು ಮತ್ತು ಮಂಡಿಗಳನ್ನು ಪುನರುಜ್ಜೀವನಗೊಳಿಸುವುದು ಮತ್ತು ದಲಿತರು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರಿಗೆ ಕಲ್ಯಾಣ ಯೋಜನೆಗಳ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಲಾಗುವುದು ಎಂದು ಮೈತ್ರಿಕೂಟ ತಿಳಿಸಿತ್ತು.