ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mahakumbh Stampede: ತಿರುಪತಿ, ಕುಂಭಮೇಳ... ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತ ದುರಂತಗಳಿವು

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿ ಅನೇಕ ಮಂದಿ ಪ್ರಾಣ ಕಳೆದುಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಹೆಚ್ಚಿನ ಜನ ಸಂದಣಿ ಕಂಡು ಬಂದ ಹಿನ್ನೆಲೆಯಲ್ಲಿ ಈ ದುರಂತ ಸಂಭವಿಸಿದೆ. ಇತ್ತೀಚಿನ ವರ್ಷಗಳಲ್ಲಿ ವಿವಿಧ ಧಾರ್ಮಿಕ ಸ್ಥಳಗಳಲ್ಲಿ ನಡೆದ ಕಾಲ್ತುಳಿತ ದುರಂತಗಳ ವಿವರ ಇಲ್ಲಿದೆ.

ವಿವಿಧ ಧಾರ್ಮಿಕ ಸ್ಥಳಗಳಲ್ಲಿ ಸಂಭವಿಸಿದ ಕಾಲ್ತುಳಿತ ದುರಂತಗಳಿವು

ಪ್ರಯಾಗ್‌ರಾಜ್‌ನಲ್ಲಿ ಸಂಭವಿಸಿದ ಕಾಲ್ತುಳಿತ.

Profile Ramesh B Jan 29, 2025 4:44 PM

ಲಖನೌ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ (Prayagraj)ನಲ್ಲಿ ಬುಧವಾರ (ಜ. 29) ಸಂಭವಿಸಿದ ಕಾಲ್ತುಳಿತದಲ್ಲಿ 15ಕ್ಕಿಂತ ಹೆಚ್ಚು ಮಂದಿ ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿರುವ ಶಂಕೆ ವ್ಯಕ್ತವಾಗಿದೆ. ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಮಹಾ ಕುಂಭಮೇಳಕ್ಕೆ (Maha Kumbh mela) ಒಮ್ಮಿಂದೊಮ್ಮೆಲೆ ಸಾಗರೋಪಾದಿಯಲ್ಲಿ ಭಕ್ತರು ಹರಿದುಬಂದ ಹಿನ್ನೆಲೆಯಲ್ಲಿ ಗೊಂದಲ ಉಂಟಾಗಿ ಈ ದುರಂತ ಸಂಭವಿಸಿದೆ. ಇತ್ತೀಚಿನ ವರ್ಷಗಳಲ್ಲಿ ವಿವಿಧ ಧಾರ್ಮಿಕ ಸ್ಥಳಗಳಲ್ಲಿ ಉಂಟಾದ ಪ್ರಮುಖ ಕಾಲ್ತುಳಿತ ಪ್ರಕರಣಗಳ ವಿವರ ಇಲ್ಲಿದೆ.

2025ರ ಜನವರಿ: ಆಂಧ್ರ ಪ್ರದೇಶದಲ್ಲಿರುವ, ದೇಶದ ಪ್ರಮುಖ ದೇವಾಲಯಗಳಲ್ಲಿ ಒಂದಾದ ತಿರುಪತಿಯಲ್ಲಿ ಈ ವರ್ಷದ ಜನವರಿಯಲ್ಲಿ ಉಂಟಾದ ಕಾಲ್ತುಳಿತದಲ್ಲಿ ಕನಿಷ್ಠ 6 ಮಂದಿ ಮೃತಪಟ್ಟು, 35 ಮಂದಿ ಗಾಯಗೊಂಡಿದ್ದರು. ಪಾಸ್‌ ವಿತರಣೆ ವೇಳೆ ಉಂಟಾದ ಗೊಂದಲದಿಂದಾಗಿ ಈ ದುರಂತ ಸಂಭವಿಸಿತ್ತು.

2024ರ ಜುಲೈ: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಕಳೆದ ವರ್ಷದ ಜುಲೈಯಲ್ಲಿ ನಡೆದ ನೂಕುನುಗ್ಗಲಿನಲ್ಲಿ ಕನಿಷ್ಠ 121 ಮಂದಿ ಅಸುನೀಗಿದ್ದರು. ಭೋಲೆ ಬಾಬಾ ಎಂದು ಕರೆಯಲ್ಪಡುವ ಧಾರ್ಮಿಕ ಮುಖಂಡರೊಬ್ಬರ ಸತ್ಸಂಗದಲ್ಲಿ ಕಾಲ್ತುಳಿತ ಸಂಭವಿಸಿ ಈ ದುರಂತ ನಡೆದಿತ್ತು. ಮೃತರ ಪೈಕಿ 106 ಮಹಿಳೆಯರು ಮತ್ತು 7 ಮಕ್ಕಳು ಸೇರಿದ್ದರು.

2022ರ ಜನವರಿ: ಜಮ್ಮು ಮತ್ತು ಕಾಶ್ಮೀರದ ವೈಷ್ಣೋ ದೇವಿ ದೇವಸ್ಥಾನದಲ್ಲಿ ನಡೆದ ಕಾಲ್ತುಳಿತದಲ್ಲಿ ಸುಮಾರು 12 ಭಕ್ತರು ಉಸಿರು ಚೆಲ್ಲಿದ್ದರು. ಸಪೂರವಾದ ದಾರಿಯಲ್ಲಿ ಒಮ್ಮೆಲೆ ಅಧಿಕ ಸಂಖ್ಯೆಯಲ್ಲಿ ಭಕ್ತರು ನುಗ್ಗಿದ್ದರಿಂದ ಅನಾಹುತ ನಡೆದಿತ್ತು.



2013ರ ನವೆಂಬರ್‌: ಮಧ್ಯ ಪ್ರದೇಶದ ರತ್ನಗಢದ ದೇಗುಲದಲ್ಲಿ ನವರಾತ್ರಿ ಆಚರಣೆ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಸುಮಾರು 115 ಮಂದಿ ಮೃತಪಟ್ಟಿದ್ದರು. ಕಾರ್ಯಕ್ರಮದಲ್ಲಿ ಒಟ್ಟು 1,50,000 ಮಂದಿ ಭಾಗವಹಿಸಿದ್ದರು.

2013ರ ಫೆಬ್ರವರಿ: ಉತ್ತರ ಪ್ರದೇಶದ ಕುಂಭಮೇಳದಲ್ಲಿ ನಡೆದ ಈ ದುರಂತದಲ್ಲಿ 36 ಭಕ್ತರು ಉಸಿರು ಚೆಲ್ಲಿದ್ದರು. ಈ ಪೈಕಿ 27 ಮಹಿಳೆಯರು.

ಈ ಸುದ್ದಿಯನ್ನೂ ಓದಿ: ಮಹಾಕುಂಭ ಮೇಳದಲ್ಲಿ ತಾರತಮ್ಯ? ವಿಐಪಿಗಳಿಗೆ ಸ್ಪೆಷಲ್‌ ಟ್ರೀಟ್‌ಮೆಂಟ್‌- ಭಕ್ತರ ಆಕ್ರೋಶ

2011ರ ಜನವರಿ: ಕೇರಳದ ಶಬರಿಮಲೆಯಲ್ಲಿ ಮಕರ ಸಂಕ್ರಾಂತಿ ವೇಳೆ ಸಂಭವಿಸಿದ ಕಾಲ್ತುಳಿತ 106 ಮಂದಿಯನ್ನು ಬಲಿ ಪಡೆದಿತ್ತು. ಅಯ್ಯಪ್ಪ ಸನ್ನಿಧಾನಲ್ಲಿ ನಡೆಯುವ ಮಕರ ಜ್ಯೋತಿಯನ್ನು ವೀಕ್ಷಿಸಿ ಮರಳುತ್ತಿದ್ದ ಭಕ್ತರು ಕಾಲ್ತುಳಿತದಿಂದ ಮೃತಪಟ್ಟಿದ್ದರು. ಮೃತರ ಪೈಕಿ ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಅಂಧ್ರ ಪ್ರದೇಶದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದರು.

2010ರ ಮಾರ್ಚ್‌: ಉತ್ತರ ಪ್ರದೇಶದಲ್ಲೇ ಸಂಭವಿಸಿದ ಮತ್ತೊಂದು ದುರಂತವಿದು. ಧಾರ್ಮಿಕ ಸಮಾರಂಭವೊಂದರಲ್ಲಿ ಆಹಾರ ಮತ್ತು ಬಟ್ಟೆ ವಿತರಿಸುವ ವೇಳೆ ಕಂಡು ಬಂದ ನೂಕುನುಗ್ಗಲಿನಿಂದ ಕಾಲ್ತುಳಿತ ಸಂಭವಿಸಿ 63 ಮಂದಿ ಮೃತಪಟ್ಟಿದ್ದರು.

2008ರ ಸೆಪ್ಟೆಂಬರ್‌: ನವರಾತ್ರಿ ವೇಳೆ ಸಂಭವಿಸಿದ ಮತ್ತೊಂದು ಅಪಘಾತ ಇದು. ರಾಜಸ್ಥಾನದ ಚಾಮುಂಡಿನಗರದಲ್ಲಿ ಆಯೋಜಿಸಿದ್ದ ನವರಾತ್ರಿ ಆಚರಣೆ ವೇಳೆ ಸಂಭವಿಸಿದ ಕಾಲ್ತುಳಿತ 250 ಮಂದಿಯ ಪ್ರಾಣವನ್ನು ಕಸಿದುಕೊಂಡಿತ್ತು.

2008ರ ಆಗಸ್ಟ್‌: ಹಿಮಾಚಲ ಪ್ರದೇಶದ ನೈನಾ ದೇವಿ ದೇಗುಲದಲ್ಲಿ ನಡೆದ ಈ ಅವಘಡದಲ್ಲಿ ಕನಿಷ್ಠ 145 ಮಂದಿ ಉಸಿರು ಚೆಲ್ಲಿದ್ದರು. ಭೂಕುಸಿತ ಸಂಭವಿಸಿದೆ ಎನ್ನುವ ಗಾಳಿಸುದ್ದಿ ಹರಡಿ ನೂಕುನುಗ್ಗಲು ಉಂಟಾಗಿತ್ತು.

2005ರ ಜನವರಿ: ಮಹಾರಾಷ್ಟ್ರದ ಮಂದಾರದೇವಿ ದೇವಸ್ಥಾನದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 265 ಭಕ್ತರು ಅಸುನೀಗಿದ್ದರು. ದೇವಾಲಯಕ್ಕೆ ಸಾಗುವ ಮೆಟ್ಟಿಲು ಜಾರಿ ಕಾಲ್ತುಳಿತ ಸಂಭವಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.