Eknath Shinde: ಸುಪಾರಿ ತೆಗೆದುಕೊಂಡು ಟೀಕಿಸಿದಂತೆ ಕಾಣುತ್ತಿದೆ- ಕುನಾಲ್ ಕಾಮ್ರಾ ಬಗ್ಗೆ ಏಕನಾಥ್ ಶಿಂಧೆ ಫಸ್ಟ್ ರಿಯಾಕ್ಷನ್
Kunal Kamra Row: ಕುನಾಲ್ ಕಮ್ರಾ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ ಅವರು ಏಕನಾಥ್ ಶಿಂಧೆ ಅವರನ್ನು ನಂಬಿಕೆದ್ರೋಹಿ ಎಂದು ಕರೆದಿರುವುದನ್ನು ಕಾಣಬಹುದು. ಕುನಾಲ್ ಕಮ್ರಾ ತಮ್ಮ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಶಿವಸೇನೆಯನ್ನು ಟೀಕಿಸಿದ್ದರು. ಇದೀಗ ಇದೇ ಮೊದಲ ಬಾರಿಗೆ ಏಕನಾಥ್ ಶಿಂಧೆ ಪ್ರತಿಕ್ರಿಯೆ ನೀಡಿದ್ದಾರೆ. ವಿಡಂಬನೆಗೂ ಒಂದು ಮಿತಿ ಇದೆ. ಟೀಕೆ ಮಾಡುವಾಗ ಸಭ್ಯತೆಯನ್ನು ಕಾಪಾಡಿಕೊಳ್ಳಬೇಕು ಎಂದಿದ್ದಾರೆ.


ಮುಂಬೈ: ಕಾಮಿಡಿ ಶೋವೊಂದರಲ್ಲಿ ಖ್ಯಾತ ಸ್ಟ್ಯಾಂಡ್ ಕಾಮಿಯನ್ ಕುನಾಲ್ ಕಾಮ್ರಾ(Kunal Kamra Row) ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ(Eknath Shinde) ಅವರನ್ನು ನಂಬಿಕೆ ದ್ರೋಹಿ ಎಂದು ಕರೆಯುವ ಮೂಲಕ ಹಚ್ಚಿರುವ ವಿವಾದ ಕಿಡಿ ಶಿವಸೇನೆಯನ್ನು ಕೆರಳಿಸಿದೆ. ನಿನ್ನೆ ಕಾರ್ಯಕ್ರಮ ನಡೆದ ಹೊಟೇಲ್ ಅನ್ನು ಶಿವಸೇನೆ ಕಾರ್ಯಕರ್ತರು ಪುಡಿಗಟ್ಟಿದ್ದಾರೆ. ಇದೀಗ ಇದೇ ಮೊದಲ ಬಾರಿಗೆ ಏಕನಾಥ್ ಶಿಂಧೆ ಪ್ರತಿಕ್ರಿಯೆ ನೀಡಿದ್ದಾರೆ. ವಿಡಂಬನೆಗೂ ಒಂದು ಮಿತಿ ಇದೆ. ಟೀಕೆ ಮಾಡುವಾಗ ಸಭ್ಯತೆಯನ್ನು ಕಾಪಾಡಿಕೊಳ್ಳಬೇಕು, ಇಲ್ಲದಿದ್ದರೆ ಆ ಕ್ರಿಯೆಯು ಪ್ರತಿಕ್ರಿಯೆಗೆ ಕಾರಣವಾಗುತ್ತದೆ ಎಂದು ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲರಿಗೂ ವಾಕ್ ಸ್ವಾತಂತ್ರ್ಯವಿದೆ, ನಮಗೆ ವಿಡಂಬನೆ ಅರ್ಥವಾಗುತ್ತದೆ. ಆದರೆ ಅದಕ್ಕೊಂದು ಮಿತಿ ಇರಬೇಕು. ಮತ್ತೊಬ್ಬರ ವಿರುದ್ಧ ಟೀಕೆ ಮಾಡಲು ಸುಪಾರಿ ತೆಗೆದುಕೊಂಡಂತೆ ಭಾಸವಾಗಬಾರದು. ಉದ್ದೇಶಪೂರ್ವಕವಾಗಿಯೇ ಟೀಕಿಸಬೇಕೆಂಬ ಕಾರಣಕ್ಕೆ ಯಾರನ್ನೂ ಟೀಕಿಸಲು ಹೋಗಬಾರದು. ಮಿತಿ ಮೀರಿದರೆ ಇಂತಹದ್ದೇ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿರುತ್ತವೆ. ಇದೇ ವ್ಯಕ್ತಿ (ಕಾಮ್ರಾ) ಭಾರತದ ಸುಪ್ರೀಂ ಕೋರ್ಟ್, ಪ್ರಧಾನಿ ಮತ್ತು ಕೆಲವು ಕೈಗಾರಿಕೋದ್ಯಮಿಗಳ ಬಗ್ಗೆ ಕಾಮೆಂಟ್ ಮಾಡಿದ್ದರು. ಇದು ವಾಕ್ ಸ್ವಾತಂತ್ರ್ಯವಲ್ಲ, ಇದು ಯಾರಿಗೋಸ್ಕರ ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ ಎಂದು ಶಿಂಧೆ ಟಾಂಗ್ ಕೊಟ್ಟರು.
ಈ ಸುದ್ದಿಯನ್ನೂ ಓದಿ: Kunal Kamra: "ಇನ್ನು ಮುಂದೆ ಸ್ಟುಡಿಯೋ ಮುಚ್ಚುತ್ತೇವೆ" ; ಕುನಾಲ್ ವಿವಾದದ ಬಳಿಕ ಹ್ಯಾಬಿಟ್ಯಾಟ್‌ನಿಂದ ಮಹತ್ವದ ನಿರ್ಧಾರ
ಕುನಾಲ್ ಹೇಳಿದ್ದೇನು?
ಕುನಾಲ್ ಕಮ್ರಾ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ ಅವರು ಏಕನಾಥ್ ಶಿಂಧೆ ಅವರನ್ನು ನಂಬಿಕೆದ್ರೋಹಿ ಎಂದು ಕರೆದಿರುವುದನ್ನು ಕಾಣಬಹುದು. ಕುನಾಲ್ ಕಮ್ರಾ ತಮ್ಮ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಶಿವಸೇನೆಯನ್ನು ಟೀಕಿಸಿದ್ದರು. ಕುನಾಲ್ ಕಾಮ್ರಾ ಅವರು ಏಕನಾಥ್ ಶಿಂಧೆ ಮತ್ತು ಶಿವಸೇನೆಯನ್ನು ಟೀಕಿಸುತ್ತಾ, 'ಶಿವಸೇನೆ ಬಿಜೆಪಿಯಿಂದ ಹೊರಬಂದಿತು, ನಂತರ ಶಿವಸೇನೆಯೇ ಶಿವಸೇನೆಯಿಂದ ಹೊರಬಂದಿತು' ಎಂದು ಹೇಳಿದರು. ನಂತರ ಎನ್‌ಸಿಪಿ ಎನ್‌ಸಿಪಿ ತೊರೆದಿತು. ಒಬ್ಬ ಮತದಾರನಿಗೆ 9 ಬಟನ್‌ಗಳನ್ನು ನೀಡಿದರು. ಎಲ್ಲರೂ ಗೊಂದಲಕ್ಕೊಳಗಾದರು. ಇದನ್ನು ಒಬ್ಬ ವ್ಯಕ್ತಿ ಪ್ರಾರಂಭಿಸಿದ್ದು, ಆತನ ಮುಂಬೈನ ಒಂದು ದೊಡ್ಡ ಜಿಲ್ಲೆ ಥಾಣೆಯಿಂದ ಬಂದವರು ಎಂದು ಏಕನಾಥ್ ಶಿಂಧೆಯನ್ನು ಪರೋಕ್ಷವಾಗಿ ಟೀಕಿಸಿದ್ದರು. ಸಾಲದೆನ್ನುವಂತೆ ಸ್ವತಃ ತಾವೇ ಬರೆದ ಹಾಡೊಂದು ಹಾಡಿ ಅದರಲ್ಲಿ ಶಿಂಧೆಯನ್ನು ನಂಬಿಕೆದ್ರೋಹಿ ಎಂದು ಕರೆದಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.
ವಿಡಿಯೊ ವೈರಲಾಗ್ತಿದ್ದಂತೆ ಇದು ಶಿವಸೈನಿಕರನ್ನು ಕೆರಳಿಸಿತು. ಶಿವಸೇನಾ ಕಾರ್ಯಕರ್ತರು ಈ ಶೋ ನಡೆದಿದ್ದ ಹೋಟೆಲ್ ಯುನಿಕಾಂಟಿನೆಂಟಲ್‌ನ ಸಭಾಂಗಣಕ್ಕೆ ತಲುಪಿ ಅಲ್ಲಿ ಕೋಲಾಹಲ ಸೃಷ್ಟಿಸಿದ್ದಾರೆ. ಇಡೀ ಹೊಟೇಲ್‌ನ ಟೇಬಲ್ ಕುರ್ಚಿಗಳನ್ನು ಪುಡಿಗಟ್ಟಿದ್ದಾರೆ.