ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದೇವಸ್ಥಾನದೊಳಗೆ ಪ್ರವೇಶಿಸಿದ್ದೇ ತಪ್ಪಾಯ್ತು; ಮಹಿಳೆಯರಿಗೆ ಚಪ್ಪಲಿ ಹಾರ ಹಾಕಿ, ಅರೆ ನಗ್ನ ಮೆರವಣಿಗೆ ಮಾಡಿದ ಸ್ಥಳೀಯ ಗುಂಪು: ನಾಚಿಕೆಯಿಂದ ತಲೆತಗ್ಗಿಸಿದ ದೇಶ

Ulhasnagar Horror: 21ನೇ ಶತಮಾನದಲ್ಲಿದ್ದೀವಾ ಅಥವಾ ಇನ್ನು 7-8ನೇ ಶತಮಾನದಲ್ಲಿದ್ದೀವಾ ಎಂದು ಅನುಮಾನ ಪಡುವಂತಹ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ. ತಮ್ಮದೇ ಸಮುದಾಯದ ಯುವಕನೊಬ್ಬ ದೇವಸ್ಥಾನ ಪ್ರವೇಶಿಸಿರುವುದನ್ನು ಪ್ರಶ್ನಿಸಿರುವ ಗುಂಪೊಂದು ಮಹಿಳೆಯರಿಗೆ ಚಪ್ಪಲಿ ಹಾರ ಹಾಕಿ ಅರೆನಗ್ನ ಮೆರವಣಿಗೆ ಮಾಡಿ ಮಾನವೀಯತೆಯನ್ನೇ ಮರೆತು ಮೃಗೀಯವಾಗಿ ವರ್ತಿಸಿರುವ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿದೆ.

ಚಾಟ್‌ಜಿಪಿಟಿ ರಚಿತ ಚಿತ್ರ

ಮುಂಬೈ, ಮೇ 16: ದೇಶವೇ ನಾಚಿಕೆಯಿಂದ ತಲೆ ತಗ್ಗಿಸುವ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದ್ದು, ಜಗತ್ತಿನೆದುರು ಭಾರತದ ಮಾನ ಹರಾಜಾಗಿದೆ. ಅಸಮಾನತೆ ಈಗಲೂ ಸಾಮಾಜಿಕ ಪಿಡುಗಾಗಿ ಬೇರುಬಿಟ್ಟಿದೆ ಎನ್ನುವುದನ್ನು ಇದು ಮತ್ತೊಮ್ಮೆ ನೆನಪಿಸಿದೆ (Crime News). ತಮ್ಮದೇ ಸಮುದಾಯದ ಯುವಕನೊಬ್ಬ ದೇವಸ್ಥಾನ ಪ್ರವೇಶಿಸಿರುವುದನ್ನು ಪ್ರಶ್ನಿಸಿರುವ ಗುಂಪೊಂದು ಮಹಿಳೆಯರಿಗೆ ಚಪ್ಪಲಿ ಹಾರ ಹಾಕಿ ಅರೆನಗ್ನ ಮೆರವಣಿಗೆ ಮಾಡಿ ಮಾನವೀಯತೆಯನ್ನೇ ಮರೆತು ಮೃಗೀಯವಾಗಿ ವರ್ತಿಸಿದೆ (Ulhasnagar Horror). ಸದ್ಯ ಈ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ದೇಶದ ಪ್ರಜ್ಞಾವಂತ ನಾಗರಿಕರು ಬೆಚ್ಚಿ ಬಿದ್ದಿದ್ದಾರೆ.

ಮಹಾರಾಷ್ಟ್ರದ ಉಲ್ಲಾಸನಗರದಲ್ಲಿ ಈ ಘಟನೆ ನಡೆದಿದೆ. ಮಹಿಳೆಯರು ಮತ್ತು ಅವರ ಮನೆಯವರು ತಮಗೆ ವಿಧಿಸಿದ್ದ ಸಾಮಾಜಿಕ ಬಹಿಷ್ಕಾರವನ್ನು ವಿರೋಧಿಸಿದ್ದರಿಂದ ಈ ರೀತಿ ಅಮಾನುಷವಾಗಿ ನಡೆದುಕೊಳ್ಳಲಾಗಿದೆ. ಘಟನೆಯ ವಿಡಿಯೊ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದಂತೆ ಕಠಿಣ ಕ್ರಮಕ್ಕೆ ಹಲವರು ಆಗ್ರಹಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯದ ವಿವರ:



ಘಟನೆ ವಿವರ

ಉಲ್ಲಾಸನಗರದ ವಾಘ್ರಿ ಪ್ರದೇಶದಲ್ಲಿ ಈ ಅಮಾನವೀಯ ಘಟನೆ ವರದಿಯಾಗಿದೆ. ರಜಪೂತ್‌ ಜಾತಿ ಪಂಚಾಯತ್‌ ಈ ಹಿಂದೆ ಅದರದ್ದೇ ಸಮುದಾಯದ ಕುಟುಂಬವೊಂದಕ್ಕೆ ದೇವಾಲಯಕ್ಕೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಿತ್ತು. ಆದರೆ ದೇವಾಲಯಕ್ಕ ಭೇಟಿ ನೀಡುವ ಮೂಲಕ ಈ ಕುಟುಂಬ ದೇವರೂ ತಮಗೂ ಸೇರಿದವನು ಎಂದು ಸಮಾನತೆಯ ಪಾಠ ಸಾರಲು ಯತ್ನಿಸಿತ್ತು. ಆದರೆ ಜಾತಿ ಪಂಚಾಯತ್‌ ಮಾತ್ರ ಇದ್ಯಾವುದನ್ನು ಸ್ವೀಕರಿಸುವ ವಿಶಾಲ ಮನೋಭಾವ ಹೊಂದಿರಲಿಲ್ಲ.

ಹೆಣ್ಣು ಹೆತ್ತಿದ್ದಕ್ಕೆ ಸೊಸೆಗೆ ಬೆಂಕಿ ಹಚ್ಚಿದ ಮಾವ; 21ನೇ ಶತಮಾನದಲ್ಲೂ ನಾಚಿಗೇಡಿನ ಕೃತ್ಯ

ಅಂದು ದೇವಸ್ಥಾನದ ಪರಿಸರದಲ್ಲಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂತ್ರಸ್ತ ಕುಟುಂಬದ ಯುವಕನೊಬ್ಬ ದೇಗುಲ ಪ್ರವೇಶಿಸಿದ್ದ. ತನ್ನ ಕುಟುಂಬ ಯಾವುದೇ ತಪ್ಪು ಮಾಡಿಲ್ಲ, ಮತ್ತೆ ತಾವ್ಯಾಕೆ ದೇಗುಲದಿಂದ ಹೊರಗಿರಬೇಕು ಎನ್ನುವುದು ಆತನ ವಾದವಾಗಿತ್ತು. ಆತನ ದೇಗುಲ ಪ್ರವೇಶ ಆ ಗುಂಪಿಗೆ ಇಷ್ಟವಾಗಲಿಲ್ಲ. ಮುಂದೆ ನಡೆದಿದ್ದೇ ಘೋರ ಘಟನೆ.

ಮನೆ ಮೇಲೆ ದಾಳಿ

ರಜಪೂರ್‌ ಸಮುದಾಯದ ಯುವಕ ದೇಗುಲ ಪ್ರವೇಶಿಸಿದ್ದನ್ನು ವಿರೋಧಿಸಿದ ಗುಂಪು ಆತನ ಮನೆ ಮೇಲೆ ದಾಳಿ ನಡೆಸಿತು. ಕಬ್ಬಣದ ರಾಡ್‌, ದೊಣ್ಣೆ ಹಿಡಿದು ಆತನ ಮನೆಯವರನ್ನು ಆ ಗುಂಪು ಥಳಿಸಿತು. ಅದರಲ್ಲೂ ಮಹಿಳೆಯರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿತು. ದೂರು ಕೊಟ್ಟರೆ ಪರಿಣಾಮ ನೆಟ್ಟಗಿರಲ್ಲ ಎಂದು ಬೆದರಿಕೆಯನ್ನೂ ಒಡ್ಡಿತು.

ಅದಾಗ್ಯೂ ತಮಗಾದ ಅನ್ಯಾಯ ವಿರುದ್ಧ ಧ್ವನಿ ಎತ್ತಿದ ಕಾಂತ ಪ್ರೇಮ್‌ ರಜಪೂತ್‌, ಗೀತಾ ರಜಪೂತ್‌ ಮತ್ತು ಅಂಜಲಿ ಕೇಂದ್ರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದರು. ಇದರಿಂದ ಮತ್ತಷ್ಟು ಕೆರಳಿದ ಬಹಿಷ್ಕಾರ ವಿಧಿಸಿದ ಗುಂಪು ಈ ಮಹಿಳೆಯರನ್ನು ರಸ್ತೆಗೆ ಎಳೆದು ಬಟ್ಟೆಯನ್ನು ಹರಿದು ಹಾಕಿ, ಅವರನ್ನು ಅರೆನಗ್ನರನ್ನಾಗಿ ಮಾಡಿದ್ದಲ್ಲೆ ಕೂದಲನ್ನು ಕತ್ತರಿಸಿ ಕ್ರೌರ್ಯ ಮೆರೆಯಿತು. ಬಳಿಕ ಅವರ ಕುತ್ತಿಗೆಗೆ ಚಪ್ಪಲಿ ಹಾರ ಹಾಕಿ ಸುಮಾರು 2 ಕಿ.ಮೀ.ನಷ್ಟು ಮೆರವಣಿಗೆ ನಡೆಸಿತು. ಅಲ್ಲದೆ ಬಲವಂತವಾಗಿ ಹಲವರ ಪಾದ ಸ್ಪರ್ಶಿಸುವಂತೆಯೂ ಮಾಡಲಾಯಿತು.

ಮಹಿಳೆಗೆ ಹೊಡೆದು, ಚಪ್ಪಲಿ ಹಾರ ಹಾಕಿ ಅರೆಬೆತ್ತಲೆ ಮೆರವಣಿಗೆ

ವೈರಲ್‌ ಆಗಿರುವ ವಿಡಿಯೊದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿದ್ದರೂ ನೆರೆದವರು ಸಹಾಯಕ್ಕೆ ಧಾವಿಸದೆ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿರುವುದು ಕಂಡು ಬಂದಿದೆ. ಮೂಲಗಳ ಪ್ರಕಾರ ಅಪರಾಧಿಗಳು ಮತ್ತು ಸಂತ್ರಸ್ತರು ಒಂದೇ ಸಮುದಾಯಕ್ಕೆ ಸೇರಿದವರು. ಸಂತ್ರಸ್ತರ ಕುಟುಂಬ ತಪ್ಪು ಮಾಡಿದೆ ಎಂದು ಆರೋಪಿಸಿ ಮತ್ತೊಂದು ಗುಂಪು ಸಾಮಾಜಿಕ ಬಹಿಷ್ಕಾರ ವಿಧಿಸಿದೆ. ಸದ್ಯ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಮುಖ್ಯ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಪ್ರಕರಣದ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author