ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮಕರ ಸಂಕ್ರಾಂತಿ ಪ್ರಯುಕ್ತ ಊರಿಗೆ ತೆರಳುವವರಿಗೆ ಗುಡ್‌ನ್ಯೂಸ್‌; ಸೌಥ್ ಸೆಂಟ್ರಲ್ ರೈಲ್ವೆಯಿಂದ 150 ವಿಶೇಷ ರೈಲು

Makar Sankranti 2026: ಮಕರ ಸಂಕ್ರಾಂತಿ ಅಥವಾ ಪೊಂಗಲ್ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕೊಂಕಣ ರೈಲು ಮಾರ್ಗದಲ್ಲಿ ವಿಶೇಷ ರೈಲುಗಳನ್ನು ಆರಂಭಿಸಲಾಗುತ್ತಿದೆ. ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು ಸೌಥ್ ಸೆಂಟ್ರಲ್ ರೈಲ್ವೆ ಹಾಗೂ ತೆಲಂಗಾಣದ ರಸ್ತೆ ಮತ್ತು ಕಟ್ಟಡ ಇಲಾಖೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಸಂಕ್ರಾಂತಿಗೆ ಸಂಚರಿಸಲಿವೆ 150 ವಿಶೇಷ ರೈಲುಗಳು

ಸಾಂದರ್ಭಿಕ ಚಿತ್ರ -

Profile
Sushmitha Jain Jan 8, 2026 6:25 PM

ಹೈದರಾಬಾದ್, ಜ. 8: ಮುಂಬರುವ ಮಕರ ಸಂಕ್ರಾಂತಿ (Makar Sankranti) ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರು ಮತ್ತು ವಾಹನಗಳ ಸಂಚಾರ ದಟ್ಟನೆ ಹೆಚ್ಚಾಗುವ ನಿರೀಕ್ಷೆ ಇದ್ದು, ಸೌಥ್ ಸೆಂಟ್ರಲ್ ರೈಲ್ವೆ (South Central Railway) ಹಾಗೂ ತೆಲಂಗಾಣದ ರಸ್ತೆ ಮತ್ತು ಕಟ್ಟಡ ಇಲಾಖೆ (Telangana's Roads and Buildings Department) ಇದಕ್ಕಾಗಿ ಸಿದ್ಧತೆ ನಡೆಸುತ್ತಿದೆ. ಪ್ರಮುಖ ನಗರಗಳನ್ನು ಸಂಪರ್ಕಿಸುವ ವಿಶೇಷ ರೈಲುಗಳು ಮತ್ತು ಹೆದ್ದಾರಿಗಳ ಸಂಚಾರ ಸುಗಮಗೊಳಿಸುವ ಮೂಲಕ ಹಬ್ಬದ ಆಚರಣೆಗೆ ತೆರಳುವ ಲಕ್ಷಾಂತರ ಜನರಿಗೆ ನಿರಾತಂಕದ ಪ್ರಯಾಣ ಸೌಲಭ್ಯ ಒದಗಿಸುವ ಉದ್ದೇಶವನ್ನು ಅಧಿಕಾರಿಗಳು ಹೊಂದಿದ್ದಾರೆ.

ಹಬ್ಬದ ಸಂಚಾರಕ್ಕೆ ಭಾರಿ ರೈಲು ವ್ಯವಸ್ಥೆ

ಸಂಕ್ರಾಂತಿ ಸಂಚಾರದ ಒತ್ತಡ ನಿಭಾಯಿಸಲು ಸುಮಾರು 150 ವಿಶೇಷ ರೈಲುಗಳು ಸಂಚರಿಸಲಿವೆ ಎಂದು ದಕ್ಷಿಣ ಮಧ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಎ. ಶ್ರೀಧರ್ (A Sridhar) ಹೇಳಿದ್ದಾರೆ. ಈ ರೈಲುಗಳು ಮುಖ್ಯವಾಗಿ ತೆಲಂಗಾಣ ಮತ್ತು ಆಂಧ್ರ ಪ್ರದೇಶಗಳಿಗೆ ಸೇವೆ ನೀಡಲಿದ್ದು, ಉತ್ತರ, ಪೂರ್ವ ಮತ್ತು ದಕ್ಷಿಣ ಭಾರತದ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸಲಿವೆ. ಹಬ್ಬದ ಸಮಯದಲ್ಲಿ ಅಪಾರ ಭಕ್ತರನ್ನು ಆಕರ್ಷಿಸುವ ತಿರುಪತಿ ಮತ್ತು ಶಿರಡಿ ನಡುವಿನ ವಿಶೇಷ ರೈಲುಗಳನ್ನೂ ಒಳಗೊಂಡಂತೆ ಒಟ್ಟು 600ಕ್ಕೂ ಹೆಚ್ಚು ರೈಲುಗಳು ಹಬ್ಬದ ಅವಧಿಯಲ್ಲಿ ನಿರಂತರವಾಗಿ ಸಂಚರಿಸಲಿವೆ.

ಅಭಿವೃದ್ಧಿ ಕಾಮಗಾರಿ ಹಿನ್ನೆಲೆ ರೈಲು ನಿಲ್ದಾಣಗಳ ಬದಲಾವಣೆ

ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಬೃಹತ್ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದರಿಂದ, ಹಬ್ಬದ ಸಮಯದಲ್ಲಿ ಪ್ರಯಾಣಿಕರಿಗೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಇದನ್ನು ತಪ್ಪಿಸಲು, ದಕ್ಷಿಣ ಮಧ್ಯ ರೈಲ್ವೆ ಹಲವು ಪ್ರಮುಖ ರೈಲುಗಳನ್ನು ಶಾಶ್ವತವಾಗಿ ಚಾರ್ಲಪಳ್ಳಿ, ಕಾಚಿಗುಡ ಮತ್ತು ಲಿಂಗಂಪಳ್ಳಿ ನಿಲ್ದಾಣಗಳಿಗೆ ಸ್ಥಳಾಂತರಿಸಿದೆ. ಕೆಲವು ರೈಲುಗಳನ್ನು ತಾತ್ಕಾಲಿಕವಾಗಿ ಬೇರೆ ನಿಲ್ದಾಣಗಳಿಗೆ ವರ್ಗಾಯಿಸಲಾಗಿದೆ ಎಂದು ಶ್ರೀಧರ್ ತಿಳಿಸಿದ್ದಾರೆ.

ನಾಳೆ ದಕ್ಷಿಣ ಒಳನಾಡಿನಲ್ಲಿ ಮಳೆ ಮುನ್ಸೂಚನೆ, ಉತ್ತರ ಒಳನಾಡಿಗೆ ಶೀತ ಗಾಳಿ ಎಚ್ಚರಿಕೆ!

ದಿನಕ್ಕೆ ಒಂದು ಲಕ್ಷ ವಾಹನಗಳ ಸಂಚಾರಕ್ಕೆ ಹೆದ್ದಾರಿ ಸಿದ್ಧತೆ

ಸಂಕ್ರಾಂತಿ ಹಬ್ಬಕ್ಕೆ ತೆರಳುವ ಪ್ರಯಾಣಿಕರಿಗೆ ಪ್ರಮುಖ ಮಾರ್ಗವಾಗಿರುವ ಹೈದರಾಬಾದ್–ವಿಜಯವಾಡ ಹೆದ್ದಾರಿಯಲ್ಲಿ ದಿನಕ್ಕೆ ಸುಮಾರು ಒಂದು ಲಕ್ಷ ವಾಹನಗಳು ಸಂಚರಿಸುವ ಸಾಧ್ಯತೆ ಇದೆ ಎಂದು ತೆಲಂಗಾಣದ ರಸ್ತೆ ಮತ್ತು ಕಟ್ಟಡ ಸಚಿವ ಕೊಮಟಿರೆಡ್ಡಿ ವೆಂಕಟ್ ರೆಡ್ಡಿ ಹೇಳಿದ್ದಾರೆ. ಪ್ರಯಾಣಿಕರ ಅನುಕೂಲತೆಯ ದೃಷ್ಟಿಯಿಂದ ತೊಂದರೆರಹಿತ ಪ್ರಯಾಣ ಖಚಿತಪಡಿಸಿಕೊಳ್ಳುವಂತೆ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಸಹ ನಿರ್ದೇಶನ ನೀಡಿದ್ದಾರೆ. ಸಂಚಾರ ದಟ್ಟಣೆ ರಹಿತ ಪ್ರಯಾಣ ಒದಗಿಸಲು ತಾವೇ ಬೈಕ್‌ನಲ್ಲಿ ಸಂಚರಿಸಿ ರಸ್ತೆ ಸ್ಥಿತಿಯನ್ನು ಪರಿಶೀಲಿಸುವುದಾಗಿ ವೆಂಕಟ್ ರೆಡ್ಡಿ ತಿಳಿಸಿದ್ದಾರೆ.

ಟೋಲ್ ಪ್ಲಾಜಾಗಳಲ್ಲಿ ದಟ್ಟಣೆ ತಪ್ಪಿಸಲು ಮುಕ್ತ ಮಾರ್ಗಕ್ಕೆ ಮನವಿ

ಟೋಲ್ ಪ್ಲಾಜಾಗಳಲ್ಲಿ ಸಂಚಾರ ದಟ್ಟಣೆಯನ್ನು ತಡೆಯಲು ರೆಡ್ಡಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದು, ಮುಕ್ತ ಮಾರ್ಗಗಳನ್ನು ಪರಿಚಯಿಸುವಂತೆ ಒತ್ತಾಯಿಸಿದ್ದಾರೆ. ಶೀಘ್ರದಲ್ಲೇ ಗಡ್ಕರಿ ಅವರನ್ನು ಭೇಟಿ ಮಾಡುವ ಉದ್ದೇಶವಿದ್ದು, ಅಗತ್ಯವಿದ್ದರೆ ರಾಜ್ಯ ಸರ್ಕಾರ ಸ್ವಲ್ಪ ಮೊತ್ತ ಪಾವತಿಸಲು ಸಹ ಸಿದ್ಧವಾಗಿದೆ ಎಂದು ವೆಂಕಟ್ ರೆಡ್ಡಿ ಹೇಳಿದರು.