ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

“ನಾವು ಸಾಯುತ್ತಿದ್ದೆವು”: ಕಾರಿನ ಮೇಲೆ ಗೂಂಡಾಗಳು ದಾಳಿ ಮಾಡಿದ್ದಾರೆಂದು ಮಮತಾ ಬ್ಯಾನರ್ಜಿ ಆರೋಪ

Mamata Banerjee Alleges: ತಮ್ಮ ಕಾರಿನ ಮೇಲೆ ಗೂಂಡಾಗಳು ಕಲ್ಲು ಹಾಗೂ ಮಣ್ಣಿನಿಂದ ದಾಳಿ ಮಾಡಿದ್ದಾರೆ ಎಂದು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಈ ವಿಚಾರದ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದ್ದಾರೆ.

ಮಮತಾ ಬ್ಯಾನರ್ಜಿ (ಸಂಗ್ರಹ ಚಿತ್ರ)

ಕೋಲ್ಕತಾ, ಆ. 9: ತಮ್ಮ ಕಾರಿನ ಮೇಲೆ ಗೂಂಡಾಗಳು ದೊಡ್ಡ ದೊಡ್ಡ ಕಲ್ಲುಗಳಿಂದ ದಾಳಿ ಮಾಡಿದ್ದಾರೆ ಎಂದು ಪಶ್ಚಿಮ ಬಂಗಾಳದ (West Bengal) ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ (Mamata Banerjee) ಆರೋಪಿಸಿದ್ದಾರೆ. ಉತ್ತರ 24 ಪರಗಣ ಜಿಲ್ಲೆಯ ಹಲಿಸಹಾರ್‌ನಲ್ಲಿ ಗೂಂಡಾಗಳು ದಾಳಿ ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ. ಪಕ್ಷದ ಮೃತ ಕಾರ್ಯಕರ್ತನ ಕುಟುಂಬವನ್ನು ಭೇಟಿ ಮಾಡಲು ಹೋದಾಗ ಈ ಘಟನೆ ನಡೆದಿದೆ ಎಂದು ಬ್ಯಾನರ್ಜಿ ಹೇಳಿದ್ದಾರೆ.

ತಮ್ಮ ವಾಹನದ ಮೇಲೆ ಕಲ್ಲುಗಳು, ಬೂಟುಗಳು ಮತ್ತು ಮಣ್ಣಿನಿಂದ ದಾಳಿ ನಡೆಸಲಾಗಿದೆ ಎಂದು ಮಮತಾ ಹೇಳಿದ್ದು, ಪೊಲೀಸರ ಮುಂದೆಯೇ ಈ ಘಟನೆ ನಡೆದಿದೆ. ನಾವು ಸಾಯುತ್ತಿದ್ದೆವು ಎಂದು ಹೇಳಿದ್ದಾರೆ. ಈ ವಿಚಾರದ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದ್ದಾರೆ. ಹಲಿಸಹಾರ್ ಪೊಲೀಸರ ಕಸ್ಟಡಿಯಲ್ಲಿ ಅನಾರೋಗ್ಯಕ್ಕೆ ಒಳಗಾದ ನಂತರ ಟಿಎಂಸಿ ಕಾರ್ಯಕರ್ತ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ಕಾರ್ಯಕರ್ತನ ಕುಟುಂಬವನ್ನು ಭೇಟಿ ಮಾಡಲು ತೆರಳಿದ್ದ ಬ್ಯಾನರ್ಜಿ ಪ್ರತಿಭಟನೆಯ ನಡುವೆಯೇ ಸಾಗಬೇಕಾಯಿತು.

ಬಿಜೆಪಿ ಮತ್ತು ಮುಖ್ಯಮಂತ್ರಿ ಸುವೇಂದು ಅಧಿಕಾರಿಯನ್ನು ಟೀಕಿಸಿದ ಮಮತಾ, ಪೊಲೀಸರ ಮೇಲೆ ತನಗೆ ಯಾವುದೇ ಕೋಪವಿಲ್ಲ ಎಂದು ಹೇಳಿದರು. ರಾಜ್ಯ ಸರ್ಕಾರದ ಆದೇಶದ ಮೇರೆಗೆ ಬಲಪ್ರಯೋಗ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಇಲ್ಲಿದೆ ವಿಡಿಯೊ:





ಕೆಲವು ಗೂಂಡಾಗಳು ತಮ್ಮ ವಾಹನದ ಮೇಲೆ ಕಲ್ಲುಗಳನ್ನು ಎಸೆದಿದ್ದಾರೆ. ವಾಹನದ ಮೇಲಿನ ದಾಳಿ ಎಷ್ಟು ತೀವ್ರವಾಗಿತ್ತೆಂದರೆ, ಕಿಟಕಿಗಳು ತೆರೆದಿದ್ದರೆ ನನ್ನ ತಲೆ ಸೀಳಿಹೋಗುತ್ತಿತ್ತು. ನಾವೆಲ್ಲರೂ ಸಾಯುತ್ತಿದ್ದೆವು ಎಂದು ಅವರು ತಿಳಿಸಿದ್ದಾರೆ.

ಜೈಶ್‌-ಎ-ಮೊಹಮ್ಮದ್‌ ಗ್ಯಾಂಗ್ ಜತೆ ಸೇರಿ ಬಂಗಾಳ ಸಚಿವರ ಮಗನನ್ನು ಹನಿಟ್ರ್ಯಾಪ್‌ಗೆ ಕೆಡವಲು ಯೋಜನೆ

ಉತ್ತರ 24 ಪರಗಣದ ಬಿಜ್‌ಪುರದಲ್ಲಿ ಪ್ರತಿಭಟನಾಕಾರರು ಕಳ್ಳ-ಕಳ್ಳ ಎಂಬ ಘೋಷಣೆಗಳನ್ನು ಕೂಗಿದರು. ಮಮತಾ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಕಾರಿನ ಸುತ್ತಲೂ ಜಮಾಯಿಸಿದರು. ಪ್ರತಿಭಟನಾಕಾರರು ಟಿಎಂಸಿ ಅಧ್ಯಕ್ಷೆ ವಾಹನದ ಮೇಲೂ ಮಣ್ಣು ಎರಚಿದ್ದಾರೆ. ಅವರು ಶಾಂತಿಯುತ ವಾತಾವರಣವನ್ನು ಕದಡಲು ಬಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ದಾಳಿಯನ್ನು ಪಿತೂರಿ ಎಂದು ಕರೆದ ಮಮತಾ, ಆ ಪ್ರದೇಶಕ್ಕೆ ಭೇಟಿ ನೀಡುತ್ತಿರುವುದಾಗಿ ಮುಂಚಿತವಾಗಿ ಪೊಲೀಸರಿಗೆ ತಿಳಿಸಿದ್ದೆ ಎಂದು ಹೇಳಿದರು. ಅದರ ಹೊರತಾಗಿಯೂ, ಪೊಲೀಸರು ಯಾವುದೇ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಏನು ನಡೆಯುತ್ತಿದೆ? ಪೊಲೀಸರು ಬಿಜೆಪಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಇದಕ್ಕೆ ಪ್ರತಿಯಾಗಿ, ಮಮತಾ ಉದ್ವಿಗ್ನತೆ ಸೃಷ್ಟಿಸುವ ಉದ್ದೇಶದಿಂದ ಕಾಂಚ್ರಾಪಾರಾಗೆ ಭೇಟಿ ನೀಡಿದ್ದರು ಎಂದು ಬಿಜೆಪಿ ಆರೋಪಿಸಿದೆ. ಅಲ್ಲದೆ, ಆ ಪ್ರದೇಶದಲ್ಲಿ ಅವರ ಉಪಸ್ಥಿತಿಯನ್ನು ಸ್ಥಳೀಯರು ವಿರೋಧಿಸಿ ಪ್ರತಿಭಟನೆ ನಡೆಸಿದ್ದರು ಎಂದು ಬಿಜೆಪಿ ಹೇಳಿದೆ.

ಅಂದಹಾಗೆ, ಮೃತ ಟಿಎಂಸಿ ಕಾರ್ಯಕರ್ತ ಬಿರ್ಜು ಕಿಯೋಟ್ ಅವರನ್ನು ಹಲಿಸಹರ್ ಪೊಲೀಸರು ಸುಲಿಗೆ ಸೇರಿ ಆರೋಪಗಳಿಗೆ ಸಂಬಂಧಿಸಿದಂತೆ ಬಂಧಿಸಿದ್ದರು. ಬಂಧನದ ನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಯಿತು. ಆದರೆ, ಭಾನುವಾರ ಮುಂಜಾನೆ ಅವರು ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂತು. ಪತಿಯನ್ನು ಲಾಕಪ್‌ನಲ್ಲಿ ಥಳಿಸಿ ಕೊಲ್ಲಲಾಗಿದೆ ಎಂದು ಅವರ ಪತ್ನಿ ಆರೋಪಿಸಿದ್ದಾರೆ.