ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಚುನಾವಣೆಯಲ್ಲಿ ಸೋತ ಮಮತಾ ಬ್ಯಾನರ್ಜಿಗೆ ಸ್ವಪಕ್ಷೀಯರಿಂದಲೇ ಮುಖಭಂಗ; ಬೃಹತ್ ಧರಣಿಯಲ್ಲಿ ಐವರು ಶಾಸಕರು, 3 ಸಂಸದರು ಮಾತ್ರ ಭಾಗಿ!

Mamata Banerjee Protest: 2026ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ ತೃಣಮೂಲ ಕಾಂಗ್ರೆಸ್‌ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮತ್ತೆ ಬೀದಿ ಹೋರಾಟಕ್ಕೆ ಮುಂದಾಗಿದ್ದಾರೆ. ಆದರೆ ದೀದಿಗೆ ಮತ್ತೆ ಮುಖಭಂಗವಾಗಿದ್ದು, ಟಿಎಂಸಿಯ 80 ಶಾಸಕರಲ್ಲಿ ಕೇವಲ ಐದು ಮಂದಿ ಮಾತ್ರ ಭಾಗವಹಿಸಿದರು.

ಕೋಲ್ಕತ್ತಾದಲ್ಲಿ ಪ್ರತಿಭಟನೆ ನಡೆಸಿದ ತೃಣಮೂಲ ಕಾಂಗ್ರೆಸ್‌ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ

ಕೋಲ್ಕತ್ತಾ, ಜೂ. 2: ಕಾಂಗ್ರೆಸ್ ಬಿಟ್ಟು ತೃಣಮೂಲ ಕಾಂಗ್ರೆಸ್ ಪಕ್ಷ ಸ್ಥಾಪಿಸಿದ ನಂತರ ಮಮತಾ ಬ್ಯಾನರ್ಜಿ (Mamata Banerjee) ಜನಾಂದೋಲನ ಹಾಗೂ ಬೀದಿ ಚಳುವಳಿ ಮೂಲಕ ಗುರುತಿಸಿಕೊಂಡವರು. ಇದೀಗ 2026ರ ಪಶ್ಚಿಮ ಬಂಗಾಳ (West Bengal) ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ ಮಮತಾ ಬ್ಯಾನರ್ಜಿ ಇದೇ ಮೊದಲ ಬಾರಿಗೆ ಪ್ರತಿಭಟನೆ ನಡೆಸುತ್ತ ಮತ್ತೆ ಬೀದಿ ಹೋರಾಟಕ್ಕೆ ಮುಂದಾಗಿದ್ದಾರೆ. ತಮ್ಮ ಸೋದರಳಿಯ ಅಭಿಷೇಕ್ ಬ್ಯಾನರ್ಜಿ (Abhishek Banerjee) ಸೇರಿ ಪಕ್ಷದ ನಾಯಕರ ಮೇಲೆ ಬಿಜೆಪಿ ದಾಳಿ ನಡೆಸುತ್ತಿದೆ ಮತ್ತು ಬೆದರಿಕೆ ಹಾಕುತ್ತಿದೆ ಎಂದು ಆರೋಪಿಸಿದ ಅವರು ಹೋರಾಡುತ್ತೇನೆ ಅಥವಾ ಸಾಯುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದಾರೆ. ಆದರೆ ಅಚ್ಚರಿ ಎಂದರೆ ಸ್ವಪಕ್ಷೀಯರಿಂದಲೇ ಅವರಿಗೆ ಸಹಕಾರ ದೊರೆಯುತ್ತಿಲ್ಲ.

ಟಿಎಂಸಿಯ 80 ಶಾಸಕರಲ್ಲಿ ಕೇವಲ ಐದು ಮಂದಿ ಮಾತ್ರ ಭಾಗವಹಿಸಿದ್ದ ಪ್ರತಿಭಟನೆಯಲ್ಲಿ ಮಮತಾ ಬ್ಯಾನರ್ಜಿ ಹತಾಶರಾದಂತೆ ಕಂಡು ಬಂದರು. ಕೇಂದ್ರ ಕೋಲ್ಕತ್ತಾದಲ್ಲಿ ಧರಣಿ ನಡೆಸಿದ 71 ವರ್ಷದ ಮಮತಾ, ಚುನಾವಣೆಯಲ್ಲಿ ಮತಗಳನ್ನು ಲೂಟಿ ಮಾಡಿದ ನಂತರ ಬಿಜೆಪಿಯು ಇದೀಗ ತೃಣಮೂಲ ಕಾಂಗ್ರೆಸ್‌ ಪಕ್ಷವನ್ನು ಒಡೆಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

“ನಾನು ಹೋರಾಡುತ್ತೇನೆ ಅಥವಾ ಸಾಯುತ್ತೇನೆ. ನಿಮ್ಮೆಲ್ಲರನ್ನೂ ಅಧಿಕಾರದಿಂದ ತೆಗೆದುಹಾಕುತ್ತೇನೆ” ಎಂದು ಮಮತಾ ಧರಣಿ ಸ್ಥಳದಲ್ಲಿ ಘೋಷಿಸಿದರು. ಮಮತಾ ನಡೆಸಿದ ಈ ಪ್ರತಿಭಟನೆಯನ್ನು ಟಿಎಂಸಿಯ ಕೇವಲ ಐದು ಶಾಸಕರು ಮತ್ತು ಮೂವರು ಸಂಸದರು ಮಾತ್ರ ಬೆಂಬಲಿಸಿದ್ದಾರೆ.

ಅಭಿಷೇಕ್‌ ಬ್ಯಾನರ್ಜಿ ಮೇಲಿನ ದಾಳಿ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ರಾಜಕೀಯ ಜೀವನಕ್ಕೆ ಮತ್ತೊಂದು ತಿರುವಾಗುತ್ತ?

ಸೆಂಟ್ರಲ್ ಕೋಲ್ಕತ್ತಾದ ಎಸ್ಪ್ಲಾನೇಡ್‌ನಲ್ಲಿ ಪ್ರತಿಭಟನಾ ಸ್ಥಳದಲ್ಲಿ ಶಾಸಕರಾದ ಸೋವಂದೇಬ್ ಚಟ್ಟೋಪಾಧ್ಯಾಯ, ನಾನ್ಯಾ ಬಂಡೋಪಾಧ್ಯಾಯ, ಮದನ್ ಮಿತ್ರ, ಅಶೋಕ್ ದೇಬ್ ಮತ್ತು ಅಸಿಮಾ ಪಾತ್ರಾ ಇದ್ದರು. ಡೋಲಾ ಸೇನ್, ಕಲ್ಯಾಣ್ ಬ್ಯಾನರ್ಜಿ ಮತ್ತು ಡೆರೆಕ್ ಒ'ಬ್ರೇನ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಂಸದರು.

ಪಕ್ಷದೊಳಗೆ ಭುಗಿಲೆದ್ದ ಭಿನ್ನಾಭಿಪ್ರಾಯ

ಬಿಜೆಪಿಯಿಂದ ಅನುಭವಿಸಿದ ಭಾರಿ ಸೋಲಿನ ಬಳಿಕ ಮಮತಾ ಬ್ಯಾನರ್ಜಿ ತಮ್ಮ ಪಕ್ಷದ ನಾಯಕರನ್ನು ಮತ್ತು ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಹೋಗಲು ಎಷ್ಟು ಕಷ್ಟಪಡುತ್ತಿದ್ದಾರೆ ಎಂಬುದನ್ನು ಇದು ಸೂಚಿಸುತ್ತದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ. ಪಕ್ಷದೊಳಗಿನ ಭಿನ್ನಾಭಿಪ್ರಾಯ, ಅಸಮಾಧಾನ ಮತ್ತು ಒಳಜಗಳಗಳಿಂದ ತೃಣಮೂಲ ಕಾಂಗ್ರೆಸ್ ಬಳಲುತ್ತಿದ್ದು, ಪಕ್ಷವೇ ಒಡೆದು ಹೋಗುವ ಪರಿಸ್ಥಿತಿಯಲ್ಲಿದೆ ಎಂಬ ಭಾವನೆಯನ್ನು ಇದು ಮೂಡಿಸಿದೆ.

ಶಾಸಕರನ್ನು ಭೇಟಿಯಾದ ಉಚ್ಚಾಟಿತ ಶಾಸಕರು

ಪಕ್ಷದಿಂದ ಉಚ್ಚಾಟನೆಗೊಂಡ ಶಾಸಕರಾದ ರಿತಬ್ರತಾ ಬ್ಯಾನರ್ಜಿ ಮತ್ತು ಸಂದೀಪನ್ ಸಾಹಾ ಕೋಲ್ಕತ್ತಾದ ಎಂಎಲ್‌ಎ ವಸತಿಗೃಹದಲ್ಲಿ ತೃಣಮೂಲ ಕಾಂಗ್ರೆಸ್‌ನ ಹಲವು ಶಾಸಕರನ್ನು ಭೇಟಿಯಾದರು. ಸೋಭಾಂದೇಬ್ ಚಟ್ಟೋಪಾಧ್ಯಾಯ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಅನುಮೋದಿಸುವ ಪತ್ರದಲ್ಲಿ ಹಲವು ಟಿಎಂಸಿ ಶಾಸಕರ ಸಹಿಗಳನ್ನು ನಕಲಿ ಮಾಡಲಾಗಿದೆ ಎಂಬ ಆರೋಪಗಳ ಮಧ್ಯೆ ಈ ಬೆಳವಣಿಗೆ ನಡೆದಿದೆ. ಇದಕ್ಕೂ ಒಂದು ದಿನ ಮೊದಲು, ಮಮತಾ ಬ್ಯಾನರ್ಜಿ ಅವರ ನಿವಾಸದಲ್ಲಿ ನಡೆದ ಸಭೆಗೆ ಟಿಎಂಸಿಯ 80 ಶಾಸಕರ ಪೈಕಿ 60 ಮಂದಿ ಗೈರಾಗಿದ್ದರು.

ಇದಲ್ಲದೆ, ಚುನಾವಣೋತ್ತರ ಹಿಂಸಾಚಾರದ ಸಂತ್ರಸ್ತರನ್ನು ಭೇಟಿ ಮಾಡಲು ಸೋನಾರ್‌ಪುರಕ್ಕೆ ಭೇಟಿ ನೀಡಿದ್ದಾಗ ದಾಳಿಗೊಳಗಾಗಿದ್ದ ಅಭಿಷೇಕ್ ಬ್ಯಾನರ್ಜಿ ಪರ ಮಮತಾ ಬ್ಯಾನರ್ಜಿ ಹೊರತುಪಡಿಸಿ ಯಾವೊಬ್ಬ ಟಿಎಂಸಿ ನಾಯಕರು ಮಾತನಾಡಿಲ್ಲ. ಈ ದಾಳಿಯನ್ನು ಖಂಡಿಸಿಲ್ಲ. ಈಗಾಗಲೇ 100ಕ್ಕೂ ಹೆಚ್ಚು ಕೌನ್ಸಿಲರ್‌ಗಳು ಪಕ್ಷ ತೊರೆದಿದ್ದಾರೆ. ಹಲವು ಸಂಸದರು ತೃಣಮೂಲ ಕಾಂಗ್ರೆಸ್ ನಾಯಕತ್ವದ, ವಿಶೇಷವಾಗಿ ಅಭಿಷೇಕ್ ಬ್ಯಾನರ್ಜಿ ಅವರ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾ ಪಕ್ಷದ ಪ್ರಮುಖ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.