ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸೋದರಳಿಯನ ಮೇಲಿನ ದಾಳಿಗೆ ಖಂಡಿಸಿ ಮಮತಾ ಬ್ಯಾನರ್ಜಿ ಬೆಂಬಲಕ್ಕೆ ನಿಂತ ಇಂಡಿಯಾ ಒಕ್ಕೂಟ

ವಿಧಾನ ಸಭಾ ಚುನಾವಣೆಯಲ್ಲಿ ಸೋಲಿನ ಬಳಿಕ ತೃಣ ಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರಿಂದ ಇಂಡಿಯಾ ಒಕ್ಕೂಟ ಸದಸ್ಯರು ದೂರವಾಗಿದ್ದಾರೆ ಎನ್ನುವ ಊಹಾಪೋಹಗಳಿಗೆ ಇದೀಗ ತೆರೆ ಬಿದ್ದಿದೆ. ಟಿಎಂಸಿ ನಾಯಕ, ಮಮತಾ ಬ್ಯಾನರ್ಜಿ ಅವರ ಸೋದರಳಿಯನ ಮೇಲಿನ ದಾಳಿಯನ್ನು ಇಂಡಿಯಾ ಒಕ್ಕೂಟದ ಸದಸ್ಯರು ಖಂಡಿಸಿ ಮಮತಾ ಅವರ ಬೆಂಬಲಕ್ಕೆ ನಿಂತಿದ್ದಾರೆ ಎಂಬುದನ್ನು ಸಾಬೀತು ಪಡಿಸಿದ್ದಾರೆ.

ಮಮತಾ ಬ್ಯಾನರ್ಜಿಗೆ ಇಂಡಿಯಾ ಒಕ್ಕೂಟದ ಬೆಂಬಲ

ಸಂಗ್ರಹ ಚಿತ್ರ -

ಕೋಲ್ಕತ್ತಾ: ಪಶ್ಚಿಮ ಬಂಗಾಳದ (west bengal) ಮಾಜಿ ಮುಖ್ಯಮಂತ್ರಿ (former cm), ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ (Mamata Banerjee) ಅವರ ಸೋದರಳಿಯ, ಟಿಎಂಸಿ ನಾಯಕನ (TMC leader Abhishek Banerjee) ಮೇಲಿನ ದಾಳಿಯನ್ನು ಇಂಡಿಯಾ ಒಕ್ಕೂಟದ (India bloc) ಸದಸ್ಯರು ಖಂಡಿಸಿದರು. ವಿಧಾನ ಸಭಾ ಚುನಾವಣೆಯ ಸೋಲಿನ ಬಳಿಕ ಮಮತಾ ಬ್ಯಾನರ್ಜಿ ಅವರಿಂದ ಇಂಡಿಯಾ ಒಕ್ಕೂಟ ಸದಸ್ಯರು ದೂರವಾಗಿದ್ದಾರೆ ಎನ್ನುವ ಊಹಾಪೋಹಗಳಿಗೆ ಇದು ತೆರೆ ಎಳೆದಿದ್ದು, ಪಶ್ಚಿಮ ಬಂಗಾಳದಲ್ಲಿ ಇಂಡಿಯಾ ಒಕ್ಕೂಟ ಮತ್ತೆ ಜೀವ ಪಡೆದಿದೆ ಎನ್ನುವುದನ್ನು ಸಾಬೀತು ಪಡಿಸಿದೆ.

ಪಶ್ಚಿಮ ಬಂಗಾಳದ ವಿಧಾನ ಸಭಾ ಚುನಾವಣೆಯಲ್ಲಿ ಭಾರಿ ಹಿನ್ನಡೆ ಉಂಟಾದ ಮೇಲೆ ಇಂಡಿಯಾ ಒಕ್ಕೂಟದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರ ಸ್ಥಾನಮಾನವನ್ನು ಕುಸಿದಿದೆ ಎನ್ನುವ ಊಹಾಪೋಹವೆದ್ದಿತ್ತು. ಆದರೆ ಹಲವಾರು ವಿರೋಧ ಪಕ್ಷದ ನಾಯಕರು ಶನಿವಾರ ಅವರ ಸೋದರಳಿಯ ಮತ್ತು ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಅವರ ಮೇಲಿನ ದಾಳಿಯನ್ನು ಖಂಡಿಸಿ ಅವರ ಬೆಂಬಲಕ್ಕೆ ನಿಂತರು.

ಅಭಿಷೇಕ್ ರಕ್ತ ಹೆಪ್ಪುಗಟ್ಟಿದೆ, ಕೊಲೆ ಮಾಡಲು ಬಿಜೆಪಿ ಸಂಚು ರೂಪಿಸಿದೆ; ಮಮತಾ ವಾಗ್ದಾಳಿ

ವಿಧಾನ ಸಭಾ ಚುನಾವಣೆ ಫಲಿತಾಂಶ ಘೋಷಣೆಯಾದ ಉಂಟಾದ ಹಿಂಸಾಚಾರದಲ್ಲಿ ಸಂತ್ರಸ್ತರಾದವರನ್ನು ಭೇಟಿ ಮಾಡಲು ದಕ್ಷಿಣ 24 ಪರಗಣದ ಸೋನಾರ್‌ಪುರಕ್ಕೆ ತೆರಳಿದ್ದ ಟಿಎಂಸಿ ನಾಯಕ, ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ಮೇಲೆ ಗುಂಪೊಂದು ಹಲ್ಲೆ ನಡೆಸಿತ್ತು. ಈ ದಾಳಿಗೆ ಬಿಜೆಪಿ ಕಾರಣ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದು, ಇದನ್ನು ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಆಡಳಿತ ಪಕ್ಷ ನಿರಾಕರಿಸಿದೆ.

ಈ ಸಂದರ್ಭದಲ್ಲಿ ವಿರೋಧ ಪಕ್ಷಗಳ ನಾಯಕರು ಮಮತಾ ಬ್ಯಾನರ್ಜಿ ಅವರ ಬೆಂಬಲಕ್ಕೆ ನಿಂತು ಒಗ್ಗಟ್ಟು ಪ್ರದರ್ಶಿಸಿದರು. ಈ ದಾಳಿ ಬಿಜೆಪಿ ವಿರುದ್ಧದ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಅನೇಕ ನಾಯಕರು ಆಡಳಿತ ಪಕ್ಷವು ರಾಜಕೀಯ ಹಿಂಸಾಚಾರವನ್ನು ಪೋಷಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಮಲ್ಲಿಕಾರ್ಜುನ್ ಖರ್ಗೆ ಅವರು ದಾಳಿಯನ್ನು ಖಂಡಿಸಿ, ವಿರೋಧ ಪಕ್ಷದ ಪ್ರಮುಖ ನಾಯಕರಿಗೆ ಸಾಕಷ್ಟು ಪೊಲೀಸ್ ರಕ್ಷಣೆಯನ್ನು ಉದ್ದೇಶಪೂರ್ವಕವಾಗಿ ನೀಡಲಾಗಿಲ್ಲ ಎಂದು ಆರೋಪಿಸಿದ್ದಾರೆ. ಅಖಿಲೇಶ್ ಯಾದವ್ ಅವರು ಇದೊಂದು ಪಿತೂರಿ. ಅಶಾಂತಿ ಸೃಷ್ಟಿಸಲು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರು ಈ ಘಟನೆಯು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪಶ್ಚಿಮ ಬಂಗಾಳ ಬಿಜೆಪಿ ಘಟಕದ ಮುಖ್ಯಸ್ಥ ಸಮಿಕ್ ಭಟ್ಟಾಚಾರ್ಯ, ತೃಣಮೂಲ ಕಾಂಗ್ರೆಸ್ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಸಾರ್ವಜನಿಕರ ಕೋಪವನ್ನು ರಾಜಕೀಯ ಪ್ರೇರಿತ ಹಲ್ಲೆ ಎಂದು ತಪ್ಪಾಗಿ ಚಿತ್ರಿಸಲಾಗುತ್ತಿದೆ. ಇದನ್ನು ರಾಜಕೀಯ ಲಾಭಕ್ಕಾಗಿ ತೃಣಮೂಲ ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ ಇದರಲ್ಲಿ ಬಿಜೆಪಿಯ ಕೈವಾಡವಿಲ್ಲ. ಕಳೆದ 15 ವರ್ಷಗಳಿಂದ ಟಿಎಂಸಿ ಹೇಗೆ ಆಡಳಿತ ನಡೆಸುತ್ತಿದೆ ಎಂದು ಜನರಿಗೆ ತಿಳಿದಿದೆ. ಚುನಾವಣಾ ಬಳಿಕ ನಡೆದಿರುವ ಹಿಂಸಾಚಾರದಿಂದ ಬಾಧಿತರಾದ ಕುಟುಂಬಗಳನ್ನು ಪೊಲೀಸರು ಮತ್ತು ಅಧಿಕಾರಿಗಳು ನೋಡಿಕೊಳ್ಳಬೇಕು. ಇದರಲ್ಲಿ ಟಿಎಂಸಿಗೆ ಅಧಿಕಾರ ಸಾಧಿಸುವ ಹಕ್ಕಿಲ್ಲ ಎಂದು ಹೇಳಿದ್ದಾರೆ.

ಏನಾಗಿತ್ತು?

ರಾಜಕೀಯ ಉದ್ವಿಗ್ನತೆಯ ನಡುವೆ ಇತ್ತೀಚೆಗೆ ನಿಧನರಾದ ಟಿಎಂಸಿ ಕಾರ್ಯಕರ್ತನ ಕುಟುಂಬವನ್ನು ಭೇಟಿ ಮಾಡಲು ಅಭಿಷೇಕ್ ಬ್ಯಾನರ್ಜಿ ಸೋನಾರ್‌ಪುರಕ್ಕೆ ತೆರಳಿದ್ದ ವೇಳೆ ಘರ್ಷಣೆ ಉಂಟಾಗಿತ್ತು. ಈ ಸಂದರ್ಭದಲ್ಲಿ ಅಭಿಷೇಕ್ ಬ್ಯಾನರ್ಜಿ ಅವರ ಬೆಂಗಾವಲು ಪಡೆಯ ಮಾರ್ಗದ ಬಳಿ ಗುಂಪೊಂದು ಜಮಾಯಿಸಿ ಅವರ ವಾಹನವನ್ನು ತಡೆದು ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ.

ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಮೇಲೆ ಮೊಟ್ಟೆ, ಕಲ್ಲು ಎಸೆದ ಉದ್ರಿಕ್ತ ಗುಂಪು

ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಅಭಿಷೇಕ್ ಬ್ಯಾನರ್ಜಿ ಅವರನ್ನು ಸುತ್ತುವರಿದ ಜನಸಮೂಹ ಕಳ್ಳ, ಕಳ್ಳ ಎಂಬ ಘೋಷಣೆಗಳನ್ನು ಕೂಗಿ ಅವರ ಮೇಲೆ ಮೊಟ್ಟೆ, ಕಲ್ಲು ಮತ್ತು ಬೂಟುಗಳನ್ನು ಎಸೆದಿದ್ದಾರೆ. ಅವರ ಬಟ್ಟೆ ಹರಿದಿದ್ದು, ರಕ್ಷಣೆಗಾಗಿ ಹೆಲ್ಮೆಟ್ ಹಾಕಿಸಿ ಅವರನ್ನು ಸ್ಥಳದಿಂದ ಕರೆದೊಯ್ಯಲಾಯಿತು. ಪೊಲೀಸರು ಮಧ್ಯಪ್ರವೇಶಿಸಿ ಗುಂಪನ್ನು ಚದುರಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.