ನವದೆಹಲಿ, ಜ. 15: ಜಾರಿ ನಿರ್ದೇಶನಾಲಯ (ED) ಮತ್ತು ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ತೃಣಮೂಲ ಕಾಂಗ್ರೆಸ್ (Trinamool Congress) ಮಧ್ಯೆ ನಡೆಯುತ್ತಿರುವ ಮುಖಾಮುಖಿಗೆ ಸಂಬಂಧಿಸಿದ ವಿಚಾರಣೆಯ ಸಮಯದಲ್ಲಿ ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ಉಂಟಾದ ಅವ್ಯವಸ್ಥೆಯಿಂದ ಅಸಮಾಧಾನಗೊಂಡಿರುವುದಾಗಿ ಸುಪ್ರೀಂ ಕೋರ್ಟ್ (Supreme Court) ಹೇಳಿದೆ. ಇದು ಗಂಭೀರ ವಿಷಯವಾಗಿದ್ದು, ಈ ಸಂಬಂಧ ನ್ಯಾಯಾಲಯವು ನೋಟಿಸ್ ಜಾರಿ ಮಾಡಲು ಉದ್ದೇಶಿಸಿದೆ ಎಂದು ಹೇಳಿದೆ.
ತೃಣಮೂಲ ಕಾಂಗ್ರೆಸ್ ಜತೆ ಕೆಲಸ ಮಾಡುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ ಕಚೇರಿಗಳಲ್ಲಿ ನಡೆದ ತನಿಖೆ ಮತ್ತು ಶೋಧದಲ್ಲಿ ಮಮತಾ ಬ್ಯಾನರ್ಜಿ ಮತ್ತು ಪಶ್ಚಿಮ ಬಂಗಾಳದ ಅಧಿಕಾರಿಗಳು ಹಸ್ತಕ್ಷೇಪ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.
ಐ-ಪಿಎಸಿ ಮೇಲೆ ಇಡಿ ದಾಳಿ; ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ರ‍್ಯಾಲಿ
ಇಡಿ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಬ್ಯಾನರ್ಜಿ ವಿರುದ್ಧ ಕಳ್ಳತನ ಆರೋಪ ಹೊರಿಸಿದರು. ಐಪಿಎಸಿ ಸಹ-ಸಂಸ್ಥಾಪಕ ಪ್ರತೀಕ್ ಜೈನ್ ಅವರ ನಿವಾಸದಿಂದ ಸಾಕ್ಷ್ಯಗಳನ್ನು ಮಮತಾ ಬ್ಯಾನರ್ಜಿ ಸಾಗಿಸಿದ್ದಾರೆ ಎಂದು ಹೇಳಿದರು. ರಾಜ್ಯ ಪೊಲೀಸ್ ಅಧಿಕಾರಿಗಳು ಇಂತಹ ಪ್ರಕರಣಗಳಿಗೆ ನೆರವು ನೀಡಲು ಮತ್ತು ಸಹಾಯ ಮಾಡಲು ಪ್ರೋತ್ಸಾಹಿಸುವ ಸಾಧ್ಯತೆ ಇದೆ ಎಂದು ಹೇಳಿದ ಅವರು, ಪಶ್ಚಿಮ ಬಂಗಾಳದ ಪೊಲೀಸ್ ಮಹಾನಿರ್ದೇಶಕ ರಾಜೀವ್ ಕುಮಾರ್ ಸೇರಿದಂತೆ ಇತರ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಿದರು.
ನ್ಯಾಯಮೂರ್ತಿ ಪ್ರಶಾಂತ್ ಮಿಶ್ರಾ ಮತ್ತು ನ್ಯಾಯಮೂರ್ತಿ ವಿಪುಲ್ ಪಂಚೋಲಿ ಅವರಿದ್ದ ಪೀಠವು ಹೈಕೋರ್ಟ್ ಅನ್ನು ಜಂತರ್ ಮಂತರ್ ಆಗಿ ಪರಿವರ್ತಿಸಲಾಗಿದೆಯೇ ಎಂದು ಪ್ರಶ್ನಿಸಿತು. ಸಾಲಿಸಿಟರ್ ಜನರಲ್ ಮೆಹ್ತಾ, ನಿರ್ದಿಷ್ಟ ಸಮಯಕ್ಕೆ ನ್ಯಾಯಾಲಯಕ್ಕೆ ಬರಲು ವಕೀಲರಿಗೆ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಲಾಗಿತ್ತು. ಅದೇ ಗೊಂದಲಕ್ಕೆ ಕಾರಣವಾಯಿತು ಎಂದು ಹೇಳಿದರು.
ಮಾಬಾಕ್ರಸಿ ಪ್ರಜಾಪ್ರಭುತ್ವದ ಮೇಲೆ ಮೇಲುಗೈ ಸಾಧಿಸಿದಾಗ ಏನಾಗುತ್ತದೆ ಎಂಬುದನ್ನು ಈಗ ನೋಡಿ. ಹೈಕೋರ್ಟ್ ನ್ಯಾಯಾಧೀಶರು ಆದೇಶದಲ್ಲಿ ಏನು ಗಮನಿಸಿದ್ದಾರೆ ಎಂಬುದನ್ನು ಗಮನಿಸಿ. ಅಪಾರ ಸಂಖ್ಯೆಯ ವಕೀಲರು ಸೇರಿ ಗದ್ದಲ ಸೃಷ್ಟಿಸಿದ್ದರು ಎಂದು ಅವರು ಉಲ್ಲೇಖಿಸಿದ್ದಾರೆ. ನ್ಯಾಯಾಲಯದ ವಾತಾವರಣ ವಿಚಾರಣೆಗೆ ಅನುಕೂಲಕರವಾಗಿರಲಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ ಅಂತಾ ಮೆಹ್ತಾ ತಿಳಿಸಿದರು.
ನಂತರದ ವಿಚಾರಣೆಗಳಿಗೆ ಕೋಲ್ಕತ್ತಾ ಹೈಕೋರ್ಟ್ ಪ್ರವೇಶಕ್ಕೆ ನಿರ್ಬಂಧ ವಿಧಿಸಿ, ಪ್ರಕರಣಕ್ಕೆ ಸಂಬಂಧಿಸಿದ ವಕೀಲರಿಗೆ ಮಾತ್ರ ಅವಕಾಶ ನೀಡಿತು. ಶೋಧ ಕಾರ್ಯಾಚರಣೆಗಳ ವೇಳೆ ಯಾವುದೇ ದಾಖಲೆಗಳನ್ನು ಜಪ್ತಿ ಮಾಡಿಲ್ಲ ಎಂದು ಇಡಿ ಸ್ಪಷ್ಟಪಡಿಸಿದ ಬಳಿಕ ಹೈಕೋರ್ಟ್ ತೃಣಮೂಲ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು.
ಮಮತಾ ಬ್ಯಾನರ್ಜಿ ಹೀಗೆ ಮಾಡುತ್ತಿರುವುದು ಇದು ಮೊದಲ ಬಾರಿಯಲ್ಲ ಎಂದು ಮೆಹ್ತಾ ಹೇಳಿದರು. ಈ ಸಮಸ್ಯೆಯನ್ನು ಶಾಶ್ವತವಾಗಿ ಇತ್ಯರ್ಥಪಡಿಸಲು ಮಧ್ಯ ಪ್ರವೇಶಿಸುವಂತೆ ಸುಪ್ರೀಂ ಕೋರ್ಟ್ ಅನ್ನು ಒತ್ತಾಯಿಸಿದರು. ಬ್ಯಾನರ್ಜಿ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ವಿಧಾನಸಭಾ ಚುನಾವಣೆಗೆ ಮುನ್ನ ಜಾರಿ ನಿರ್ದೇಶನಾಲಯ ಬಂಗಾಳಕ್ಕೆ ಹೋಗುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.