Narendra Modi: ಪ್ರಧಾನಿ ಮೋದಿ, ತಾಯಿ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದನೆ; ಘೋಷಣೆ ಕೂಗಿದ್ದವನ ಬಂಧನ
ಬಿಹಾರದಲ್ಲಿ ನಡೆದ ವಿರೋಧ ಪಕ್ಷದ ರ್‍ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ದಿವಂಗತ ತಾಯಿಯ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ವ್ಯಕ್ತಿಯನ್ನು ಗುರುವಾರ ರಾತ್ರಿ ಬಂಧಿಸಲಾಗಿದೆ ಎಂದು ದರ್ಭಾಂಗಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶುಕ್ರವಾರ ತಿಳಿಸಿದ್ದಾರೆ.


ಪಟನಾ: ಬಿಹಾರದಲ್ಲಿ ನಡೆದ ವಿರೋಧ ಪಕ್ಷದ ರ್‍ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಅವರ ದಿವಂಗತ ತಾಯಿಯ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ವ್ಯಕ್ತಿಯನ್ನು ಗುರುವಾರ ರಾತ್ರಿ ಬಂಧಿಸಲಾಗಿದೆ ಎಂದು ದರ್ಭಾಂಗಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶುಕ್ರವಾರ ತಿಳಿಸಿದ್ದಾರೆ. ಇಂಡಿಯಾ ಬ್ಲಾಕ್ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಮೋದಿ ಅವರನ್ನು ನಿಂದಿಸುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ನಂತರ ರಿಜ್ವಿ ಅಲಿಯಾಸ್ ರಾಜಾ ಎಂದು ಗುರುತಿಸಲಾದ ವ್ಯಕ್ತಿಯನ್ನು ಬಂಧಿಸಲಾಗಿದೆ. ಈತ ಬಿಹಾರದ ಸಿಂಗ್ವಾರದ ಭಾಪುರ ಗ್ರಾಮದವನು ಎಂದು ಹೇಳಲಾಗಿದೆ.
ಈ ವರ್ಷದ ಕೊನೆಯಲ್ಲಿ ಬಿಹಾರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಬೈಕ್ ರ್‍ಯಾಲಿ ನಡೆಸಿದ್ದರು. ರಾಹುಲ್ ಗಾಂಧಿಯವರ ಮತದಾರರ ಅಧಿಕಾರ ಯಾತ್ರೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಮತ್ತು ಅವರ ದಿವಂಗತ ತಾಯಿಯನ್ನು ನಿಂದಿಸಿದ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ನಂತರ ರಾಜ್ಯದಲ್ಲಿ ಭಾರಿ ವಿವಾದ ಭುಗಿಲೆದ್ದಿತು. ರಾಹುಲ್ ಗಾಂಧಿಯವರ ಕ್ಷಮೆಯಾಚನೆಯನ್ನು ಕೋರಿ ಬಿಜೆಪಿ ಪಾಟ್ನಾದ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಬಿಹಾರದಲ್ಲಿ ನಡೆದ ಇಂಡಿಯಾ ಬ್ಲಾಕ್ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಾಯಿಯ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ ಆರೋಪವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಖಂಡಿಸಿದ್ದಾರೆ. ಎರಡು ದಿನಗಳ ಹಿಂದೆ ನಡೆದ ಘಟನೆ ಎಲ್ಲರಿಗೂ ನೋವುಂಟು ಮಾಡಿದೆ. ಮೋದಿ ಅವರ ತಾಯಿ ಬಡ ಕುಟುಂಬದಲ್ಲಿ ಜೀವನ ನಡೆಸುತ್ತಿದ್ದರು, ತಮ್ಮ ಮಕ್ಕಳನ್ನು ಮೌಲ್ಯಗಳೊಂದಿಗೆ ಬೆಳೆಸಿದ ರು. ಅವರು ಕೊಟ್ಟ ಮೌಲ್ಯಗಳು ಇಂದು ಮೋದಿ ಅವರನ್ನು ಈ ಸ್ಥಾನಕ್ಕೇರಿಸಿದೆ. ನಿಂದನೀಯ ಪದಗಳನ್ನು ಬಳಸುವುದನ್ನು ಭಾರತದ ಜನರು ಎಂದಿಗೂ ಸಹಿಸುವುದಿಲ್ಲ. ರಾಜಕೀಯ ಜೀವನದಲ್ಲಿ ಇದಕ್ಕಿಂತ ದೊಡ್ಡ ಪತನ ಇನ್ನೊಂದಿಲ್ಲ, ಮತ್ತು ನಾನು ಅದನ್ನು ಬಲವಾಗಿ ಖಂಡಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Amit Shah: ಜೈಲಿಗೆ ಹೋದರೆ ಪ್ರಧಾನಿ ಹುದ್ದೆ ಇಲ್ಲ; ಮಸೂದೆ ಕುರಿತು ಮೋದಿ ನಿರ್ಧಾರವೇನು? ಸತ್ಯ ಬಿಚ್ಚಿಟ್ಟ ಅಮಿತ್ ಶಾ!
ರಾಹುಲ್ ಗಾಂಧಿಯವರ ಬಳಿ ಸ್ವಲ್ಪವಾದರೂ ನಾಚಿಕೆ ಉಳಿದಿದ್ದರೆ, ಅವರು ಮೋದಿ ಜಿ, ಅವರ ದಿವಂಗತ ತಾಯಿ ಮತ್ತು ಈ ದೇಶದ ಜನರ ಕ್ಷಮೆಯಾಚಿಸಬೇಕು ಎಂದು ನಾನು ಒತ್ತಾಯಿಸಲು ಬಯಸುತ್ತೇನೆ. ದೇವರು ಎಲ್ಲರಿಗೂ ಬುದ್ಧಿವಂತಿಕೆಯನ್ನು ನೀಡಲಿ ಎಂದು ಶಾ ಒತ್ತಾಯಿಸಿದರು. ರಾಜಕೀಯದಲ್ಲಿ "ದ್ವೇಷದ ಸಂಸ್ಕೃತಿ"ಯನ್ನು ಹರಡಲು ಕಾಂಗ್ರೆಸ್ ಕಾರಣ ಎಂದು ಅವರು ಟೀಕಿಸಿದರು.