ಭುವನೇಶ್ವರ, ಏ. 28: ಒಡಿಶಾದ (Odisha) ಕಿಯೋಂಜಾರ್ ಜಿಲ್ಲೆಯಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ತನ್ನ ಮೃತ ಸಹೋದರಿಯ ಅಸ್ಥಿಪಂಜರದ ಅವಶೇಷಗಳನ್ನು ಭುಜದ ಮೇಲೆ ಹೊತ್ತುಕೊಂಡು, ಬಿಸಿಲಿನಲ್ಲಿ 3 ಕಿಲೋ ಮೀಟರ್ ನಡೆದು ಬ್ಯಾಂಕಿಗೆ ಹೋಗಿ, ಆಕೆಯ ಖಾತೆಯಿಂದ 19,300 ರುಪಾಯಿ ಪಡೆಯಲು ಮುಂದಾಗಿದ್ದಾನೆ. ಈ ಘಟನೆಯು ನಮ್ಮ ವ್ಯವಸ್ಥೆಯನ್ನೇ ಅಣಕಿಸುವಂತಿದೆ.
ಜಿತು ಮುಂಡಾ ಎಂಬ ವ್ಯಕ್ತಿ, ಕಿಯೋಂಜಾರ್‌ನ ಡಯಾನಾಲಿ ಗ್ರಾಮದವರು. ಅವರ ಸಹೋದರಿ ಕಾಕ್ರಾ ಮುಂಡಾ, ಮಲ್ಲಿಪಾಸಿಯ ಒಡಿಶಾ ಗ್ರಾಮೀಣ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿದ್ದರು. ಕಾಕ್ರಾ ಎರಡು ತಿಂಗಳ ಹಿಂದೆ ನಿಧನರಾದರು. ಆಕೆಯ ಪತಿ ಮತ್ತು ಏಕೈಕ ಮಗು ಮೊದಲೇ ಮೃತಪಟ್ಟಿದ್ದರು.
ಜಿತು ಅವರ ಏಕೈಕ ಸಹೋದರ. ಹೀಗಾಗಿ ಜಿತು ತನ್ನ ಸಹೋದರಿಯ ಖಾತೆಯಲ್ಲಿ ಉಳಿದಿರುವ 19,300 ರುಪಾಯಿ ಹಿಂಪಡೆಯಲು ಬ್ಯಾಂಕ್‌ಗೆ ತೆರಳಿದಾಗ, ಅದನ್ನು ವಾಪಾಸ್ ಕೊಡಲು ವ್ಯವಸ್ಥಾಪಕರು ನಿರಾಕರಿಸಿದರು. ಖಾತೆದಾರರು ಹಾಜರಿರಬೇಕು ಅಥವಾ ಕಾನೂನುಬದ್ಧ ಉತ್ತರಾಧಿಕಾರಿ ದಾಖಲೆ ಒದಗಿಸಬೇಕು ಎಂದು ಹೇಳಿದರು.
ವಿಡಿಯೊ ನೋಡಿ:
ಶಿಕ್ಷಣವಿಲ್ಲದ ಬುಡಕಟ್ಟು ಜನಾಂಗದ ಜಿತು ಬಳಿ ಮರಣ ಪ್ರಮಾಣಪತ್ರ ಅಥವಾ ಉತ್ತರಾಧಿಕಾರ ಪತ್ರ ಇರಲಿಲ್ಲ. ಹೀಗಾಗಿ ಇದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೆ ಅಸಹಾಯಕರಾಗಿ ಹಿಂತಿರುಗಿದರು. ಮನೆಗೆ ಮರಳಿದ ಜಿತು, ನೇರವಾಗಿ ಹೋದರಿಯ ಅಂತ್ಯಕ್ರಿಯೆ ಸ್ಥಳಕ್ಕೆ ಹೋದರು. ತನ್ನ ಸಹೋದರಿಯ ಅವಶೇಷಗಳನ್ನು ಹೊರತೆಗೆದು, ಅಸ್ಥಿಪಂಜರವನ್ನು ಬಟ್ಟೆಯಲ್ಲಿ ಸುತ್ತಿ, ಬಿರು ಬಿಸಿಲಿನಲ್ಲೂ 3 ಕಿ.ಮೀ. ನಡೆದುಕೊಂಡು ಬ್ಯಾಂಕಿಗೆ ತೆರಳಿದರು.
ಬೆಂಗಳೂರು ಗೂಗಲ್ ಕ್ಯಾಂಪಸ್‌ನಲ್ಲಿ ಮೊಮ್ಮಗನ ಜತೆ ಕಾಲ ಕಳೆದ ಅಜ್ಜ; ವಿಡಿಯೊ ಇಲ್ಲಿದೆ
ಜಿತು ಬ್ಯಾಂಕನ್ನು ತಲುಪಿದ ತಕ್ಷಣ, ಆ ದೃಶ್ಯ ಸ್ಥಳೀಯರನ್ನು ದಿಗ್ಭ್ರಮೆಗೊಳಿಸಿತು. ಗ್ರಾಮಸ್ಥರು ಬ್ಯಾಂಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬಡವನೊಬ್ಬ ತನ್ನ ಸ್ವಂತ ಹಣವನ್ನು ಪಡೆಯುವುದು ಇಷ್ಟೊಂದು ಕಷ್ಟವೇ? ಎಂದು ಪ್ರಶ್ನಿಸಿದರು. ಬ್ಯಾಂಕ್ ಸಿಬ್ಬಂದಿಯೇ ಪರಿಶೀಲಿಸಬಹುದಿತ್ತು ಅಥವಾ ಸ್ಥಳಕ್ಕೆ ಭೇಟಿ ನೀಡಬಹುದಿತ್ತು ಎಂದು ಸ್ಥಳೀಯರು ಹೇಳಿದರು.
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ತಲುಪಿ, ಜಿತು ಅವರನ್ನು ಸಮಾಧಾನಪಡಿಸಿದರು. ಪ್ರಕರಣವನ್ನು ಮಾನವೀಯ ನೆಲೆಯಲ್ಲಿ ನಿಭಾಯಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದು, ಬ್ಯಾಂಕಿನಿಂದ ಪ್ರತಿಕ್ರಿಯೆ ಕೋರಿದ್ದಾರೆ.