ಕಲ್ಯಾಣ್: ಹಣ ಮರುಪಾವತಿ ವಿಚಾರದಲ್ಲಿ ಉಂಟಾದ ಜಗಳದಲ್ಲಿ ವ್ಯಕ್ತಿಯೊಬ್ಬ ಅಂಗಡಿ ವ್ಯಾಪಾರಿಗೆ ಬೆದರಿಕೆ ಹಾಕುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಮಹಾರಾಷ್ಟ್ರದ ಕಲ್ಯಾಣ್‌ನಲ್ಲಿ ಈ ಘಟನೆ ನಡೆದಿದೆ. ಅಂಗಡಿಯೊಳಗೆ ಅಳವಡಿಸಲಾದ ಸಿಸಿಟಿವಿ ಕ್ಯಾಮರಾದಲ್ಲಿ ಘಟನೆ ಸೆರೆಯಾಗಿದ್ದು, ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಇದೀಗ ಭಾರಿ ವೈರಲ್(Viral Video) ಆಗುತ್ತಿದೆ.
ಯುವತಿಯೊಬ್ಬರು ಕಲ್ಯಾಣ್‍ನ ಪ್ರಸಿದ್ಧ ಉಡುಪು ಅಂಗಡಿಯಲ್ಲಿ ಲೆಹೆಂಗಾ ಖರೀದಿಸಿದ್ದರು. ಇದನ್ನು ಹಿಂತಿರುಗಿಸಲು ಮತ್ತು ಹಣಮರುಪಾವತಿ ಮಾಡುವಂತೆ ಕೇಳಿಕೊಳ್ಳಲು ಆಕೆಯ ಗೆಳೆಯ ಅಂಗಡಿಗೆ ಬಂದಿದ್ದಾನೆ. ಆದರೆ, ಅಂಗಡಿಯವರು ಹಣ ಮರುಪಾವತಿ ಮಾಡುವುದಿಲ್ಲ, ಬದಲಾಗಿ ಬೇರೆ ಲೆಹೆಂಗಾ ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ. ಇದಕ್ಕೊಪ್ಪದ ವ್ಯಕ್ತಿ ಅಂಗಡಿಯವರ ಜೊತೆ ಜಗಳವಾಡಿದ್ದಾನೆ. ಜಗಳ ತಾರಕಕ್ಕೇರಿದ ನಂತರ ಆ ವ್ಯಕ್ತಿ ಚಾಕುವಿನಿಂದ ಲೆಹೆಂಗಾ ಮತ್ತು ಬ್ಲೌಸ್ ಕತ್ತರಿಸುವುದನ್ನು ವಿಡಿಯೊದಲ್ಲಿ ಕಾಣಬಹುದು. ಈ ಘಟನೆ ಜುಲೈ 19ರ ಶನಿವಾರ ಸಂಜೆ 6 ಗಂಟೆ ಸುಮಾರಿಗೆ ನಡೆದಿದ್ದು, ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಆರೋಪಿಯನ್ನು ಸುಮಿತ್ ಸಯಾನಿ ಎಂದು ಗುರುತಿಸಲಾಗಿದೆ.
ಸಿಸಿಟಿವಿ ದೃಶ್ಯಾವಳಿ ವಿಡಿಯೊ ಇಲ್ಲಿದೆ:
ವರದಿಗಳ ಪ್ರಕಾರ, ಕಲ್ಯಾಣ್‌ನ ಪ್ರಸಿದ್ಧ ಉಡುಪು ಶೋ ರೂಂನಲ್ಲಿ ಈ ಘಟನೆ ನಡೆದಿದೆ. 32,000 ರೂ. ಲೆಹೆಂಗಾ ಮರುಪಾವತಿ ವಿವಾದದಿಂದ ಕೋಪಗೊಂಡ ವ್ಯಕ್ತಿ, ಚಾಕುವನ್ನು ತೋರಿಸಿ, ಬಟ್ಟೆಯನ್ನು ಹರಿದಿದ್ದಾನೆ. ಅಂಗಡಿಯಾತ ಮರುಪಾವತಿ ನಿರಾಕರಿಸಿದ್ದಾನೆ, ಬದಲಾಗಿ ಅದೇ ಮೌಲ್ಯದ ಮತ್ತೊಂದು ಲೆಹೆಂಗಾವನ್ನು ತೆಗೆದುಕೊಳ್ಳುವಂತೆ ಕೇಳಿದ್ದಾನೆ. ಆದರೆ, ತಾವು ಮತ್ತೆ ಉಡುಪು ಖರೀದಿಸುವುದನ್ನು ಒಪ್ಪದೆ, ಹಣ ಮರುಪಾವತಿ ಮಾಡಲೇಬೇಕೆಂದು ಆ ವ್ಯಕ್ತಿ ತಗಾದೆ ತೆಗೆದು ಜಗಳ ಮಾಡಿದ್ದಾನೆ. ಅಲ್ಲದೆ ಹಲ್ಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಘಟನೆಯ ವಿವರ
ವರದಿಗಳ ಪ್ರಕಾರ, ಸುಮಿತ್ ಅವರ ಗೆಳತಿ ಕೆಲವು ದಿನಗಳ ಹಿಂದೆ ಲೆಹೆಂಗಾವನ್ನು ಖರೀದಿಸಿದ್ದರು. ಉತ್ಪನ್ನದಿಂದ ಅತೃಪ್ತರಾದ ಅವರು ಲೆಹೆಂಗಾವನ್ನು ಅಂಗಡಿಗೆ ಹಿಂತಿರುಗಿಸಿದರು ಮತ್ತು ಹಣವನ್ನು ಮರುಪಾವತಿಸಲು ಕೇಳಿದರು. ಆದರೆ, ಅಂಗಡಿಯವನು ಹಣವನ್ನು ಮರುಪಾವತಿಸಲು ನಿರಾಕರಿಸಿದ್ದಾನೆ. ಇದರಿಂದ ಕೋಪಗೊಂಡ ಸುಮಿತ್, ತನ್ನ ಜೇಬಿನಿಂದ ಚಾಕುವನ್ನು ಹೊರತೆಗೆದು ಲೆಹೆಂಗಾವನ್ನು ಹರಿದು ಹಾಕಿದ್ದಾನೆ. ಕೌಂಟರ್‌ನಲ್ಲಿ ಇನ್ನೊಂದು ಬದಿಯಲ್ಲಿ ಇರಿಸಲಾಗಿದ್ದ ಬ್ಲೌಸ್ ಅನ್ನು ಸಹ ಕತ್ತರಿಸಿದ್ದಾನೆ.
ನಂತರ ಅವನು ಅಂಗಡಿ ವ್ಯಾಪಾರಿಯ ಕಡೆಗೆ ತಿರುಗಿ, ‘ನಾನು ನಿನ್ನನ್ನೂ ಹೀಗೆ ಕತ್ತರಿಸುತ್ತೇನೆ, ನನಗೆ ಹಣ ಹಿಂತಿರುಗಿ ಕೊಡು’ ಎಂದು ಬೆದರಿಕೆ ಹಾಕಿದ್ದಾನೆ ಎಂದು ಹೇಳಲಾಗಿದೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಸುಮಿತ್ ಅಂಗಡಿಯಲ್ಲಿಂದ ಕೋಪದಿಂದ ದುರ್ವರ್ತನೆ ತೋರುತ್ತಿರುವ ವಿಡಿಯೋವನ್ನು ನೋಡಬಹುದು. ಆದರೆ, ಅಂಗಡಿ ವ್ಯಾಪಾರಿ ಮಾತ್ರ ನೆಲದಿಂದ ಹರಿದ ಲೆಹೆಂಗಾವನ್ನು ಶಾಂತವಾಗಿ ಎತ್ತಿಕೊಂಡು ಹೋಗುತ್ತಿದ್ದಾನೆ.
ಪೊಲೀಸ್ ಕ್ರಮ
ಈ ವಿಷಯಕ್ಕೆ ಸಂಬಂಧಿಸಿದಂತೆ ಅಂಗಡಿ ಮಾಲೀಕ ಬಜಾರ್‌ಪೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ನಂತರ ಸುಮಿತ್‌ನನ್ನು ಬಂಧಿಸಲಾಗಿದೆ. ಆತನನ್ನು ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಘಟನೆಯಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ.