ನವದೆಹಲಿ: ತಮಿಳುನಾಡಿನ ಕಲ್ಪಾಕ್ಕಂನಲ್ಲಿ ನಡೆಯುತ್ತಿರುವ ಪರಮಾಣು ರಿಯಾಕ್ಟರ್‌ನ (Kalpakkam nuclear reactor) ಸಾಧನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ( Prime Minister Narendra Modi) ಅವರು ಮೆಚ್ಚುಗೆ ವ್ಯಕ್ತಪಡಿಸಿ ಇದು ದೇಶದ ಪರಮಾಣು ಇಂಧನ ಪ್ರಯಾಣದಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲು ಎಂದು ಹೇಳಿದರು. ತಿಂಗಳ ಮನ್ ಕಿ ಬಾತ್ (Maan ki baat) ನಲ್ಲಿ ಭಾನುವಾರ ಮಾತನಾಡಿದ ಅವರು, ಪರಮಾಣು ಮತ್ತು ನವೀಕರಿಸಬಹುದಾದ ಇಂಧನಗಳಿಗಾಗಿ ದೇಶಾದ್ಯಂತ ನಡೆಸಲಾಗುತ್ತಿರುವ ಪರಿಸರ ಸ್ನೇಹಿ ಕ್ರಮಗಳ ಕುರಿತು ಶ್ಲಾಘಿಸಿದರು. ಅಲ್ಲದೇ ಈ ಸಂದರ್ಭದಲ್ಲಿ ಅವರು ನಾಗರಿಕರು 2027ರ ಜನಗಣತಿ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
ಈ ಬಾರಿಯ ಮನ್ ಕಿ ಬಾತ್ ನಲ್ಲಿ ಅವರು ದೇಶದ ಪರಮಾಣು, ಪವನ ಶಕ್ತಿಯ ಸಾಧನೆ, ಜನಗಣತಿ ಕುರಿತು ಮಾತನಾಡಿದರು. ತಮಿಳುನಾಡಿನ ಕಲ್ಪಾಕ್ಕಂನಲ್ಲಿರುವ ಪರಮಾಣು ರಿಯಾಕ್ಟರ್‌ನ ಸಾಧನೆಯು ದೇಶದ ಪರಮಾಣು ಇಂಧನ ಪ್ರಯಾಣದಲ್ಲಿ ಐತಿಹಾಸಿಕ ಮೈಲಿಗಲ್ಲು ಎಂದ ಅವರು, ಭಾರತದ ನಾಗರಿಕ ಪರಮಾಣು ಕಾರ್ಯಕ್ರಮವು ಕೃಷಿಯಿಂದ ಆಧುನಿಕ ನಾವೀನ್ಯಕಾರರವರೆಗೆ ಎಲ್ಲರಿಗೂ ಬಹಳ ಸಹಾಯ ಮಾಡಿದೆ ಎಂದು ತಿಳಿಸಿದರು.
ನಗರಗಳಿಗಿಂತಲೂ ಹೆಚ್ಚು ಸೌಕರ್ಯ ಇರುವ ಭಾರತದ ಸ್ಮಾರ್ಟ್ ಹಳ್ಳಿಗಳು: ಎಲ್ಲಿವೆ ಗೊತ್ತಾ?
ಕೆಲವು ದಿನಗಳ ಹಿಂದೆ ನಮ್ಮ ಪರಮಾಣು ವಿಜ್ಞಾನಿಗಳು ಒಂದು ಪ್ರಮುಖ ಸಾಧನೆ ಮಾಡಿದ್ದಾರೆ. ಈ ಮೂಲಕ ಅವರು ದೇಶದ ಹೆಮ್ಮೆಯನ್ನು ಹೆಚ್ಚಿಸಿದ್ದಾರೆ. ತಮಿಳುನಾಡಿನ ಕಲ್ಪಾಕ್ಕಂನಲ್ಲಿರುವ ಫಾಸ್ಟ್ ಬ್ರೀಡರ್ ರಿಯಾಕ್ಟರ್ ನಿರ್ಣಾಯಕ ಪ್ರಗತಿಯನ್ನು ಸಾಧಿಸಿದೆ ಎಂದರು.
ರಿಯಾಕ್ಟರ್ ಮೊದಲ ಬಾರಿಗೆ ಸ್ವ ಸಾಮರ್ಥ್ಯದಿಂದ ಪರಮಾಣು ಸರಪಳಿ ಕ್ರಿಯೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದೆ. ಇದು ರಿಯಾಕ್ಟರ್ ಕಾರ್ಯಾಚರಣೆಯ ಹಂತವನ್ನು ಪ್ರವೇಶಿಸುವುದನ್ನು ಸೂಚಿಸುತ್ತದೆ ಎಂದ ಅವರು, ಈ ಪರಮಾಣು ರಿಯಾಕ್ಟರ್ ಅನ್ನು ಸಂಪೂರ್ಣವಾಗಿ ಸ್ಥಳೀಯ ತಂತ್ರಜ್ಞಾನದಿಂದ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ದೇಶದ ಪವನ ಶಕ್ತಿಯ ಸಾಧನೆ ಕುರಿತು ಮಾತನಾಡಿದ ಅವರು, ದೇಶವು ಇತ್ತೀಚೆಗೆ 56 ಗಿಗಾವ್ಯಾಟ್‌ಗಳಿಗಿಂತಲೂ ಹೆಚ್ಚು ಪವನ ಇಂಧನ ಉತ್ಪಾದನೆ ಮಾಡಿ ಪ್ರಮುಖ ಮೈಲಿಗಲ್ಲನ್ನು ದಾಖಲಿಸಿದೆ. ಕಳೆದ ಒಂದು ವರ್ಷದಲ್ಲಿ ಪವನ ಶಕ್ತಿ ಉತ್ಪಾದನೆಗೆ ಸುಮಾರು 6 ಗಿಗಾ ವ್ಯಾಟ್ ನ ಹೊಸ ಸಾಮರ್ಥ್ಯವನ್ನು ಸೇರಿಸಲಾಗಿದೆ ಎಂದು ಅವರು ತಿಳಿಸಿದರು.
ದೇಶವು ಇಂದು ಪವನ ಶಕ್ತಿಯಲ್ಲಿ ವೇಗವಾಗಿ ಪ್ರಗತಿ ಸಾಧಿಸುತ್ತಿದೆ. ಇದನ್ನು ವಿಶ್ವವೇ ಗಮನಿಸುತ್ತಿದೆ. ಭಾರತ ಇಂದು ಪವನ ಶಕ್ತಿ ಸಾಮರ್ಥ್ಯದಲ್ಲಿ ವಿಶ್ವದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇದು ನಮ್ಮ ಎಂಜಿನಿಯರ್‌ಗಳ ಕಠಿಣ ಪರಿಶ್ರಮ, ಯುವಕರ ಶ್ರದ್ಧೆ, ರಾಷ್ಟ್ರದ ಸಾಮೂಹಿಕ ಇಚ್ಛಾಶಕ್ತಿಯ ಸಂಕೇತವಾಗಿದೆ ಎಂದು ಹೇಳಿದರು.
ಪವನ ಶಕ್ತಿ ಉತ್ಪಾದನೆಯಲ್ಲಿ ಗುಜರಾತ್, ತಮಿಳುನಾಡು, ಮಹಾರಾಷ್ಟ್ರ ಮತ್ತು ರಾಜಸ್ಥಾನಗಳು ಮುಂಚೂಣಿಯಲ್ಲಿವೆ ಎಂದು ಅವರು. ಒಂದು ಕಾಲದಲ್ಲಿ ಮರುಭೂಮಿಗಳು ಮಾತ್ರ ಗೋಚರಿಸುತ್ತಿದ್ದ ಇಂಧನ ಉತ್ಪಾದನಾ ಉದ್ಯಾನಗಳು ಇಂದು ಗುಜರಾತ್‌ನ ಕಚ್, ಪಠಾಣ್ ಮತ್ತು ಬನಸ್ಕಂತದಂತಹ ಪ್ರದೇಶಗಳಲ್ಲಿಯೂ ಕಂಡು ಬರುತ್ತಿದೆ. ಅನೇಕರು ಇದರ ಪ್ರಯೋಜನ ಪಡೆಯುತ್ತಿದ್ದಾರೆ, ಹೊಸ ಅವಕಾಶಗಳು ತೆರೆಯುತ್ತಿವೆ ಎಂದರು.
ದೇಶದಲ್ಲಿ ನಡೆಯುತ್ತಿರುವ ಜನಗಣತಿಯ ಕುರಿತು ಮಾತನಾಡಿದ ಅವರು, 2027ರ ದೇಶದ ಜನಗಣತಿಯು ವಿಶ್ವದ ಅತಿದೊಡ್ಡ ಜನಗಣತಿಯಾಗಿದೆ. ರಾಷ್ಟ್ರೀಯ ಜನಗಣತಿ ಕೇವಲ ಸರ್ಕಾರಿ ಕೆಲಸವಲ್ಲ. ಇದು ನಮ್ಮೆಲ್ಲರ ಜವಾಬ್ದಾರಿ. ಎಲ್ಲರ ಭಾಗವಹಿಸುವಿಕೆ ನಿರ್ಣಾಯಕವಾಗಿದೆ. ಜನರು ಒದಗಿಸುವ ಮಾಹಿತಿ ಸಂಪೂರ್ಣವಾಗಿ ಸುರಕ್ಷಿತವಾಗಿ, ಗೌಪ್ಯವಾಗಿ ಮತ್ತು ಡಿಜಿಟಲ್ ಭದ್ರತೆಯೊಂದಿಗೆ ಇರಿಸಲಾಗಿದೆ ಎಂದು ಹೇಳಿದರು.
ಎರಡನೇ ಹಂತದ ಮತದಾನಕ್ಕೂ ಮುನ್ನ ಟಿಎಂಸಿ ಕಾರ್ಯಕರ್ತನ ಮನೆಯಲ್ಲಿ ಬಾಂಬ್‌ಗಳು ಪತ್ತೆ; ತನಿಖೆ ಚುರುಕು
ಜನಗಣತಿ 2027 ಅನ್ನು ಡಿಜಿಟಲ್ ಮಾಡಲಾಗಿದೆ. ಇದಕ್ಕಾಗಿ ವಿಶೇಷವಾಗಿ ಸಿದ್ಧಪಡಿಸಲಾದ ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸಲಾಗುತ್ತಿದೆ. ಮನೆ-ಮನೆಗೆ ಹೋಗಿ ಎಲ್ಲಾ ಮಾಹಿತಿಯನ್ನು ನೇರವಾಗಿ ಡಿಜಿಟಲ್ ರೂಪದಲ್ಲಿ ದಾಖಲಿಸಲಾಗುತ್ತಿದೆ. ಎಲ್ಲರ ಭಾಗವಹಿಸುವಿಕೆಯು ಈ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ. ಇದರಲ್ಲಿ ಜನರು ತಮ್ಮ ಮಾಹಿತಿಯನ್ನು ತಾವೇ ನಮೂದಿಸಬಹುದು. ಇದರಿಂದಾಗಿ ಸಮಯ ಉಳಿತಾಯವಾಗುತ್ತದೆ ಮತ್ತು ಪ್ರಕ್ರಿಯೆ ಸರಳಗೊಳ್ಳುತ್ತದೆ ಎಂದು ತಿಳಿಸಿದರು.