ಹೈದರಾಬಾದ್, ಫೆ. 19: ತೆಲಂಗಾಣದ ಹೈದರಾಬಾದ್‌ನ (Hyderabad) ಬಿರಿಯಾನಿ (Biryani) ಉದ್ಯಮದ ಮೇಲೆ ನಡೆದ ಆದಾಯ ತೆರಿಗೆ ಇಲಾಖೆಯ (Income Tax Department) ದಾಳಿಯು ಭಾರತದ ಆಹಾರ ಉದ್ಯಮದ ಇತಿಹಾಸದಲ್ಲೇ ಅತಿ ದೊಡ್ಡ ಬಿಲ್ಲಿಂಗ್ ಹಗರಣವನ್ನು ಬಯಲಿಗೆಳೆದಿದೆ. ನಗರದ ಮೂರು ಪ್ರಖ್ಯಾತ ಬಿರಿಯಾನಿ ಹೋಟೆಲ್ ಸಮೂಹಗಳ ಹಣಕಾಸಿನ ಅಕ್ರಮಗಳ ತನಿಖೆಯಿಂದ ಆರಂಭವಾದ ಈ ಕಾರ್ಯಾಚರಣೆಯು, ಈಗ ಸುಮಾರು 70,000 ಕೋಟಿ ರುಪಾಯಿಗಳಷ್ಟು ತೆರಿಗೆ ರಹಿತ ಆದಾಯದ ಬೃಹತ್ ಜಾಲವನ್ನು ಪತ್ತೆಹಚ್ಚಲು ದಾರಿ ಮಾಡಿ ಕೊಟ್ಟಿದೆ.
ಕಳೆದ ವರ್ಷದ ನವೆಂಬರ್‌ನಲ್ಲಿ ಈ ಹೋಟೆಲ್ ಸಮೂಹಗಳ ಮಾಲೀಕರ ನಿವಾಸಗಳು ಹಾಗೂ ಹೋಟೆಲ್ ಆವರಣಗಳು ಸೇರಿದಂತೆ ಒಟ್ಟು 30 ಕಡೆಗಳಲ್ಲಿ ಐಟಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದರು. ಈ ವೇಳೆ ವಶಪಡಿಸಿಕೊಂಡ ಡಿಜಿಟಲ್ ದಾಖಲೆಗಳು ಹಾಗೂ ಯುಪಿಐ (UPI) ವಹಿವಾಟುಗಳ ಪರಿಶೀಲನೆಯಿಂದ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ದೇಶಾದ್ಯಂತ ಸುಮಾರು 1.7 ಲಕ್ಷ ರೆಸ್ಟೋರೆಂಟ್‌ಗಳು ಬಳಸುವ ಪಾಯಿಂಟ್ ಆಫ್ ಸೇಲ್ (POS) ಸಾಫ್ಟ್‌ವೇರ್‌ನಲ್ಲಿರುವ 'ಬಲ್ಕ್ ಡಿಲೀಟ್' (Bulk Delete) ಎಂಬ ವಿಶೇಷ ಫೀಚರ್ ಅನ್ನು ಬಳಸಿಕೊಂಡು ಈ ಹಗರಣ ನಡೆಸಲಾಗಿದೆ.
ರೀಲ್ಸ್ ತಂದ ಅವಾಂತರ; ವಿಡಿಯೊ ಮಾಡುತ್ತ ಮೈಮರೆತು ಚರಂಡಿಗೆ ಬಿದ್ದ ಯುವತಿ
ಈ ಸಾಫ್ಟ್‌ವೇರ್ ಮೂಲಕ ಹೋಟೆಲ್ ಮಾಲೀಕರು 30 ದಿನಗಳವರೆಗಿನ ಸಂಪೂರ್ಣ ಮಾರಾಟದ ದಾಖಲೆಗಳನ್ನು ಯಾವುದೇ ಕುರುಹು ಇಲ್ಲದಂತೆ ಅಳಿಸಿ ಹಾಕುತ್ತಿದ್ದರು. ಇದರಿಂದಾಗಿ ಸರ್ಕಾರದ ಲೆಕ್ಕಕ್ಕೆ ಕೇವಲ ಅಲ್ಪ ಪ್ರಮಾಣದ ವಹಿವಾಟನ್ನು ಮಾತ್ರ ತೋರಿಸಿ, ಕೋಟ್ಯಂತರ ರೂಪಾಯಿ ತೆರಿಗೆಯನ್ನು ಉಳಿಸುತ್ತಿದ್ದರು. ಅಧಿಕಾರಿಗಳ ಅಂದಾಜಿನ ಪ್ರಕಾರ, 2019-20ನೇ ಸಾಲಿನಿಂದ ಈವರೆಗೆ ಸುಮಾರು 70,000 ಕೋಟಿ ರುಪಾಯಿ ಮೌಲ್ಯದ ವಹಿವಾಟನ್ನು ವ್ಯವಸ್ಥಿತವಾಗಿ ಮುಚ್ಚಿಡಲಾಗಿದೆ. ಕೇವಲ ತೆಲಂಗಾಣ ಮತ್ತು ಆಂಧ್ರ ಪ್ರದೇಶಗಳಲ್ಲೇ 5,000 ಕೋಟಿ ರುಪಾಯಿಗೂ ಅಧಿಕ ವಂಚನೆ ನಡೆದಿದೆ ಎಂದು ಶಂಕಿಸಲಾಗಿದೆ.
ಅಧಿಕಾರಿಗಳು ಸದ್ಯ ಸುಮಾರು 60 ಟಿಬಿ ಡೇಟಾವನ್ನು ವಶಪಡಿಸಿಕೊಂಡು ಪರಿಶೀಲಿಸುತ್ತಿದ್ದು, ಹತ್ತಾರು ಸಾವಿರ ಹೋಟೆಲ್‌ಗಳು ಈ ವಂಚನೆಯಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ. ಈ ತನಿಖೆ ಪೂರ್ಣಗೊಂಡ ಬಳಿಕ ಸಂಬಂಧಪಟ್ಟ ಹೋಟೆಲ್ ಮಾಲೀಕರಿಗೆ ಭಾರಿ ದಂಡ ವಿಧಿಸುವುದು ಮಾತ್ರವಲ್ಲದೆ, ಕಾನೂನು ಕ್ರಮ ಜರುಗಿಸಲು ಆದಾಯ ತೆರಿಗೆ ಇಲಾಖೆ ಸಜ್ಜಾಗಿದೆ.