ಚೆನ್ನೈ: ಕಾವೇರಿ ನೀರಿನ ಸಮಸ್ಯೆ (Cauvery water issue) ವಿಚಾರವಾಗಿ ಶುಕ್ರವಾರ ತಮಿಳುನಾಡು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಜೋಸೆಫ್ ವಿಜಯ್ (Chief Minister Joseph Vijay) ಮತ್ತು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ (Leader of Opposition Udhayanidhi Stalin) ನಡುವೆ ತೀವ್ರ ವಾಗ್ವಾದ ನಡೆಯಿತು. ಕರ್ನಾಟಕದ ಮೇಕೆದಾಟು ಆಣೆಕಟ್ಟು ಯೋಜನೆ (Mekedatu project) ಬಗ್ಗೆ ರಾಜ್ಯ ಸರ್ಕಾರದ ನಿಲುವನ್ನು ಉದಯನಿಧಿ ಸ್ಟಾಲಿನ್ ಪ್ರಶ್ನಿಸಿದರು. ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ವಿಜಯ್ ಕೂಡ ಅವರಿಗೆ ತಿರುಗೇಟು ನೀಡಿದರು. ಇದರಿಂದ ಸದನದಲ್ಲಿ ಅವರಿಬ್ಬರ ನಡುವೆ ಉಂಟಾಯಿತು.
ಸದನದಲ್ಲಿ ಮಾತನಾಡಿದ ಉದಯನಿಧಿ ಸ್ಟಾಲಿನ್, ಕರ್ನಾಟಕದಲ್ಲಿ ನಿರ್ಮಾಣವಾಗುತ್ತಿರುವ ಅಣೆಕಟ್ಟು ಯೋಜನೆಯನ್ನು ನಿಲ್ಲಿಸಲು ಸಿಎಂ ವಿಜಯ್ ನೇತೃತ್ವದ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂಬುದನ್ನು ವಿಧಾನಸಭೆಯಲ್ಲಿ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ವಿಧಾನ ಪರಿಷತ್ ಸ್ಪೀಕರ್ ಸ್ಥಾನಕ್ಕೆ ಬಸವರಾಜ ಹೊರಟ್ಟಿ ದಿಢೀರ್ ರಾಜೀನಾಮೆ; ಸಿಎಂ ಭೇಟಿ ವೇಳೆ ಆಗಿದ್ದೇನು?
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ವಿಜಯ್, ಮೇಕೆದಾಟು ಅಣೆಕಟ್ಟಿನ ವಿರುದ್ಧ ನಿರ್ಣಯವನ್ನು ವಿಧಾನ ಸಭೆಯಲ್ಲಿ ಅಂಗೀಕರಿಸಲಾಗಿದೆ. ಈ ಯೋಜನೆಯನ್ನು ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೇನೆ. ತಮಿಳುನಾಡಿನ ರೈತರ ಹಿತಾಸಕ್ತಿಗಳನ್ನು ಕಾಪಾಡಲು ನಾವು ಏನು ಬೇಕಾದರೂ ಮಾಡುತ್ತೇವೆ ಎಂದು ತಿಳಿಸಿದರು.
ಬಳಿಕ ಅವರು ಹಿಂದಿನ ಡಿಎಂಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, 1969ರಲ್ಲಿ ಕರ್ನಾಟಕದ ಮೇಕೆದಾಟು ಯೋಜನೆಗೆ ಮೊದಲು ಅನುಮತಿ ನೀಡಿದ್ದು ಡಿಎಂಕೆ ಸರ್ಕಾರ ಎಂದು ಆರೋಪಿಸಿದರು. ಅವರ ಮಾತಿಗೆ ಅಡ್ಡಿಪಡಿಸಿದ ಉದಯನಿಧಿ ಸ್ಟಾಲಿನ್, ಕಾವೇರಿ ನೀರಿನ ವಿಚಾರವಾಗಿ ಕರ್ನಾಟಕದ ಪಕ್ಷಗಳು ಏಕತೆಯನ್ನು ತೋರಿಸುತ್ತವೆ. ಮೇಕೆದಾಟು ವಿಷಯದ ಕುರಿತು ತಮಿಳರ ಏಕತೆಯನ್ನು ಪ್ರದರ್ಶಿಸಲು ಸರ್ವಪಕ್ಷ ಸಭೆಯನ್ನು ಟಿವಿಕೆ ಸರ್ಕಾರ ಏಕೆ ತಿರಸ್ಕರಿಸುತ್ತಿದೆ ಎಂದು ಪ್ರಶ್ನಿಸಿದರು.
ಅಲ್ಲದೇ ಇದಕ್ಕೆ ಸಂಬಂಧಿಸಿ ಕರ್ನಾಟಕ ಸರ್ಕಾರದೊಂದಿಗೆ ಮಾತನಾಡಲು ವಿಜಯ್ ಬೆಂಗಳೂರಿಗೆ ಭೇಟಿ ನೀಡುತ್ತಿರುವುದು ಏಕೆ? ಅವರ ಬೆಂಗಳೂರು ಭೇಟಿ ಯೋಜನೆಯನ್ನು ಸರ್ಕಾರ ಮೊದಲೇ ಸೋರಿಕೆ ಮಾಡಿದೆ. ಆದರೆ ವಿರೋಧ ಎದುರಾದಾಗ ಅದನ್ನು ನಿರಾಕರಿಸಿದರು. ಕಾವೇರಿ ನೀರು ಹಂಚಿಕೆ ವಿವಾದದ ಕುರಿತು ಉದ್ವಿಗ್ನತೆ ಮತ್ತು ಪ್ರತಿಭಟನೆ ಉಂಟಾಗಿರುವುದರಿಂದ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಜಯ್ ಅವರ ಭೇಟಿಯನ್ನು ಮುಂದೂಡಲು ಕೇಳಿಕೊಂಡರು. ಪರಿಸ್ಥಿತಿ ಶಾಂತವಾಗಿರುವ ಸಮಯದಲ್ಲಿ ಬರ ಪೀಡಿತ ಕಾವೇರಿ ಜಲಾನಯನ ಪ್ರದೇಶದ ಪ್ರವಾಸ ನಡೆಸುವಂತೆ ವಿಜಯ್ ಅವರಿಗೆ ತಿಳಿಸಿದ್ದಾರೆ ಎಂದು ಹೇಳಿದರು.
ತಮ್ಮ ಕರ್ನಾಟಕ ಭೇಟಿಯನ್ನು ಸಮರ್ಥಿಸಿಕೊಂಡ ವಿಜಯ್, ನೆರೆಯ ರಾಜ್ಯದೊಂದಿಗೆ ಈ ಕುರಿತು ಮಾತನಾಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿ, ಮಾತುಕತೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಲು ಅವಕಾಶವಿರುವಾಗ ಅಂತಹ ಪ್ರಯತ್ನದಿಂದ ನಮಗೆ ಅವಮಾನವಾಗುವುದಾದರೆ ನಾನುತಮಿಳುನಾಡಿನ ಜನರಿಗಾಗಿ ಅವಮಾನಕ್ಕೊಳಗಾಗಲು ಸಿದ್ಧನಿದ್ದೇನೆ ಎಂದು ತಿಳಿಸಿದರು.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಶಿಲ್ಪಾಗೆ 15 ಲಕ್ಷ , ನೌಕರಿ
ಕರ್ನಾಟಕದ ಮೇಕೆದಾಟು ಅಣೆಕಟ್ಟು ಯೋಜನೆಯಿಂದಾಗಿ ನೀರು ಹಂಚಿಕೆ ಬಗ್ಗೆ ತಮಿಳುನಾಡು ಸರ್ಕಾರ ಕಳವಳ ವ್ಯಕ್ತಪಡಿಸುತ್ತಲೇ ಇದೆ. ಹೀಗಾಗಿ ದಶಕಗಳಿಂದ ಈ ಯೋಜನೆಯನ್ನು ಬಲವಾಗಿ ವಿರೋಧಿಸುತ್ತದೆ. ಈ ಕುರಿತು ಪರಿಷ್ಕೃತ ವಿವರವಾದ ಯೋಜನಾ ವರದಿಯನ್ನು ಸಲ್ಲಿಸಲು ಕರ್ನಾಟಕ ಸರ್ಕಾರ ಸಿದ್ಧತೆ ನಡೆಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.