ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಾಟ್ಸ್‌ಆ್ಯಪ್‌ ಬಳಕೆದಾರರಿಗೆ ಮಹತ್ವದ ಸೂಚನೆ; ಅಕೌಂಟ್‌ ದುರುಪಯೋಗದ ಬಗ್ಗೆ ಎಚ್ಚರಿಕೆ, ಪ್ರತಿ ಬಳಕೆ ಬಳಿಕ ಲಾಗ್‌ಔಟ್‌ ಮಾಡಲು ಸಲಹೆ

WhatsApp Web Users Alert: ವಾಟ್ಸ್‌ಆ್ಯಪ್‌ ದುರುಪಯೋಗದ ಬಗ್ಗೆ ಬಳಕೆದಾರರಿಗೆ ಗೃಹ ಸಚಿವಾಲಯವು ಎಚ್ಚರಿಕೆ ನೀಡಿದೆ. ಸೈಬರ್‌ ಅಪರಾಧಿಗಳು ವೈಯಕ್ತಿಕ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂಬ ಕಾರಣವನ್ನು ಉಲ್ಲೇಖಿಸಿ, ವಾಟ್ಸ್‌ಆ್ಯಪ್‌ ಮೂಲಕ ಗೌಪ್ಯ ಮಾಹಿತಿಯನ್ನು ಹಂಚಿಕೊಳ್ಳದಂತೆ ಮನವಿ ಮಾಡಿದೆ.

ವಾಟ್ಸ್‌ಆ್ಯಪ್‌ ಬಳಕೆದಾರರಿಗೆ ಕೇಂದ್ರದಿಂದ ಮಹತ್ವದ ಸೂಚನೆ

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Nov 23, 2026 6:36 PM

ದೆಹಲಿ, ನ. 23: ಜನಪ್ರಿಯ ಮೆಸೆಜಿಂಗ್‌ ಅಪ್ಲಿಕೇಷನ್‌ ವಾಟ್ಸ್‌ಆ್ಯಪ್‌ ದುರುಪಯೋಗದ ಬಗ್ಗೆ ಬಳಕೆದಾರರಿಗೆ ಗೃಹ ಸಚಿವಾಲಯವು (MHA) ಎಚ್ಚರಿಕೆ ನೀಡಿದೆ (WhatsApp Web Users Alert). ಸೈಬರ್‌ ಅಪರಾಧಿಗಳು ವೈಯಕ್ತಿಕ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂಬ ಕಾರಣವನ್ನು ಉಲ್ಲೇಖಿಸಿ, ವಾಟ್ಸ್‌ಆ್ಯಪ್‌ ಮೂಲಕ ಗೌಪ್ಯ ಮಾಹಿತಿಯನ್ನು ಹಂಚಿಕೊಳ್ಳದಂತೆ ಎಂಎಚ್‌ಎ ಮನವಿ ಮಾಡಿದೆ. ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ (I4C) ನ್ಯಾಷನಲ್ ಸೈಬರ್‌ ಕ್ರೈಮ್ ಥ್ರೆಟ್ ಅನಲಿಟಿಕ್ಸ್ ಯೂನಿಟ್ (NCTAU) ಪ್ರಕಾರ, ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ದೃಢೀಕರಿಸಲ್ಪಟ್ಟ ವಾಟ್ಸ್‌ಆ್ಯಪ್‌ ವೆಬ್‌ (WhatsApp Web) ದುರುಪಯೋಗಪಡಿಸಿಕೊಳ್ಳುವ ಮೂಲಕ ಬಳಕೆದಾರರ ವಾಟ್ಸ್‌ಆ್ಯಪ್‌ ಖಾತೆಯನ್ನು ಅನಧಿಕೃತವಾಗಿ ಪ್ರವೇಶಿಸಲು ಸಾಧ್ಯವಿದೆ.

ವಾಟ್ಸ್‌ಆ್ಯಪ್‌ ವೆಬ್ ಬಳಸುವಾಗ ಉಂಟಾಗುವ ಸಂಭಾವ್ಯ ಅಪಾಯಗಳನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಾಟ್ಸ್‌ಆ್ಯಪ್‌ ವೆಬ್ ಬಳಸಿ ಅದನ್ನು ಲಾಗ್‌ಔಟ್‌ ಮಾಡದೇ ಇದ್ದಾಗ ದುರುಪಯೋಗದ ಸಾಧ್ಯತೆ ಅಧಿಕ ಎಂದು ತಿಳಿಸಲಾಗಿದೆ.

ವಾಟ್ಸ್‌ಆ್ಯಪ್‌ ಬಳಕೆದಾರರಿಗೆ ಕೇಂದ್ರದ ಸೂಚನೆ:



ಅಧಿಕೃತ ಹೇಳಿಕೆಯ ಪ್ರಕಾರ ಸೈಬರ್ ಅಪರಾಧಿಗಳು ಖಾಸಗಿ ಸಂಭಾಷಣೆಗಳನ್ನು ಓದಲು, ನಿಮ್ಮ ಹೆಸರಿನಲ್ಲಿ ಸಂದೇಶ ಕಳುಹಿಸಲು, ಗುಂಪು ಚಾಟ್‌ಗಳನ್ನು ಪ್ರವೇಶಿಸಲು ಸಕ್ರಿಯ ವಾಟ್ಸ್‌ಆ್ಯಪ್‌ ವೆಬ್‌ ಬಳಸಿಕೊಳ್ಳುವ ಸಾಧ್ಯತೆ ಇದೆ. ಕಚೇರಿಯ ಕಂಪ್ಯೂಟರ್‌ಗಳು, ಸಾರ್ವಜನಿಕ ವ್ಯವಸ್ಥೆಗಳು, ಸೈಬರ್ ಕೆಫೆಗಳು, ಹೋಟೆಲ್ ಬಿಸಿನೆಸ್ ಸೆಂಟರ್‌ಗಳು ಮತ್ತು ಇತರರ ಕೈಗೆ ಸಿಗುವ ಸಾಧ್ಯತೆಯಿರುವ ಕಡೆಗಳಲ್ಲಿ ವಾಟ್ಸ್‌ಆ್ಯಪ್‌ ಬಳಸದಂತೆ ಎಚ್ಚರಿಕೆ ನೀಡಲಾಗಿದೆ.

ಪಿಎಫ್ ಖಾತೆದಾರರಿಗೆ ಗುಡ್‌ನ್ಯೂಸ್‌; ಇನ್ಮುಂದೆ ವಾಟ್ಸ್‌ಆ್ಯಪ್‌ನಲ್ಲೇ ಮಾಹಿತಿ

ವಾಟ್ಸ್‌ಆ್ಯಪ್‌ ವೆಬ್ ಶಾಶ್ವತವಾಗಿ ಲಾಗ್-ಇನ್ ಆಗಿ ಇರಿಸಿಕೊಳ್ಳದಂತೆ ಬಳಕೆದಾರರಿಗೆ ಸೂಚಿಸಲಾಗಿದೆ. ಬ್ರೌಸರ್ ಟ್ಯಾಬ್ ಮುಚ್ಚಿದ ಮಾತ್ರಕ್ಕೆ ಸೆಷನ್ ಕೊನೆಗೊಳ್ಳುವುದಿಲ್ಲವಾದ್ದರಿಂದ ಪ್ರತಿ ಬಳಕೆಯ ನಂತರವೂ ಲಾಗ್-ಔಟ್ ಆಗುವಂತೆ ಸೂಚಿಸಲಾಗಿದೆ.

ವಾಟ್ಸ್‌ಆ್ಯಪ್‌ ವೆಬ್ ಬಳಸಲೇಬೇಕಾದರೆ ಏನು ಮಾಡಬೇಕು?

ವಾಟ್ಸ್‌ಆ್ಯಪ್‌ ವೆಬ್ ಬಳಸಲೇಬೇಕಾದ ಅನಿವಾರ್ಯತೆ ಇದ್ದರೆ ಇನ್‌ಕಾಗ್ನಿಟೋ ಅಥವಾ ಪ್ರೈವೇಟ್ ಬ್ರೌಸಿಂಗ್ ಮೋಡ್ ಬಳಸಲು ಸೈಬರ್ ಅಪರಾಧ ತಡೆ ಸಂಸ್ಥೆಯು ಶಿಫಾರಸ್ಸು ಮಾಡಿದೆ. ಅಲ್ಲದೆ ಇದನ್ನು ಕೇವಲ ʼವಿಶ್ವಾಸಾರ್ಹʼ ಕಂಪ್ಯೂಟರ್‌ಗಳಲ್ಲಿ ಮಾತ್ರ ಬಳಸಬೇಕು ಎಂದು ಒತ್ತಿಹೇಳಿದೆ. ನಿಮ್ಮ ಕಾಂಟಾಕ್ಟ್‌ ನಂಬರ್‌ನಿಂದ ಅನಿರೀಕ್ಷಿತ ಪ್ರತಿಕ್ರಿಯೆ ಬರುವುದು ಸೇರಿ ಅಸಾಮಾನ್ಯ ಚಟುವಟಿಕೆ ಕಂಡುಬಂದರೆ ಕೂಡಲೇ ಎಚ್ಚೆತ್ತುಕೊಳ್ಳುವಂತೆಯೂ ಎಚ್ಚರಿಸಲಾಗಿದೆ.

ಬಳಕೆದಾರರು ತಮ್ಮ ಆಪರೇಟಿಂಗ್ ಸಿಸ್ಟಮ್‌ಗಳು, ಬ್ರೌಸರ್‌ಗಳು ಮತ್ತು ಭದ್ರತಾ ಸಾಫ್ಟ್‌ವೇರ್ ನವೀಕರಿಸುವಂತೆಯೂ ಸಲಹೆ ನೀಡಲಾಗಿದೆ. ಕಚೇರಿ ಕಂಪ್ಯೂಟರ್‌ಗಳಲ್ಲಿ ವಾಟ್ಸ್‌ಆ್ಯಪ್‌ ವೆಬ್ ಬಳಸುವುದನ್ನು ತಪ್ಪಿಸಲು ಸಂಸ್ಥೆಗಳಿಗೆ ಸೂಚಿಸಲಾಗಿದೆ. ಖಾಸಗಿ ಬ್ರೌಸಿಂಗ್ ಅನ್ನು ಪರ್ಯಾಯವಾಗಿ ಬಳಸಲು ತಿಳಿಸಲಾಗಿದೆ. ಬಳಕೆದಾರರು ಪ್ರತಿ ಸೆಷನ್ ನಂತರ ಲಾಗ್ ಔಟ್ ಮಾಡುವಂತೆ, ತಮ್ಮ ಡಿಜಿಟಲ್‌ ಗುರುತು ಮರೆಮಾಚುವಂತೆ ಕರೆ ನೀಡಲಾಗಿದೆ.

ಭಾರತದಲ್ಲಿ ಭಯೋತ್ಪಾದನೆ ಸಂಚು: ಜೈಶ್‌ನ ವಾಟ್ಸ್‌ಆ್ಯಪ್‌ ಚಾನೆಲ್ ಸ್ಥಗಿತ

ಹ್ಯಾಕ್‌ ಆಗಿದ್ದರೆ ಗೊತ್ತಾಗೋದು ಹೇಗೆ?

ಹ್ಯಾಕ್ ಆದ ವಾಟ್ಸ್ಆ್ಯಪ್ ದುರುಪಯೋಗ ಆಗುವ ಸಾಧ್ಯತೆ ಅಧಿಕ. ಹೀಗಾಗಿ ಬಳಕೆದಾರರ ವಾಟ್ಸ್ಆ್ಯಪ್ ಚಾಟ್ ಅನ್ನು ಯಾರಾದರೂ ರಹಸ್ಯವಾಗಿ ವೀಕ್ಷಿಸುತ್ತಿದ್ದಾರೆಯೇ ಎನ್ನುವುದನ್ನು ತಿಳಿಯುವುದು ಮುಖ್ಯ. ಹ್ಯಾಕ್‌ ಆಗಿದೆಯೇ ಎನ್ನುವುದನ್ನು ತಿಳಿಯಲು ನೀವು ಮೊದಲಿಗೆ ನಿಮ್ಮ ವಾಟ್ಸ್​ಆ್ಯಪ್​​ ಅಪ್ಲಿಕೇಶನ್ ತೆರೆಯಿರಿ. ನಂತರ ಬಲ ಭಾಗದಲ್ಲಿ ಕಾಣಿಸುವ ಮೂರು ಡಾಟ್‌ ಸೆಲೆಕ್ಟ್ ಮಾಡಿರಿ. ಬಳಿಕ ಅಲ್ಲಿ ಕಾಣುಸಿವ ವಾಟ್ಸ್​ಆ್ಯಪ್​​ ವೆಬ್ / ಲಿಂಕ್‌ ಡಿವೈಸ್‌ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನೀವು ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್‌ನಲ್ಲಿ ವಾಟ್ಸ್​ಆ್ಯಪ್​​ ತೆರೆಯದಿದ್ದರೂ ಲಿಂಕ್ ಆಗಿದೆ ಎನ್ನುವುದನ್ನು ತೋರಿಸುತ್ತಿದ್ದರೆ ನಿಮ್ಮ ವಾಟ್ಸ್​ಆ್ಯಪ್​​ ಹ್ಯಾಕ್‌ ಆಗಿದೆ ಎಂದರ್ಥ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.