ನವದೆಹಲಿ, ಮಾ. 9: ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ (Middle East Crisis) ಅನೇಕ ವಿಮಾನ ಪ್ರಯಾಣ ಅಸ್ತವ್ಯಸ್ತಗೊಂಡಿದೆ. ಈ ನಡುವೆ ಪ್ರಯಾಣಿಕರಿಗೆ ನೆರವಾಗಲು ಏರ್ ಇಂಡಿಯಾ (Air India) ಧಾವಿಸಿದೆ. ಹಲವು ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ 78 ಹೆಚ್ಚುವರಿ ವಿಮಾನಗಳನ್ನು ಅದು ಪ್ರಕಟಿಸಿದೆ. ವಿಮಾನಯಾನ ಸಂಸ್ಥೆ ಪ್ರಕಟಿಸಿದ ಹೇಳಿಕೆಯಲ್ಲಿ, ಹೆಚ್ಚುವರಿ ವಿಮಾನಗಳು ಮಾರ್ಚ್ 18ರಿಂದ ಕಾರ್ಯಾಚರಣೆ ನಡೆಸಲಿದ್ದು, ಬೇಡಿಕೆ ಹೆಚ್ಚಿರುವ ಪ್ರಮುಖ ದೂರ ಪ್ರಯಾಣ ಹಾಗೂ ಪ್ರಾದೇಶಿಕ ಮಾರ್ಗಗಳಲ್ಲಿ ಹೆಚ್ಚುವರಿ ಸಾಮರ್ಥ್ಯವನ್ನು ಒದಗಿಸಲಾಗುತ್ತದೆ ಎಂದು ತಿಳಿಸಿದೆ. ಈ ಕ್ರಮವು ಪ್ರದೇಶದಲ್ಲಿನ ಸಂಘರ್ಷದ ಹಿನ್ನೆಲೆಯಲ್ಲಿ ಅನೇಕ ವಿಮಾನಯಾನ ಸಂಸ್ಥೆಗಳು ತಮ್ಮ ವೇಳಾಪಟ್ಟಿಗಳನ್ನು ಸರಿಪಡಿಸುತ್ತಿರುವ ಸಮಯದಲ್ಲಿ ಕೈಗೊಳ್ಳಲಾಗಿದೆ.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಪರಿಸ್ಥಿತಿಯ ನಡುವೆ ಪ್ರಯಾಣಿಕರ ಸಹಕಾರಕ್ಕಾಗಿ ಏರ್ ಇಂಡಿಯಾ ಮಾರ್ಚ್ 10ರಿಂದ 18ರ ನಡುವೆ 9 ಮಾರ್ಗಗಳಲ್ಲಿ 78 ಹೆಚ್ಚುವರಿ ವಿಮಾನಗಳನ್ನು ನಿರ್ವಹಿಸಲಿದೆ ಎಂದು ವಿಮಾನಯಾನ ಸಂಸ್ಥೆ ಎಕ್ಸ್ ಪೋಸ್ಟ್‌ನಲ್ಲಿ ಬರೆದಿದೆ.
ಇರಾನ್ ಸುಪ್ರೀಂ ಲೀಡರ್ ಆಗಿ ಖಮೇನಿ ಪುತ್ರ ಮೊಜ್ತಬಾ ಅಧಿಕಾರ ಸ್ವೀಕಾರ
ಹೆಚ್ಚುವರಿ ಸೇವೆಗಳು ಭಾರತವನ್ನು ನ್ಯೂಯಾರ್ಕ್, ಲಂಡನ್ (ಹೀತ್ರೋ), ಫ್ರಾಂಕ್‌ಫರ್ಟ್, ಪ್ಯಾರಿಸ್ (ಚಾರ್ಲ್ಸ್ ಡಿ ಗಾಲ್), ಆಂಸ್ಟರ್ಡ್ಯಾಮ್, ಜ್ಯೂರಿಕ್, ಮಾಲೆ ಮತ್ತು ಕೊಲಂಬೊ ಸೇರಿದಂತೆ ಪ್ರಮುಖ ಜಾಗತಿಕ ನಗರಗಳೊಂದಿಗೆ ಸಂಪರ್ಕಿಸಲಿವೆ ಎಂದು ಏರ್ ಇಂಡಿಯಾ ತಿಳಿಸಿದೆ. ಈ ವಿಮಾನಗಳು ದೆಹಲಿ ಮತ್ತು ಮುಂಬೈಯಿಂದ ಈ ಗಮ್ಯಸ್ಥಾನಗಳಿಗೆ ತೆರಳಲಿವೆ.
ವಿಮಾನಯಾನ ಸಂಸ್ಥೆಯು ತಿಳಿಸಿದಂತೆ, ಈ 78 ಹೆಚ್ಚುವರಿ ಸೇವೆಗಳು ಎರಡೂ ದಿಕ್ಕುಗಳಲ್ಲಿ ಒಟ್ಟು 17,660 ಹೆಚ್ಚುವರಿ ಆಸನಗಳನ್ನು ಒದಗಿಸಲಿವೆ. ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ಸಾಮರ್ಥ್ಯ ಇನ್ನೂ ನಿರ್ಬಂಧಿತವಾಗಿರುವ ಈ ಅವಧಿಯಲ್ಲಿ, ಪ್ರಯಾಣಿಕರಿಗೆ ಅಗತ್ಯವಾದ ಹೆಚ್ಚುವರಿ ಪ್ರಯಾಣ ಆಯ್ಕೆಗಳು ಲಭ್ಯವಾಗಲಿವೆ.
ವಿಮಾನಯಾನ ಸಂಸ್ಥೆಯ ಪ್ರಕಾರ, ಹೆಚ್ಚುವರಿ ಯುರೋಪಿಯನ್ ಸೇವೆಗಳನ್ನು ಬೋಯಿಂಗ್ 787-8 ವಿಮಾನಗಳಿಂದ ನಿರ್ವಹಿಸಲಾಗುವುದು. ಆದರೆ ಮಾಲೆ ಮತ್ತು ಕೊಲಂಬೊಗೆ ಇರುವ ಸೇವೆಗಳನ್ನು ಏರ್‌ಬಸ್ A320neo ವಿಮಾನಗಳು ಸೇವೆ ನೀಡಲಿವೆ. ದೆಹಲಿಯಿಂದ ನ್ಯೂಯಾರ್ಕ್ ನಡುವೆ ಪ್ರಸ್ತಾವಿತ ವಿಮಾನಗಳನ್ನು ಅಗತ್ಯ ನಿಯಂತ್ರಣಾತ್ಮಕ ಅನುಮತಿಗಳಿಗೆ ಒಳಪಟ್ಟಂತೆ ಬೋಯಿಂಗ್ 777-300ER ವಿಮಾನಗಳ ಮೂಲಕ ನಡೆಸಲಾಗುತ್ತದೆ ಎಂದು ತಿಳಿಸಿದೆ.
ಇರಾನಿನ ತೈಲ ಸಂಗ್ರಹಾಗಾರದ ಮೇಲೆ ಇಸ್ರೇಲ್ ದಾಳಿ
ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿದ ಏರ್ ಇಂಡಿಯಾದ ಮುಖ್ಯ ವಾಣಿಜ್ಯ ಅಧಿಕಾರಿ ನಿಪುನ್ ಅಗರ್ವಾಲ್, ಕಾರ್ಯಾಚರಣೆಯ ಸವಾಲುಗಳ ಹೊರತಾಗಿಯೂ ಯುರೋಪ್ ಮತ್ತು ಉತ್ತರ ಅಮೆರಿಕಕ್ಕೆ ವಿಮಾನಯಾನ ಸಂಸ್ಥೆಯು ತನ್ನ ನಿಗದಿತ ಸೇವೆಗಳನ್ನು ಮುಂದುವರಿಸಿದೆ ಎಂದು ಹೇಳಿದರು.
ಕಾರ್ಯಾಚರಣೆಗಳಿಗೆ ಸುರಕ್ಷಿತವೆಂದು ನಿರ್ಣಯಿಸಲಾದ ಪರ್ಯಾಯ ಮಾರ್ಗಗಳನ್ನು ಬಳಸಿಕೊಂಡು ಹಲವು ಅಂತಾರಾಷ್ಟ್ರೀಯ ಗೇಟ್‌ವೇಗಳಿಗೆ ಸಂಪರ್ಕವನ್ನು ಉಳಿಸಿಕೊಳ್ಳುತ್ತಿದೆ ಎಂದು ಅಗರ್ವಾಲ್ ತಿಳಿಸಿದರು.