ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಹತ್ವದ ಅಪ್‌ಡೇಟ್‌ ಪ್ರಕಟಿಸಿದ ರೈಲ್ವೆ; ತತ್ಕಾಲ್ ಟಿಕೆಟ್ ಬುಕಿಂಗ್‌ ನಿಯಮದಲ್ಲಿ ಬದಲಾವಣೆ: ಇಲ್ಲಿದೆ ಸಂಪೂರ್ಣ ಮಾಹಿತಿ

Railway Tatkal Ticket Booking: ರೈಲ್ವೆ ತತ್ಕಾಲ್ ಟಿಕೆಟ್ ಬುಕಿಂಗ್ ಪ್ರಕ್ರಿಯೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಪ್ರಯಾಣಿಕರಿಗೆ ಟಿಕೆಟ್ ರಿಸರ್ವೇಷನ್‌ ಸಂಬಂಧಿತ ಹೊಸ ನಿಯಮಗಳು ಮತ್ತು ಮಾಹಿತಿಯನ್ನು ತಿಳಿಸುವುದೇ ಈ ಬದಲಾವಣೆಯ ಉದ್ದೇಶ. ಇದರಿಂದ ತತ್ಕಾಲ್ ಟಿಕೆಟ್ ಬುಕಿಂಗ್ ಪ್ರಕ್ರಿಯೆ ಇನ್ನಷ್ಟು ಸುಗಮವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ರೈಲ್ವೆ ತತ್ಕಾಲ್ ಟಿಕೆಟ್ ಬುಕಿಂಗ್‌ನಲ್ಲಿ ಕೊಂಚ ಬದಲಾವಣೆ

ಸಾಂದರ್ಭಿಕ ಚಿತ್ರ -

Priyanka P
Priyanka P Dec 3, 2025 10:34 PM

ನವದೆಹಲಿ: ರೈಲ್ವೆ ಮೀಸಲಾತಿ ಕೌಂಟರ್‌ಗಳಿಂದ ತತ್ಕಾಲ್ ರೈಲು ಟಿಕೆಟ್‌ಗಳನ್ನು ಬುಕಿಂಗ್ (Railway Tatkal Ticket Booking) ಮಾಡಲು ಭಾರತೀಯ ರೈಲ್ವೆ (Indian Railways) ಒಂದು ಬಾರಿಯ ಪಾಸ್‌ವರ್ಡ್‌ಗಳನ್ನು (OTP) ಕಡ್ಡಾಯಗೊಳಿಸಲು ಸಜ್ಜಾಗಿದೆ. ಕೊನೆಯ ಕ್ಷಣದ ಟಿಕೆಟ್ ಬುಕಿಂಗ್ ಸೌಲಭ್ಯದ ದುರುಪಯೋಗವನ್ನು ತಡೆಯುವ ಗುರಿಯನ್ನು ಇದು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲ್ವೆ ರಿಸರ್ವೇಶನ್ ಕೌಂಟರ್‌ಗಳಿಂದ ತತ್ಕಾಲ್ ರೈಲು ಟಿಕೆಟ್‌ಗಳನ್ನು ಬುಕ್ ಮಾಡಲು ಪ್ರಯಾಣಿಕರು ತಮ್ಮ ಮೊಬೈಲ್ ಫೋನ್‌ಗೆ ಬರುವ ಒಟಿಪಿ ಒದಗಿಸಬೇಕಾಗುತ್ತದೆ. ರೈಲ್ವೆ ಸಚಿವಾಲಯವು ನವೆಂಬರ್ 17ರಂದು ಪ್ರಾಯೋಗಿಕವಾಗಿ ಮೀಸಲಾತಿ ಕೌಂಟರ್‌ಗಳಿಂದ ಬುಕ್ ಮಾಡಿದ ಪ್ರಯಾಣಕ್ಕಾಗಿ ಒಟಿಪಿ ಆಧಾರಿತ ತತ್ಕಾಲ್ ಟಿಕೆಟ್ ವ್ಯವಸ್ಥೆಯನ್ನು ಪ್ರಾರಂಭಿಸಿತು. ಈ ಕ್ರಮವು ಆರಂಭದಲ್ಲಿ ಕೆಲವೇ ರೈಲುಗಳನ್ನು ಒಳಗೊಂಡಿತ್ತು. ನಂತರ 52 ರೈಲುಗಳಿಗೆ ವಿಸ್ತರಿಸಿತು.

ರೈಲು ಪಕ್ಕದಲ್ಲೇ ಹಾದು ಹೋಗ್ತಿದ್ರೂ ರೀಲ್ಸ್‌ ಮಾಡಿದ ದಂಪತಿ; ಇವ್ರ ಹುಚ್ಚಾಟದ ವಿಡಿಯೊ ಫುಲ್‌ ವೈರಲ್‌

ಮುಂದಿನ ಕೆಲವು ದಿನಗಳಲ್ಲಿ ಉಳಿದ ಎಲ್ಲ ರೈಲುಗಳ ಕೌಂಟರ್‌ಗಳಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಸಾಮಾನ್ಯ ಬಳಕೆದಾರರಿಗೆ ಕೊನೆಯ ನಿಮಿಷದ ಟಿಕೆಟ್ ಬುಕಿಂಗ್ ಸೌಲಭ್ಯವನ್ನು ಸರಾಗಗೊಳಿಸುವ ಸಲುವಾಗಿ ಒಟಿಪಿ ಆಧಾರಿತ ತತ್ಕಾಲ್ ಟಿಕೆಟ್ ವ್ಯವಸ್ಥೆಯನ್ನು ಪ್ರಸ್ತಾಪಿಸಲಾಗಿದೆ.

ಈ ವ್ಯವಸ್ಥೆಯಡಿ, ರಿಸರ್ವೇಷನ್‌ ಕೌಂಟರ್‌ನಲ್ಲಿ ತತ್ಕಾಲ್ ಟಿಕೆಟ್ ಬುಕ್ ಮಾಡುವಾಗ, ಪ್ರಯಾಣಿಕರು OTP ಸ್ವೀಕರಿಸುತ್ತಾರೆ. ಯಶಸ್ವಿ OTP ಪರಿಶೀಲನೆಯ ನಂತರವೇ ಟಿಕೆಟ್ ದೃಢೀಕರಿಸಲ್ಪಡುತ್ತದೆ ಎಂದು ಸಚಿವಾಲಯ ತಿಳಿಸಿದೆ.

ತತ್ಕಾಲ್ ಟಿಕೆಟ್ ವ್ಯವಸ್ಥೆಯ ದುರುಪಯೋಗವನ್ನು ತಡೆಯುವುದರ ಜತೆಗೆ ನಿಜವಾದ ಪ್ರಯಾಣಿಕರಿಗೆ ಟಿಕೆಟ್‌ಗಳು ಉತ್ತಮವಾಗಿ ಲಭ್ಯವಾಗುವಂತೆ ನೋಡಿಕೊಳ್ಳುವ ಗುರಿಯನ್ನು OTP ಆಧಾರಿತ ಉಪಕ್ರಮ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲ್ವೆ ಟಿಕೆಟ್‌ಗಳಲ್ಲಿ ಪಾರದರ್ಶಕತೆ, ಪ್ರಯಾಣಿಕರ ಅನುಕೂಲತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರಮವು ಒಂದು ಪ್ರಮುಖ ಹೆಜ್ಜೆ ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ರೈಲ್ವೆ ಸಚಿವಾಲಯವು ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸಲು ಮತ್ತು ಟಿಕೆಟ್ ವ್ಯವಸ್ಥೆಯನ್ನು ತಮ್ಮ ಲಾಭಕ್ಕಾಗಿ ದುರುಪಯೋಗ ಮಾಡುತ್ತಿರುವ ಬುಕಿಂಗ್ ಏಜೆಂಟರನ್ನು ತಡೆಯಲು ಕೆಲವು ಕ್ರಮಗಳನ್ನು ಪರಿಚಯಿಸಿದೆ. ಈ ವರ್ಷದ ಜುಲೈನಲ್ಲಿ, ದೇಶಾದ್ಯಂತ ತತ್ಕಾಲ್ ವ್ಯವಸ್ಥೆಯ ಅಡಿಯಲ್ಲಿ ಆನ್‌ಲೈನ್ ಟಿಕೆಟ್ ಕಾಯ್ದಿರಿಸುವಿಕೆಗಳಿಗೆ OTP ಮೂಲಕ ಆಧಾರ್ ಪರಿಶೀಲನೆಯನ್ನು ಸಚಿವಾಲಯ ಕಡ್ಡಾಯಗೊಳಿಸಿತು. ಅಕ್ಟೋಬರ್ 1ರಿಂದ, ಯಾವುದೇ ರೈಲಿಗೆ ಬುಕಿಂಗ್ ತೆರೆದ ನಂತರ ಮೊದಲ 15 ನಿಮಿಷಗಳಲ್ಲಿ ಆಧಾರ್-ದೃಢೀಕೃತ ಬಳಕೆದಾರರಿಗೆ ಮಾತ್ರ IRCTC ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ಮೂಲಕ ಕಾಯ್ದಿರಿಸಿದ ಸಾಮಾನ್ಯ ಟಿಕೆಟ್‌ಗಳನ್ನು ಬುಕ್ ಮಾಡಲು ಸಚಿವಾಲಯ ಅನುಮತಿ ನೀಡಿತು.