ಚೆನ್ನೈ, ಮೇ 18: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ (CM Joseph Vijay) ಮತ್ತು ಅವರ ಟಿವಿಕೆ ನೇತೃತ್ವದ ಸಮ್ಮಿಶ್ರ ಸರ್ಕಾರದ ವಿರುದ್ಧ ಡಿಎಂಕೆಯ ಹಿರಿಯ ನಾಯಕಿ ಮತ್ತು ತಿರುಚೆಂಡೂರು ಶಾಸಕಿ ಅನಿತಾ ರಾಧಾಕೃಷ್ಣನ್ (Anita Radhakrishnan) ತೀವ್ರ ವಾಗ್ದಾಳಿ ನಡೆಸಿದರು. ಟಿವಿಕೆ ನೇತೃತ್ವದ ಸಮ್ಮಿಶ್ರ ಸರ್ಕಾರವು ಆರು ತಿಂಗಳು ಕೂಡ ಉಳಿಯುವುದಿಲ್ಲ ಎಂದು ಹೇಳಿದರು. ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ (MK Stalin) ಶೀಘ್ರದಲ್ಲೇ ಮತ್ತೆ ಅಧಿಕಾರಕ್ಕೆ ಬರುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ತಮಿಳುನಾಡಿನ ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಹಿರಿಯ ನಾಯಕ ಹಾಗೂ ವಿಲ್ಲಿವಕ್ಕಂ ವಿಧಾನಸಭಾ ಕ್ಷೇತ್ರದಿಂದ ಗೆದ್ದಿರುವ ಆದವ್ ಅರ್ಜುನ ಅವರಿಗೆ ಅನಿತಾ ರಾಧಾಕೃಷ್ಣನ್ ಬಹಿರಂಗ ಸವಾಲು ಹಾಕಿದರು. ದಕ್ಷಿಣ ತಮಿಳುನಾಡಿನಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಲ್ಲಿವಾಕ್ಕಂ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ತಿರುಚೆಂದೂರಿನಲ್ಲಿ ತಮ್ಮ ವಿರುದ್ಧ ಸ್ಪರ್ಧಿಸುವಂತೆ ಸವಾಲು ಹಾಕಿದರು.
ಈ ಸರ್ಕಾರ ಇನ್ನು ಕೇವಲ ನಾಲ್ಕೇ ನಾಲ್ಕು ತಿಂಗಳು ಮಾತ್ರ ಇರಲಿದೆ. ಆಡಳಿತ ಪಕ್ಷದಲ್ಲಿ ಆದವ್ ಅರ್ಜುನ ಎಂಬೊಬ್ಬ ವ್ಯಕ್ತಿಯಿದ್ದಾನೆ. ನಿಜವಾಗಿಯೂ ತಾಕತ್ತಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ. ನಾನು ಕೂಡ ರಾಜೀನಾಮೆ ನೀಡುತ್ತೇನೆ. ತಿರುಚೆಂಡೂರಿನಲ್ಲಿ ಸ್ಪರ್ಧಿಸೋಣ. ಇದು ನಮ್ಮ ಊರು, ನಮ್ಮ ಕ್ಷೇತ್ರ. ನನ್ನನ್ನು ಎದುರಿಸಲು ಬರುವವರನ್ನು ಖಂಡಿತಾ ನಾನು ಸೋಲಿಸುತ್ತೇನೆ ಎಂದು ಹೇಳಿದ್ದಾರೆ.
ಸಿಎಂ ವಿಜಯ್ - ತ್ರಿಶಾ ಬಗ್ಗೆ ಕೇಳಿದ್ದಕ್ಕೆ ಉರಿದುಬಿದ್ದ ನಟಿ ಮಾಳವಿಕಾ ಮೋಹನನ್
ತಿರುಚೆಂಡೂರ್ ಕ್ಷೇತ್ರವು 25 ವರ್ಷಗಳಿಂದ ಅನಿತಾ ರಾಧಾಕೃಷ್ಣನ್ ಅವರ ಭದ್ರಕೋಟೆ ಎನಿಸಿಕೊಂಡಿದೆ. ಅವರು ಮೊದಲ ಬಾರಿಗೆ 2001ರ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಪಕ್ಷದ ಪ್ರಬಲ ಪ್ರತಿಸ್ಪರ್ಧಿಯಾದ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (AIADMK) ಅಭ್ಯರ್ಥಿಯಾಗಿ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದರು.
ಮಾಜಿ ಸಿಎಂ, ಡಿಎಂಕೆ ನಾಯಕ ಸ್ಟಾಲಿನ್ ತಮ್ಮ ಭದ್ರಕೋಟೆ ಕೊಲತ್ತೂರ್‌ನಲ್ಲಿ ವಿ.ಎಸ್. ಬಾಬು ವಿರುದ್ಧ ಸೋತು ಸುಣ್ಣವಾದ ನಂತರವೂ ಅನಿತಾ ರಾಧಾಕೃಷ್ಣನ್ ಡಿಎಂಕೆ ಮುಖ್ಯಸ್ಥರನ್ನು ಸಮರ್ಥಿಸಿಕೊಂಡರು. ನಮ್ಮ ನಾಯಕ ಎಂ.ಕೆ. ಸ್ಟಾಲಿನ್ ತಿರುಚ್ಚಿಯಲ್ಲಿ ಸ್ಪರ್ಧಿಸಬೇಕೆಂದು ನಾವು ಬಯಸುತ್ತೇವೆ. ಸ್ಟಾಲಿನ್, ಕೊಲತ್ತೂರ್ ಅನ್ನು ಸಿಂಗಾಪುರವಾಗಿ ಬದಲಾಯಿಸಿದರು ಎಂದು ಅವರು ಹೇಳಿದರು.
ವಿ.ಎಸ್. ಬಾಬು ಈ ಹಿಂದೆ ಡಿಎಂಕೆಯಲ್ಲಿದ್ದರು. ಆ ಪಕ್ಷಕ್ಕೆ ರಾಜೀನಾಮೆ ನೀಡಿ ವಿಜಯ್ ಅವರ ಟಿವಿಕೆ ಸೇರಿದ್ದರು. ಚುನಾವಣೆಯಲ್ಲಿ ತಮ್ಮ ಮಾಜಿ ಮುಖ್ಯಸ್ಥರನ್ನೇ ಸೋಲಿಸಿದರು. ಇನ್ನು ಟಿವಿಕೆ ಮತ್ತು ಡಿಎಂಕೆ ನಡುವಿನ ರಾಜಕೀಯ ಸಂಘರ್ಷ ಹೆಚ್ಚುತ್ತಿರುವ ಮಧ್ಯೆ ಅನಿತಾ ರಾಧಾಕೃಷ್ಣನ್ ಈ ಹೇಳಿಕೆಯನ್ನು ನೀಡಿದ್ದಾರೆ.