ಸಿಎಂ ವಿಜಯ್ - ತ್ರಿಶಾ ಬಗ್ಗೆ ಕೇಳಿದ್ದಕ್ಕೆ ಉರಿದುಬಿದ್ದ ನಟಿ ಮಾಳವಿಕಾ ಮೋಹನನ್; ವಿಡಿಯೋ ವೈರಲ್!
ತಮಿಳು ನಟ ವಿಜಯ್ ಹಾಗೂ ತ್ರಿಶಾ ಅವರ ವೈಯಕ್ತಿಕ ವಿಚಾರಗಳ ಕುರಿತು ಚೆನ್ನೈ ಇವೆಂಟ್‌ನಲ್ಲಿ ಪ್ರಶ್ನೆ ಕೇಳಿದ ಮಾಧ್ಯಮಗಳ ವಿರುದ್ಧ ನಟಿ ಮಾಳವಿಕಾ ಮೋಹನನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೀಳು ಅಭಿರುಚಿಯ ಮತ್ತು ಸನ್ಸೇಷನಲ್ ಸುದ್ದಿಗಾಗಿ ಮುಜುಗರ ತಂದವರ ವಿರುದ್ಧ ಟ್ವಿಟರ್‌ನಲ್ಲಿ ಮಾಳವಿಕಾ ಮೋಹನನ್ ಆಕ್ರೋಶ ಹೊರಹಾಕಿದ್ದಾರೆ.
-
ಬಹುಭಾಷಾ ನಟಿ ಮಾಳವಿಕಾ ಮೋಹನನ್ ಅವರಿಗೆ ಈಚೆಗೆ ಮುಜುಗರದ ಸನ್ನಿವೇಶವೊಂದು ಎದುರಾಗಿದೆ. ಅದು ತಮಿಳು ಮಾಧ್ಯಗಳಿಂದ! ಹೌದು, ಈಚೆಗೆ ನಟ ವಿಜಯ್ ಮತ್ತು ತ್ರಿಶಾ ಅವರಿಗೆ ಸಂಬಂಧಿಸಿದ ಪ್ರಶ್ನೆಯ ಬಗ್ಗೆ ನಟಿ ಮಾಳವಿಕಾ ಮೋಹನನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಅನಗತ್ಯ ಮತ್ತು ಸನ್ಸೇಷನಲ್ ಆದ ಕೆಲವು ಪ್ರಶ್ನೆಗಳನ್ನು ಕೇಳಿದರು" ಎಂದು ಮಾಳವಿಕಾ ಹೇಳಿದ್ದಾರೆ.
ಅಷ್ಟಕ್ಕೂ ಆಗಿದ್ದೇನು?
ಈಚೆಗೆ ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ನಟಿ ಮಾಳವಿಕಾ ಅವರು ಆಗಮಿಸಿದ್ದರು. ಅಲ್ಲಿ ಎದುರಾದ ಮಾಧ್ಯಮ ಮಂದಿ, "ವಿಜಯ್ ಅವರ ಜರ್ನಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.." ಎಂದು ಪ್ರಶ್ನಿಸುತ್ತಲೇ, ಇತ್ತೀಚೆಗೆ ನಟಿ ತ್ರಿಶಾ ಕೃಷ್ಣನ್ ಅವರು ವಿಜಯ್ ಅವರೊಂದಿಗೆ ಹಲವು ಸ್ಥಳಗಳಿಗೆ ಜೊತೆಯಾಗಿ ಹೋಗುತ್ತಿದ್ದಾರೆ ಎಂಬ ವರದಿಗಳನ್ನೂ ಆ ಪ್ರಶ್ನೆಯಲ್ಲಿ ಉಲ್ಲೇಖಿಸಲಾಗಿತ್ತು. ಇದರಿಂದ ತೀವ್ರ ಅಸಮಾಧಾನಗೊಂಡ ಮಾಳವಿಕಾ, "ನನಗೆ ನೀವು ಎಂತಹ ಪ್ರಶ್ನೆಗಳನ್ನು ಕೇಳುತ್ತಿದ್ದೀರಿ?" ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು. ಈ ವಿಡಿಯೋ ಕ್ಲಿಪ್‌ಗೆ ಆನ್‌ಲೈನ್‌ನಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಕೇಳಿದ ಮಾಧ್ಯಮದವರಿಗೆ ನೀರಿಳಿಸಿದ್ದಾರೆ.
ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ ನಟಿ
ನಂತರ ಈ ಕುರಿತು ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಮಾಳವಿಕಾ, "ನಾನು ನಿನ್ನೆ ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ. ನನಗೆ ಎಲ್ಲಾ ಪತ್ರಕರ್ತರು ಮತ್ತು ತಮಿಳುನಾಡು ಮಾಧ್ಯಮದ ಸದಸ್ಯರ ಬಗ್ಗೆ ಅತ್ಯಂತ ಗೌರವವಿದೆ. ಆದರೆ ಅವರಲ್ಲಿ ಒಂದಿಬ್ಬರು ತೀರಾ ಕೀಳುಅಭಿರುಚಿಯ, ಸಂಪೂರ್ಣವಾಗಿ ಅನಗತ್ಯ ಮತ್ತು ಸನ್ಸೇಷನಲ್ ಆದ ಕೆಲವು ಪ್ರಶ್ನೆಗಳನ್ನು ಪಟ್ಟುಹಿಡಿದು ಕೇಳಿದರು" ಎಂದು ಬೇಸರ ಹೊರಹಾಕಿದ್ದಾರೆ.
ಮಾಳವಿಕಾ ಮೋಹನನ್ ಟ್ವೀಟ್
I went for an event yesterday, and while I have the utmost regard for all the journalists and members of the Tamil Nadu media, a couple of them persistently asked some very distasteful questions that were completely unnecessary and sensational.
— Malavika Mohanan (@MalavikaM_) May 16, 2026
Thalapathy Vijay is someone I’ve…
"ದಳಪತಿ ವಿಜಯ್ ಅವರು ಕಳೆದ ಏಳು ವರ್ಷಗಳಿಂದ ನನಗೆ ಪರಿಚಿತರು. ಅವರ ಮೇಲೆ ನನಗೆ ಅಪಾರ ಗೌರವವಿದೆ ಹಾಗೂ ಅವರನ್ನು ಸ್ನೇಹಿತ ಎಂದು ಕರೆಯಲು ನಾನು ಕೃತಜ್ಞಳಾಗಿದ್ದೇನೆ. ಅವರ ವೃತ್ತಿಜೀವನದ ಪಯಣವನ್ನು ನೋಡುವುದು ನನಗೊಂದು ಅದ್ಭುತ ಅನುಭವ. ಭವಿಷ್ಯದಲ್ಲಿ ಮಾಧ್ಯಮಗಳು ಕೇಳುವ ಪ್ರಶ್ನೆಗಳು ಎಲ್ಲರ ಹಿತದೃಷ್ಟಿಯಿಂದ ಗೌರವಾನ್ವಿತವಾಗಿ ಮತ್ತು ವಿವೇಚನೆಯಿಂದ ಕೂಡಿರಲಿ ಎಂದು ನಾನು ನಿಜವಾಗಿಯೂ ಬಯಸುತ್ತೇನೆ" ಎಂದು ಮಾಳವಿಕಾ ಬರೆದುಕೊಂಡಿದ್ದಾರೆ.
ವಿಜಯ್ - ತ್ರಿಶಾ ಬಗ್ಗೆ ಮಾಳವಿಕಾಗೆ ಪ್ರಶ್ನೆ
#MalavikaMohanan asks, “What kind of questions are you asking me?” when asked if she would travel with #ThalapathyVijay like #Trisha. She says #Vijay sir is a very close friend of hers, she’s happy for his victory wishing him all the best. pic.twitter.com/Na7Y51lUfX
— Movies Singapore (@MoviesSingapore) May 16, 2026
ಮಾಸ್ಟರ್ ಸಿನಿಮಾದಲ್ಲಿ ಒಟ್ಟಿಗೆ ನಟನೆ
ಮಾಳವಿಕಾ ಮತ್ತು ವಿಜಯ್ ಅವರು ಈ ಹಿಂದೆ ಲೋಕೇಶ್ ಕನಕರಾಜ್ ನಿರ್ದೇಶನದ 'ಮಾಸ್ಟರ್' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಆ ಚಿತ್ರದಲ್ಲಿ ವಿಜಯ್ ಸೇತುಪತಿ, ಆಂಡ್ರಿಯಾ ಜೆರೆಮಿಯಾ, ಅರ್ಜುನ್ ದಾಸ್, ಶಂತನು ಭಾಗ್ಯರಾಜ್ ಮತ್ತು ಗೌರಿ ಕಿಶನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. 'ಮಾಸ್ಟರ್' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸನ್ನು ಗಳಿಸಿತ್ತು. ಪ್ರಸ್ತುತ, ಮಾಳವಿಕಾ ಅವರು ನಿರ್ದೇಶಕ ತ್ಯಾಗರಾಜನ್ ಕುಮಾರರಾಜ ಅವರ 'ಪಾಕೆಟ್ ನಾವೆಲ್' ಚಿತ್ರದಲ್ಲಿ ಕೆಲಸ ಮಾಡುತ್ತಿದ್ದು, ಇದರಲ್ಲಿ ವಿಜಯ್ ಸೇತುಪತಿ, ರಾಜ್ ಬಿ ಶೆಟ್ಟಿ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.