ನವದೆಹಲಿ, ಸೆ. 30: ಭಾರತ–ಅಮೆರಿಕ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಬುಧವಾರ ದೂರವಾಣಿ ಮೂಲಕ ಮಾತುಕತೆ ನಡೆಸಿದರು. ಮಾತುಕತೆ ಧನಾತ್ಮಕವಾಗಿತ್ತು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಎಕ್ಸ್‌ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು, ಉಭಯ ದೇಶಗಳ ನಡುವಿನ ವ್ಯಾಪಾರ, ರಕ್ಷಣೆ, ಇಂಧನ, ನಿರ್ಣಾಯಕ ತಂತ್ರಜ್ಞಾನಗಳು ಸೇರಿ ವಿವಿಧ ಕ್ಷೇತ್ರಗಳಲ್ಲಿನ ಸಹಕಾರದ ಪ್ರಗತಿಯನ್ನು ಇಬ್ಬರೂ ಪರಿಶೀಲಿಸಿದ್ದಾಗಿ ಹೇಳಿದ್ದಾರೆ.
ಭಾರತ ಮತ್ತು ಅಮೆರಿಕ ನಡುವಿನ ಸಮಗ್ರ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವವನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯಲು ನಿಕಟ ಸಂಪರ್ಕವನ್ನು ಮುಂದುವರಿಸುವುದಾಗಿ ಇಬ್ಬರೂ ನಾಯಕರು ಒಪ್ಪಿಕೊಂಡಿದ್ದಾರೆ. ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ಬೆಳವಣಿಗೆಗಳು, ಜಾಗತಿಕ ಶಾಂತಿ ಮತ್ತು ಭದ್ರತೆಯನ್ನು ಉತ್ತೇಜಿಸುವ ಪ್ರಯತ್ನಗಳ ಬಗ್ಗೆಯೂ ಅಭಿಪ್ರಾಯ ವಿನಿಮಯ ನಡೆದಿದೆ.
ನರೇಂದ್ರ ಮೋದಿ ಎಕ್ಸ್ ಪೋಸ್ಟ್:
ಈ ಮಾತುಕತೆ ನಡೆಯುತ್ತಿರುವ ಸಂದರ್ಭದಲ್ಲಿ ಭಾರತ–ಅಮೆರಿಕ ನಡುವೆ ವ್ಯಾಪಾರ ಒಪ್ಪಂದದ ಕುರಿತ ಚರ್ಚೆಗಳು ಮುಂದುವರಿದಿವೆ. ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಸೆಪ್ಟೆಂಬರ್ 29ರಿಂದ ಅಕ್ಟೋಬರ್ 5ರವರೆಗೆ ಅಮೆರಿಕ ಪ್ರವಾಸದಲ್ಲಿದ್ದು, ಮಧ್ಯಂತರ ವ್ಯಾಪಾರ ಒಪ್ಪಂದ ಸೇರಿ ಹಲವು ವಿಚಾರಗಳ ಕುರಿತು ಚರ್ಚೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಮೋಸ್ಟ್ ವಾಂಟೆಡ್ ಲಷ್ಕರ್ ಉಗ್ರ ಮೂಸಾನನ್ನು ಹೊಡೆದುರುಳಿಸಿದ್ದೇ ರೋಚಕ
‘ಭಾರತ ಆಯ್ಕೆಗಳನ್ನು ಸೀಮಿತಗೊಳಿಸಬೇಕೆಂಬ ನಿರೀಕ್ಷೆ ಇತ್ತು’: ಜೈಶಂಕರ್
ಮೋದಿ–ಟ್ರಂಪ್ ಮಾತುಕತೆಗೆ ಒಂದು ದಿನ ಮುನ್ನ ವಿದೇಶಾಂಗ ಸಚಿವ ಎಸ್. ಜೈಶಂಕರ್ ನ್ಯೂಯಾರ್ಕ್‌ನ ಏಷ್ಯಾ ಸೊಸೈಟಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತ–ಅಮೆರಿಕ ಸಂಬಂಧ ಹಾಗೂ ಬದಲಾಗುತ್ತಿರುವ ಜಾಗತಿಕ ರಾಜತಾಂತ್ರಿಕ ಪರಿಸ್ಥಿತಿಯ ಕುರಿತು ಮಾತನಾಡಿದ್ದರು. ಹಿಂದೆ ಅಮೆರಿಕದಲ್ಲಿ ಭಾರತವು ತನ್ನ ರಾಜತಾಂತ್ರಿಕ ಆಯ್ಕೆಗಳನ್ನು ಹೆಚ್ಚು ವಿಸ್ತರಿಸದೆ, ಮುಖ್ಯವಾಗಿ ವಾಷಿಂಗ್ಟನ್‌ನೊಂದಿಗಿನ ಸಂಬಂಧಕ್ಕೆ ಆದ್ಯತೆ ನೀಡಬೇಕು ಎಂಬ ಅಭಿಪ್ರಾಯವಿತ್ತು ಎಂದು ಜೈಶಂಕರ್ ಹೇಳಿದ್ದಾರೆ. ಆದರೆ ಈಗ ಆ ರೀತಿಯ ನಿರೀಕ್ಷೆ ಬದಲಾಗಿದ್ದು, ದೇಶಗಳು ಒಂದೇ ಶಕ್ತಿಯೊಂದಿಗೆ ಸೀಮಿತವಾಗದೆ ಹಲವು ರಾಷ್ಟ್ರಗಳೊಂದಿಗೆ ಏಕಕಾಲದಲ್ಲಿ ಸಂಬಂಧಗಳನ್ನು ಬೆಳೆಸುತ್ತಿವೆ ಎಂದು ಅವರು ವಿವರಿಸಿದ್ದಾರೆ.
“ಎಲ್ಲರೂ ಎಲ್ಲರೊಂದಿಗೆ ವ್ಯವಹರಿಸುತ್ತಿದ್ದಾರೆ ಎಂಬ ರೀತಿಯ ಜಾಗತಿಕ ರಾಜತಾಂತ್ರಿಕ ವಾತಾವರಣ ನಿರ್ಮಾಣವಾಗುತ್ತಿದ್ದು, ಇದು ಜಗತ್ತು ಬಹುಧ್ರುವೀಯ ವ್ಯವಸ್ಥೆಯತ್ತ ಸಾಗುತ್ತಿರುವುದನ್ನು ಸೂಚಿಸುತ್ತದೆʼʼ ಎಂದು ಜೈಶಂಕರ್ ಅವರ ಅಭಿಪ್ರಾಯ ಪಟ್ಟರು.
ಜೈಶಂಕರ್ ಅಮೆರಿಕ–ಚೀನಾ ನಡುವಿನ ಸ್ಪರ್ಧೆಯ ಹಿನ್ನೆಲೆಯಲ್ಲಿ ಭಾರತ ಸೇರಿ ಇತರ ರಾಷ್ಟ್ರಗಳು ತಮ್ಮ ಅವಲಂಬನೆಗಳನ್ನು ಕಡಿಮೆ ಮಾಡಿಕೊಂಡು, ವಿವಿಧ ದೇಶಗಳೊಂದಿಗೆ ಸಂಬಂಧಗಳನ್ನು ವಿಸ್ತರಿಸುವ ಅಗತ್ಯವನ್ನೂ ಒತ್ತಿಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಮೋದಿ–ಟ್ರಂಪ್ ಮಾತುಕತೆಯಲ್ಲಿ ವ್ಯಾಪಾರದಿಂದ ಹಿಡಿದು ರಕ್ಷಣೆ, ಇಂಧನ ಮತ್ತು ತಂತ್ರಜ್ಞಾನ ಸಹಕಾರದವರೆಗೆ ಹಲವು ಪ್ರಮುಖ ಕ್ಷೇತ್ರಗಳು ಚರ್ಚೆಗೆ ಬಂದಿರುವುದು ಗಮನಾರ್ಹ.