ನವದೆಹಲಿ, ಸೆ. 12: ದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ (BRICS) ಶೃಂಗಸಭೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ(PM Modi) ಹಾಗೂ ಚೀನಾ ಅಧ್ಯಕ್ಷ ಕ್ಷಿ ಜಿನ್‌ಪಿಂಗ್ (Xi Jinping) ದ್ವಿಪಕ್ಷೀಯ ಮಾತುಕತೆ ನಡೆಸಿದರು. ಏಳು ವರ್ಷಗಳ ಬಳಿಕ ಭಾರತಕ್ಕೆ ಭೇಟಿ ನೀಡಿರುವ ಕ್ಷಿ ಜಿನ್‌ಪಿಂಗ್, ಭಾರತ–ಚೀನಾ ಸಂಬಂಧಗಳ (India-China Relations) ಕುರಿತು ಪ್ರಧಾನಿ ಮೋದಿ ಅವರೊಂದಿಗೆ ಸಮಗ್ರ ಚರ್ಚೆ ನಡೆಸಿದರು. ಮಾತುಕತೆಯಲ್ಲಿ ಗಡಿ ವಿಚಾರ, ವ್ಯಾಪಾರ, ಹೂಡಿಕೆ ಹಾಗೂ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚಿಸಲಾಯಿತು. ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಸೌಹಾರ್ದತೆ ಮುಂದುವರಿಯುವುದು ಉಭಯ ದೇಶಗಳ ನಡುವಿನ ಸಂಬಂಧಗಳ ಅಭಿವೃದ್ಧಿಗೆ ಅತ್ಯಗತ್ಯ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು.
ಗಡಿ ಸಂಬಂಧಿತ ವಿಷಯಗಳಲ್ಲಿ ಈಗಾಗಲೇ ಮಾಡಿಕೊಂಡಿರುವ ಒಪ್ಪಂದಗಳು ಹಾಗೂ ತಿಳುವಳಿಕೆಗಳನ್ನು ಎರಡೂ ದೇಶಗಳು ಪಾಲಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದರು. ಗಡಿ ವಿವಾದಕ್ಕೆ ನ್ಯಾಯಸಮ್ಮತ, ಸಮಂಜಸ ಹಾಗೂ ಪರಸ್ಪರ ಒಪ್ಪಿಗೆಯ ಪರಿಹಾರ ಕಂಡುಕೊಳ್ಳುವ ಬದ್ಧತೆಯನ್ನು ಉಭಯ ನಾಯಕರು ಪುನರುಚ್ಚರಿಸಿದರು.
ಚೀನಾ ಅಧ್ಯಕ್ಷ ಕ್ಷಿ ಜಿನ್‌ಪಿಂಗ್ ಜತೆ ನರೇಂದ್ರ ಮೋದಿ ಚರ್ಚೆ:
ವಿದೇಶಾಂಗ ಸಚಿವಾಲಯದ ಪ್ರಕಾರ, 2025ರ ಆಗಸ್ಟ್‌ನಲ್ಲಿ ಟಿಯಾಂಜಿನ್‌ನಲ್ಲಿ ನಡೆದ ಭೇಟಿಯ ಬಳಿಕ ಭಾರತ–ಚೀನಾ ಸಂಬಂಧಗಳಲ್ಲಿ ಸ್ಥಿರ ಪ್ರಗತಿ ಕಂಡುಬಂದಿರುವುದನ್ನು ಉಭಯ ನಾಯಕರು ಸ್ವಾಗತಿಸಿದರು. ಭಿನ್ನಾಭಿಪ್ರಾಯಗಳು ವಿವಾದಗಳಾಗಿ ಪರಿವರ್ತನೆಯಾಗಬಾರದು ಎಂಬ ನಿಲುವನ್ನು ಪ್ರಧಾನಿ ಮೋದಿ ವ್ಯಕ್ತಪಡಿಸಿದರು. ಪರಸ್ಪರ ಗೌರವ, ಪರಸ್ಪರ ಸಂವೇದನೆ ಮತ್ತು ಪರಸ್ಪರ ಹಿತಾಸಕ್ತಿ ಎಂಬ ಮೂರು ಅಂಶಗಳು ಎರಡೂ ದೇಶಗಳ ಸಂಬಂಧಕ್ಕೆ ಮಾರ್ಗದರ್ಶಿಯಾಗಬೇಕು ಎಂದು ಅವರು ಹೇಳಿದರು.
ತಮ್ಮ ಭೇಟಿಯ ಆಹ್ವಾನವನ್ನು ಜೂನ್ 15ರಂದು ತಮ್ಮ ಹುಟ್ಟುಹಬ್ಬದ ದಿನ ಸ್ವೀಕರಿಸಿದ್ದಾಗಿ ಕ್ಷಿ ಜಿನ್‌ಪಿಂಗ್ ತಿಳಿಸಿದರು. ಮೋದಿ ಅವರನ್ನು ಇದುವರೆಗೆ 21 ಬಾರಿ ಭೇಟಿಯಾಗಿದ್ದು, ಈ ಭೇಟಿಗಳಲ್ಲಿ ಹಲವು ಪ್ರಮುಖ ಒಮ್ಮತಗಳನ್ನು ಸಾಧಿಸಲಾಗಿದೆ. ಅವು ಭಾರತ–ಚೀನಾ ಸಂಬಂಧಗಳನ್ನು ಸ್ಥಿರ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸಿವೆ ಎಂದು ಅವರು ಹೇಳಿದರು.
7 ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ ಭೇಟಿ; ಮೋದಿ-ಕ್ಸಿ ದ್ವಿಪಕ್ಷೀಯ ಸಭೆ
ಭಾರತ ಮತ್ತು ಚೀನಾಗಳಿಗೆ ವಿಭಿನ್ನ ರಾಷ್ಟ್ರೀಯ ಪರಿಸ್ಥಿತಿಗಳಿದ್ದರೂ, ಪರಸ್ಪರರ ಸಾಮರ್ಥ್ಯಗಳಿಂದ ಕಲಿತು, ಒಬ್ಬರನ್ನೊಬ್ಬರು ಬೆಂಬಲಿಸುವ ಮೂಲಕ ಸಾಮಾನ್ಯ ಅಭಿವೃದ್ಧಿಯನ್ನು ಸಾಧಿಸಬಹುದು ಎಂದು ಕ್ಷಿ ಜಿನ್‌ಪಿಂಗ್ ಹೇಳಿದರು.
ವಿಶ್ವದ ಎರಡು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳು ಹಾಗೂ ಜಾಗತಿಕ ದಕ್ಷಿಣದ ಪ್ರಮುಖ ಸದಸ್ಯರಾಗಿ ಭಾರತ ಮತ್ತು ಚೀನಾಗಳು ಮಹತ್ವದ ಜವಾಬ್ದಾರಿ ಹೊಂದಿವೆ. ವಿಶ್ವ ಶಾಂತಿ, ಸ್ಥಿರತೆ, ಅಭಿವೃದ್ಧಿ ಮತ್ತು ಸಮೃದ್ಧಿಗೆ ಎರಡೂ ರಾಷ್ಟ್ರಗಳು ಹೆಚ್ಚಿನ ಕೊಡುಗೆ ನೀಡಬೇಕು ಎಂದು ಅವರು ಹೇಳಿದರು. ಮಾತುಕತೆಯ ಬಳಿಕ ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, ಅಧ್ಯಕ್ಷ ಶಿ ಜಿನ್‌ಪಿಂಗ್ ಅವರೊಂದಿಗೆ ಭಾರತ–ಚೀನಾ ಸಂಬಂಧಗಳ ಸಂಪೂರ್ಣ ವ್ಯಾಪ್ತಿಯನ್ನು ಪರಿಶೀಲಿಸಿರುವುದಾಗಿ ತಿಳಿಸಿದರು. ಮುಂದಿನ ವರ್ಷ ಚೀನಾ ವಹಿಸಿಕೊಳ್ಳಲಿರುವ ಬ್ರಿಕ್ಸ್ ಅಧ್ಯಕ್ಷ ಸ್ಥಾನಕ್ಕೆ ಭಾರತದಿಂದ ಶುಭಾಶಯಗಳನ್ನು ಕೂಡ ಅವರು ಕೋರಿದರು.
ಈ ಭೇಟಿಗೂ ಮುನ್ನ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ನಡುವೆ ವಿಶೇಷ ಪ್ರತಿನಿಧಿಗಳ ಮಟ್ಟದ ಮಾತುಕತೆ ನಡೆದಿತ್ತು. ಗಡಿ ನಿರ್ಧಾರ, ಗಡಿಯಾಚೆಗಿನ ಸಹಕಾರ ಹಾಗೂ ವಾಸ್ತವ ನಿಯಂತ್ರಣ ರೇಖೆಯ (LAC) ಉದ್ದಕ್ಕೂ ಶಾಂತಿ ಕಾಪಾಡುವ ವಿಚಾರಗಳು ಈ ಚರ್ಚೆಯಲ್ಲಿ ಪ್ರಮುಖವಾಗಿದ್ದವು.
ಭಾರತ–ಚೀನಾ ಗಡಿ ಮಾತುಕತೆಗಾಗಿ ವಿಶೇಷ ಪ್ರತಿನಿಧಿಗಳ ವ್ಯವಸ್ಥೆಯನ್ನು 2003ರಲ್ಲಿ ಸ್ಥಾಪಿಸಲಾಗಿದ್ದು, ಸುಮಾರು 3,488 ಕಿ.ಮೀ. ಉದ್ದದ ಗಡಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳುವುದು ಇದರ ಪ್ರಮುಖ ಉದ್ದೇಶವಾಗಿದೆ.