ನವದೆಹಲಿ: 104 ಅಕ್ರಮ ವಲಸಿಗರನ್ನು ಹೊತ್ತ ಅಮೆರಿಕದ ವಿಶೇಷ ಮಿಲಿಟರಿ ವಿಮಾನವು ಬುಧವಾರ (ಫೆ.5) ಪಂಜಾಬ್‌ನ(Punjab) ಅಮೃತಸರದಲ್ಲಿ(Amritsar) ಬಂದಿಳಿದಿದ್ದು, ಡೊನಾಲ್ಡ್ ಟ್ರಂಪ್(Donald Trump) ಆಡಳಿತವು ಗಡಿಪಾರು ಮಾಡಿದ ಭಾರತೀಯರನ್ನು ಅದು ಕರೆತಂದಿದೆ. ನೂರಕ್ಕೂ ಹೆಚ್ಚು ಅಕ್ರಮ ವಲಸಿಗರ ಕೈ ಮತ್ತು ಕಾಲುಗಳಿಗೆ ಕೋಳ ಹಾಕಿ ಕರೆ ತರಲಾಗಿದೆ. ಅಮೆರಿಕಗೆ ಅಕ್ರಮ ವಲಸಿಗರನ್ನು ಕೊಂಡೊಯ್ದಿದ್ದ ಏಜೆಂಟರು ಅವರೆಲ್ಲರನ್ನು ಪನಾಮ ಕಾಡಿನಲ್ಲಿ ಅಡಗಿಸಿದ್ದರು. ಭಾರತ ಮೂಲದ ವಲಸಿಗರು ಜಡಿ ಮಳೆ ಮತ್ತು ಕೆಸರಿನ ಮಧ್ಯೆಯೇ ಅಲ್ಲಿ ಬೀಡು ಬಿಟ್ಟಿದ್ದರು. ಆ ಕುರಿತ ಹಳೆಯ ವಿಡಿಯೊವೊಂದು ಇದೀಗ ಎಲ್ಲೆಡೆ ಸಾಕಷ್ಟು ವೈರಲ್ ಆಗಿದೆ.
ಹರಿದಾಡುತ್ತಿರುವ ವಿಡಿಯೊದಲ್ಲಿ ಕಾಣಿಸುವಂತೆ ರಬ್ಬರ್ ಬೂಟುಗಳನ್ನು ಧರಿಸಿದ ಪುರುಷರು ಕೆಸರಿನ ಮಧ್ಯೆ ಕುಳಿತಿದ್ದಾರೆ. ಮಹಿಳೆಯರು ತಮ್ಮ ತೊಡೆಯ ಮೇಲೆ ಹಸುಗೂಸುಗಳನ್ನು ಮಲಗಿಸಿಕೊಂಡು ಡೇರೆಯ ಬಳಿ ಕಾಣಿಸಿಕೊಂಡಿದ್ದಾರೆ. ಒಂದು ವಿಡಿಯೊದಲ್ಲಿ ಕಾಡಿನಲ್ಲಿ ಭಾರೀ ಮಳೆಯಿಂದಾಗಿ ವಲಸಿಗರ ಗುಂಪು ರೇನ್‌ಕೋಟ್‌ಗಳನ್ನು ಧರಿಸಿರುವುದನ್ನು ತೋರಿಸಲಾಗಿದೆ. ಪನಾಮ ಕಾಡಿನಿಂದ ಅವರು ಕೋಸ್ಟಾರಿಕಾ, ನಿಕರಾಗುವಾ, ಹೊಂಡುರಾಸ್ ಮತ್ತು ಗ್ವಾಟೆಮಾಲಾ ಮೂಲಕ ಹಾದುಹೋಗಿ, ನಂತರ ಮೆಕ್ಸಿಕೊದಿಂದ ಅಮೆರಿಕ ತಲುಪಿದ್ದರು ಎನ್ನಲಾಗಿದೆ.
ಅಮೆರಿಕ ದೇಶಕ್ಕೆ ಅಕ್ರಮವಾಗಿ ವಲಸೆ ಹೋಗುವ ಸಲುವಾಗಿ ಏಜೆಂಟರಿಗೆ ವಲಸಿಗರು ಹಣ ಪಾವತಿಸಬೇಕಾಗಿತ್ತು. ಹಾಗಾಗಿ ಅನೇಕರು ತಮ್ಮ ಭೂಮಿ ಮತ್ತು ಇತರ ಆಸ್ತಿಗಳನ್ನು ಮಾರಾಟ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಸುದ್ದಿಯನ್ನೂ ಓದಿ:Illegal Immigrants: ತನ್ನ ನೆಲದಿಂದ ಅಕ್ರಮ ವಲಸಿಗರನ್ನು ಹೊರದಬ್ಬಲು ಟ್ರಂಪ್ ಅನುಸರಿಸುತ್ತಿರುವ ರೀತಿ ಯಾವುದು?
ವಲಸಿಗರ ಕೈಗೆ ಕೋಳ ಹಾಕುವುದು ಅಮೆರಿಕದ ನೀತಿ: ಜೈಶಂಕರ್ ಸ್ಪಷ್ಟನೆ
ಅಕ್ರಮ ವಲಸಿಗರನ್ನು ದೇಶಗಳಿಗೆ ಗಡಿಪಾರು ಮಾಡುವ ಪ್ರಕ್ರಿಯೆ ಹೊಸದಲ್ಲ ಮತ್ತು ಕೈಗೆ ಕೋಳ ಹಾಕುವುದು ಅಮೆರಿಕದ ನೀತಿ(America Policy) ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್(Jaishankar) ಹೇಳಿದ್ದಾರೆ. ಎಲ್ಲಾ ದೇಶಗಳು ತಮ್ಮ ಪ್ರಜೆಗಳು ವಿದೇಶದಲ್ಲಿ ಅಕ್ರಮವಾಗಿ ನೆಲೆಸಿರುವುದು ಕಂಡುಬಂದರೆ ಅವರನ್ನು ವಾಪಸ್ ಕರೆಸಿಕೊಳ್ಳಬೇಕು. ಅಕ್ರಮ ವಲಸೆಯನ್ನು ಕೂಡಲೇ ತಡೆಯಬೇಕು ಅಂತಲೂ ಅವರು ಕರೆ ನೀಡಿದರು. ತಮ್ಮ ದೇಶದಲ್ಲಿ ಅಕ್ರಮ ವಲಸಿಗರು ಇದ್ದರೆ ವಾಪಸ್ ಕಳುಹಿಸುತ್ತಾರೆ. ಈ ಪ್ರಕ್ರಿಯೆ ಸಾಮಾನ್ಯವಾಗಿ ಎಲ್ಲಾ ದೇಶಗಳಲ್ಲೂ ಇದೆ. ಅಮೆರಿಕದಲ್ಲಿ ಅಕ್ರಮ ವಲಸಿಗರನ್ನು ಗಡಿಪಾರು ಮಾಡುತ್ತಿದ್ದಾರೆ. ಈ ಪ್ರಕ್ರಿಯೆ 2009ರಿಂದಲೂ ಇದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಬುಧವಾರ(ಫೆ.5) ಅಮೆರಿಕದಿಂದ ಗಡಿಪಾರು ಮಾಡಲಾದ 104 ಭಾರತೀಯ ಅಕ್ರಮ ಭಾರತೀಯ ವಲಸಿಗರ ಕುರಿತು ರಾಜ್ಯಸಭೆಯಲ್ಲಿ ಮಾತನಾಡಿದ ಜೈಶಂಕರ್ ವಿವರವಾಗಿ ಸ್ಪಷ್ಟನೆ ನೀಡಿದ್ದಾರೆ. ಇನ್ನು ಅಕ್ರಮ ವಲಸಿಗರ ಕೈಗೆ ಕೋಳ ಹಾಕುವುದು ಅಮೆರಿಕ ದೇಶದ ನೀತಿ. ಗೊಂದಲ ಮಾಡಿಕೊಳ್ಳಬಾರದು ಎಂದರು. ಗಡಿಪಾರಾದವರು ಮನೆಗೆ ಹಿಂದಿರುಗುವಾಗ ಕೆಟ್ಟದಾಗಿ ನಡೆಸಿಕೊಳ್ಳದಂತೆ ನೋಡಿಕೊಳ್ಳಲು ಅಮೆರಿಕದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ.