ಮುಂಬೈ: ಭಾರತದ ಆರ್ಥಿಕ ರಾಜಧಾನಿ ಮುಂಬೈಗೆ (Mumbai) ಮಾನ್ಸೂನ್ (Monsoon) ಮೊದಲೇ ಆಗಮಿಸಿದ್ದರಿಂದ, ವರ್ಲಿ ಅಂಡರ್‌ಗ್ರೌಂಡ್ ಮೆಟ್ರೋ ನಿಲ್ದಾಣವು (Worli Underground Metro Station) ಪ್ರವಾಹಕ್ಕೆ ಸಿಲುಕಿದೆ. ಭಾನುವಾರ ರಾತ್ರಿಯಿಂದ ಆರಂಭವಾದ ಭಾರೀ ಮಳೆ ಸೋಮವಾರ ಬೆಳಗ್ಗೆವರೆಗೆ ಮುಂದುವರಿದಿದೆ. ನಗರದ ಕೆಲವು ಭಾಗಗಳು ಜಲಾವೃತವಾಗಿದ್ದು, ಟ್ರಾಫಿಕ್ ಜಾಮ್ ಉಂಟಾಗಿದೆ. ವರ್ಲಿಯ ಅಂಡರ್‌ಗ್ರೌಂಡ್ ಮೆಟ್ರೋ ನಿಲ್ದಾಣದ ಗೇಟ್‌ಗಳಿಂದ ಹಿಡಿದು ಪ್ಲಾಟ್‌ಫಾರ್ಮ್‌ಗಳವರೆಗೆ ನೀರು ತುಂಬಿರುವ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಮೆಟ್ರೋ ನಿಲ್ದಾಣದಲ್ಲಿ ಪ್ರವಾಹ
ಹಲವು ವಿಡಿಯೊಗಳಲ್ಲಿ ಪ್ಲಾಟ್‌ಫಾರ್ಮ್‌ಗಳು ಕೆಸರಿನಿಂದ ಕೂಡಿರುವುದು ಕಂಡುಬಂದಿದೆ. ಜತೆಗೆ ನೀರಿನಿಂದ ಸಂಪೂರ್ಣವಾಗಿ ಜಲಾವೃತವಾಗಿದೆ. ಪ್ರಯಾಣಿಕರು ಪ್ಯಾಂಟ್ ಮಡಚಿಕೊಂಡು, ಚಪ್ಪಲಿಗಳನ್ನು ಕೈಯಲ್ಲಿ ಹಿಡಿದು ನೀರು ದಾಟುತ್ತಿರುವ ದೃಶ್ಯಗಳು ಕೂಡ ವೈರಲ್ ಆಗಿವೆ. ಮೆಟ್ರೊದೊಳಗಿನಿಂದ ರೆಕಾರ್ಡ್ ಮಾಡಿದ ಮತ್ತೊಂದು ವೀಡಿಯೊದಲ್ಲಿ, ಪ್ಲಾಟ್‌ಫಾರ್ಮ್‌ಗೆ ನೀರು ಬರುತ್ತಿರುವುದು ಕಂಡುಬಂದಿದೆ. ಅಸಮರ್ಪಕ ಒಳಚರಂಡಿ ವ್ಯವಸ್ಥೆಯೇ ಈ ಪ್ರವಾಹಕ್ಕೆ ಕಾರಣವೆಂದು ತೋರುತ್ತದೆ.
Newly inaugurated Worli underground metro station of Aqua line 3 submerged in water this morning. #MumbaiRain pic.twitter.com/D0gwopOXBE
— Tejas Joshi (@tej_as_f) May 26, 2025
ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (BKC)ನಿಂದ ಆಚಾರ್ಯ ಆತ್ರೆ ಚೌಕ್ (ವರ್ಲಿ)ವರೆಗಿನ ಮುಂಬೈ ಮೆಟ್ರೋ ಲೈನ್ 3 ಈ ತಿಂಗಳ ಆರಂಭದಲ್ಲಿ ಕಾರ್ಯಾರಂಭ ಮಾಡಿತ್ತು. ಇದೀಗ ಹೊಸದಾಗಿ ಉದ್ಘಾಟನೆಯಾದ ಈ ನಿಲ್ದಾಣದ ಜಲಾವೃತವಾಗಿರುವುದು ಮೂಲಸೌಕರ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಒಬ್ಬ ಬಳಕೆದಾರರು ವ್ಯಂಗ್ಯವಾಡಿದ್ದು, “ನಾವು ಮೂರ್ಖರಾಗಿದ್ದೇವೆ. ಇದನ್ನು ಆಕ್ವಾ ಲೈನ್ ಎಂದು ಹೆಸರಿಸಿದಾಗ ಅವರು ಗಂಭೀರವಾಗಿದ್ದರು” ಎಂದು ಬರೆದಿದ್ದಾರೆ.
ಕೆಂಪ್ಸ್ ಕಾರ್ನರ್ ರಸ್ತೆ ಕುಸಿತ
ಮತ್ತೊಂದು ಘಟನೆಯಲ್ಲಿ, ದಕ್ಷಿಣ ಮುಂಬೈನ ಕೆಂಪ್ಸ್ ಕಾರ್ನರ್ ರಸ್ತೆಯ ಒಂದು ಭಾಗ ಕುಸಿದಿದ್ದು, ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಕೆಂಪ್ಸ್ ಕಾರ್ನರ್ ದಕ್ಷಿಣ ಮುಂಬೈನ ಪ್ರಮುಖ ರಸ್ತೆಯಾಗಿದ್ದು, ಬ್ರೀಚ್ ಕ್ಯಾಂಡಿ, ವಾರ್ಡನ್ ರೋಡ್, ಪೆಡ್ಡರ್ ರೋಡ್ ಮತ್ತು ನೆಪಿಯನ್ ಸೀ ರೋಡ್‌ನ ಸಂಪರ್ಕಿಸುತ್ತದೆ.
ಮಾನ್ಸೂನ್ ಆಗಮನ
ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ದಕ್ಷಿಣ-ಪಶ್ಚಿಮ ಮಾನ್ಸೂನ್ ಭಾನುವಾರ ಮಹಾರಾಷ್ಟ್ರಕ್ಕೆ ಆಗಮಿಸಿದ್ದು, ಕಳೆದ 35 ವರ್ಷಗಳಲ್ಲೇ ರಾಜ್ಯಕ್ಕೆ ಬೇಗನೆ ಮಾನ್ಸೂನ್ ಆಗಮಿಸಿದೆ. ಮುಂದಿನ ಏಳು ದಿನಗಳ ಕಾಲ ಕೇರಳ, ಕರ್ನಾಟಕ, ಕರಾವಳಿ ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಭಾರೀಯಿಂದ ಅತಿಭಾರೀ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು IMD ಭಾನುವಾರ ತಿಳಿಸಿತ್ತು. ಮುಂಬೈನಲ್ಲಿ ಇಂದು ಬೆಳಗಿನಿಂದ ಮಳೆಯಾಗುತ್ತಿದೆ.