ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

World Water Day Special: 'ನಮ್ಮೂರು ನಮ್ಮ ಕೆರೆ’ ಯೋಜನೆ ಮೂಲಕ ಬತ್ತಿದ ಕೆರೆಗಳಲ್ಲಿ ಜೀವ ಸೆಲೆ – ಡಾ. ಡಿ. ವೀರೇಂದ್ರ ಹೆಗ್ಗಡೆ ನಮ್ಮ ನಾಡಿನ ರಿಯಲ್ ಲೇಕ್ ಮ್ಯಾನ್!

ಹಸಿದವರಿಗೆ ಅನ್ನ ಮತ್ತು ಬಾಯಾರಿದವರಿಗೆ ನೀರುಣಿಸಿದರೆ ಅದರಿಂದ ಲಭಿಸುವ ಪುಣ್ಯ ನೂರು ಯಾಗಗಳ ಫಲಕ್ಕೆ ಸಮ ಎಂಬ ಮಾತೊಂದಿದೆ. ಆದರೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪರಿಕಲ್ಪನೆಯಲ್ಲಿ ಮೂಡಿಬಂದಿರುವ ಈ ನಮ್ಮೂರು ನಮ್ಮ ಕೆರೆ ಅಭಿಯಾನದಿಂದ ಇದುವರೆಗೆ ರಾಜ್ಯದಲ್ಲಿ ಒಟ್ಟು 950 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಪುನರುಜ್ಜೀವನಗೊಂಡ ಕೆರೆ ಮತ್ತು ಡಾ. ಡಿ. ವೀರೇಂದ್ರ ಹೆಗ್ಗಡೆ (ಸಂಗ್ರಹ ಚಿತ್ರ)

ಉಜಿರೆ, ಮಾ. 22: ‘ಜಗತ್ತಿನಲ್ಲಿ ಭವಿಷ್ಯದಲ್ಲಿ ಮಹಾಯುದ್ಧ ನಡೆದರೆ ಅದು ಖಂಡಿತವಾಗಿಯೂ ನೀರಿಗಾಗಿ!’ ಎಂಬ ಮಾತನ್ನು ದಾರ್ಶನಿಕರೊಬ್ಬರು ಬಹಳ ಹಿಂದೆಯೇ ಹೇಳಿದ್ದಾರೆ. ಅಂದರೆ ಭವಿಷ್ಯದಲ್ಲಿ ಜಗತ್ತಿನಾದ್ಯಂತ ನಿರ್ಮಲ ನೀರು ಮತ್ತು ಸ್ವಚ್ಛ ಗಾಳಿಗಾಗಿ ಜನರು ಪರದಾಡುವ ಸ್ಥಿತಿ ಬರಬಹುದೆಂಬುದನ್ನು ಹಲವರು ಈಗಾಗಲೇ ಗ್ರಹಿಸಿಕೊಂಡಿದ್ದಾರೆ. ಆದರೆ ಇದಕ್ಕೊಂದು ಅಪವಾದ ಎಂಬಂತೆ ಧರ್ಮಸ್ಥಳದ ಧರ್ಮಾಧಿಕಾರಿ, ದೂರದರ್ಶಿತ್ವದ ಮಹಾ ದಾರ್ಶನಿಕ, ಹಲವು ಸಮಾಜಮುಖಿ ಯೋಜನೆಗಳ ಹರಿಕಾರ ಮತ್ತು ರಾಜ್ಯಸಭಾ ಸದಸ್ಯರೂ ಆಗಿರುವ ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆ ‘ನಮ್ಮೂರು ನಮ್ಮ ಕೆರೆ’ ಎಂಬ ದೂರದರ್ಶಿತ್ವದ ಮಹಾನ್ ಯೋಜನೆಯ ಮೂಲಕ ಕರ್ನಾಟಕದ ‘ಆಧುನಿಕ ಭಗೀರಥ’ ಅಥವಾ ‘ರಿಯಲ್ ಲೇಕ್ ಮ್ಯಾನ್’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಡಾ. ಹೆಗ್ಗಡೆ ಧರ್ಮಸ್ಥಳ ಕ್ಷೇತ್ರದ ಹೆಗ್ಗಡೆ ಪೀಠವನ್ನು ಅಲಂಕರಿಸಿದ ದಿನದಿಂದ ಇಂದಿನವರೆಗೂ ಮಾಡಿಕೊಂಡು ಬಂದಿರುವ ಸಮಾಜಮುಖ ಕಾರ್ಯಗಳು ಅವರನ್ನು ನಿಜಾರ್ಥದಲ್ಲಿ ‘ರಾಜರ್ಷಿ’ಯನ್ನಾಗಿಸಿದೆ. ಸಣ್ಣದೊಂದು ಸಮಾಜ ಸೇವೆಯನ್ನು ಮಾಡಿ ಊರು ತುಂಬಾ ಬ್ಯಾನರ್ ಹಾಕಿಸಿಕೊಳ್ಳುವವರ ನಡುವೆ ಡಾ. ಹೆಗ್ಗಡೆಯವರು ತಮ್ಮ ಸುದೀರ್ಘ ಕಾರ್ಯಾವವಧಿಯಲ್ಲಿ, ಶೈಕ್ಷಣಿಕ, ಸಾಮಾಜಿಕ, ಸ್ವ-ಉದ್ಯೋಗ, ಜೀವನ ಶಿಕ್ಷಣ, ಬ್ಯಾಂಕಿಂಗ್, ಕೃಷಿ, ಗ್ರಾಮಾಭಿವೃದ್ಧಿ, ಸ್ವಚ್ಛತೆ, ಧಾರ್ಮಿಕ ಕೇಂದ್ರಗಳ ಪುನರುತ್ಥಾನ, ದೇಶೀಯತೆಗೆ ಒತ್ತು ಸೇರಿದಂತೆ ನೂರಾರು ಸಮಾಜಮುಖಿ ಕಾರ್ಯಗಳನ್ನು ಅವಿಶ್ರಾಂತವಾಗಿ ನಡೆಸಿಕೊಂಡು ಬರುತ್ತಿದ್ದರೂ, ‘ವಿಮುಖನಾಗು ಖ್ಯಾತಿಗೆ, ಪ್ರಚಾರಕೆ, ಪ್ರಶಂಸಗೆ..’ ಎಂಬ ಉಕ್ತಿಯಂತೆ ಎಲ್ಲವನ್ನೂ ‘ಶಿವಾರ್ಪಣ’ ಎಂಬ ಭಾವದಿಂದ, ನಿರ್ಲಿಪ್ತರಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಅವರ ಈ ವೈವಿಧ್ಯಮಯ ಸಮಾಜಮುಖ ಕೆಲಸಗಳಿಂದ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪ್ರಯೋಜನ ಪಡೆದುಕೊಂಡವರು ಡಾ. ಹೆಗ್ಗಡೆಯವರನ್ನು ‘ನಡೆದಾಡುವ ಮಂಜುನಾಥ’ ಎಂದು ಕರೆಯುತ್ತಾ ಅವರ ಸಮಾಜಮುಖಿ ಕಾರ್ಯಗಳಿಂದ ಅವರನ್ನು ದೈವತ್ವಕ್ಕೆ ಏರಿಸಿದ್ದಾರೆ. ಇದಲ್ಲವೇ ನಿಜಾರ್ಥದಲ್ಲಿ ಕರ್ಮಯೋಗದ ಮೂಲಕ ದೈವತ್ವವನ್ನು ಕಾಣುವುದೆಂದರೆ!?

namma uuru

‘ನಮ್ಮೂರು ನಮ್ಮ ಕೆರೆʼ – ಸಾಧನೆಯ ಯಶೋಧಾರೆ

ಹಸಿದವರಿಗೆ ಅನ್ನ ಮತ್ತು ಬಾಯಾರಿದವರಿಗೆ ನೀರುಣಿಸಿದರೆ ಅದರಿಂದ ಲಭಿಸುವ ಪುಣ್ಯ ನೂರು ಯಾಗಗಳ ಫಲಕ್ಕೆ ಸಮ ಎಂಬ ಮಾತೊಂದಿದೆ. ಆದರೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪರಿಕಲ್ಪನೆಯಲ್ಲಿ ಮೂಡಿಬಂದಿರುವ ಈ ನಮ್ಮೂರು ನಮ್ಮ ಕೆರೆ ಅಭಿಯಾನದಿಂದ ಇದುವರೆಗೆ ರಾಜ್ಯದಲ್ಲಿ ಒಟ್ಟು 950 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಮೂಲಕ, ಒಂದು ಕಾಲದಲ್ಲಿ ಆಯಾ ಭಾಗದಲ್ಲಿ ಜೀವ ಸೆಲೆಗಳಾಗಿದ್ದು, ಬಳಿಕ ನಾನಾ ಕಾರಣಗಳಿಂದ ನಿರ್ಲಕ್ಷ್ಯಕ್ಕೊಳಗಾಗಿ ಸೊರಗಿ, ಬಸವಳಿದು ಹೋಗಿದ್ದ ಕೆರೆಗಳು ಇಂದು ಜಲ ರಾಶಿಯಿಂದ ಕಂಗೊಳಿಸುವಂತಾಗಿದೆ. ಮಾತ್ರವಲ್ಲದೇ ಆ ಭಾಗದ ಜನರ ಮತ್ತು ಪ್ರಾಣಿಗಳ ದಾಹವನ್ನು ಇಂಗಿಸುವ, ಕೃಷಿಗೆ ನೀರನ್ನೊದಗಿಸುವ, ಅಂತರ್ಜಲ ಮಟ್ಟ ಹೆಚ್ಚಲು ಕಾರಣವಾದ ‘ಜೀವ ಸೆಲೆ’ಗಳಾಗಿ ಕಂಗೊಳಿಸುತ್ತಿವೆ. ಇದಕ್ಕೆಲ್ಲ ‘ಆಧುನಿಕ ಭಗೀರಥ’, ‘ರಿಯಲ್ ಲೇಕ್ ಮ್ಯಾನ್’ ಡಾ. ಹೆಗ್ಗಡೆಯವರ ದೂರದರ್ಶಿತ್ವವೇ ಕಾರಣ!

ಇಂದು ವಿಶ್ವ ಅರಣ್ಯ ದಿನ; ಕಾಡು ಬೆಳೆಸಿ, ಭವಿಷ್ಯ ಉಳಿಸೋಣ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಈ ಯೋಜನೆಯನ್ನಯ ರಾಜ್ಯಾದ್ಯಂತ ಆಯ್ದ ಕಡೆಗಳಲ್ಲಿ ಕಾರ್ಯಗತಗೊಳಿಸಲಾಗಿದ್ದು, ಅಂಕಿ ಅಂಶಗಳ ಪ್ರಕಾರ ಇಲ್ಲಿಯವರೆಗೆ ಒಟ್ಟು 950 ಕೆರೆಗಳನ್ನು ಪುನಃಶ್ಚೇತನಗೊಳಿಸಲಾಗಿದೆ. ಸುಮಾರು 74.91 ಕೋಟಿ ರುಪಾಯಿಗಳ ವೆಚ್ಚದಲ್ಲಿ ಮೂಡಿ ಬಂದಿರುವ ಈ ಯೋಜನೆಯಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಟ್ಟು 4,30,000 ಕುಟುಂಬಗಳು ಇದರ ನೇರ ಪ್ರಯೋಜನವನ್ನು ಪಡೆದುಕೊಂಡಿವೆ. ಮಾತ್ರವಲ್ಲದೇ ಒಟ್ಟಾರೆಯಾಗಿ 2,69,982 ಎಕರೆ ಕೃಷಿ ಭೂಮಿಗೆ ಈ ಯೋಜನೆಯ ನೇರ ಪ್ರಯೋಜನ ಲಭ್ಯವಾಗಿದೆ.

ಈ ಯೋಜನೆಯ ಇನ್ನೂ ಇಂಟರೆಸ್ಟಿಂಗ್ ವಿಚಾರವೆಂದರೆ ಈ ಯೋಜನೆಯಿಂದಾಗಿ ಸುಮಾರು 39,000 ಬಾವಿಗಳಲ್ಲಿ ಮತ್ತು 73,000 ಬೋರ್‌ವೆಲ್‌ಗಳಲ್ಲಿ ಮತ್ತೆ ಜೀವ ಜಲ ತುಂಬಿ ತುಳುಕುವಂತಾಗಿದೆ.

Nammuru namma kere

ಒಂದೇ ವರ್ಷದಲ್ಲಿ ರಾಜ್ಯದಲ್ಲಿ 160 ಕೆರೆಗಳಿಗೆ ಪುನಶ್ಚೇತನ ಭಾಗ್ಯ

2024-25ನೇ ಸಾಲಿನಲ್ಲಿ ರಾಜ್ಯಾದ್ಯಂತ 160 ಕೆರೆಗಳ ಪುನಶ್ಚೇತನ ಕಾರ್ಯ ನಡೆಸಲಾಗಿದೆ. ಕೆರೆಗಳ ಪುನಶ್ಚೇತನಕ್ಕಾಗಿ ಸುಮಾರು 1,760 ರೈತರು, ಮಹಿಳೆಯರನ್ನೊಳಗೊಂಡ 160 ಕೆರೆ ಸಮಿತಿಗಳನ್ನು ರಚಿಸಲಾಗಿತ್ತು. ಜನಸಹಭಾಗಿತ್ವದೊಂದಿಗೆ ಕೈಗೊಂಡ ಬೃಹತ್ ಕಾರ್ಯದಲ್ಲಿ ಸಂಸ್ಥೆಯ 160 ನೋಡೆಲ್ ಅಧಿಕಾರಿಗಳು, 7 ಜನ ನುರಿತ ಎಂಜಿನಿಯರ್‌ಗಳ ತಂಡ ಶ್ರಮಿಸಿದೆ. ಅಲ್ಲದೇ ಕೆರೆ ಸಮಿತಿ ಪದಾಧಿಕಾರಿಗಳು ಈ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ. ಸುಮಾರು 242 ಜೆಸಿಬಿ ಹಾಗೂ ಹಿಟಾಚಿ ಯಂತ್ರಗಳು, 4,304 ಕ್ಕೂ ಅಧಿಕ ಟ್ರ್ಯಾಕ್ಟರ್ ಹಾಗೂ ಟಿಪ್ಪರ್‌ಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗಿದೆ. ಕೆರೆಯ ಅಚ್ಚುಕಟ್ಟು ಪ್ರದೇಶದ ರೈತರು 12.50 ಲಕ್ಷ ಲೋಡ್ ಕೆರೆಯ ಹೂಳನ್ನು ತಮ್ಮ ಕೃಷಿ ತೋಟಗಳಿಗೆ ಉತ್ಸಾಹದಿಂದ ಸಾಗಾಟ ಮಾಡಿದ್ದಾರೆ. ಹೂಳು ತೆಗೆಯುವುದು, ಏರಿ ಭದ್ರಪಡಿಸುವುದು, ಕಾಲುವೆ ಹಾಗೂ ಕೋಡಿಗಳ ರಿಪೇರಿ ಸೇರಿದಂತೆ ವಿವಿಧ ಕಾಮಗಾರಿಗಳ ಮೂಲಕ ಕೆರೆಗಳು ವೈಜ್ಞಾನಿಕವಾಗಿ ಹಾಗೂ ಸುಂದರವಾಗಿ ಮರು ನಿರ್ಮಾಣಗೊಂಡಿವೆ.

ವನ್ಯ ಜೀವಿಗಳಿಗಾಗಿಯೂ ಕೆರೆಗಳ ನಿರ್ಮಾಣ

ಕೆರೆಗಳು ಮಾನವರಂತೆ ಜಾನುವಾರುಗಳಿಗೂ ಕುಡಿಯುವ ನೀರಿನ ಬಹುಮುಖ್ಯ ಮೂಲವಾಗಿದೆ. ಇದಕ್ಕಾಗಿಯೇ ಶಿವಮೊಗ್ಗದ ತಾವರಕೆರೆ ಹುಲಿ ಮತ್ತು ಸಿಂಹಧಾಮದಲ್ಲಿ 10 ಕೆರೆಗಳನ್ನು ಈ ವರ್ಷ ಪುನಶ್ಚೇತನಗೊಳಿಸಲಾಗಿದೆ. ಇಲ್ಲಿಯ ಸುಮಾರು 400 ವನ್ಯಜೀವಿಗಳಿಗೆ ಈ ಕೆರೆಗಳ ಮೂಲಕ ಜೀವಜಲ ಒದಗಿಸಲಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲೂ ವನ್ಯಜೀವಿಗಳಿಗಾಗಿ ಒಂದು ಕೆರೆಯನ್ನು ಪುನರುಜ್ಜೀವನಗೊಳಿಸಲಾಗಿದೆ.

ಪುನಶ್ಚೇತನಗೊಂಡ ಕೆರೆಗಳ ಹಸ್ತಾಂತರ

ಸುಂದರವಾಗಿ ಪುನರ್ ನಿರ್ಮಾಣಗೊಂಡ ಕೆರೆಗಳನ್ನು ಮತ್ತೆ ಮುಂದಿನ ನಿರ್ವಹಣೆಗಾಗಿ ಸ್ಥಳೀಯ ಗ್ರಾಮ ಪಂಚಾಯತಿ ಹಾಗೂ ಸಮಿತಿಗೆ ಹಸ್ತಾಂತರಿಸಲಾಗುತ್ತದೆ. ಈ ಕೆರೆಗಳನ್ನು ಮುಂದೆ ಸಂರಕ್ಷಿಸುವ, ಅಭಿವೃದ್ಧಿಪಡಿಸುವ, ಅತಿಕ್ರಮಣವಾಗದಂತೆ ತಡೆಗಟ್ಟುವ, ಸ್ವಚ್ಛತೆ ಕಾಪಾಡುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗುತ್ತದೆ. ಇದಕ್ಕಾಗಿ ಕಾಲಕಾಲಕ್ಕೆ ಕೆರೆ ಸಮಿತಿ ಪದಾಧಿಕಾರಿಗಳ ಕಾರ್ಯಾಗಾರ ನಡೆಸಿ ಪ್ರೇರಣೆ ನೀಡಲಾಗುತ್ತಿದೆ. ಮುಂದಿನ ಮಳೆಗಾಲ ಆರಂಭವಾಗುತ್ತಿದ್ದಂತೆ ಪುನಶ್ಚೇತನಗೊಂಡ ಕೆರೆಗಳ ಸುತ್ತಲೂ ಗಿಡಗಳನ್ನು ನೆಡಲಾಗುತ್ತದೆ. ಗ್ರಾಮ ಪಂಚಾಯತ್ ಹಾಗೂ ಸಮಿತಿಯ ಸಹಭಾಗಿತ್ವದೊಂದಿಗೆ ಹೂವು, ಹಣ್ಣು ಹಾಗೂ ನೆರಳು ಕೊಡುವ ವಿವಿಧ ಜಾತಿಯ ಗಿಡಗಳನ್ನು ನೆಡಲಾಗುತ್ತದೆ. ಇದರಂತೆ ಸಮೃದ್ಧ ಕೆರೆಯ ಸುತ್ತ ಹಸಿರು ಬೆಳೆದು ಪ್ರಾಣಿ ಪಕ್ಷಿಗಳಿಗೆ ಹಣ್ಣು, ನೆರಳು, ನೀರು ಸಿಗುವಂತೆ ಮಾಡುವುದು ಇದರ ಉದ್ದೇಶವಾಗಿದೆ.

namma uuru (1)

ರಾಜ್ಯದಲ್ಲಿ ಇದುವರೆಗೆ ನಮ್ಮ ಊರು ನಮ್ಮ ಕೆರೆ ಯೋಜನೆಯ ಸಾಧನೆ

  • ಪುನಶ್ಚೇತನಗೊಂಡ ಒಟ್ಟು ಕೆರೆಗಳು: 950
  • ತೆಗೆದ ಹೂಳಿನ ಪ್ರಮಾಣ: 240.13 ಲಕ್ಷ ಕ್ಯೂಬಿಕ್ ಮೀಟರ್
  • ಹೆಚ್ಚಳಗೊಂಡಿರುವ ನೀರಿನ ಸಂಗ್ರಹಣ ಸಾಮರ್ಥ್ಯ: 530 ಕೋಟಿ ಗ್ಯಾಲನ್
  • ಪ್ರಯೋಜನವಾಗಲಿರುವ ಕೃಷಿ ಭೂಮಿ: 2,69,982 ಎಕರೆ
  • ಪ್ರಯೋಜನ ಪಡೆದ ಕುಟುಂಬಗಳ ಸಂಖ್ಯೆ: 4,23,922
  • ಒತ್ತುವರಿ ತೆರವುಗೊಳಿಸಲಾದ ಪ್ರದೇಶ: 366 ಎಕರೆ
  • ಬಳಸಿದ ಯೋಜನೆಯ ಅನುದಾನ: 74.91 ಕೋಟಿ ರುಪಾಯಿ

SDM Kere

ಒಟ್ಟಿನಲ್ಲಿ, ಭವಿಷ್ಯದಲ್ಲಿ ಜಗತ್ತನ್ನು ಬಾಧಿಸಬಹುದಾದ ‘ಜಲ ಕ್ಷಾಮ’ ದುರಂತವನ್ನು ಮೊದಲೇ ಕಂಡುಕೊಂಡು ನಮ್ಮ ನಾಡಿಗೆ ಆ ಶಾಪ ತಟ್ಟದಿರಲಿ, ನಮ್ಮ ಮುಂದಿನ ಪೀಳಿಗೆ ಜಲ ಬಾಧೆಯಿಂದ ನರಳದಿರಲಿ ಎಂಬ ಮುಂದಾಲೋಚನೆಯಿಂದ ‘ನಮ್ಮೂರು ನಮ್ಮ ಕೆರೆ’ ಎಂಬ ಸುಂದರ ಪರಿಕಲ್ಪನೆಯನ್ನು ಅಷ್ಟೇ ಸುಂದರವಾಗಿ ಕಾರ್ಯಗತಗೊಳಿಸುತ್ತಾ, ನಮ್ಮ ಗಂಧದ ಗುಡಿಯನ್ನು ಸಸ್ಯ ಶ್ಯಾಮಲೆಯಾಗಿ ಕಂಗೊಳಿಸುವಂತೆ ಮಾಡಲು ಮತ್ತು ಕರುನಾಡ ಜನರು ನೀರಿನ ಸಂಕಷ್ಟದಿಂದ ದೂರವಿರುವಂತೆ ಮಾಡುವಲ್ಲಿ ತನ್ನ ಕಟಿಬದ್ಧ ತಂಡದೊಂದಿಗೆ ಶ್ರಮಿಸುತ್ತಿರುವ ಡಾ. ಡಿ. ವೀರೇಂದ್ರ ಹೆಗ್ಗಡೆ ನಮ್ಮ ನಾಡಿನ ನಿಜಾರ್ಥದ ‘ಲೇಕ ಮ್ಯಾನ್’.