ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

World Forest Day: ಇಂದು ವಿಶ್ವ ಅರಣ್ಯ ದಿನ; ಕಾಡು ಬೆಳೆಸಿ, ಭವಿಷ್ಯ ಉಳಿಸೋಣ

ಅರಣ್ಯಗಳು ಪರಿಸರ ಸಮತೋಲನದ ಆಧಾರವಾಗಿದ್ದು, ಅವುಗಳ ನಾಶ ಹವಾಮಾನದ ಮೇಲೆ ಕೆಟ್ಟ ಪರಿಣಾಮ ಬೀಳುತ್ತಿದೆ. ಅಲ್ಲದೆ ಇದರಿಂದ ಜೀವರಾಶಿಗಳಿಗೂ ಅಪಾಯ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಸಂರಕ್ಷಣೆಯ ಮಹತ್ವವನ್ನು ತಿಳಿಸಲು ಮಾರ್ಚ್ 21ರಂದು ವಿಶ್ವ ಅರಣ್ಯ ದಿನ ಆಚರಿಸಲಾಗುತ್ತದೆ. ಹಾಗಾದರೆ ಈ ಅರಣ್ಯ ದಿನ ಶುರುವಾಗಿದ್ದು ಹೇಗೆ? ಯಾಕೆ ಆಚರಿಸುತ್ತಾರೆ? ಇಲ್ಲಿದೆ ಮಾಹಿತಿ.

ಇಂದು ವಿಶ್ವ ಅರಣ್ಯ ದಿನ; ಏನಿದರ ಮಹತ್ವ?

ಅರಣ್ಯ ದಿನ (ಎಐ ಚಿತ್ರ) -

Profile
Sushmitha Jain Mar 21, 2026 8:00 AM

ಬೆಂಗಳೂರು, ಮಾ. 21: ಅರಣ್ಯವು ಭೂಮಿಯ ಅಮೂಲ್ಯ ಸಂಪತ್ತಾಗಿದ್ದು, ಅನೇಕ ಪ್ರಕಾರದ ಮರಗಳು, ಸಸ್ಯಗಳು ಮತ್ತು ಜೀವರಾಶಿಗಳಿಂದ ಕೂಡಿದ ಪರಿಸರ ಇದಾಗಿದೆ. ಸಾವಿರಾರು ಜೀವಿಗಳಿಗೆ ಆಶ್ರಯ ನೀಡುವ ಕಾಡು ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾನವನ ಅತಿಯಾದ ಅಭಿವೃದ್ಧಿ ಹಂಬಲ ಮತ್ತು ಸ್ವಾರ್ಥದ ಪರಿಣಾಮವಾಗಿ ಅರಣ್ಯ ಪ್ರದೇಶಗಳು ವೇಗವಾಗಿ ನಾಶವಾಗುತ್ತಿವೆ. ಕಟ್ಟಡ ನಿರ್ಮಾಣ, ಕೈಗಾರಿಕೆಗಳ ಸ್ಥಾಪನೆ ಮತ್ತು ರಸ್ತೆ ಅಭಿವೃದ್ಧಿಯಂತಹ ಚಟುವಟಿಕೆಗಳಿಂದ ಕಾಡುಗಳ ವಿಸ್ತೀರ್ಣ ಕುಗ್ಗುತ್ತಿದೆ.

ಇದರಿಂದ ಕಾಡು ಪ್ರಾಣಿಗಳು ತಮ್ಮ ಸ್ವಾಭಾವಿಕ ವಾಸಸ್ಥಳವನ್ನು ಕಳೆದುಕೊಂಡು ಮಾನವ ವಾಸಸ್ಥಳಗಳತ್ತ ಬರುತ್ತಿವೆ. ಮತ್ತೊಂದೆಡೆ, ಅರಣ್ಯ ನಾಶದಿಂದ ಹವಾಮಾನದಲ್ಲಿ ಬದಲಾವಣೆ ಉಂಟಾಗಿ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ ಹಾಗೂ ಉಷ್ಣತೆ ಹೆಚ್ಚುತ್ತಿದೆ. ಪ್ರಕೃತಿಯ ಈ ಅಸಮತೋಲನಕ್ಕೆ ಮಾನವನ ಅತಿರೇಕದ ಚಟುವಟಿಕೆಗಳೇ ಕಾರಣ. ಹೀಗಾಗಿ ಅರಣ್ಯ ಸಂರಕ್ಷಣೆ ಮತ್ತು ಅಭಿವೃದ್ಧಿ ನಮ್ಮೆಲ್ಲರ ಹೊಣೆಗಾರಿಕೆಯಾಗಬೇಕು. ಇದನ್ನು ನೆನಪಿಸುವುದಕ್ಕಾಗಿ ಪ್ರತಿವರ್ಷ ಮಾರ್ಚ್ 21ರಂದು ವಿಶ್ವ ಅರಣ್ಯ ದಿನವನ್ನು (World Forest Day) ಆಚರಿಸಲಾಗುತ್ತದೆ.

ವಿಶ್ವ ಅರಣ್ಯ ದಿನದ ಹಿನ್ನೆಲೆ

ವಿಶ್ವ ಅರಣ್ಯ ದಿನದ ಆಚರಣೆಗೆ 1971ರಲ್ಲಿ ನಡೆದ ಆಹಾರ ಮತ್ತು ಕೃಷಿ ಸಂಘಟನೆ( Food and Agriculture Organization (FAO) ಸಮ್ಮೇಳನದಲ್ಲಿ ಪೀಠಿಕೆ ಹಾಕಲಾಯಿತು. ಈ ಸಂದರ್ಭದಲ್ಲಿ ಅರಣ್ಯಗಳ ಸಂರಕ್ಷಣೆಯ ಅಗತ್ಯವನ್ನು ಗಮನಿಸಿ ಒಂದು ವಿಶೇಷ ದಿನವನ್ನು ಆಚರಿಸುವ ನಿರ್ಧಾರ ಕೈಗೊಳ್ಳಲಾಯಿತು. ನಂತರ ವಿಶ್ವಸಂಸ್ಥೆ(United Nations) ಸಾಮಾನ್ಯ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ದಿನವನ್ನು ಆಚರಿಸಲು ಒಪ್ಪಿಗೆ ನೀಡಿತು.

ಕುದುರೆಮುಖ ರಕ್ಷಿತಾರಣ್ಯದಲ್ಲಿ ಭಾರಿ ಕಾಳ್ಗಿಚ್ಚು, ಶೋಲಾ ಕಾಡು ಧಗಧಗ

2012ರಲ್ಲಿ ಈ ನಿರ್ಧಾರಕ್ಕೆ ಅಧಿಕೃತ ಮಾನ್ಯತೆ ದೊರೆತು, ಮಾರ್ಚ್ 21ರಂದು ವಿಶ್ವ ಅರಣ್ಯ ದಿನವನ್ನು ಆಚರಿಸುವ ಪದ್ಧತಿ ಆರಂಭವಾಯಿತು. ಇದರಿಂದ ಅರಣ್ಯ ಸಂರಕ್ಷಣೆಗೆ ಜಾಗತಿಕ ಮಟ್ಟದಲ್ಲಿ ಮಹತ್ವ ದೊರೆಯಿತು.

ವಿಶ್ವ ಅರಣ್ಯ ದಿನದ ಉದ್ದೇಶ ಮತ್ತು ಮಹತ್ವ

ಈ ದಿನದ ಉದ್ದೇಶ ಅರಣ್ಯಗಳ ಅಗತ್ಯ ಮತ್ತು ಅವುಗಳ ಸಂರಕ್ಷಣೆಯ ಮಹತ್ವವನ್ನು ಜನರಿಗೆ ತಿಳಿಸುವುದಾಗಿದೆ. ಕಾಡುಗಳ ನಾಶದಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು ಕೂಡ ಮುಖ್ಯ ಗುರಿ. ಮರ ನೆಡುವ ಅಭಿಯಾನಗಳು, ಪರಿಸರ ಸಂರಕ್ಷಣಾ ಕಾರ್ಯಾಗಾರಗಳು ಹಾಗೂ ವಿವಿಧ ಜಾಗೃತಿ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ.

ಅರಣ್ಯಗಳನ್ನು ಉಳಿಸುವುದು ನಮ್ಮ ಭವಿಷ್ಯವನ್ನು ಉಳಿಸುವಂತೆಯೇ. ಹೀಗಾಗಿ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಯಲ್ಲಿ ತಮ್ಮ ಪಾತ್ರವನ್ನು ನಿಭಾಯಿಸಬೇಕು. ʼಅರಣ್ಯ ಮತ್ತು ಆರ್ಥಿಕತೆʼ ಈ ಬಾರಿಯ ಧ್ಯೇಯ ವಾಕ್ಯ.